ಮಕ್ಕಳ ಗ್ರಾಮ ಸಭೆಯನ್ನು ಸಮರ್ಪಕವಾಗಿ ನಡೆಸಬೇಕು. ಶೈಕ್ಷಣಿಕ ಸಂಸ್ಥೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ಕುರಿತು ಗಮನಹರಿಸಬೇಕು. ಮಕ್ಕಳ ರಕ್ಷಣಾ ನೀತಿ ಪರಿಣಾಮಕಾರಿ ಅನುಷ್ಠಾನ ಆಗಿಲ್ಲ. ಆರು ತಿಂಗಳಲ್ಲಿ ಇದು ಕಡ್ಡಾಯ ಅನುಷ್ಠಾನ ಆಗಬೇಕು ಎಂದು ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಡಾ, ತಿಪ್ಪೇಸ್ವಾಮಿ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು ಮಕ್ಕಳ ರಕ್ಷಣಾ ನಿರ್ದೇಶನಾಲಯ,ದ.ಕ. ಜಿಲ್ಲಾಡಳಿತ.ತಾಲೂಕು ಪಂಚಾಯತ್ ಬಂಟ್ವಾಳ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಕ್ಕಳ ಸಹಾಯವಾಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದ.ಕ.ಇವರುಗಳ ಸಂಯುಕ್ತ ಆಶ್ರಯದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರಿಗೆ ಮಕ್ಕಳ ರಕ್ಷಣಾ ಕಾಯಿದೆಗಳು ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ ಕುರಿತು ಮಾಹಿತಿ ಕಾರ್ಯಕ್ರಮ ಬಿಸಿರೋಡಿನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ತಿಪ್ಪೇಸ್ವಾಮಿ, ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಸರಣಿ ಕಾರ್ಯಕ್ರಮ ಮಾಡಲಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು ಕಾರ್ಯಕ್ರಮಗಳು ನಡೆಯುತ್ತಿವೆ ಎಂದ ಅವರು, ಕೋವಿಡ್ ಬಳಿಕ ಮಕ್ಕಳ ದೌರ್ಜನ್ಯ ಜಾಸ್ತಿ ಆಗುತ್ತಿದೆ. ಶಾಲೆಯೊಳಗೆ ಪ್ರಕರಣ ನಡೆದರೆ ಏನು ಮಾಡಬೇಕು ಎಂಬ ಕುರಿತು ಅರಿವು ಸಂಬಂಧಪಟ್ಟವರಿಗೆ ಇರಬೇಕು, ಇಲ್ಲದಿದ್ದರೆ ಕೇಸುಗಳನ್ನು ಎದುರಿಸಬೇಕಾಗಬಹುದು ಎಂದು ಎಚ್ಚರಿಕೆ ನೀಡಿದರು.
ಮಕ್ಕಳ ದೈಹಿಕ ಹಿಂಸೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 29 ಪ್ರಕರಣಗಳು ವರದಿಯಾಗಿವೆ ಎಂದು ಗಮನ ಸೆಳೆದ ಡಾ. ತಿಪ್ಪೇಸ್ವಾಮಿ, ಮಕ್ಕಳ ಸ್ನೇಹಿ ಆಡಳಿತಕ್ಕೆ ದೇಶದಲ್ಲಿ ಶೇ.40ರಷ್ಟಿರುವ ಮಕ್ಕಳ ಅಹವಾಲು ಸ್ವೀಕಾರವಾದರೆ ಸಮಸ್ಯೆಗಳು ಕಡಿಮೆಯಾಗಬಹುದು. ಫೆಬ್ರವರಿ ತಿಂಗಳ ಬಳಿಕ ಶಾಲೆಗಳ ಪ್ರವಾಸ ಮಾಡುತ್ತೇವೆ. ಯಾವ ಶಾಲೆಯಲ್ಲೂ ಮಕ್ಕಳ ಹಕ್ಕುಗಳ ರಕ್ಷಣೆ ಮಾಡಿಲ್ಲ ಎಂಬ ದೂರುಗಳು ಬರಬಾರದು ಎಂದು ಹೇಳಿದರು. ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಕರಾವಳಿ ಜಿಲ್ಲೆ ಮುಂಚೂಣಿಯಲ್ಲಿದೆ,ಮಕ್ಕಳ ರಕ್ಷಣಾ ನೀತಿ ಪರಿಣಾಮಕಾರಿ ಅನುಷ್ಠಾನ ಆರು ತಿಂಗಳಲ್ಲಿ ಕಡ್ಡಾಯವಾಗಿ ಆಗಬೇಕು ಎಂದು ಅವರು ತಿಳಿಸಿದರು.
ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿಸೋಜ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್, ತಾ.ಪಂ.ಇ.ಒ.ಸಚಿನ್ ಕುಮಾರ್ ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ್ ಸ್ವಾಗತಿಸಿದರು. ಸಿ.ಡಿ.ಪಿ.ಒ ಮಮ್ತಾಜ್ ಧನ್ಯವಾದ ನೀಡಿದರು. ಜಿಲ್ಲಾ ಮಕ್ಜಳ ಸ್ಥಾಂಸ್ಥಿಕ ವಿಭಾಗದ ರಕ್ಷಣಾಧಿಕಾರಿ ಕುಮಾರ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಮಕ್ಕಳ ರಕ್ಷಣಾ ನೀತಿ ಪರಿಣಾಮಕಾರಿ ಅನುಷ್ಠಾನ – ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಸೂಚನೆ"