ಕರ್ನಾಟಕ ಯಕ್ಷಗಾನ ಅಕಾಡೆಮಿ 2024ರ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ, ಉಳಿದ ಪುರಸ್ಕೃತರ ವಿವರ ಇಲ್ಲಿದೆ

ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ 2024ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷ ಸಿರಿ ವಾರ್ಷಿಕ ಪ್ರಶಸ್ತಿ ಹಾಗೂ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭವು ಫೆ. 16ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐ ವೈ ಸಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.

ಜಾಹೀರಾತು

ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿ, ಇಲಾಖಾ ಸಚಿವರು, ಉಸ್ತುವಾರಿ ಸಚಿವರು, ಶಾಸಕರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ಪ್ರಶಸ್ತಿ ಪುರಸ್ಕೃತರ ಕಿರು ಪರಿಚಯ ಪುಸ್ತಕ ಬಿಡುಗಡೆ ಮಾಡಲಾಗುವುದು ಎಂದರು.

ಪಾರ್ತಿಸುಬ್ಬ ಪ್ರಶಸ್ತಿ
ತೆಂಕುತಿಟ್ಟು ಯಕ್ಷಗಾನ ಕಲಾವಿದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಒಂದು ಲಕ್ಷ ರೂ.ನಗದು ಹೊಂದಿದ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಐವರಿಗೆ ಗೌರವ ಪ್ರಶಸ್ತಿ
ಅಕಾಡೆಮಿಯ ೨೦೨೪ನೇ ಗೌರವ ಪ್ರಶಸ್ತಿಗೆ ಬೆಳ್ತಂಗಡಿಯ ತೆಂಕುತಿಟ್ಟು ಕಲಾವಿದ ಕೊಳ್ತಿಗೆ ನಾರಾಯಣ ಗೌಡ , ಬಡಗುತಿಟ್ಟು ಕಲಾವಿದ ಕುಂದಾಪುರದ ಕೋಡಿ ವಿಶ್ವನಾಥ ಗಾಣಿಗ, ಪ್ರಸಾದನ ಕಲಾವಿದ ರಾಘವ ದಾಸ್ ಬಂಟ್ವಾಳ, ತೆಂಕುತಿಟ್ಟಿನ ಸುಬ್ರಾಯ ಹೊಳ್ಳ ಬಂಟ್ವಾಳ, ಮೂಡಲಪಾಯ ಯಕ್ಷಗಾನದ ಕಾಂತರಾಜು ಅರಳಗುಪ್ಪೆ ತುಮಕೂರು ಆಯ್ಕೆಯಾಗಿದ್ದು ತಲಾ ೫೦,೦೦೦ರೂ. ನೀಡಲಾಗುವುದು.

ಯಕ್ಷಸಿರಿ ಪ್ರಶಸ್ತಿ
ಯಕ್ಷ ಸಿರಿ ವಾರ್ಷಿಕ ಪ್ರಶಸ್ತಿಗೆ ಕಾಸರಗೋಡಿನ ಹಿರಿಯ ಅರ್ಥಧಾರಿ ಅಡ್ಕ ಗೋಪಾಲಕೃಷ್ಣ ಭಟ್, ಉಡುಪಿ ಬಡಗುತಿಟ್ಟಿನ ಜಗನ್ನಾಥ ಆಚಾರ್ಯ ಎಲ್ಲಂಪಲ್ಲಿ, ಕಾಸರಗೋಡಿನ ತೆಂಕುತಿಟ್ಟು ಹಾಸ್ಯಗಾರ ಮವ್ವಾರು ಬಾಲಕೃಷ್ಣ ಮಣಿಯಾಣಿ, ಮಂಗಳೂರಿನ ತೆಂಕುತಿಟ್ಟು ಬಣ್ಣದ ವೇಶದಾರಿ ಉಮೇಶ್ ಕುಪ್ಪೆಪದವು, ಶಿವಮೊಗ್ಗದ ಬಡಗುತಿಟ್ಟು ಸ್ತ್ರೀ ವೇಷದಾರಿ ಶಿವಾನಂದ ಗೀಜಗಾರು, ಹೊನ್ನಾವರದ ಬಡಗುತಿಟ್ಟು ಸ್ತ್ರೀ ವೇಷಧಾರಿ ಮುಗ್ವಾ ಗಣೇಶ್ ನಾಯ್ಕ, ಮಂಗಳೂರಿನ ತೆಂಕುತಿಟ್ಟು ವೇಷದಾರಿ ಸುರೇಂದ್ರ ಮಲ್ಲಿ, ಮಂಗಳೂರಿನ ಪ್ರಸಂಗಕತ್೯ ಅಂಡಾಲ ದೇವಿಪ್ರಸಾದ್ ಶೆಟ್ಟಿ, ಬೆಂಗಳೂರು ಗ್ರಾಮಾಂತರ ಮೂಡಲಪಾಯ ಯಕ್ಷಗಾನದ ಕೃಷ್ಣಪ್ಪ, ಚಿಕ್ಕಮಗಳೂರಿನ ಬಡಗು ತೆಂಕುತಿಟ್ಟಿನ ಹಳುವಲ್ಲಿ ಜ್ಯೋತಿ ತಲಾ ೨೫,೦೦೦ರೂ. ನಗದು ಪಡೆಯಲಿದ್ದಾರೆ.

ದತ್ತಿನಿಧಿ ಪ್ರಶಸ್ತಿ
ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ದತ್ತಿನಿಧಿ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕರ್ಗಲ್ಲೂ ವಿಶ್ವೇಶ್ವರ ಭಟ್ ಆಯ್ಕೆಯಾಗಿದ್ದು ೨೫,೦೦೦ರೂ. ನಗದು ಪಡೆವರು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ರಿಜಿಸ್ಟ್ರಾರ್ ನಮ್ರತಾ ಎನ್. ಅಕಾಡೆಮಿ ಸದಸ್ಯರಾದ ಸತೀಶ್ ಅಡಪ ಸಂಕಬೈಲ್, ಸುಧಾಕರ ಶೆಟ್ಟಿ, ರಾಘವ ಎಚ್. ಕೃಷ್ಣಪ್ಪ ಪೂಜಾರಿ ಕಿನ್ಯಾ, ದಯಾನಂದ, ಮೋಹನ ಕೊಪ್ಪಲ ಕದ್ರಿ, ಗುರುರಾಜ ಭಟ್, ರಾಜೇಶ್ ಕುಳಾಯಿ, ವಿದ್ಯಾಧರ ವೆಂಕಟೇಶ ಮಡಿವಾಳ
ಉಪಸ್ಥಿತರಿದ್ದರು.

ಮಾಂಬಾಡಿ ಸುಬ್ರಹ್ಮಣ್ಯ ಭಟ್ ಪರಿಚಯ:

ತೆಂಕುತಿಟ್ಟು ಹಿಮ್ಮೇಳದಲ್ಲಿ ಇಂದು ಪ್ರಸಿದ್ಧ ಕಲಾವಿದರಾಗಿ ಗುರುತಿಸಿಕೊಂಡಿರುವ ಬಹುತೇಕ ಹಿಮ್ಮೇಳ ಕಲಾವಿದರ ಗುರುಗಳಾಗಿರುವ ಹಿರಿಯ ಯಕ್ಷಗಾನ ಕಲಾವಿದ ಮಾಂಬಾಡಿ ಸುಬ್ರಮಣ್ಯ ಭಟ್ ಅವರಿಗೆ ಈ ಬಾರಿ ಕರ್ನಾಟಕ ಯಕ್ಷಗಾನ ಅಕಾಡಮಿ ಕೊಡಮಾಡುವ ಸರ್ವೋಚ್ಛ ಪ್ರಶಸ್ತಿಯಾದ ಪಾರ್ತಿಸುಬ್ಬ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.


