ಎಳೆಯರ ಗೆಳೆಯ ಮುಳಿಯ ಶಂಕರ ಭಟ್ ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಕೊಂಡು, ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಕೈಯಾಡಿಸಿ, ಪ್ರಬುದ್ಧತೆಯನ್ನು ಸಾಧಿಸಿದವರು ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ, ಜೊತೆಗೆ ಬಂಟ್ವಾಳ ಚುಟುಕು ಸಮ್ಮೇಳನದ ಅಧ್ಯಕ್ಷ ಗಾದಿ, ಹೀಗೆ ಎರಡೆರಡು ಮನ್ನಣೆ ಲಭಿಸಿದೆ. ಸಮಾಜ ಹಿತವೇ ಸಾಹಿತ್ಯದ ಉದ್ದೇಶವಾಗಿದ್ದರೆ ಚೆನ್ನಾಗಿರುತ್ತದೆ ಎನ್ನುವ ಶಂಕರ ಭಟ್ಟರೊಂದಿಗೆ ಮಾತುಕತೆ…
- ನಿಮ್ಮ ಹುಟ್ಟು, ಬಾಲ್ಯದ ಕಲಿಕೆ, ಕೌಟುಂಬಿಕ ಒಡನಾಟ, ಏಳು– ಬೀಳುಗಳನ್ನು ಸ್ವಲ್ಪ ವಿವರಿಸಿ ಹೇಳಬಹುದೇ?
ನನ್ನ ಜನ್ಮ – ಬಾಲ್ಯದ ಬಗೆಗಿನ ವಿಚಾರ. ನಾನು ಹುಟ್ಟಿದ್ದು ೧೯-೨-೧೯೫೨, ಪ್ರಸ್ತುತ ನಾನು ವಾಸವಾಗಿರುವ ಮುಳಿಯದಲ್ಲಿ. ತಾಯಿ, ಶಂಕರಿ ಅಮ್ಮ. ತಂದೆ ಕೃಷ್ಣ ಭಟ್ಟ.ಹುಟ್ಟಿದ ಎರಡೂವರೆ ವರ್ಷದಲ್ಲಿ ತಾಯಿಅದಾವುದೋ ಅಸೌಖ್ಯದಿಂದ ತೀರಿಕೊಂಡರು. ತಾಯಿಯ ತವರು- ತಂದೆಯವರ ತಾಯಿ, ಸೋದರತ್ತೆ, ನನ್ನ ಚಿಕ್ಕಮ್ಮ ಎಲ್ಲರ ಆಸರೆಯಲ್ಲಿ ಬೆಳೆದೆ. ಆರ್ಥಿಕವಾಗಿ ಬಡತನವಿದ್ದರೂ, ಕಷ್ಟಗಳು ಒಂದರ ಹಿಂದೆ ಒತ್ತೊತ್ತಾಗಿ ಬರುತ್ತಿದ್ದರೂ, ಇವರೆಲ್ಲರೂ ನನ್ನನ್ನು ಪ್ರೀತಿಯಿಂದ ನೋಡಿಕೊಂಡರು.ತಂದೆಯವರ ತಮ್ಮ- ಚಿಕ್ಕಪ್ಪ, ಸೋದರ ಮಾವಂದಿರು- ಎಲ್ಲರೂ ನನ್ನ ಬೆಳವಣಿಗೆಯಲ್ಲಿ ಶ್ರಮಿಸಿದವರು. ಅವರೆಲ್ಲ ನನ್ನ ಶ್ರೇಯೋಭಿಲಾಷಿಗಳಾಗಿದ್ದರು.
ತಾಯಿಯ ಅಗಲಿಕೆ ಕಾಡಿದಾಗಲೆಲ್ಲ ’ ಬದುಕು ಬಂದಂತೆ ಸ್ವೀಕರಿಸಬೇಕು’ ಎನ್ನುವ ಭಾವ ಬಲವಾಗಿ ಮೂಡಿರಬೇಕು. ಆರನೇ ತರಗತಿಯಲ್ಲಿದ್ದಾಗ ಬರಹದ ಗೀಳು ಅಂಟಿಕೊಂಡಿತೆಂದು ನೆನಪು. ಶ್ರೀ. ಕೆ. ಸುಬ್ರಾಯ ಭಟ್, ಶ್ರೀ ಎನ್. ವಿ. ಕೃಷರಾವ್ ನನ್ನ ಬಾಲಿಶ ಬರಹಗಳನ್ನು ಉತ್ತೇಜಿಸುತ್ತಿದ್ದರು.ಇದರ ಪರಿಣಾಮವಾಗಿಯೇ, ನನ್ನ ಬರವಣಿಗೆಯ ಹುಚ್ಚು ತೀವ್ರವಾಗಿರಬೇಕು. ಒಂದೇ ಬಾರಿ ಎಸ್ ಎಸ್ ಎಲ್ ಸಿ ಪಾಸು ಮಾಡಲಾಗಲಿಲ್ಲ. ಹಿಂದೀ, ಸಂಸ್ಕೃತ, ಕನ್ನಡ ಡಿಪ್ಲೊಮೋ, ಹಿಂದೀ ಸ್ನಾತಕೋತ್ತರ ಪದವಿ, ಬಿ ಎಡ್ ಎಲ್ಲವೂ ನನ್ನ ಖಾಸಗಿ ಅಧ್ಯಯನ.
2. ವೃತ್ತಿ– ಸಾಂಸಾರಿಕ ಜೀವನದ ಬಗೆಗೆ
೧೯-೨೦ ನೇ ವಯಸ್ಸಿಗೇ ’ದೇಶಪ್ರೇಮಿ’ವಾರಪತ್ರಿಕೆ ವಿಟ್ಲದಲ್ಲಿ ಆರಂಭ. ಸುಮಾರು ಎರಡು ವರ್ಷ ಕುಂಟುತ್ತಾ ಸಾಗಿತ್ತು. ನವಭಾರತದಲ್ಲಿ ಸಹ- ಸಂಪಾದಕನಾಗಿ ದುಡಿದು, ದೇಶಪ್ರೇಮಿ ಪತ್ರಿಕೆ ಉಳಿಸಲು ಹೆಣಗಿದೆ. ಸಾಧ್ಯವಾಗಲಿಲ್ಲ. ಪತ್ರಿಕೆ ನಿಲ್ಲುವ ಹಂತದಲ್ಲಿ ಮಂಡ್ಯದವರೊಬ್ಬರಿಗೆ ಪತ್ರಿಕೆಯನ್ನೇ ಮಾರಿದೆ. ಸ್ವಾಮ್ಯದ ಹಣವನ್ನು ಅವರು ಕೊಡಬೇಕಾಗಿತ್ತು. ಅವರು ಕೊಡಲಿಲ್ಲ. ಮಂಗಳೂರಿನಲ್ಲಿ ಪತ್ರಿಕಾ ಕರ್ತನಾಗಿರುವ ವೇಳೆ ಕಪಿತಾನಿಯೋ ಟ್ರೈನಿಂಗ್ ಸ್ಕೂಲ್ ನಲ್ಲಿ, ಜನತಾ ವಿದ್ಯಾ ಕೇಂದ್ರಗಳಲ್ಲಿ ಅರೆಕಾಲಿಕ ಅಧ್ಯಾಪನ ಮಾಡಿದೆ. ಮೊಂಟೆಪದವು ಪ್ರಾಥಮಿಕ ಮತ್ತು ಪ್ರೌಢಶಾಲೆ- ಮುಡಿಪು ಪದವಿಪೂರ್ವ ವಿದ್ಯಾಲಯಗಳಲ್ಲಿ ಅಂಶಕಾಲಿಕ ಅಧ್ಯಾಪನ ಮಾಡಿದ್ದೂ ಆಯಿತು. ೧೯೮೬ ರಿಂದ ಮಂಜೇಶ್ವರ ಎಸ್ ಎ ಟಿ ಶಾಲೆಯಲ್ಲಿ ಹಿಂದೀ ಅಧ್ಯಾಪಕನಾಗಿ ಕೆಲಸ ಸಿಕ್ಕಿತು. ೨೦೦೬-೨೦೦೭ ರ ವರೆಗೆ ಒಂದು ವರ್ಷ ಮುಖ್ಯೋಪಾಧ್ಯಾಯನೂ ಆದೆ. ಒಟ್ಟಿನಲ್ಲಿ, ೧೯೮೬ ರಿಂದ ಖಾಯಂ ಉದ್ಯೋಗ ಸಿಕ್ಕಿದ್ದು, ಜೀವನ ನಿರ್ವಹಣೆಗೆ ಬಹಳ ಅನುಕೂಲವಾಯಿತು.
3. ನಿಮ್ಮ ಪತ್ರಿಕಾ ವ್ಯವಸಾಯದ ಹೊರತಾಗಿ, ನೀವು ಯಾವ ಯಾವ ಪತ್ರಿಕೆಗಳಿಗೆ ಬರೆಯುತ್ತಿದ್ದಿರಿ…?
