ಬಂಟ್ವಾಳ ಪುರಸಭೆಗೆ ತನ್ನ ಸ್ಥಿರ, ಚರ ಆಸ್ತಿಗಳನ್ನು ಕಾಪಾಡುವ ಹೊಣೆಗಾರಿಕೆ ಇದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಗುರುವಾರ ಬಂಟ್ವಾಳ ಪುರಸಭಾ ಸಭಾಂಗಣದಲ್ಲಿ ಅಧ್ಯಕ್ಷ ಬಿ.ವಾಸು ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.

ಬಂಟ್ವಾಳ ಪುರಸಭೆ ಸಾಮಾನ್ಯ ಸಭೆ
ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಸಿದ್ಧೀಕ್ ಗುಡ್ಡೆಯಂಗಡಿ, ಪಾಣೆಮಂಗಳೂರು ಬಂಗ್ಲೆಗುಡ್ಡೆಯಲ್ಲಿರುವ ನಾಡಕಚೇರಿ ಇರುವ ಕಟ್ಟಡ ಸ್ಥಿತಿಯ ಕುರಿತು ಮಾತನಾಡಿದರು. ಈ ಸಂದರ್ಭ ನಾಡಕಚೇರಿ ಪುರಸಭೆಯದ್ದೋ ಅಥವಾ ಬೇರೆ ಇಲಾಖೆಗೆ ಸೇರಿದ್ದೋ ಎಂಬ ಕುರಿತು ಚರ್ಚೆ ನಡೆಯಿತು. ಪುರಸಭೆಯ ಸೊತ್ತುಗಳು ಯಾವುದು, ಯಾವ ಕಟ್ಟಡಗಳು, ಜಾಗ ಅನ್ಯರ ಪಾಲಾಗಿವೆ, ಪುರಸಭೆಗೆ ಹೇಳದೇ ಕೇಳದೆ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆಯೇ ಎಂಬಿತ್ಯಾದಿ ವಿಚಾರಗಳು ಚರ್ಚೆಗೆ ಬಂದವು.

ಬಂಟ್ವಾಳ ಪುರಸಭೆ ಸಾಮಾನ್ಯ ಸಭೆ
ಇದೊಂದು ಗಂಭೀರ ವಿಚಾರ ಎಂದು ಹೇಳಿದ ಹಿರಿಯ ಸದಸ್ಯ ಎ. ಗೋವಿಂದ ಪ್ರಭು, ಯಾವ ದಾಖಲೆಗಳನ್ನು ಕೇಳಿದರೂ ಪುರಸಭೆಯಲ್ಲಿ ಸಿಗದಿದ್ದರೆ ಏನು ಮಾಡುವುದು, ನಮ್ಮ ಮನೆ ದಾಖಲೆಗಳು ನಮ್ಮ ಮನೆಯಲ್ಲಿವೆ, ಪುರಸಭೆ ದಾಖಲೆ ಎಲ್ಲಿವೆ, ಹಲವೆಡೆ ಪುರಸಭೆ ಜಾಗ ಅನ್ಯರ ಪಾಲಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದರು. ಈಗಾಗಲೇ ಪುರಸಭೆಗೆ ಸಂಬಂಧಿಸಿದ ಜಾಗಗಳಲ್ಲಿ ಬೇರೆ ಕಟ್ಟಡಗಳು ನಿರ್ಮಾಣಗೊಂಡಿವೆ. ಕಟ್ಟಡ ನಿರ್ಮಾಣ ವೇಳೆ ಪುರಸಭೆಯ ಜಾಗವಿದ್ದರೆ, ಅದನ್ನು ಸಾಬೀತುಪಡಿಸುವ ದಾಖಲೆಗಳು ಪುರಸಭೆಯಲ್ಲೂ ಇರಬೇಕು. ದಾಖಲೆಗಳನ್ನು ಜೋಪಾನವಾಗಿಡಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭ ಅಧ್ಯಕ್ಷ ವಾಸು ಪೂಜಾರಿ ಅವರಿಗೆ ಸಲಹೆ ನೀಡಿದ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್, ಅಧ್ಯಕ್ಷರು ತಮ್ಮ ಕಾರ್ಯಶೈಲಿಯಲ್ಲಿ ದಿಟ್ಟತನ ತೋರಬೇಕಾಗಿದೆ ಎಂದರು. ಉಪಾಧ್ಯಕ್ಷ ಮೊನೀಶ್ ಆಲಿ, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ವೇದಿಕೆಯಲ್ಲಿದ್ದರು. ಬಂಟ್ವಾಳ ಬಿ.ಸಿ.ರೋಡ್ ಫ್ಲೈಓವರ್ ಬಳಿ ಇರುವ ಸಂತೆವ್ಯಾಪಾರ, ಫುಟ್ ಪಾತ್ ಅತಿಕ್ರಮಿಸಿ ವ್ಯಾಪಾರ ಮಾಡುವ ಪ್ರವೃತ್ತಿ ಸಹಿತ ಹಲವು ವಿಚಾರಗಳು ಚರ್ಚೆಗೆ ಬಂದವು. ಹಿಂದಿನ ವಿಶೇಷ ಸಭೆಯಲ್ಲಿ ನಿರ್ಧಾರವಾದಂತೆ ಕುಡಿಯುವ ನೀರಿನ ಕುರಿತು ಪರಿಶೀಲನೆಗೆ ಯಾರೂ ಬಂದಿಲ್ಲ ಎಂದು ಸಭೆಯಲ್ಲಿ ಜನಾರ್ದನ ಚಂಡ್ತಿಮಾರ್, ಸಿದ್ದೀಕ್ ಗುಡ್ಡೆಯಂಗಡಿ ಸಹಿತ ಹಲವರು ಗಮನ ಸೆಳೆದರು. ವಿವಿಧ ವಿಷಯಗಳ ಕುರಿತು ಸದಸ್ಯರಾದ ಗೋವಿಂದ ಪ್ರಭು, ರಾಮಕೃಷ್ಣ ಆಳ್ವ, ಜೆಸಿಂತಾ, ಗಾಯತ್ರಿ ಪ್ರಕಾಶ್, ಸಿದ್ದೀಕ್ ಗುಡ್ಡೆಯಂಗಡಿ, ಜನಾರ್ದನ ಚಂಡ್ತಿಮಾರ್, ಮಹಮ್ಮದ್ ಶರೀಫ್, ಇದ್ರೀಸ್, ಮಹಮ್ಮದ್ ನಂದರಬೆಟ್ಟು, ಹರಿಪ್ರಸಾದ್, ಝೀನತ್ ಫಿರೋಜ್, ವಿದ್ಯಾವತಿ, ದೇವಕಿ ಚರ್ಚೆ ಮಾಡಿದರು. ಆರೋಗ್ಯ ನಿರೀಕ್ಷಕ ರತ್ನಪ್ರಸಾದ್, ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಉಪಸ್ಥಿತರಿದ್ದರು.
Be the first to comment on "ಬಂಟ್ವಾಳ ಪುರಸಭೆಯ ಸೊತ್ತು ರಕ್ಷಿಸಿ – ಸಾಮಾನ್ಯ ಸಭೆಯಲ್ಲಿ ಸದಸ್ಯರ ಒತ್ತಾಯ"