ಹಿಂದೆ ಬಂಟ್ವಾಳ ತಾಲೂಕಿನಲ್ಲಿದ್ದು ಈಗ ಉಳ್ಳಾಲ ತಾಲೂಕಿನಲ್ಲಿರುವ ಸಜೀಪನಡು ಗ್ರಾಮ ಹಾಗೂ ಬಂಟ್ವಾಳ ತಾಲೂಕಿನಲ್ಲಿರುವ ತುಂಬೆಯನ್ನು ಬೆಸೆಯುವ ಸೇತುವೆಯೊಂದು ನಿರ್ಮಾಣವಾಗಲು ಕೊನೆಗೂ ಆಡಳಿತಾತ್ಮಕ ಅನುಮೋದನೆ ಲಭಿಸಿದೆ.
ಪ್ರಸ್ತುತ ವಿಧಾನಸಭಾಧ್ಯಕ್ಷರಾಗಿರುವ ಯು.ಟಿ.ಖಾದರ್ ಅವರ ಕ್ಷೇತ್ರಕ್ಕೆ ಒಳಪಡುವ ಈ ಎರಡೂ ಭಾಗಗಳನ್ನು ಬೆಸೆಯುವ ಕುರಿತು ಬಹಳ ಹಿಂದೆಯೇ ಕ್ರಿಯಾಯೋಜನೆ ಸಿದ್ಧಪಡಿಸಲಾಗಿತ್ತು. ಅದೀಗ ಕಾರ್ಯರೂಪಕ್ಕೆ ಬರುತ್ತಿದೆ. ಮತ್ತೆ ಸ್ಪೀಕರ್ ಅವರ ನಿರ್ದೇಶನದಂತೆ ಲೋಕೋಪಯೋಗಿ ಇಲಾಖೆಯ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ(ಕೆಆರ್‌ಡಿಸಿಎಲ್)ದ ಮೂಲಕ ಕ್ರೀಯಾಯೋಜನೆ ಸಿದ್ಧಪಡಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಅಂದಿನ ಕ್ರೀಯಾಯೋಜನೆಯ ಮೊತ್ತಕ್ಕೆ ಪ್ರಸ್ತುತ ಸೇತುವೆ ನಿರ್ಮಾಣ ಅಸಾಧ್ಯವಾಗಿತ್ತು.
60 ಕೋಟಿ ರೂ ವೆಚ್ಚ, 370 ಮೀಟರ್ ಉದ್ದದ ಸೇತುವೆ:
ಇದೀಗ ಬಂಟ್ವಾಳ ಲೋಕೋಪಯೋಗಿ ಇಲಾಖೆಯ ಮೂಲಕ ಸುಮಾರು 60 ಕೋ.ರೂ.ವೆಚ್ಚದಲ್ಲಿ ಒಟ್ಟು 370 ಮೀ. ಉದ್ದದ ಸೇತುವೆ ನಿರ್ಮಾಣಕ್ಕೆ ಕ್ರೀಯಾಯೋಜನೆ ಸಿದ್ಧಪಡಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.ಸೇತುವೆಯ ತಳ ಭಾಗದ ಎರಡೂ ಬದಿ 30 ಮೀ. ಅಂತರಕ್ಕೆ 5 ಪಿಲ್ಲರ್ ನಿರ್ಮಾಣವಾಗಲಿದ್ದು, ಮಧ್ಯೆ 100 ಮೀ. ಅಂತರವಿರುತ್ತದೆ. ಎರಡೂ ಬದಿ ಸೇತುವೆ ಸಂಪರ್ಕ ರಸ್ತೆಗಳು, ತಡೆಗೋಡೆ ನಿರ್ಮಾಣವಾಗಿದೆ. ಈ ಸೇತುವೆಯು ತುಂಬೆ ಜಂಕ್ಷನ್ ಹಾಗೂ ಸಜೀಪ ಜಂಕ್ಷನ್ ಮೂಲಕ ಮಂಗಳೂರು-ಬೆಂಗಳೂರು ರಾಷ್ಟಿçಯ ಹೆದ್ದಾರಿ ಹಾಗೂ ಮುಡಿಪು-ಮೆಲ್ಕಾರ್ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸಲಿದೆ.