೧೯೭೪-೭೫ ರಿಂದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ, ಅಂದರೆ ಕಥೆ- ಕವಿತೆ- ಚುಟುಕು- ವಿಡಂಬನೆ, ಲಘು ಬರೆಹ, ಪ್ರಹಸನ, ವೈಚಾರಿಕ ಲೇಖನ, ಮಕ್ಕಳ ಕವಿತೆ- ಶಿಸುಪ್ರಾಸ ಇತ್ಯಾದಿಗಳನ್ನು ನಿರಂತರವಾಗಿ ಬರೆಯುತ್ತಿದ್ದೆ. ಮುಖ್ಯವಾಗಿ ಯುಗಪುರುಷ, ಉದಯವಾಣಿ, ಕರ್ಮವೀರ, ಉತ್ಥಾನ, ವಿಕ್ರಮ, ನವಯುಗ, ಜನರಾಜ್, ಅಕ್ಷಯ, ಬಾಲಮಂಗಳ, ಮಂಗಳ, ತರಂಗ, ಬಾಲಮಿತ್ರ ,ಪ್ರಜಾಮತ, ಕೃಷಿಕರ ಸಂಘಟನೆ, ಮುಗಾರು, ಜನ ಈ ದಿನ,ಜಗದರ್ಶಿ, ಕಲಾದರ್ಶನ, ಲಹರಿ- ಹೀಗೆ ಹಲವು ಪತ್ರಿಕೆಗಳು ನನ್ನನ್ನು ಪ್ರಕಟಿಸಿವೆ. ವಿಶೇಷ ಲೇಖನಗಳನ್ನು ಆಹ್ವಾನಿಸಿ ಪ್ರೋತ್ಸಾಹಿಸಿವೆ. ಹೀಗೆ ಬರೆಯುವಾಗಲೆಲ್ಲ, ಶ್ರೀ ಶೈಲ ನಾಗಭೂಷಣ, ಶ್ರೀ ಮುಳಿಯ ರಜತಾದ್ರಿ, ಮಂಕ, ಎಳೆಯರ ಗೆಳೆಯ- ಮುಳಿಯ, ಗೌರೀ ಶಂಕರ ರಜತಾದ್ರಿ, ಗುರು ಶರಣ ಮುಳಿಯ ಇತ್ಯಾದಿ ಕಾವ್ಯನಾಮಗಳಿಂದ ಪತ್ರಿಕೆಗಳಿಗೆ ಬರೆಯುತ್ತಿದ್ದೆ.
4. ಮದುವೆ– ಮಕ್ಕಳು– ಸಂಸಾರದ ಬಗೆಗೆ….
೧೯೭೪ರಲ್ಲಿ, ಸೌ| ಗೌರಿಯೊಂದಿಗೆ ವಿವಾಹವಾದೆ. ಮೂವರು ಮಕ್ಕಳು. ಮಗ- ಕೃಷ್ಣಮೂರ್ತಿ, ಮಗಳಂದಿರು ಈರ್ವರು-ವಿದ್ಯಾಶಂಕರಿ ಮತ್ತು ವಿಜಯ ಶ್ರೀ. ಮಗ, ಆಯುರ್ವೇದದಲ್ಲಿ ಸ್ನಾತಕೋತ್ತರ- ಸಂಶೋಧನೆಗಳನ್ನು ಮಾಡಿ ಪ್ರಸ್ತುತ ವೈದ್ಯಕ ವ್ಯವಸಾಯದ ಜೊತೆಗೆ, ಅಧ್ಯಾಪನವನ್ನೂ ಮಾಡುತ್ತಿದ್ದಾನೆ. ಅವನಿಗೊಬ್ಬಳು ಮಗಳು. ಹಿರಿ ಮಗಳು ವಿದ್ಯಾಶಂಕರಿಗೆ ಎರಡು ಗಂಡು ಮಕ್ಕಳು. ಇತಿಹಾಸದಲ್ಲಿ ಎಂ.ಎ ಪೂರೈಸಿದ ಕಿರಿಮಗಳು ಕೆಲಕಾಲ ಅತಿಥಿ ಉಪನ್ಯಾಸಕಿಯೂಸೇವೆ ಸಲ್ಲಿಸಿದ್ದಳು.ಅವಳಿಗೊಬ್ಬಾಕೆ ಮಗಳು. ಒಟ್ಟಂದದಲ್ಲಿ ಸಂತೃಪ್ತ ಕುಟುಂಬ ಎಂಬ ನಿರಾಳತೆಯಿದೆ.
5. ಹವ್ಯಾಸದ ತುಡಿತ– ಸಂಚಾರ, ಸಾಹಿತ್ಯ ಸಂಘಟನೆಕುರಿತು ಸ್ವಲ್ಪ ಹೇಳಬಹುದೇ?
ಮೊದಲಿನಿಂದಲೂ ಏಕಪಾತ್ರಾಭಿನಯ ಮಾಡುವ ಹವ್ಯಾಸ. ಮುಂಬೈ, ಪೂಣೆ, ಬೆಂಗಳೂರುಗಳಿಗೂ ತೆರಳಿ ಕಾರ್ಯಕ್ರಮ ನೀಡುವ ಕ್ರಮವಿದ್ದಿತ್ತು. ನಾಟಕ ಬರೆದು, ನಿರ್ದೇಶಿಸಿ, ಅಭಿನಯಿಸಿ, ನಾಟಕದ ತಂಡವನ್ನು ಹಲವೆಡೆ ಕೊಂಡೊಯ್ದು ಪ್ರದರ್ಶಿಸುವುದೂ ಬಹುಕಾಲ ನಡೆಯಿತು. ಹಲವಾರು ನಾಟಕ ಸ್ಪರ್ಧೆ- ರಂಗಗೀತೆ, ನೃತ್ಯ ರೂಪಕ ಸ್ಪರ್ಧೆ ಇತ್ಯಾದಿಗಳಲ್ಲೂ ಸಕ್ರಿಯವಾಗಿರುತ್ತಿದ್ದೆ. ಇದರ ಜೊತೆಗೆ, ಸುದರ್ಶನ ಸಾಹಿತ್ಯ ಸಂಘ, ಮಿತ್ರಕಲಾ ವೃಂದ, ಸತ್ಯನಾರಾಯಣ ಸೇವಾ ಸಮಿತಿ ಇತ್ಯಾದಿಗಳನ್ನು ಹುಟ್ಟುಹಾಕಿ ಮುನ್ನಡೆಸುವುದೂ ನಡೆಯಿತು. ಹತ್ತು-ಹನ್ನೆರಡು ಕನ್ನಡ- ತುಳು ಸಾಮಾಜಿಕ, ಪೌರಾಣಿಕ ನಾಟಕ, ಮೂವತ್ತಕ್ಕೂ ಮೀರಿದ ನೃತ್ಯರೂಪಕದ ರಚನೆಯನ್ನೂ ಮಾಡಿದೆ. ಉತ್ತಮ ಪ್ರದರ್ಶನಗಳನ್ನು ಕೊಟ್ಟ ತೃಪ್ತಿ- ಸಾರ್ಥಕತೆ ಕೂಡಾ ಇದೆ. ದಕ್ಷಿಣಕನ್ನಡದ ಯಕ್ಷಗಾನ ದಿಗ್ಗಝರಾದ ಶೇನಿ, ಪೆರ್ಲ ಪಂಡಿತರು, ಮಲ್ಪೆ ಸಾಮಗದ್ವಯರು, ಮೂಡಂಬೈಲು ಶಾಸ್ತ್ರಿ, ಉಡುವೆಕೋಡಿ, ಕುಂಬ್ಳೆ, ಉಡುಪಮೂಲೆ, ಅಂಬೆಮೂಲೆ ಗೋವಿಂದ ಭಟ್, ಅಡ್ಕ ಗೋಪಾಲಕೃಷ್ಣ ಭಟ್, ಪ್ರಭಾಕರ ಜೋಷಿ, ಸೂರಿಕುಮೇರು ಗೋವಿಂದ ಭಟ್, ಮತ್ತೆ ಕೆರೆಮನೆ ಸಹೋದರರು ಮೊದಲಾದವರ ಜೊತೆಗೆಬೆರೆಯುವ, ಯಕ್ಷಗಾನ ತಾಳಮದ್ದಲೆ ಕೂಟಗಳಲ್ಲಿ ಭಾಗಿಯಾಗುವ ಅವಕಾಶವೂ ಸಿಕ್ಕಿದೆ. ಆದರೆ, ನಾನೆಂದೂ ಅದನ್ನೇ ವೃತ್ತಿಯಾಗಿ ಹಚ್ಚಿಕೊಳ್ಳಲಿಲ್ಲ.
6. ನಿಮ್ಮ ಕೃಷಿ– ಅಧ್ಯಾಪನ ಮತ್ತು ಸಾಹಿತ್ಯದ ವಿವಿಧ ಆಯಾಮಗಳ ಬಗ್ಗೆ ಸ್ವಲ್ಪ ತಿಳಿಸಿ ಕೊಡಿ..
