ಕೊನೆಗಾಲಕ್ಕೆ ಹೋಗುವುದು ಇಲ್ಲಿಗೇ ಎಂಬುದು ನೆನಪಾದ್ರೆ…. ಸ್ಮಶಾನ ನಿರ್ಮಾಣ ಸರಿಯಾದ ಜಾಗದಲ್ಲೇ ಆಗ್ತಿತ್ತು!!!

ಸಾಂದರ್ಭಿಕ ಚಿತ್ರವಿದು

ಎಷ್ಟೇ ದೌಲತ್ತಿದ್ದರೂ ಕೊನೆಗೆ ಸೇರುವುದು ಆರಡಿ ಮೂರಡಿ ಜಾಗಕ್ಕೇ..ಮನುಷ್ಯ ಮರಣ ಹೊಂದಿದ ಮೇಲೆ ಸೇರಬೇಕಾದದ್ದು ಸ್ಮಶಾನಕ್ಕೆ ಎಂಬಿತ್ಯಾದಿ ವೈರಾಗ್ಯದ ಮಾತುಗಳು ಹುಟ್ಟುವ ಜಾಗವಿದು. ಅಲ್ಲಿಂದ ಹೊರಟಮೇಲೆ ಮತ್ತದೇ ಸ್ವಪ್ರತಿಷ್ಠೆ, ಮೇಲರಿಮೆ, ಸೂಜಿ ಮೊನೆಯಷ್ಟು ಜಾಗ ಬಿಡಲಾರೆ ಎಂಬ ಹಠಸಾಧನೆ. ಹೆಚ್ಚಿನ ಕಡೆಗಳಲ್ಲಿರುವಂತೆ ಬಂಟ್ವಾಳ ತಾಲೂಕಿನಲ್ಲೂ ಮನುಷ್ಯ ಜೀವನದ ಅಂತ್ಯಕ್ಕೆ ಸೇರಬೇಕಾದ ಜಾಗವಾದ ಸ್ಮಶಾನವನ್ನು ಸುಸ್ಥಿತಿಗೆ ತರಲು ನೂರೆಂಟು ವಿಘ್ನಗಳಿವೆ. ಇಷ್ಟಿದ್ದರೂ ತಾಲೂಕಿನ ೭೧ ಗ್ರಾಮಗಳ ಪೈಕಿ ೬೭ ಕಡೆಗಳಲ್ಲಿ ನಿವೇಶನಗಳು ಮಂಜೂರಾಗಿವೆ. ಅವುಗಳನ್ನು ಸ್ಮಶಾನಯೋಗ್ಯವನ್ನಾಗಿ ಮಾಡುವುದು ಸ್ಥಳೀಯಾಡಳಿತದ ದೊಡ್ಡ ಸವಾಲು.

ತಾಲೂಕಿನ ಕುರಿತು ಮಾಹಿತಿ ನೀಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಕಾರಿ ಸಚಿನ್ ಕುಮಾರ್, ಬಂಟ್ವಾಳ ತಾಲೂಕಿನಲ್ಲಿ ಒಟ್ಟು ೨೯ ಗ್ರಾಮಗಳಲ್ಲಿ ನರೇಗಾ ಮತ್ತು ಇತರ ಅನುದಾನಗಳಿಂದ ಸ್ಮಶಾನಗಳು ಅಭಿವೃದ್ಧಿಯಾಗಿವೆ. ಮೂಡನಡುಗೋಡು, ದೇವಸ್ಯಮುಡೂರು, ಇರ್ವತ್ತೂರು, ಗೋಳ್ತಮಜಲಿನಲ್ಲಿ ಇನ್ನೂ ಜಾಗ ನಿಗದಿಯಾಗಲು ಬಾಕಿ ಇದೆ. ಒಟ್ಟು ೭೧ ಗ್ರಾಮಗಳ ಪೈಕಿ ೬೭ ಕಡೆ ಸ್ಮಶಾನಕ್ಕೆ ನಿವೇಶನ ಕಾದಿರಿಸಲಾಗಿದೆ ಎಂದರು.

ಸ್ಮಶಾನಭೂಮಿಗೆ ಆದ್ಯತೆ:
ರಾಜ್ಯದಲ್ಲಿನ ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಸ್ಮಶಾನ ಭೂಮಿ ಕಲ್ಪಿಸುವ ಹಿನ್ನೆಲೆಯಲ್ಲಿ ೨೦೨೨ರಲ್ಲಿ ಪ್ರಕಟಣೆ ಹೊರಡಿಸಲಾಗಿತ್ತು. ಅದರಂತೆ ಸರ್ಕಾರದ ಜಮೀನು ಲಭ್ಯವಿರುವ ಕಡೆ ಸ್ಮಶಾನ ಉದ್ದೇಶಕ್ಕಾಗಿ ೨ ಎಕರೆ ವಿಸ್ತೀರ್ಣದ ಜಮೀನನ್ನು ಕಾಯ್ದಿರಿಸುವ ಅಕಾರವನ್ನು ಜಿಲ್ಲಾಕಾರಿಗಳಿಗೆ ಪ್ರತ್ಯಾಯೋಜಿಸಲಾಗಿತ್ತು. ಸರ್ಕಾರಿ ಜಮೀನಿನಲ್ಲಿ ಅನಕೃತವಾಗಿ ಮಾಡುತ್ತಿರುವ ಸಾಗುವಳಿಯನ್ನು ಸಕ್ರಮೀಕರಣಕ್ಕಾಗಿ ಸಲ್ಲಿಸುವ ಅರ್ಜಿಗಳ ಪೈಕಿ ಅನರ್ಹ ಅರ್ಜಿಗಳು ಇದ್ದಲ್ಲಿ ಜಿಲ್ಲಾಕಾರಿಗಳ ಹಂತದಲ್ಲಿ ಅಂತಹ ಅನರ್ಹ ಅರ್ಜಿಗಳನ್ನು ವಜಾಗೊಳಿಸಿ ಜಮೀನನ್ನು ಸರ್ಕಾರದ ವಶಕ್ಕೆ ಪಡೆದು ಸ್ಮಶಾನಕ್ಕಾಗಿ ಕಾಯ್ದಿರಿಸುವ ಕುರಿತು ಪ್ರಕಟಣೆ ಹೊರಡಿಸಲಾಗಿತ್ತು.
ಅಲ್ಲದೆ, ಸಾರ್ವಜನಿಕರು ತಮ್ಮ ಗ್ರಾಮಗಳಲ್ಲಿ ಸ್ಮಶಾನದ ಅವಶ್ಯಕತೆ ಇದ್ದಲ್ಲಿ ಸಂಬಂಧಪಟ್ಟ ಜಿಲ್ಲಾಕಾರಿಗಳಿಗೆ ಅಥವಾ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಸರ್ಕಾರಿ ಜಮೀನು, ಕೆರೆ, ಕಟ್ಟೆ, ಕುಂಟೆ, ಹಳ್ಳ, ಸರೋವರ ಮತ್ತು ಇನ್ನಿತರೆ ಜಲಕಾಯ / ಜಲಮೂಲಗಳೆಂದು ವರ್ಗೀಕೃತವಾದ ಜಮೀನುಗಳನ್ನು ಗ್ರಾಮ ನಕಾಶೆಯಲ್ಲಿ ರಸ್ತೆ, ಬೀದಿ, ಬಂಡಿದಾರಿ, ಓಣಿ ಅಥವಾ ಹಾದಿ ಎಂದು ನಮೂದಾಗಿರುವ ಇತರೆ ಎಲ್ಲಾ ಸರ್ಕಾರಿ ಜಮೀನುಗಳು ಒತ್ತುವರಿಯಾಗಿದ್ದಲ್ಲಿ ಸಾರ್ವಜನಿಕರು ಸಂಬಂಧಪಟ್ಟ ಜಿಲ್ಲಾಕಾರಿಗಳಿಗೆ ಅಥವಾ ತಹಸೀಲ್ದಾರ್ ಗೆ ದೂರು ನೀಡಲು ತಿಳಿಸಲಾಗಿತ್ತು.

ಗಮನ ಸೆಳೆಯುವ ರುದ್ರಭೂಮಿ:
ಬಂಟ್ವಾಳ ತಾಲೂಕಿನ ಹಲವು ಕಡೆಗಳಲ್ಲಿ ರುದ್ರಭೂಮಿಗಳು ಗಮನ ಸೆಳೆಯುತ್ತವೆ. ವಿಶೇಷವಾಗಿ ಇಡ್ಕಿದು, ನರಿಕೊಂಬು ಸ್ಮಶಾನಗಳು, ಹಿಂದೆ ಬಂಟ್ವಾಳ ತಾಲೂಕಿನಲ್ಲಿದ್ದು, ಈಗ ಉಳ್ಳಾಲ ಸೇರಿರುವ ಸಜಿಪನಡು ಗ್ರಾಮದ ಕಂಚಿನಡ್ಕಪದವು ಸ್ಮಶಾನ ತನ್ನ ವಿನ್ಯಾಸದಿಂದ ಗಮನ ಸೆಳೆದಿದೆ. ಬಾಳೆಪುಣಿ, ಗೋಳ್ತಮಜಲು, ಇಡ್ಕಿದು, ಕಡೇಶ್ವಾಲ್ಯ, ಕರಿಯಂಗಳ, ಕಾವಳಮೂಡೂರು, ಕೇಪು, ಕುರ್ನಾಡು, ನರಿಕೊಂಬು, ಸಜೀಪನಡು, ಅಮ್ಮುಂಜೆ, ಸಜೀಪಪಡು ಗ್ರಾ.ಪಂ.ಗಳಲ್ಲಿ ಸ್ಮಶಾನಗಳು ನಿರ್ಮಾಣಗೊಂಡಿವೆ.