ಬಂಟ್ವಾಳ ತಾಲೂಕಿನ ಕರೋಪಾಡಿಯ ಮಾಂಬಾಡಿಯವರಾದ ಸುಬ್ರಹ್ಮಣ್ಯ ಭಟ್ಟರು ಪ್ರಸ್ತುತ ಇಡ್ಕಿದು ಗ್ರಾಮದ ಉರಿಮಜಲು ಸಮೀಪ ಪ್ರಶಾಂತಿ ಲೇಔಟ್ ನಲ್ಲಿ ವಾಸಿಸುತ್ತಿದ್ದಾರೆ.
1949 ಮಾರ್ಚ್ 27ರಂದು ಮಾಂಬಾಡಿ ನಾರಾಯಣ ಭಾಗವತ – ಲಕ್ಷ್ಮೀ ಅಮ್ಮ ದಂಪತಿಯ ಆರು ಮಂದಿ ಮಕ್ಕಳಲ್ಲೊಬ್ಬರಾಗಿ ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಮಾಂಬಾಡಿಯಲ್ಲಿ ಜನಿಸಿದರು.
ಪತ್ನಿ ಲಕ್ಷ್ಮೀ. ಮಕ್ಕಳಾದ ವೇಣುಗೋಪಾಲ್ ಮಾಂಬಾಡಿ ಮತ್ತು ನಾರಾಯಣ ಪ್ರಸನ್ನ ಮಾಂಬಾಡಿ – ಇಬ್ಬರೂ ವೃತ್ತಿಯಲ್ಲಿ ಇಂಜಿನಿಯರರು. ವೇಣುಗೋಪಾಲ್ ಅವರು ಉತ್ತಮ ಹಿಮ್ಮೇಳವಾದಕರಾಗಿ ಹೆಸರು ಗಳಿಸಿದ್ದಾರೆ

ಗುರುಪರಂಪರೆ ಮುನ್ನಡೆಸಿದವರು

ಯಕ್ಷಗಾನ ಹಿಮ್ಮೇಳ ಗುರುಪರಂಪರೆಯ ಪದ್ಯಾಣ ಮನೆತನದ ಮಾಂಬಾಡಿ ಮನೆಯವರಾದ ಸುಬ್ರಹ್ಮಣ್ಯ ಭಟ್ಟರ ತಂದೆ ದಿ.ಮಾಂಬಾಡಿ ನಾರಾಯಣ ಭಾಗವತರು ಸ್ವಾತಂತ್ರ್ಯಪೂರ್ವದಲ್ಲೇ ತೆಂಕುತಿಟ್ಟಿನ ಹಿಮ್ಮೇಳ ಪ್ರಸಿದ್ಧ ಭಾಗವತರಾಗಿ ದೇವಿಮಹಾತ್ಮೆ ಪ್ರಸಂಗವನ್ನು ಏಳು ಹಾಗೂ ಐದು ದಿನಗಳ ಕಾಲ ಸ್ವಂತ ಪದ್ಯರಚನೆಯಲ್ಲೇ ಹಾಡಿ, ದಾಖಲೆ ಮಾಡಿದ್ದಲ್ಲದೆ ಯಕ್ಷಗಾನ ಗುರುಗಳಾಗಿ ಹೆಸರು ಗಳಿಸಿದವರು. ಅವರ ನಾಲ್ವರು ಪುತ್ರರಲ್ಲಿ (ಇಬ್ಬರು ಪುತ್ರಿಯರು) ದ್ವಿತೀಯ ಪುತ್ರರಾಗಿ ಜನಿಸಿದ ಸುಬ್ರಹ್ಮಣ್ಯ ಭಟ್ಟರು ಯಕ್ಷಗಾನ ಪರಂಪರೆಯನ್ನು ಮುನ್ನಡೆಸಿದ್ದು ಸುಮಾರು 15000ದಷ್ಟು ಮಂದಿಗೆ ಅವರು ಹಿಮ್ಮೇಳ ಪಾಠ ಮಾಡಿದ್ದಾರೆ.