ನಾವು ಹುಟ್ಟು ಕೃಷಿಕರು ಹೌದು. ಗೇಣಿ ಭೂಮಿಯಲ್ಲಿ ಕೃಷಿ ಮಾಡಿ ಜೀವನ ನಿರ್ವಹಣೆ ಮಾಡುತ್ತಾ ಬಂದವರು ನನ್ನ ತಂದೆ. ಕಾಲಾನಂತರದಲ್ಲಿ ಬಂದ ಕೃಷಿಭೂಮಿಯಲ್ಲಿ ತಂದೆ ಚೆನ್ನಾಗಿಯೇ ಕೃಷಿ ಮಾಡುತ್ತಾ ಬಂದರೂ ನಾನು ಯಶಸ್ವೀ ಕೃಷಿಕ ಎನ್ನಲಾರೆ. ಆದರೆ ಕೃಷಿ ಬಗ್ಗೆ ಒಲವು ಮತ್ತು ಹಂಬಲ ಇದ್ದದ್ದು ಮಾತ್ರ ಸತ್ಯ. ಮತ್ತೆ, ನನ್ನ ವಿವಾಹದ ಬಳಿಕ ನನ್ನ ಬದುಕಿಗೆ ಒಂದು ಹೊದ ರೂಪು ಬಂದಿದೆ ಎಂದುಕೊಳ್ಳುತ್ತೇನೆ. ಹಾಗೆಂದು ಒಪ್ಪ ಓರಣ ಶಿಸ್ತು ಇದೆ- ಇತ್ತು ಎಂದು ಹೇಳಲಾರೆ.ನನ್ನಿಂದ ಇತರರಿಗೆ ನೋವಾಗಬಾರದೆಂದು ಆಶಯ. ಹಾಗೆಯೇ ಇತರರೂ ನೋಯಿಸಿದಾಗ ಒಂಟಿಯಾಗಿ ಸಾಹಿತ್ಯ ರಚನೆಯ ಮರೆಹೋಗುವುದು ರೂಢಿ. ಹಾಗೆಂದು ಸಾಹಿತ್ಯ ರಚನೆಗೆ ಅದೊಂದೇ ಕಾರಣವಲ್ಲ. ಬೇರೆ ಬೇರೆ ಕೃತಿಗಳು ಕೆಲವೊಂದು ಪ್ರೇರಣೆಗಳಿಂದ ರಚಿತವಾದುವುಗಳು. ಇನ್ನು ಅಧ್ಯಾಪನದ ಬಗ್ಗೆ ಬಹಳ ಆಸಕ್ತಿ ಮತ್ತು ಶ್ರದ್ಧೆ ಮೊದಲಿನಿಂದಲೂ ಇತ್ತು. ಹೀಗಿರುವುದರಿಂದಲೇ ಸರ್ಕಾರಿ ಉದ್ಯೋಗ ಸಿಕ್ಕಾಗ ಅದು ನನ್ನ ಆಸಕ್ತಿಯನ್ನು ಹೆಚ್ಚಿಸಲು ಮತ್ತು ಪ್ರಚುರ ಪಡಿಸುವಲ್ಲಿ ಎರವಾಯಿತು. ನನ್ನ ಆರ್ಥಿಕ ಶಕ್ತಿಯನ್ನೂ ಕೊಂಚ ಬಲಪಡಿಸಿತು.ನಾನೆಂದೂ ಸಾಹಿತ್ಯ ಮತ್ತು ವೃತ್ತಿಗಳನ್ನು ಜತೆಗೂಡಿಸಿದವನು ಅಲ್ಲ. ಆದರೆ, ಸಾಹಿತ್ಯವನ್ನು ಬಿಟ್ಟು ಬಹುಕಾಲ ಇರುವುದೂ ನನ್ನಿಂದಾಗದು. ಹಾಗೆಂದೇ ಯಾವುದಾದರೊಂದು ಕೃತಿಯ ಓದು ಅಲ್ಲವೇ ಬರವಣಿಗೆಯಲ್ಲಿ ತೊಡಗಿರುತ್ತಿದ್ದೆ. ಅದು ಅಂದೂ ಹಾಗೆಯೇ. ಇಂದೂ ಕೂಡಾ.
7. ಬದುಕು ಮತ್ತು ಸಾಹಿತ್ಯದಲ್ಲಿ ನಿಮ್ಮ ಮೇಲೆ ಪ್ರಭಾವ ಬೀರಿದ, ನೆನಪಿಸಬೇಕಾದವರ ಬಗ್ಗೆ ಸ್ವಲ್ಪ ತಿಳಿಸಿಕೊಡಿ.
ಮುಳಿಯ ಕಡೆಂಬಿಲ ಶಂಕರ ಭಟ್, ಎಂ. ಬಿ. ಮುಳಿಯ, ಸಾವಿತ್ರಿ ಎಂ ಭಟ್, ಬಿಲ್ಲಂಪದವು ರಾಮಕೃಷ್ಣ ಭಟ್, ಬಿಲ್ಲಂಪದವು ನಾರಾಯಣ ಭಟ್, ಪಿಲಿಂಗುಳಿ ಗಣನಾಥ ಭಟ್, ಎ. ವಿ. ಲಕ್ಷ್ಮಿ ತೀಚರ್, ಎಚ್. ಪರಮೇಶ್ವರ ಕಾರಂತ್, ಡಾ. ಕೆ ಸುಬ್ರಹ್ಮಣ್ಯ ಭಟ್ – ಹೀಗೆಬಹುಮಂದಿ ನನ್ನ ವಿವಿಧ ಪ್ರಕಾರದ ಕೃತಿ ರಚನೆಗೆ ಪ್ರೇರಕರು ಮತ್ತು ಪೋಷಕರು. ಮೈಸೂರಿನ ವಿನಯಾ ಕೃಷ್ಣಮೂರ್ತಿ ನನ್ನ ಅನೇಕ ನೃತ್ಯ ರೂಪಕಗಳನ್ನು ರಂಗದಲ್ಲಿ ಪ್ರದರ್ಶನಗೊಳಿಸಿದ್ದಾರೆ.
ಗಮಕ ವ್ಯಾಖ್ಯಾನದಲ್ಲಿ – ಶ್ರೀಯುತ ಅಮೈ ಈಶ್ವರ ಭಟ್ ಮತ್ತು ಗಣಪತಿ ಪದ್ಯಾಣ ನನ್ನನ್ನು ಮುನ್ನಡೆಸಿದರು. ಬಲಿಪ ಭಾಗವತರು, ಬರೆ ಕೇಶವ ಭಟ್, ಕೆಲಿಂಜ ಸೀತಾರಾಮ ಆಳ್ವರೇ ಮೊದಲಾದವರು ನನ್ನನ್ನು ತಾಳಮದ್ದಲೆಯಲ್ಲಿ ದುಡಿಸಿದವರು.
8. ಪತ್ರಿಕೋದ್ಯಮ ಮತ್ತು ಸಾಹಿತ್ಯ ರಚನೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂಬುದನ್ನು ತಿಳಿವ ಕುತೂಹಲ…
ಪತ್ರಿಕೋದ್ಯಮದಲ್ಲಿ ಅನುವಾದ, ಕತೆ- ಕವಿತೆ-ವಿಡಂಬನೆ, ಅಂಕಣ ಬರೆಹ ಕರಗತವಾಗಿರಬೇಕು. ಕ್ರೀಡಾಲೋಕದಲ್ಲಿ ಉತ್ತಮ ಜ್ಞಾನಬೇಕು. ಆದರೆ, ನನಗೆ ಅದರಲ್ಲಿ ಪರಿಣತಿ ಸಾಲದು. ಲೇಖನ ಮತ್ತು ಓದು ಜತೆ ಜತೆಯಾಗಿ ಸಾಗಬೇಕು. ಅಧ್ಯಯನ ಹೆಚ್ಚಾದಂತೆ ಬರಹ ಪಕ್ವವಾಗುತ್ತದೆ. ಬರಹಗಾರ ತನ್ನ ಲೇಖನವನ್ನು ಇತರರು ಓದಬೇಕೆಂದು ಆಶಿಸುವಂತೆ, ಇತರರ ಕೃತಿಗಳನ್ನೂ ಓದುವ ಮನೋಧರ್ಮ ಬೆಳೆಸಬೇಕು. ಪತ್ರಕರ್ತನ ಕೆಲಸ ಭಾಷಾ ಪ್ರಭುತ್ವಕ್ಕೆ ಪೂರಕ. ಗುಂಪುಗಾರಿಕೆ, ಒಳ ಜಗಳ- ಬರಿಯ ರಾಜಕೀಯಗಳೆಲ್ಲ ಸ್ವ ಅಭಿವೃದ್ಧಿಯ ಮಾರಕಗಳು ಎಂದು ನಂಬಿರುವವನು ನಾನು.
ವೈಯಕ್ತಿಕವಾಗಿ ನಾನು ಪೂರ್ಣಕಾಲಿಕ ಬರೆಹಗಾರನಲ್ಲ. ಪ್ರವೃತ್ತಿ ಅದು. ಹಾಗೆಂದು ಸಾಹಿತ್ಯ ಚಿಂತನೆ ಮಾತ್ರ ಪೂರ್ಣ ಕಾಲಿಕ. ಬರೆಹಕ್ಕೆ ಒತ್ತಡ ಹೆಚ್ಚಿದಾಗ ಬರೆಯದಿರುವುದು ನನಗೆ ಅಸಾಧ್ಯ. ಸಮಯ- ಸ್ಥಾನದ ಪರಿವೆ ಇಲ್ಲದೆ ಘಂಟೆಗಟ್ಟಲೆ ಬರೆಯುವ ಅಭ್ಯಾಸವೂ ನನ್ನದು. ಭಾವದ ಮೂಲ ಮನದ- ಭವ. ಕಾಲಕ್ಕೆ ತಕ್ಕಂತೆ ಕಲೆಗಾರರ ಮನೋಧರ್ಮ, ಸಾಮಾಜಿಕ ರೀತಿ-ನೀತಿ, ವ್ಯಾಪಾರೀ ಮನೋಭಾವ, ಗಣ್ಯರೆನಿಸಿಕೊಂಡವರ ವಶೀಲಿಬಾಜಿತನ ಇತ್ಯಾದಿಗಳು ಇಂದು ಸಾಹಿತ್ಯಕ್ಕೆ ಬೇರೆಯದೇ ಆಯಾಮ ನೀಡುತ್ತಿರುವುದನ್ನೂ ಗಮನಿಸುತ್ತಲೇ ಇದ್ದೇವೆ. ಅದೆಲ್ಲವೂ ಅವರವರ ಆಯ್ಕೆ ಮತ್ತು ಪ್ರೀತಿ. ಪೂರ್ವಾಗ್ರಹ ಪೀಡಿತ ವಿಮರ್ಶೆ, ಗಣ್ಯರೆನಿಸಿಕೊಂಡವರ ಪ್ರತಿಷ್ಠೆ ಮತ್ತು ಸಣ್ಣತನ ಇತ್ಯಾದಿಗಳು ಸಾಹಿತ್ಯಕ್ಕೆ ಮಾರಕವಾಗುತ್ತಿರುವುದು ಮಾತ್ರ ದುರದೃಷ್ಟಕರ.