ಬಂಟ್ವಾಳ ತಾಲೂಕಿನ ಮಟ್ಟಿಗೆ ಪಾಣೆಮಂಗಳೂರಿನಲ್ಲಿ ಬ್ರಿಟಿಷರು ನಿರ್ಮಿಸಿದ ಉಕ್ಕಿನ ಸೇತುವೆ ನೇತ್ರಾವತಿಗೆ ನಿರ್ಮಾಣಗೊಂಡ ಮೊದಲ ಸೇತುವೆ. ಬಳಿಕ ಮಂಗಳೂರು- ಬೆಂಗಳೂರು ರೈಲು ಸಂಚಾರಕ್ಕೊಂದು ಉಕ್ಕಿನ ಸೇತುವೆ ಇತ್ತು. ರಾಷ್ಟೀಯ ಹೆದ್ದಾರಿ ಅಗಲೀಕರಣದ ಸಂದರ್ಭ ಪಾಣೆಮಂಗಳೂರಿನಲ್ಲಿ ಹೊಸ ಸೇತುವೆ ನಿರ್ಮಾಣಗೊಂಡಿತು. ಚತುಷ್ಪಥ ಹೆದ್ದಾರಿಗಾಗಿ ಅದರ ಪಕ್ಕ ಮತ್ತೊಂದು ಸೇತುವೆ ನಿರ್ಮಾಣಗೊಂಡು ಕೆಲ ದಿನಗಳ ಹಿಂದೆಯಷ್ಟೇ ವಾಹನ ಸಂಚಾರಕ್ಕೆ ಮುಕ್ತಗೊಂಡಿದೆ. ಜಕ್ರಿಬೆಟ್ಟುವಿನಲ್ಲಿ ನಿರ್ಮಾಣಗೊಂಡಿರುವ ಡ್ಯಾಂ ಮೂಲಕ ವಾಹನ ಸಂಚಾರಕ್ಕೂ ಅವಕಾಶ ಇದೆ. ಅಜಿಲಮೊಗರು- ಕಡೇಶಿವಾಲಯದ ಮಧ್ಯೆ ಸೇತುವೆ ನಿರ್ಮಾಣ ಹಂತದಲ್ಲಿದೆ. ಹಾಗೆಯೇ ಉಪ್ಪಿನಂಗಡಿ ಭಾಗದಿಂದ ಮಂಗಳೂರುವರೆಗೆ ನೇತ್ರಾವತಿ ನದಿವರೆಗೆ ಲೆಕ್ಕ ಹಾಕುತ್ತಾ ಹೋದರೆ, (ಕುಮಾರಧಾರ ಸೇರಿ) ವಾಹನ ಸಂಚಾರದ 14ನೇ ಸೇತುವೆ ಇದು. ಉಪ್ಪಿನಂಗಡಿಯಲ್ಲಿ ಕುಮಾರಧಾರ ನದಿಗೆ 3 ಸೇತುವೆಗಳು(1 ನಿರ್ಮಾಣ ಹಂತದಲ್ಲಿದೆ), ನೇತ್ರಾವತಿ ನದಿಗೆ ೧ ಸೇತುವೆ, ಬಿಳಿಯೂರಿನಲ್ಲಿ 1 ಬ್ರಿಡ್ಜ್ ಕಂ ಬ್ಯಾರೇಜ್, ಅಜಿಲಮೊಗರು-ಕಡೇಶ್ವಾಲ್ಯ ಮಧ್ಯೆ ಸೇತುವೆ ನಿರ್ಮಾಣ ಹಂತದಲ್ಲಿದ್ದು, ಜಕ್ರಿಬೆಟ್ಟು-ನರಿಕೊಂಬು ಮಧ್ಯೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಹಂತದಲ್ಲಿದೆ. ಪಾಣೆಮಂಗಳೂರಿನಲ್ಲಿ ೩ ಸೇತುವೆಗಳು, ಅಡ್ಯಾರ್-ಹರೇಕಳ ಮಧ್ಯೆ ಬ್ರಿಡ್ಜ್ ಕಂ ಬ್ಯಾರೇಜ್, ಉಳ್ಳಾಲದಲ್ಲಿ ೨ ಸೇತುವೆಗಳಿದೆ.
Be the first to comment on "ಸಜೀಪನಡು ತುಂಬೆ ನಡುವೆ ಸೇತುಬಂಧ | ರಾಜ್ಯ ಸರಕಾರದಿಂದ ಆಡಳಿತಾತ್ಮಕ ಅನುಮೋದನೆ | 60 ಕೋಟಿ ರೂ ಅಂದಾಜು ವೆಚ್ಚದಲ್ಲಿ ನಿರ್ಮಾಣ"