ಸಮಸ್ಯೆಗಳೇನು?
ಜಾಗ ಇದ್ದರೆ ಅನುದಾನವಿಲ್ಲ, ಅನುದಾನವಿದ್ದರೆ, ಸರಿಯಾದ ಕಾಲುದಾರಿ, ಜಾಗವಿಲ್ಲ, ಎರಡೂ ಇದ್ದರೆ, ಸ್ಥಳೀಯರ ತಕರಾರು, ಹಲವೆಡೆ ಅರಣ್ಯದ ಪಕ್ಕ ಜಾಗ ಗುರುತು, ಕೆಲವೆಡೆ ಎತ್ತರದ ಜಾಗದಲ್ಲಿ ಜಾಗ ನಿಗದಿ, ಹಲವೆಡೆ ನಿರ್ವಹಣೆ, ನಿರ್ಮಾಣ ಹೇಗೆ ಮಾಡುವುದು ಎಂಬ ಗೊಂದಲದಲ್ಲೇ ದಿನಗಳು ಕಳೆಯುತ್ತಿವೆ. ಆದರೆ ಹುಟ್ಟಿದವರು ಸಾಯಲೇಬೇಕಾದ ಕಾರಣ ಸ್ಮಶಾನ ನಿರ್ಮಾಣವಾಗದಿದ್ದ ಊರಿನಲ್ಲೂ ಮರಣ ಸಂಭವಿಸಿದ ವೇಳೆ ಪಕ್ಕದೂರಿನ ಸ್ಮಶಾನಕ್ಕೆ ಹೋಗಿ ದಹನಪ್ರಕ್ರಿಯೆ ಮಾಡುವ ಪರಿಸ್ಥಿತಿ. ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ಕಲ್ಲಡ್ಕದ ಸನಿಹ ಬಂಟ್ವಾಳ ಪುರಸಭೆ ಜಾಗವಿದೆ. ಇದೀಗ ಹಿಂದು ರುದ್ರಭೂಮಿ ಮೋಕ್ಷಧಾಮವಾಗಿದ್ದು, ಕಲ್ಲಡ್ಕದ ಶ್ರೀಗುರೂಜಿ ಸ್ವಸಹಾಯ ಸಂಘದ ನಿರ್ವಹಣೆಯಲ್ಲಿದೆ. ಇಲ್ಲಿಗೆ ಸ್ಮಶಾನವೇ ಸರಿಯಾಗಿ ನಿರ್ಮಾಣವಾಗದ ಬಾಳ್ತಿಲ ಗ್ರಾಮ ಸಹಿತ ಆಸುಪಾಸಿನ ಗ್ರಾಮಗಳಲ್ಲಿ ಮರಣವಾದರೆ ಕರೆತರಲಾಗುತ್ತದೆ. ಇಂಥ ಸನ್ನಿವೇಶಗಳು ಬಂಟ್ವಾಳ ತಾಲೂಕಿನ ಹಲವೆಡೆ ಇವೆ. ಕೆಲವೆಡೆ ಜಾಗ ನಿಗದಿಯಾದರೂ ಅದಕ್ಕೆ ಸಮೀಪದ ಜಾಗದವರ ಅಡ್ಡಿಯೂ ಇರುತ್ತದೆ. ಇಂಥದ್ದನ್ನೆಲ್ಲ ನಿವಾರಿಸಿಕೊಂಡು ಸ್ಮಶಾನ ನಿರ್ಮಿಸೋಣವೆಂದರೆ, ಹಣಕಾಸಿನ ಕೊರತೆಯೂ ಕಾಡುತ್ತದೆ.

 

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಕೊನೆಗಾಲಕ್ಕೆ ಹೋಗುವುದು ಇಲ್ಲಿಗೇ ಎಂಬುದು ನೆನಪಾದ್ರೆ…. ಸ್ಮಶಾನ ನಿರ್ಮಾಣ ಸರಿಯಾದ ಜಾಗದಲ್ಲೇ ಆಗ್ತಿತ್ತು!!!"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*