9. ಮೊದಲೆಲ್ಲ ಮಕ್ಕಳ ಸಾಹಿತಿಯಾಗಿ ಬಹುವಾಗಿ ಗುರುತಿಸಿಕೊಂಡವರು ತಾವು. ಮಕ್ಕಳ ಸಾಹಿತ್ಯದ ಬಗೆಗೆ ಸ್ವಲ್ಪ ತಿಳಿಸಿಕೊಡಿ.
ವಯಕ್ತಿಕವಾಗಿ ನನ್ನ ಮಕ್ಕಳ ಸಾಹಿತ್ಯ ರಚನೆಗೆ ಸ್ಪೂರ್ತಿ ನನ್ನ ಬಾಲ್ಯ, ಪರಿಸರ ಮತ್ತು ಎಡೆಬಿಡದ ಓದು. ಮುಖ್ಯವಾಗಿ ಹಲವಾರು ಖ್ಯಾತನಾಮರ ಶಿಶು ಸಾಹಿತ್ಯದ ನಿರಂತರ ಓದು ನನ್ನಲ್ಲಿ ಈ ಬಗೆಯ ಸಾಹಿತ್ಯ ರಚನೆಗೆ ಪ್ರೇರಣೆ ನೀಡಿದ್ದಿರಬಹುದು. ನಾನು ಅಧ್ಯಾಪಕನಾಗಿದ್ದ ಶಾಲೆ- ಕಾಲೇಜುಗಳಲ್ಲಿ ಸಂದರ್ಭಕ್ಕೆ ತಕ್ಕಂತೆ ಕೃತಿ ರಚನೆಯ ಅವಕಾಶ ಮತ್ತು ಅನಿವಾರ್ಯತೆಯ ಕಾರಣದಿಂದಲೂ ಬಹಳಷ್ಟು ಕಥೆ- ಕವಿತೆ- ರೂಪಕ- ಲೇಜಿಂ- ಕೋಲಾಟ- ಟಂಕಿಗೆ ಹೊಂದಿಕೆಯಾಗುವ ಸಾಹಿತ್ಯ ರಚನೆಯಾಯಿತು. ಮೊದಲೆಲ್ಲ ಶಾಲೆ ಕಾಲೇಜುಗಳಲ್ಲಿ ನಡೆಸುತ್ತಿದ್ದ ಮಕ್ಕಳಕವನ ರಚನೆ-ಗಾಯನ ಸ್ಪರ್ಧೆ ಇತ್ಯಾದಿಗಳೂ ಇದರಲ್ಲಿ ಸ್ವಲ್ಪ ಮಟ್ಟಿನ ಪ್ರಭಾವ ಮೂಡಿಸಿದ್ದನ್ನೂ ನಾನು ಅಲ್ಲಗಳೆಯಲಾರೆ.
ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮರಂತಹವರ ಒತ್ತಾಸೆಯ ಕಾರಣದಿಂದಲೂ ಬಹಳ ಮಕ್ಕಳ ಕವಿತೆ ರಚಿಸಿದೆ. ಈ ಕಾರಣಕಾಗಿಯೇ ಚಿಣ್ಣರ ಗಿಣ್ಣು, ಚಿಣ್ಣರ ಚಿಲುಮೆ ಹೀಗೆ ಹತ್ತಾರು ಮಕ್ಕಳ ಕೃತಿಯ ಮೂಲಕ ನೂರಾರು ಮಕ್ಕಳ ಪದ್ಯವನ್ನು ಆಸಕ್ತ ವರ್ಗಕ್ಕೆ ಕೊಡುವುದು ನನ್ನಿಂದ ಸಾಧ್ಯವಾಯಿತು. ಒಟ್ಟಿನಲ್ಲಿ ನನಗೆ ಅದು ಬಹಳ ನೆಮ್ಮದಿ, ಆನಂದ ಮತ್ತು ತೃಪ್ತಿಯನ್ನು ನೀಡಿದೆ. ಜೊತೆಗೆ, ಕೆಲವೊಂದು ನೀತಿಯುಕ್ತ ಕಥೆ- ಕವಿತೆ ಮಕ್ಕಳ ವಯೋಮಾನ- ಮನೋ ಭೂಮಿಕೆಯನ್ನು ದೃಢಗೊಳಿಸುವಲ್ಲಿ ಎರವಾಗಿದೆ ಎಂದು ಜನ ಗುರುತಿಸುವಾಗ ಮನಸ್ಸು ಮತ್ತಷ್ಟು ಸಂತುಷ್ಟಿ ಪಡೆಯುತ್ತದೆ.
- ಸಾಹಿತ್ಯದ ಇತರ ಪ್ರಕಾರಗಳ ನಿಮ್ಮ ಬರವಣಿಗೆಯ ಬಗ್ಗೆ..
ನನ್ನ ಮನಸ್ಥಿತಿ, ಅರಿವು, ಅಗತ್ಯ ಮತ್ತು ಸಾಂದರ್ಭಿಕಗಳ ಕಾರಣ ಲಘು ಬರೆಹ, ವಿಡಂಬನೆ, ನಗೆ ಬರೆಹ, ವೈಚಾರಿಕ ಲೇಖನ, ಚುಟುಕುಗಳು, ಮುಕ್ತಕ, ಗಝಲ್,ಸಣ್ಣಕತೆ, ರೇಡಿಯೊ ಚಿಂತನೆ ಇತ್ಯಾದಿಗಳನ್ನು ಬರೆಯುತ್ತೇನೆ. ಬರೆದದ್ದೆಲ್ಲ ಪ್ರಕಟನೆಗೆ ಕಳುಹಿಸುವ ಸ್ವಭಾವ ನನ್ನದಲ್ಲ. ಕಳುಹಿಸಿದ ಬರೆಹವೆಲ್ಲ ಸ್ವೀಕೃತವಾಗಬೇಕೆಂಬ ದಾರ್ಷ್ಟ್ಯತೆಯೂ ನನಗಿಲ್ಲ. ಪ್ರಕಟನೆಯೊಂದನ್ನೇ ದೃಷ್ಟಿಸಿ ಬರೆಯುವ ಜಾಯಮಾನವೂ ನನ್ನಲ್ಲಿಲ್ಲ. ಆದರೆ, ಸಾಹಿತ್ಯ ಮನಸ್ತುಷ್ಟಿಗೆ- ಬೆಳವಣಿಗೆಗೆ, ಜಾಗೃತಿಗೆ, ಅರಿವಿಗೆ ನೆರವಾಗಬೇಕೆಂಬ ಕನಿಷ್ಠ ಜಾಗ್ರತೆ ಮಾತ್ರ ನನ್ನಲ್ಲಿ ಇದ್ದೇ ಇದೆ. ಕಾಲಾನಂತರದಲ್ಲಿ ವೈಚಾರಿಕ- ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಾಹಿತ್ಯ ರಚನೆಗೂ ಮುಂದಾದೆ. ಆಗ, ನನ್ನ ಬರೆವಣಿಗೆಗೆ ರಾಜಾಶ್ರಯ ನೀಡಿ ಬೆಳೆಸಿದ ಪೋಷಕರು-ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ.
- ನಿಮ್ಮ ಕೃತಿ ರಚನೆಯ ಬಗ್ಗೆ ಏನಾದರೊಂದು ರೋಚಕ ಅಂಶ ಹೇಳಬಹುದೇ?
ಹೀಗೊಂದು ಘಟನೆ ನಡೆಯಿತು.. ನನ್ನ ೧೭-೧೮ ನೇ ವಯಸ್ಸಿನಲ್ಲಿ ಭಗವದ್ಗೀತೆಯನ್ನು ಭಾಮಿನಿ ಷಟ್ಪದಿಯಲ್ಲಿ ಅನುವಾದಿಸಿ, ಏಳು ಅಧ್ಯಾಯಗಳನ್ನು ಪೂರೈಸಿದ್ದೆ. ನನ್ನ ಹಿತಚಿಂತಕರು, ಆ ಬರಹಗಳನ್ನು ಮಾಯ ಮಾಡಿದರು. ನಿನಗಿನ್ನು ಆ ಸಾಹಸ ಬೇಡ ಎಂದು ಹೇಳಿದರು. ಕಾವ್ಯ ರಚನೆಯಲ್ಲಿ ಅಪಕ್ವತೆಯ ಕಾರಣ ವಿಷಮ ಬಂದರೆ ನನ್ನ ಭವಿಷ್ಯಕ್ಕೆ ಮುಳುವಾಗಬಹುದೆಂದು ಅವರ ಕಳಕಳಿ. ಮುಂದೆ, ಶ್ರೀ ಗುರುಚರಿತ್ರೆ ಪ್ರಕಟವಾಗಿ ಅವರಿಗೆ ಪ್ರತಿಯೊಂದನ್ನು ಕೊಟ್ಟಾಗ, ಮನೆಯೊಳಗಿನಿಂದ ಶಾಲು ತಂದು ಹೊದಿಸಿ, ರೂ ೧೦೦೧ ಕೊಟ್ಟು, ಅಂದು ತಾನೇ ಗೆತೆಯ ಅನುವಾದವನ್ನು ಮಾಯಮಾಡಿದ್ದಾಗಿ ಹೇಳಿ ಕಂಬನಿ ಸುರಿಸಿದ್ದರು.ಇಂದು ಅವರಿಲ್ಲ, ಆ ನೆನಪಿದೆ. ನನ್ನ ಬಗೆಗಿನೆ ಅವರ ಕಾಳಜಿಗೆ ಏನೆನ್ನಲಿ…ಬದುಕಿನ ಸಂಭ್ರಮದಲ್ಲಿ ಅಂತಹ ಮಹಾನುಭಾವರು- ಆತ್ಮೀಯರು ಸದಾ ಭಾವದ ಬೆಸುಗೆಯಲ್ಲಿ ಬೆಚ್ಚನೆ ಉಳಿದುಕೊಳ್ಳುತ್ತಾರೆ.
