ಮಂಗಳೂರು: ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ಕೆಲಸ ಮಾಡುತ್ತಿರುವ ಮಂಗಳೂರಿನ ಶಕ್ತಿನಗರದ ಅರಿವು ಅರ್ಲಿ ಇಂಟರ್ವೆನ್ಶನ್ ಸೆಂಟರ್, ಬೆಂಗಳೂರಿನ ಅಸೋಸಿಯೇಶನ್ ಫಾರ್ ಪೀಪಲ್ ವಿದ್ ಡಿಸೇಬಲಿಟೀಸ್ ವತಿಯಿಂದ ಮಂಗಳೂರಿನ ನಂತೂರಿನಲ್ಲಿರುವ ಶ್ರೀ ಭಾರತೀ ಸಮೂಹ ಸಂಸ್ಥೆಗಳ ಸೇವಾ ಸಮಿತಿ ಸಹಯೋಗದೊಂದಿಗೆ ಕಾಲೇಜಿನ ಶಂಕರಶ್ರೀ ಸಭಾಂಗಣದಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಪ್ರಾಥಮಿಕ ಹಂತದಲ್ಲೇ ಗುರುತಿಸುವ ಅರಿವು ಸಂಸ್ಥೆಯ ಹೊರಕೇಂದ್ರ ಉದ್ಘಾಟನೆಗೊಂಡಿತು.
ಅತಿಥಿಗಳಾಗಿ ಆಗಮಿಸಿದ ಮಂಗಳೂರಿನ ಹಿರಿಯ ದಂತವೈದ್ಯ ಡಾ. ರಾಜೇಂದ್ರಪ್ರಸಾದ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂಥ ಕೇಂದ್ರಗಳ ಅಗತ್ಯವಿದ್ದು, ಜನಸಾಮಾನ್ಯರಿಗೆ ಇದರ ಪ್ರಯೋಜನ ದೊರಕಲು ಸಹಕಾರಿಯಾಗುತ್ತದೆ ಎಂದರು.
ಮಂಗಳೂರಿನ ಮಕ್ಕಳ ತಜ್ಞ ವೈದ್ಯರಾದ ಡಾ. ಮುರಳೀ ಕೇಶವ ಮಾತನಾಡಿ, ಮಕ್ಕಳ ಬೆಳವಣಿಗೆಯ ಹಂತದಲ್ಲೇ ದೈಹಿಕ ನ್ಯೂನತೆಗಳ ಕುರಿತ ಅರಿವು ಆದರೆ, ಬೆಳವಣಿಗೆಯ ಹಂತದಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂಬುದನ್ನು ಯೋಚಿಸಲು ಸಹಕಾರಿಯಾಗುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಇಲಾಖೆಯ ಜಿಲ್ಲಾ ನಿರೂಪಣಾ ಅಧಿಕಾರಿ ಕುಮಾರ್ ಮಾತನಾಡಿ, ಸರಕಾರದಿಂದ ದೊರಕುವ ಸೌಲಭ್ಯಗಳನ್ನು ವಿಶೇಷ ಮಕ್ಕಳ ಹೆತ್ತವರು ಪಡೆಯಬೇಕು, ಯುಡಿಐಡಿ ಕಾರ್ಡ್ ಪಡೆದರೆ, ಬಹಳಷ್ಟು ಪ್ರಯೋಜನವಾಗುತ್ತದೆ ಎಂದರು. ಶ್ರೀ ಭಾರತೀ ಪದವಿಪೂರ್ವ ಕಾಲೇಜು ಪ್ರಿನ್ಸಿಪಾಲ್ ಗಂಗಾರತ್ನ ಶುಭ ಹಾರೈಸಿದರು.
ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ ಮಾತನಾಡಿ, ಮಕ್ಕಳ ಬೆಳವಣಿಗೆಯ ಹಂತದಲ್ಲಿ ಪೋಷಕರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರಿಸಿದರು.
ಪತ್ರಕರ್ತ ಹರೀಶ ಮಾಂಬಾಡಿ ಮಾತನಾಡಿ, ಪೋಷಕರು ಯಾವುದೇ ಕೀಳರಿಮೆ ಹೊಂದದೆ, ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಗರಿಷ್ಠ ಪ್ರಯತ್ನಗಳನ್ನು ಕೈಗೊಂಡರೆ ಯಶಸ್ಸು ಸಾಧ್ಯ ಎಂದರು.
ಭಾರತೀ ಸಂಸ್ಥೆಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುಪ್ರೀತಾ ಶೆಟ್ಟಿ ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಶಾಲೆಯಲ್ಲಿ ನೋಡಿಕೊಳ್ಳಬೇಕಾದರೆ ಶಿಕ್ಷಕರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ವೈದ್ಯ ಹಾಗೂ ಅರಿವು ಟ್ರಸ್ಟ್ ಅಧ್ಯಕ್ಷ ಡಾ. ಕೆ.ಸುಂದರ ಭಟ್ ಮಾತನಾಡಿ, ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಿ, ಮುಖ್ಯವಾಹಿನಿಗೆ ಸೇರ್ಪಡೆಯಾಗುವಂತೆ ಮಾಡುವುದೇ ಅರಿವು ಉದ್ದೇಶ ಎಂದರು. ಅರಿವು ಸಂಸ್ಥೆಯ ಸ್ಥಾಪಕ ನಿರ್ದೇಶಕಿ ಪೂರ್ಣಿಮಾ ಆರ್. ಭಟ್ ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿದರು. ಈ ಸಂದರ್ಭ ಸಂಸ್ಥೆಯ ಟ್ರಸ್ಟಿ ಡಾ. ರಾಧಾಕೃಷ್ಣ ಭಟ್ ಉಪಸ್ಥಿತರಿದ್ದರು. ಸ್ವಾಗತವನ್ನು ಸಂಚಾಲಕಿ ತಿಲೋತ್ತಮೆ ಮಾಡಿದರು.
Be the first to comment on "ಬೆಳವಣಿಗೆ ಹಂತದಲ್ಲೇ ವಿಶೇಷ ಅಗತ್ಯವುಳ್ಳ ಮಕ್ಕಳ ಗುರುತಿಸುವಿಕೆಗೆ ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಗಳಲ್ಲಿ ‘ಅರಿವು’ ಘಟಕಕ್ಕೆ ಚಾಲನೆ"