ಬಾಲ್ಯದಲ್ಲೇ ಮೇಳ ಸೇರಿದವರು
75ರ ಹರೆಯದ ಮಾಂಬಾಡಿ ಸುಬ್ರಹ್ಮಣ್ಯ ಭಟ್. ತಂದೆ ದಿ. ಮಾಂಬಾಡಿ ನಾರಾಯಣ ಭಾಗವತರಿಂದಲೇ ಯಕ್ಷಗಾನದ ಭಾಗವತಿಕೆ, ಚೆಂಡೆ, ಮದ್ದಳೆ ವಾದನವನ್ನು ಕರಗತ ಮಾಡಿಕೊಂಡವರು. ಬಳಿಕ ಬಾಲ್ಯದಲ್ಲೇ ಮೇಳ ಸೇರಿ ಅನುಭವ ಗಳಿಸಿದವರು. ಚಿಪ್ಪಾರು ಕೃಷ್ಣಯ್ಯ ಬಲ್ಲಾಳದಿಂದ ಚೆಂಡೆಯ ಪಟ್ಟುಗಳನ್ನು ಕರಗತ ಮಾಡಿಕೊಂಡ ಅವರು, ಕಟೀಲು, ಕದ್ರಿ, ಧರ್ಮಸ್ಥಳ ಮೇಳಗಳಲ್ಲಿ ಸುಮಾರು ಇಪ್ಪತ್ತು ವರ್ಷಗಳ ಯಕ್ಷಗಾನ ತಿರುಗಾಟ ಮಾಡಿ, ತಮಗೆ ಒಲಿದ ಕಲೆಯನ್ನು ಧಾರೆಯೆರುವ ಕಾಯಕಕ್ಕೆ ಮುಂದಾದವರು.
1962 ರಿಂದ ಮೊದಲ್ಗೊಂಡು-ಧರ್ಮಸ್ಥಳ, ಕಟೀಲು, ಮುಲ್ಕಿ, ಕೂಡ್ಲು, ಕದ್ರಿ ಮುಂತಾದ ವೃತ್ತಿಪರ ಮೇಳಗಳಲ್ಲಿ ಸುಮಾರು 20 ವರ್ಷಗಳ ಕಾಲ ಮದ್ದಳೆ, ಚೆಂಡೆವಾದಕರಾಗಿ ಕಲಾ ಸೇವೆ ನಡೆಸಿದ್ದು, ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಪ್ರಿಯ ಶಿಷ್ಯನಾಗಿ, ಮಹಾನ್ ಗುರುಗಳಾದ ನೆಡ್ಲೆ ನರಸಿಂಹ ಭಟ್, ಕುದ್ರೆಕೋಡ್ಲು ರಾಮ ಭಟ್ ಸಾಹಚರ್ಯದಿಂದ ಕಲಾಪ್ರತಿಭೆಯನ್ನು ಪುಟಗೊಳಿಸಿಕೊಂಡರು.