12 ಛಂದೋಬದ್ಧ ರಚನೆ ಮರೆಯಾಗುವ ಹೊತ್ತಿನಲ್ಲಿ ನಿಮ್ಮ ಅಭಿಪ್ರಾಯ..
ಛಂದೋಬದ್ಧ ರಚನೆ ಕಾವ್ಯ ವಾಚನ-ಗಮಕ ವಾಚನ- ವ್ಯಾಖ್ಯಾನಕ್ಕೆ, ಓದಿಗೆ ಹೆಚ್ಚು ಜೀವ ತುಂಬುತ್ತದೆ. ಓದುಗನ ಮನಸ್ಸಿನಲ್ಲಿ ಬಹುಕಾಲ ಅದರ ಲಯ- ಗತಿ- ಕಥಾನಕ ಸ್ಥಾಯಿಯಾಗುತ್ತದೆ. ಅದರೆ ಖಂಡಿತವಾಗಿಯೂ, ಛಂದೋಬದ್ಧ ಕವಿತೆಗಳು ವಾಚನಕ್ಕೆ ಹೊದುವಷ್ಟು ನವ್ಯರಚನೆಗಳು ಆಪ್ಯಾಯಮಾನವಾಗುವುದಿಲ್ಲ ಎಂಬುದು ನನ್ನ ಅನಿಸಿಕೆ. ಓದುಗರು ಅಂತಹ ಸಾಹಿತ್ಯದ ಕಡೆಗೆ ಒಲವು ತೋರದಿರುವ ಈ ಕಾಲದಲ್ಲಿ, ಅದನ್ನು ರಚಿಸುವವರು- ಪ್ರಕಾಶಿಸುವವರೂ ಕಡಿಮೆ. ಪ್ರಾಚೀನ ಕಾವ್ಯ ಕೌತುಕ ಮತ್ತು ವೈಶಿಷ್ಟ್ಯ ಅಳಿವಿನಂಚಿಗೆ ಬಂದಂತೆ ಭಾಸವಾಗುವುದು ಸಹಜ. ಆದರೆ ಮತ್ತು ಬೇರೊಂದು ಆಯಾಮ ಪಡೆದು ಮುಂದುವರಿಯ ಬೇಕೆಂಬ ಆಶಯ ಮಾತ್ರ ಖಂಡಿತಾ ಇದೆ. ಕಾಲ ಖಂಡಿತಾ ಅದಕ್ಕೆ ಅನುವು ಮಾಡಿಕೊಡುತ್ತದೆ.
- ಚುಟುಕು ಸಾಹಿತ್ಯದ ಬಗೆಗೆ…
ಸಿದ್ಧ ಆಹಾರದ ಬೇಡಿಕೆ ಬಂದಂತೆ ಚುಟುಕು ಸಾಹಿತ್ಯದ ಬಗೆಗೆ ಆಸಕ್ತಿಯೂ ಸ್ವಲ್ಪ ಜಾಸ್ತಿಯಾಗುತ್ತಿದೆ. ಇಲ್ಲಿ ಎಲ್ಲವೂ ದಿಢೀರ್. ಚುಟುಕಿನಲ್ಲಿ ಅಣಕ, ಸಾಮಾಜಿಕ ಜಾಗೃತಿ,ವರ್ತಮಾನದ ಓರೆಕೋರೆಗಳನ್ನು ಪ್ರತಿಬಿಂಬಿಸುವುದು ಸಾಧ್ಯ. ಅದು ತತ್ ಕ್ಷಣ ಮನಸ್ಸಿಗೆ ಮುಟ್ಟಿ, ಸುಲಭ ನೆನಪನ್ನು ಗಾಢವಾಗಿಸುವುದರಿಂದ ಇಂದಿಗೆ ಅದರ ಅಗತ್ಯವೂ ಇದೆ. ಆದರೆ, ಕೆಲವೊಮ್ಮೆ ಪ್ರಾಸ ಹೊಂದಿಸುವ ಭರದಲ್ಲಿಅಪಸವ್ಯಗಳು ಕಂಡುಬರುತ್ತಿರುವುದನ್ನು ನೋಡುವಾಗ ರೋಚಕತೆಗಿಂತ ಅಸಹ್ಯತೆ ಕೂಡಾ ಕಾಡುವುದುಂಟು. ಪ್ರಾಸ ಅದು ಅನಿವಾರ್ಯವಲ್ಲ ಎಂಬುದೂ ಚುಟುಕು ಕವಿಗೆ ಗೊತ್ತಿದ್ದಾಗ ಉತ್ತಮ ಕವಿತೆಯನ್ನು ಗೇಯತೆ ಇಲ್ಲದೆಯೂ ಕಟ್ಟಿಕೊಡುವುದು ಸಾಧ್ಯವಿದೆ.
14. ಸಣ್ಣಕಥೆಗಳ ಬಗ್ಗೆ…
ಕನ್ನಡದ ಆಸ್ತಿ -ಮಾಸ್ತಿವೆಂಕಟೇಶ ಅಯ್ಯಂಗಾರರು, ಸಣ್ಣ ಕಥೆಗಳ ಜನಕ ಮಾತ್ರವಲ್ಲ. ಪಿತಾಮಹ ಕೂಡಾ.ನನ್ನ ಸಣ್ಣ ಕಥೆಗಳಲ್ಲಿ ಅವರ ಛಾಯೆ ಇದೆ ಎಂದು ಗುರುತಿಸುವವರೂ ಇದ್ದಾರೆ. ನನ್ನ ಮೇಲೆ ಅವರ ಕಥನ ಕೌಶಲ ಪರಿಣಾಮ ಬೀರಿದೆ ಎಂಬುದನ್ನು ಮಾತ್ರ ಖಂಡಿತಾ ಒಪ್ಪುತ್ತೇನೆ. ಸಣ್ಣಕಥೆಗಳೂ ಕೂಡಾ ಸಮಾಜದ- ರಾಜಕೀಯದ- ಬದುಕಿನ ಬೇನೆ- ಬೇಸರ- ಸಂದರ್ಭ- ಅಘಟಿತ ಘಟನೆಗಳನ್ನು ಮರು ಸೃಷ್ಟಿಮಾಡಿ, ಜಾಗೃತಿ ಮೂಡಿಸುವ, ರೋಚಕತೆಯನ್ನು ಅನಾವರಣಗೊಳಿಸುವ ಉತ್ತಮ ಸಾಹಿತ್ಯ ಪ್ರಕಾರ. ಸಂವೇದನಾ ಶೀಲ ಮನಸ್ಸಿಗೆ, ಉದ್ದುದ್ದು ಸಾಹಿತ್ಯಗಳನ್ನು- ಕಾದಂಬರಿ- ನೀಳ್ಗತೆಗಳನ್ನು ಓದುವ ಅಭ್ಯಾಸ ಇಲ್ಲದವರಿಗೆ ಅದೊಂದು ಸುಲಭ ಸಾಹಿತ್ಯ. ಬರಹಗಾರ/ ಕಥೆಗಾರನಿಗೂ ಅನೊಂದು ಉತ್ತಮ ಸೃಷ್ಟಿ ಸಾಧನ.
ಇಂದು ಸಣ್ಣ ಕಥೆಗಳ ಪ್ರಸ್ತುತಿಯ ವಿಧಾನದಲ್ಲೂ ಬದಲಾವಣೆಯಾಗಿದೆ. ನಾಗರಿಕತೆ- ಸಂವಹನ ಮಾಧ್ಯಮಗಳು- ಹೊಸಬರ ಆಸಕ್ತಿ- ಅಭಿರುಚಿ ಮತ್ತು ನವೀನ ಸುದ್ಧಿ ಪರಿಕರಗಳು ಇದ್ದಕ್ಕೆ ಕಾರಣವಾಗಿರಬೇಕು. ಆದರೆ, ಸಮಾಜ ಹಿತವೇ ಸಾಹಿತ್ಯದ ಉದ್ದೇಶವಾಗಿದ್ದರೆ ಅದು ಚೆನ್ನ.
ಮುಂದೆಲ್ಲ, ಸಣ್ಣಕಥೆಗಳಿಗೆ ಇನ್ನೂ ಹೆಚ್ಚಿನ ಒತ್ತು- ಬಲ- ಬೆಂಬಲ- ಮನ್ನಣೆ ಸಿಗಬಹುದೆಂಬ ನಂಬಿಕೆ ನನ್ನದು.
15.
ಪಠ್ಯಪುಸ್ತಕ ರಚನೆಯಲ್ಲಿ ನಿಮ್ಮ ಕೊಡುಗೆ ಕುರಿತು.
