ಕೋಟೆಕಾರು ವ್ಯವಸಾಯ ಪತ್ತಿನ ಸಹಕಾರ ಸಂಘ (ರಿ.)ದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರ ತನಿಖಾ ತಂಡ ತಮಿಳುನಾಡಿನ ಮೂವರು ಆರೋಪಿಗಳನ್ನು 20 ರಂದು ಬಂಧಿಸಿದೆ. ಈ ಪೈಕಿ ಓರ್ವ ಆರೋಪಿ ಮುಂಬೈನ ಚೆಂಬೂರಿನ ತಿಲಕ್ ನಗರದ ನಿವಾಸಿ ಮಣಿ ಎಂಬವರ ಪುತ್ರ ಕಣ್ಣನ್ ಮಣಿ (36) ಎಂಬಾತ ಪೊಲೀಸರಿಗೆ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದ್ದು, ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಉಳ್ಳಾಲ ಪೊಲೀಸ್ ನಿರೀಕ್ಷಕ ಬಾಲಕೃಷ್ಣ ಮತ್ತು ತಂಡ ತಪಾಸಣೆ ವೇಳೆ ಕೆ.ಸಿ.ರೋಡ್ ಗೆ ಸಂಜೆ ಬಂದಿದ್ದಾಗ ಘಟನೆ ನಡೆದಿದೆ. ತಪಾಸಣೆ ವೇಳೆ ಆರೋಪಿ ಕಣ್ಣನ್ ಮಣಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಗಿ ಹೇಳಲಾಗಿದ್ದು, ಸ್ಥಳದಲ್ಲಿ ಸಿಕ್ಕ ಒಡೆದ ಬಿಯರ್ ಬಾಟಲಿಯನ್ನು ಬಳಸಿ ಬೆಂಗಾವಲು ಸಿಬ್ಬಂದಿಗಳಾದ ಆಂಜನಪ್ಪ ಮತ್ತು ನಿತಿನ್ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಆರೋಪಿಗಳು ತನಿಖಾಧಿಕಾರಿ ಉಳ್ಳಾಲ ಪೊಲೀಸ್ ನಿರೀಕ್ಷಕರನ್ನು ತಳ್ಳಿ ಚಾಕುವಿನಿಂದ ಇರಲು ಯತ್ನಿಸಿದ್ದಾಗಿ ಹೇಳಲಾಗಿದ್ದು, ಜೊತೆಗಿದ್ದ ಸಿಸಿಬಿ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ಎಚ್ಚರಿಕೆ ನೀಡಿ, ಗಾಳಿಯಲ್ಲಿ ಗುಂಡು ಹಾರಿಸಿದರೂ ಆರೋಪಿಗಳು ಹಲ್ಲೆ ಮುಂದುವರಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ, ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಆರೋಪಿಯ ಕಾಲಿಗೆ ಗುಂಡು ಹಾರಿಸಿ, ಆತನನ್ನು ಬಗ್ಗುಬಡಿದು ಕಸ್ಟಡಿಗೆ ತೆಗೆದುಕೊಂಡರು. ಘಟನೆಯಲ್ಲಿ ಉಳ್ಳಾಲ ಇನ್ಸ್ ಪೆಕ್ಟರ್ ಬಾಲಕೃಷ್ಣ, ಸಿಸಿಬಿ ಘಟಕದ ಪಿಸಿ ಆಂಜನಪ್ಪ, ಮತ್ತು ಉಳ್ಳಾಲ ಠಾಣೆಯ ಪಿಸಿ ನಿತಿನ್ ರವರಿಗೆ ಗಾಯಗಳಾಗಿವೆ. ಗಾಯಗೊಂಡ ಸಿಬ್ಬಂದಿ ಮತ್ತು ಆರೋಪಿಗಳನ್ನು ತಕ್ಷಣ ದೇರಳಕಟ್ಟೆ ಯೆನೆಪೊಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
Be the first to comment on "BANK ROBBERY CASE: ಹಲ್ಲೆ ನಡೆಸಿ ತಪ್ಪಿಸಲೆತ್ನಿಸಿದ ಬ್ಯಾಂಕ್ ದರೋಡೆ ಆರೋಪಿ ಕಾಲಿಗೆ ಗುಂಡೇಟಿನ ರುಚಿ ತೋರಿಸಿದ ಪೊಲೀಸರು"