ಯಕ್ಷಗಾನ ಹಿಮ್ಮೇಳ ತರಬೇತಿ

1968ನೇ ಇಸವಿಯಲ್ಲಿ ಕಾಸರಗೋಡು ತಾಲೂಕು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿಯಲ್ಲಿ ಕೀರ್ತಿಶೇಷ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಆಹ್ವಾನದ ಮೇರೆಗೆ ಹಿಮ್ಮೇಳ ಶಿಕ್ಷಣಕ್ಕೆ ಮುಂದಾದರು. ನಂತರ, ದಕ್ಷಿಣ ಕನ್ನಡ ಮತ್ತು ಕಾಸರಗೋಡಿನ ವಿವಿಧೆಡೆ ನೂರಕ್ಕೂ ಮಿಕ್ಕಿ ತರಗತಿ ನಡೆಸಿ ಹಲವಾರು ಶಿಷ್ಯರಿಗೆ ತೆಂಕುತಿಟ್ಟು ಹಿಮ್ಮೇಳ ತರಬೇತಿ ನೀಡಿದರು.
ಅನುಭವಿ ಶಿಷ್ಯ ಪರಂಪರೆ
ಶಿಕ್ಷಕರಾಗಿ ಪರಂಪರೆಯನ್ನು ಮುನ್ನಡೆಸುತ್ತಿರುವ ವಿಶ್ವವಿನೋದ ಬನಾರಿ, ವಳಕ್ಕುಂಜ ಕುಮಾರ ಸುಬ್ರಹ್ಮಣ್ಯ, ವೃತ್ತಿ ಮೇಳಗಳಲ್ಲಿ ಸಕ್ರಿಯರಾಗಿರುವ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಅಂಡಾಲ ದೇವಿಪ್ರಸಾದ ಶೆಟ್ಟಿ, ಪಟ್ಲ ಸತೀಶ ಶೆಟ್ಟಿ, ಬೋಂದೆಲ್ ಸತೀಶ್ ಶೆಟ್ಟಿ, ಪ್ರಶಾಂತ ವಗೆನಾಡು, ಪೊಳಲಿ ದಿವಾಕರ ಆಚಾರ್ಯ, ಪದ್ಯಾಣ ಗೋವಿಂದ ಭಟ್, ಪೆಲತ್ತಡ್ಕ ಗೋಪಾಲಕೃಷ್ಣ ಮಯ್ಯ, ನೆಕ್ಕರೆಮೂಲೆ ಗಣೇಶ ಭಟ್, ಯೋಗೀಶ ಆಚಾರ್ಯ ಉಳೆಪ್ಪಾಡಿ, ಹೊಸಮೂಲೆ ಗಣೇಶ ಭಟ್, ಪ್ರಫುಲ್ಲಚಂದ್ರ ನೆಲ್ಯಾಡಿ, ದೇವಿಪ್ರಸಾದ್ ಆಳ್ವ, ಪೂರ್ಣೇಶ ಅಚಾರ್ಯ, ಸುಬ್ರಾಯ ಹೊಳ್ಳ ಕಾಸರಗೋಡು, ಲವಕುಮಾರ ಐಲ ಮುಂತಾದವರು ಇವರ ಶಿಷ್ಯರು.
ಹವ್ಯಾಸಿ ರಂಗದ ಯಕ್ಷಗಾನ ಪ್ರತಿಭೆಗಳಾದ ಜಿ.ಕೆ.ನಾವಡ ಬಾಯಾರು, ನಿಡುವಜೆ ಪುರುಷೋತ್ತಮ ಭಟ್, ನಿಡುವಜೆ ಶಂಕರ ಭಟ್, ಕೋಳ್ಯೂರು ಭಾಸ್ಕರ, ಸುಬ್ರಾಯ ಸಂಪಾಜೆ, ಕೃಷ್ಣರಾಜ ನಂದಳಿಕೆ, ವೇಣುಗೋಪಾಲ ಮಾಂಬಾಡಿ, ಅರ್ಜುನ ಕೊರ್ಡೇಲ್, ಕಾರ್ತಿಕ್ ಕೊರ್ಡೇಲ್, ಪ್ರಶಾಂತ ಶೆಟ್ಟಿ, ರಾಮಪ್ರಸಾದ್ ವಧ್ವ ಕೂಡ ಮಾಂಬಾಡಿಯವರಲ್ಲೇ ಶಿಷ್ಯತ್ವ ಪಡೆದವರು.
ಸಂದ ಪ್ರಶಸ್ತಿಗಳು
ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ, ಯಕ್ಷಧ್ರುವ ಪಟ್ಲ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಉಡುಪಿ ಕಲಾರಂಗ ಪ್ರಶಸ್ತಿ, ದೆಹಲಿ ಕನ್ನಡ ಸಂಘ ಪ್ರಶಸ್ತಿ, ಕೀಲಾರು ಪ್ರತಿಷ್ಠಾನ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ನೆಡ್ಲೆ ಪ್ರತಿಷ್ಠಾನ ಪ್ರಶಸ್ತಿ, ರಸಿಕ ರತ್ನ ಗೋಪಾಲಕೃಷ್ಣ ಜೋಶಿ ಪ್ರತಿಷ್ಠಾನ ಪ್ರಶಸ್ತಿ, ಶ್ರೀಹರಿಲೀಲಾ ಪ್ರಶಸ್ತಿ ಹವ್ಯಾಸಿ ಬಳಗ ಕದ್ರಿ, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ, ಯಕ್ಷಗಾನ ಕೇಂದ್ರ , ಉಡುಪಿ, ಕೋಡಪದವು ವೀರಾಂಜನೇಯ ಪ್ರತಿಷ್ಠಾನ, ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನ, ಮಾಂಬಾಡಿ ಶಿಷ್ಯ ವೃಂದ ಮಂಗಳೂರು, ಮಾಂಬಾಡಿ ಶಿಷ್ಯ ಸಮಾವೇಶದ ಗುರುವಂದನೆ, ಕೋಳ್ಯೂರು ದೇವಸ್ಥಾನ, ಚಿಗುರುಪಾದೆ ಮುಂತಾದೆಡೆಗಳಲ್ಲಿ ಅವರಿಗೆ ಪುರಸ್ಕಾರಗಳು ಸಂದಿವೆ.

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಕರ್ನಾಟಕ ಯಕ್ಷಗಾನ ಅಕಾಡೆಮಿ 2024ರ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ, ಉಳಿದ ಪುರಸ್ಕೃತರ ವಿವರ ಇಲ್ಲಿದೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*