ನನ್ನ ಉದ್ಯೋಗಾವಧಿಯಲ್ಲಿ ಕೇರಳ ಸರ್ಕಾರದ ಪಠ್ಯಪುಸ್ತಕ ರಚನಾ ಸಮಿತಿಯಲ್ಲಿ ಸುಮಾರು ಹನ್ನೆರಡು ವರ್ಷ ಕೆಲಸ ಮಾಡಿದ್ದು ನನಗೆ ಸದಾ ಹಸಿರು ನೆನಪು. ತಿರುವನಂತಪುರದ ಡಾ| ರಾಮ ನನ್ನನ್ನು ಇದಕ್ಕೆ ಎಳೆದು ತಂದವರು. ಅವರ ನಂಬುಗೆಗೆ ತಕ್ಕ ಕೆಲಸ ಮಾಡಿದ್ದೇನೆ ಎಂದುಕೊಂಡಿದ್ದೇನೆ. ಭಾಷೆ- ವ್ಯಾಕರಣ- ತೌಲನಿಕ ಅಧ್ಯಯನ- ಇತಿಹಾಸ ಪುರಾಣಗಳ ಸೇರ್ಪಡೆ, ಮಕ್ಕಳ ಮಣೊಧರ್ಮಕ್ಕೆ ತಕ್ಕಂತೆ ಹಾಸ್ಯ ಬರಹಗಳ ರಚನೆ- ಹೀಗೆ ಹ್‌ಅಲವಾರು ವಿಷಯಗಳ ಕುರಿತು ಆರೋಗ್ಯಕರ ಚರ್ಚೆ, ಸಾಂಸ್ಕೃತಿಕ ಅರಿವು ಮೂಡಿಸುವಲ್ಲಿ ಪಠ್ಯಕ್ರಮ ಸಂಯೋಜಿಸುವ ಕ್ರಮ- ಸ್ರಮದಾಯಕವಾಗಿದ್ದರೂ ಎಲ್ಲವೂ ಬೌದ್ಧಿಕ ಬೆಳವಣಿಗೆಗೆ ಪೂರಕವಾದುವುಗಳು.ಂತಾದವರೊಂದಿಗೆ, ಹಿರಿಯ ವಿದ್ವಜ್ಜನರ ಒಡನಾಟ ಚೇತೋಹಾರಿ.
ಅಲ್ಲಿಯೂ ಯೂನಿಯನ್ ಗಳು ಪ್ರಭಾವಶಾಲಿ. ಪಂಡಿತ ಪರಂಪರೆಯನ್ನು ಗೌರವಿಸುವವರು ಪಂಡಿತರನ್ನೂ, ಅವರ ಸಾಹಿತ್ಯವನ್ನು ಮೆಚ್ಚುತ್ತಿದ್ದರು. ಪಾಠ ಸಂಯೋಜನೆಯಲ್ಲಿ ಏನೇನೋ ಸಬೂಬು ಬರುತ್ತಿತ್ತು. ಡಾ|ರಾಮ ಅವರೆಲ್ಲರನ್ನೂ ಒಗ್ಗೂಡಿಸಿ, ಸಮರ್ಪಕ ಪಠ್ಯರಚನೆಯಲ್ಲಿ ದುಡಿಯುತ್ತಿದ್ದರು.
16.
ನಿಮಗೆ ಸಂದ ಗೌರವ ಅಪಾರ. ಆ ಬಗೆಗೆ ನಿಮ್ಮ ಅಭಿಪ್ರಾಯ..
ಹತ್ತಾರು ಕಡೆ ನನ್ನನ್ನು ಗುರುತಿಸಿದ್ದಾರೆ. ಯಾವುದೇ ಪುರಸ್ಕಾರವನ್ನು ಮನವಿ- ಅರ್ಜಿ ಸಲ್ಲಿಸಿ ಪಡಕೊಂಡದ್ದಿಲ್ಲ. ಅದು ನನಗೆ ಒಪ್ಪುವಂತದ್ದಲ್ಲ. ವಶೀಲಿ- ಬೆನ್ನು ಹತ್ತಿ ಗೌರವ ಪಡೆಯುವುದು, ಸನ್ಮಾನ ಗಿಟ್ಟಿಸುವುದು ನನ್ನಿಂದಾಗದು. ಸ್ಪರ್ಧಾ ಮನೋಧರ್ಮ ನನಗೆ ಮೊದಲಿನಿಂದಲೂ ತುಸು ಕಡಿಮೆಯೇ. ನನಗೆ ಅದು ಅಗತ್ಯ ಎನಿಸುವುದೇ ಇಲ್ಲ. ಹೀಗಿದ್ದರೂ, ಹಲವಾರು ಕಡೆ ಗೌರವ ನೀಡಿದ್ದಾರೆ. ಪುರಸ್ಕರಿಸಿದ್ದಾರೆ. ನಮ್ಮೂರ ಸಾಧಕರು ಎಂದು ಹೆಸರಿಸಿದ್ದಾರೆ. ಆ ಮಟ್ತಕ್ಕೆ ನಾನು ತಲುಪಿರುವುದಾದರೆ ನನಗೆ ಅದರಿಂದ ಸಂತೋಷವಿದೆ.
ಇನ್ನು ತೃಪ್ತಿಯ ವಿಚಾರ. ಅದು ನಮ್ಮ ನಮ್ಮ ದೃಷ್ಟಿ. ತೃಪ್ತಿಯಿದೆ ಎಂದ ಮಾತ್ರಕ್ಕೆ ಸಾಧಿಸಬೇಕಾದ್ದಕ್ಕೆ ತಡೆಯಾದೀತು! ಮತ್ತೊಂದು ಕೃತಿ ರಚನೆ ಆದಾಗಲಷ್ಟೇ ಮತ್ತೆ ಅತೃಪ್ತಿಯ ಹುಟ್ಟು. ಅದೇನಿದ್ದರೂ ಸ್ವಾಂತ ಸುಖಾಯ. ಮನಸ್ಸಿನ ನಿರಾಳತೆ- ನಿರುಮ್ಮಳತೆ -ಖುಷಿ, ಸಮ್ಮಾನಗಳ ಗೌಜಿಗಳಿಗಿಂತ ಹೆಚ್ಚು ಸುಖ ಕೊಡುತ್ತದೆ ಎಂದು ಭಾವಿಸಿದ್ದೇನೆ.
17.
ಯುವ ಸಾಹಿತಿ– ಕವಿಗಳಿಗೆ ಏನೆನ್ನುವಿರಿ?
ಏನೆನ್ನಲಿ.. ಓದಿ- ನಿರಂತರವಾಗಿ ಓದಿ.. ’ಅಭ್ಯಾಸಾನುಸಾರಿಣೀ ವಿದ್ಯಾ’ ಯಾವುದೇ ವಿದ್ಯೆ ಅಭ್ಯಾಸದ ಹೊರತು ಕರಗತವಾಗದು. ನಮ್ಮನ್ನು ನಾವು ತಿಳಿದುಕೊಳ್ಳುವುದಕ್ಕಾಗಿ, ಅಧ್ಯಯನ ಬೇಕೇ ಬೇಕು. ಹೊಸತರ ಅನ್ವೇಷಣೆಯಲ್ಲಿ, ಹಳತು ಹಳಸದಿರಲಿ. ಹಳತರ ಒಳಿತನ್ನು ಮೊಗೆಯುವಲ್ಲಿ ಜಿಪುಣತೆ ಬೇಡ. ಹೊಸತರ ಕಸರನ್ನು ಬದಿಗೆ ಬ್ತಳ್ಳುವುದಕ್ಕೆ ಯಾವುದೇ ದಾಕ್ಷಿಣ್ಯ ಬೇಡ.
ಮತ್ತೆ, ಬರೆದ ಬರೆಹ- ರಚಿಸಿದ ಕೃತಿಗಳೆಲ್ಲ ಪ್ರಕಟವಾಗಬೇಕೆಂಬ ಧೋರಣೆ ಬೇಡ. ಮೊದ ಮೊದಲು ಆ ಮನಸ್ಥಿತಿ ಕೆಲವರಿಗೆ ಇರುವುದುಂಟು. ಕ್ರಮೇಣ ಅದನ್ನು ತಿದ್ದಿಕೊಳ್ಳಬಹುದು. ಬರೆಹ ಮಾಗಬೇಕು. ಓದು- ಅನುಭವ- ಭಾಷೆ- ಸಾಹಿತ್ಯ ರಚನಾ ಕೌಶಲ್ಯಕ್ಕೆ ಹೆಚ್ಚು ಒತ್ತು ಕೊಡಬೇಕು. ಪ್ರಕಟಣೆಗೆ ಯೋಗ್ಯವಾಗುವ ಬರಹಗಳ ಸೃಷ್ಟಿಗೆ ಲೇಖಕ ಮನಗಾಣಬೇಕು.
- ಸಾಹಿತ್ಯ ಸಂಘಟನೆಗಳ ಬಗೆಗೆ ಒಂದಿಷ್ಟು..
ಸಾಹಿತ್ಯ ಸಂಘಟನೆಗಳು ಜಾತಿ- ವರ್ಗ- ವರ್ಣ ಭೇದಗಳನ್ನು ಹತ್ತಿಕ್ಕಿ ಕಾರ್ಯ ಪ್ರವೃತ್ತವಾಗಬೇಕು. ಕರ್ತೃ ಎಷ್ಟು ಮುಖ್ಯವೋ, ಅದಕ್ಕಿಂತ ಕೃತಿ ಹೆಚ್ಚು ಮುಖ್ಯವೆನಿಸಬೇಕು. ಮಣೆ ಕೃತಿಗೆ ಕೊಡಿ; ಕರ್ತೃವಿನ ಜಾತಿ- ವರ್ಣಕ್ಕಲ್ಲ.
ಸದಭಿರುಚಿಯ ಸಂಘಟನೆ ಮುಖ್ಯವಾಗಬೇಕೇ ವಿನಃ ಅಧಿಕಾರಶಾಹಿ, ರಾಜಕೀಯ ಪ್ರೇರಿತ ಗುಂಪುಗಾರಿಕೆ ಸಾಹಿತ್ಯದ ತಳಹದಿಯನ್ನೇ ಬುಡಮೇಲು ಮಾಡುವುದು. ಆಯಾಯ ಕ್ಷೇತ್ರದಲ್ಲಿ ಪರಿಣತ ಮಂದಿಯನ್ನು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಪೂರ್ವಾಗ್ರಹ ಪೀಡಿತ ಮನಸ್ಥಿತಿ ಸದಭಿರುಚಿಯ ಸಾಹಿತ್ಯಕ್ಕೆ ಕೊಡಲಿಯೇಟು. ಸಾಹಿತ್ಯದಲ್ಲಿ ಸ್ಪರ್ಧೆ ಬೇಕೇ ವಿನಃ ಸಾಹಿತಿಗಳಲ್ಲಿ ಆಗಕೂಡದು. ಹಾಗೆಯೇ ಸಾಹಿತ್ಯ ಸಂಘಟನೆಗಳು ಬಲ ಪ್ರದರ್ಶನದ ವೇದಿಕೆಯಾಗದೆ, ಸಮಾಜಕಟ್ಟುವ, ಮನಸ್ಸು ಕಟ್ಟುವ ಸುಮನಸ್ಕರ ಮತ್ತು ಸಮನಸ್ಕರ ಬಳಗವಾಗಿದ್ದರೆ ಅಂತಹ ಸಂಘಟನೆಯ ಮೌಲ್ಯ ಹೆಚ್ಚುವುದು ಖಂಡಿತಾ.
- ವಾಚಕ ಬಳಗಕ್ಕೆ, ಸಾಹಿತ್ಯ ಆಸಕ್ತವರ್ಗಕ್ಕೆ ನಿಮ್ಮ ಮಾತು..
ಓದುಗ ಬಳಗ ಗುರುತರ ಹೊಣೆ ಹೊರಬೇಕಿದೆ. ವ್ಯಕ್ತಿತ್ವ ವಿಕಾಸ, ವೈಚಾರಿಕ ಬೋಧೆ, ಸಾರ್ವತ್ರಿಕ ಸಮಾಜ ಹಿತ, ಸಾಂಸ್ಕೃತಿಕ ಪರಂಪರೆಯ ಉಳಿವು, ಮಾನವೀಯ ಮೌಲ್ಯಗಳ ಬಗೆಗೆ ಲಕ್ಷ್ಯ, ನಾಡು- ನುಡಿ- ರಾಷ್ಟ್ರದ ಉನ್ನತಿಕೆ, ಮನೋರಂಜನೆಯ ಜೊತೆಗೆ ಜೀವನಾನುಭವಗಳಿಕೆ- ಎಲ್ಲವೂ ಲಕ್ಷ್ಯವೇ. ಸದಭಿರುಚಿಯ ಸಾಹಿತ್ಯ ಬೆಳೆಯಬೇಕಾದರೆ ಸದಭಿರುಚಿಯ ಓದುಗರು ಬೇಕು. ಸಾಹಿತ್ಯ ಮನಸ್ಸನ್ನು ಅರಳಿಸಬೇಕು. ಕೆರಳಿಸ ಬಾರದು. ಸಾಮಾಜಿಕ ಸ್ವಾಸ್ಥ್ಯಕೆಡಿಸುವ ಬರಹಗಳನ್ನು ದೂರೀಕರಿಸುವ ಛಲ ಓದುಗರದಾಗಲಿ. ಬರಹಗಾರನ ಬರವಣೆಗೆಗಳು ಸಾಮಾಜಿಕ- ಸಾಹಿತ್ಯಕ – ಸಾಮರಸ್ಯಕ್ಕೆ ಪೂರಕವಾಗಬೇಕು. ಮಾರಕವಾದರೆ ಅದು ದುರಂತ. ಸಹೃದಯೀ ಓದುಗ ಬರಹಗಾರನ ಆಸ್ತಿ.
20. ಸಾಹಿತ್ಯ ಸಂಪಾದನೆ– ಪ್ರಕಾಶನದಲ್ಲೂ ಕೆಲಸ ಮಾಡಿದವರು ತಾವು. ಅದರ ಬಗ್ಗೆ ತಮ್ಮ ಅನುಭವ ಮತ್ತು ಆಶಯ..
ಗ್ರಂಥ ಸಂಪಾದನೆ ಪ್ರಯಾಸದ ಕೆಲಸ. ಹತ್ತಾರು ಗ್ರಂಥಗಳನ್ನು ಸಂಪಾದಿಸುವಲ್ಲಿ ನನ್ನಲ್ಲಿ ನಂಬಿಕೆ ಇಟ್ಟು, ನನಗೆ ಜವಾಬ್ದಾರಿ ನೀಡಿದ ಹಲವು ಸಂಘಟನೆಗಳಿಗೆ ನಾನು ಋಣಿ. ಅದು ಇಂದಿಗೆ ಅಗತ್ಯದ ಕೆಲಸ. ಅದೊಂದು ದಾಖಲೀಕರಣದ ಕಾರ್ಯ. ಹಾಗೆಂದು ಅದು ಪುಟ ಸಂಖ್ಯೆ ಹೆಚ್ಚಿ ಕೇವಲ ದಾಖಲೆಗಾಗಿ ಮಾತ್ರ ಆಗಬಾರದು. ಜಾಹೀರಾತುಗಳಲ್ಲೇ ಪುಟ ತುಂಬಿಸುವ ಸ್ಮರಣ ಸಂಚಿಕೆಯಂತೆ ಆದರೆ. ಸಾಹಿತ್ಯ ಸಂಪಾದನೆಯ ಕಾರ್ಯ ಅದರ ಮೂಲ ಉದ್ದೇಶಕ್ಕೆ ಧಕ್ಕೆ ತರುತ್ತದೆ, ಖಂಡಿತಾ.
ಹಲವು ಮಂದಿ ಒಳ್ಳೆಯ ಬರಹಗಾರರು ಪ್ರಕಟಣೆಯ ಅವಕಾಶವಿಲ್ಲದೆ, ಮಾರಾಟಕ್ಕೆ ಅಂಜಿ ಪ್ರಕಾಶನಕ್ಕೆ ಹಿಂಜರಿಯುತ್ತಾರೆ. ಪೂರ್ವಾಗ್ರಹ ಬಿಟ್ಟು ಕೃತಿ ಪ್ರಕಟಣೆಗಾಗಿ, ಸಹಕಾರಿ ತತ್ವದಡಿ ಬರಹಗಾರರ ಸಹಕಾರ ಸಂಘ ರೂಪುಗೊಂಡರೆ ಒಳಿತಾಗಬಹುದೇನೋ? ಹೀಗಿದ್ದರೂ, ಹೆಗ್ಗಣಗಳು ಬೆಳೆಹಾಳುಮಾಡುವ ಭೀತಿ ಇದ್ದದ್ದೇ..
21. ಸಾಹಿತ್ಯಕ ಪುರಸ್ಕಾರಗಳು ಮಾರಾಟದ ಸರಕುಗಳಾಗಿರುವ ಬಗ್ಗೆ.. ನಿಮ್ಮ ಅನಿಸಿಕೆ
ಇತ್ತೀಚೆಗೆ ಬರಹಗಾರ ತನ್ನ ಜಾತಕ ಓದಿ ಹೇಳಿ, ವಶೀಲಿ ಮಾಡಿ, ಹಲ್ಲುಗಿಂಜಿ ಅರ್ಜಿಸಲ್ಲಿಸಿ ಪಡೆಯಬಹುದಾದ ಗೌರವ- ಪದವಿ- ಪುರಸ್ಕಾರಗಲೇ ಹೆಚ್ಚುತ್ತಿವೆ. ಪ್ರಶಸ್ತಿಗಾಗಿಯೇ ಬರೆಯುವ, ಪುರಸ್ಕಾರಕ್ಕಾಗಿಯೇ ಪುಸ್ತಕ ಪ್ರಕಟಿಸುವ, ದಾಖಲೆಗಾಗಿಯೇ ಕೃತಿ ರಚಿಸುವ ಲೇಖಕರನ್ನು ನೋಡುವಾಗ ಚೋದ್ಯವೂ, ಖೇದವೂ ಆಗುತ್ತದೆ. ಬರಹಗಾರ ಅಭಿಮಾನಧನನಾಗಿರಬೇಕು. ಹಾಗಿದ್ದಾಗ ಪ್ರಶಸ್ತಿಯನ್ನು ಹುಡುಕಿಕೊಂಡು ಹೋಗುವ ಅಗತ್ಯವಾದರೂ ಏನು? ಯೋಗ- ಯೋಗ್ಯತೆ ಇದ್ದರೆ ಅದೇ ಬರಲಿ.. ಇಲ್ಲದಿದ್ದರೆ, ತನ್ನ ತನಮಾರಿಯಾದರೂ ಅವನ್ನು ಅಪೇಕ್ಷಿಸುವವರು ಆ ದಾರಿಯಲ್ಲಿ ಸಾಗಲಿ. ತಾನೆಂತಹವನೆಂಬ ಬಗ್ಗೆ ಬರಹಗಾರನಿಗೆ ಸ್ಪಷ್ಟತೆ ಇದ್ದರೆ ಅದು ಒಳಿತು. ಕರ್ಮದಿಂದ ಸಿದ್ಧಿಯೊದಗಬೇಕೇ ವಿನಃ ಅಕರ್ಮದ ಮೂಲಕ ಪ್ರಸಿದ್ಧಿಯ ಮೊರೆ – ಅವರವರಿಗೇ ಪ್ರೀತಿ!
22. ನಿಮ್ಮ ಸಾಹಿತ್ಯ ಕೃಷಿಯ ಬಗೆಗೆ ನಿಮಗೆ ಹೇಗೆನಿಸುತ್ತಿದೆ?
ವ್ಯಕ್ತಿ ಚಿತ್ರ- ಸಂದರ್ಶನ ಲೇಖನ ಮಾಲಿಕೆ, ಸ್ಮರಣ ಸಂಚಿಕೆಯ ಸಂಪಾದಿತ ಕೃತಿಗಳು, ಸ್ವರಚನೆಯ ೨೫ ಕ್ಕೂ ಮಿಕ್ಕಿದ ಪ್ರಕಟಿತ ಕೃತಿಗಳು, ೨೦ ಕ್ಕೂ ಹೆಚ್ಚಿನ ಅಪ್ರಕಟಿತ ಕೃತಿಗಳು- ನನ್ನ ಐವತ್ತು ವರ್ಷದ ಬರೆಹಗಳನ್ನು ನೋಡಿದಾಗ ಕೆಲವೊಮ್ಮೆ ಬಾಲಿಶವಾಗಿ ಕಂಡರೆ ಮಗದೊಮ್ಮೆ, ಯಾರೋ ಕೈ ಹಿಡಿದು ರಚಿಸಿದ ಹಾಗೆ ಭಾಸವಾಗುತ್ತದೆ. ಕೆಲವೊಮ್ಮೆ ಹೆಮ್ಮೆ, ಮತ್ತೊಮ್ಮೆ ನಾಚಿಕೆ, ಇನ್ನು ಕೆಲವು ಸಂದರ್ಭ ದೈನ್ಯತೆ- ಅಪರಿಪೂರ್ಣತೆ ಕಾಡುತ್ತದೆ. ಹಾಗೆಯೇ ಯಾವಾಗಲೊಮ್ಮೆ ಆತ್ಮತೃಪ್ತಿ ಸಿಗುತ್ತದೆ. ಆದರೆ ಸದಾ ಸಾಹಿತ್ಯವನ್ನು ಓದುವ- ಪ್ರೀತಿಸುವ- ಮನತುಂಬಿಸುವ , ಮತ್ತೆ ರಚನೆಗೆ ತೊಡಗಿಕೊಳ್ಳುವ ಸಮಯ ವರ್ಣನಾತೀತ ಭಾವ ಪರವಶತೆ ನೀಡುವುದು ಮಾತ್ರ ಸತ್ಯ.
23 ಶ್ರೀಗುರು ಚರಿತಾಮೃತಂ ನಂತಹ ಭಾಮಿನಿ ಷಟ್ಪದಿಯ ಕಾವ್ಯಗಳನ್ನೆಲ್ಲ ರಚಿಸಿ, ಸಾರಸ್ವತ ಲೋಕಕ್ಕೆ ಒಂದು ಸ್ಥಿರ ಉಡುಗೊರೆ ನೀಡಿದ್ದೀರಿ. ಬಳಿಕವೂ ಹಲವಾರು ಆಧ್ಯಾತ್ಮಿಕ– ವೈಚಾರಿಕ ಗ್ರಂಥಗಳನ್ನು ಕೊಟ್ಟಿದ್ದೀರಿ. ಮುಂದಿನ ರಚನೆಯ ಬಗ್ಗೆ ಯಾವುದೇ ಯೋಚನೆ ಇದೆಯೇ?
ಹನುಮಾನ್ ಕಥಾನಕವನ್ನು ಒಳಗೊಂಡ ಒಂದು ಕೃತಿ ಬರಬೇಕೆಂದು ವಿನಂತಿಸಿಕೊಂಡವರಿದ್ದಾರೆ. ಸಂಕ್ಷಿಪ್ತ ಶ್ರೀ ಗುರುಚರಿತ್ರೆಯ ರೂಪುರೇಷೆಯೂ ಆಗಿದೆ. ನನ್ನೆಲ್ಲ ಮಕ್ಕಳ ಕವನಗಳನ್ನು ಒಟ್ಟಾಗಿ ಪ್ರಕಟಿಸಬೇಕೆಂಬ ಬಹುಕಾಲದ ಇರಾದೆ – ನನ್ನ ಮಗನದ್ದು… ಮನೆಮಂದಿಯದ್ದು..
ವರ್ತಮಾನ- ಸಾಮಾಜಿಕ ಜನ ಜೀವನದ ವಿಪರೀತಗಳನ್ನು ತಿಳಿಸುವ ಕಾದಂಬರಿ ರಚನೆಯ ಆಸೆಯೂ ಮನಸ್ಸಿನ ಮೂಲೆಯಲ್ಲಿದೆ. ಹಾಗೆಂದು ಪ್ರಕಟಣೆ ಮಾಡುವ ಸಾಹಸ ಖಂಡಿತಕ್ಕೂ ಇಲ್ಲ.
ಬರೆಯುವವನು ನಾನು ಎಂಬ ಭಾವದ ಹೊರತಾಗಿ, ಬರೆಸುವವನು ಬೇರೊಬ್ಬನಿದ್ದಾನೆ ಎಂದು ಬಗೆದರೆ ಭ್ರಾಮಯನ್ ಸರ್ವ ಭೂತಾನಿ, ಯಂತ್ರಾರೂಢಾನಿ ಮಾಯಯಾ ಎಂಬ ಉಕ್ತಿ ದಾರಿ ತೋರೀತು. ಸತ್ಪಥದ ನಿರೀಕ್ಷೆ ಮತ್ತು ಮಾರ್ಗದರ್ಶಕನ ಕೈದೀವಿಗೆಯ ಬೆಳಕಿಗಾಗಿ ಕಾಯುತ್ತಲೇ ಇರುತ್ತೇನೆ.
24 ಒಡಿಯೂರು ಶ್ರೀಗಳ ಕುರಿತು
ಒಡಿಯೂರು ಶ್ರೀಗಳು- ಸಂಸ್ಥಾನದ ಒಡನಾಟ- ನಿಕಟ ಸಂಪರ್ಕ ನನ್ನ ಸಾಹಿತ್ಯ ರಚನೆಯ ಸಿದ್ಧಿ- ಶುದ್ಧಿ- ಪ್ರಸಿದ್ಧಿಗೆ ಭೂಮಿಕೆಯೆಂದೇ ಹೇಳಬೇಕು. ಪ್ರೇರಣೆ- ಮಾರ್ಗದರ್ಶನ- ಪ್ರಕಟಣೆಯ ಔದಾರ್ಯವೆಲ್ಲವೂ ನನ್ನ ಸಾಹಿತ್ಯ ಯಾನದಲ್ಲಿ ಒಡಿಯೂರು ಶ್ರೀಗಳ ಬಳುವಳಿ. ನನ್ನಿಂದ ಒಂದಷ್ಟು ಆಧ್ಯಾತ್ಮಿಕ ಸಾಹಿತ್ಯ ರಚನೆಯ ಮೂಲಕ
ಸಾಧನೆಯಾಗಿದ್ದರೆ, ಅದರ ಮೂಲ ಧಾತು ಒಡಿಯೂರು ಶ್ರೀಗಳ ಸಾಹಿತ್ಯ ಪ್ರೀತಿ ಮತ್ತು ಕಲಾ ಪೋಷಣೆಯೇ ಕಾರಣ ಎಂದು ಅಂದುಕೊಳ್ಳುತ್ತೇನೆ. ಹಾಗೆಯೇ, ಸುಬ್ರಹ್ಮಣ್ಯ ಶ್ರೀಗಳು, ಹಿರಿಯ ಎಡನೀರು ಶ್ರೀಗಳು, ಕೊಲ್ಯ ಶ್ರೀಗಳು ಕೂಡಾ ನನ್ನನ್ನು ಪ್ರೋತ್ಸಾಹಿಸಿದವರೇ ಆಗಿದ್ದಾರೆ. ಅವರೆಲ್ಲರಿಗೆ ನಾನು ಚಿರ ಋಣಿ.
- ಛಂದೋಬದ್ಧ ಕೃತಿಗಳ ಕುರಿತು.
ಛಂದೋಬದ್ಧ ಕೃತಿಗಳು ಮೊದಲಿನಿಂದಲೂ ನನಗೆ ಅತೀವ ಪ್ರೀತಿ. ಬಲವಂತವಲ್ಲದ ಆದಿ- ಅಂತ್ಯಪ್ರಾಸಗಳೂ ನನಗೆ ಇಷ್ಟವೇ. ನನ್ನ ತಂದೆಯವರ ತಾಯಿ, ನನ್ನನ್ನು ಸಾಕಿ-ಸಲಹಿದ ಮಹಾತಾಯಿ- ವೆಂಕಮ್ಮಜ್ಜಿ ಅಕ್ಷರಸ್ಥರಲ್ಲ. ಆದರೆ ಜೈಮಿನಿ ಭಾರತ, ಕುಮಾರ ವ್ಯಾಸ ಭಾರತದ ಪದ್ಯ- ಕಥೆಗಳನ್ನು ಅರ್ಥವಾಗುವಂತೆ ವಿವರಿಸುತ್ತಿದ್ದರು. ಕಥೆಯ ಓಟ ಅವರಿಗೆ ಬಹಳ ಚೆನ್ನಾಗಿ ತಿಳಿದಿತ್ತು. ತಂದೆಯವರೂ ದಂಡಾಕಾರದಲ್ಲಿ ಷಟ್ಪದಿಗಳನ್ನು ಓದುತ್ತಿದ್ದರು. ಓದಿಸುತ್ತಿದ್ದರು ಕೂಡಾ. ನನ್ನ ಸಾಹಿತ್ಯ ಆಸಕ್ತಿ- ರಚನಾ ಕೌಶಲ್ಯಕ್ಕೆ ಇವೂ ಕಾರಣವಾಗಿರಬೇಕೆನಿಸುತ್ತದೆ.
Be the first to comment on "ಸಮಾಜದ ಹಿತವೇ ಸಾಹಿತ್ಯದ ಉದ್ದೇಶವಾಗಿದ್ದರೆ ಚೆನ್ನಾಗಿರುತ್ತದೆ ಎನ್ನುತ್ತಾರೆ ಮುಳಿಯ ಶಂಕರ ಭಟ್ಟರು.."