ಬಂಟ್ವಾಳ: ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಡಿಸೆಂಬರ್ 7ರಂದು ನಡೆಯಲಿರುವ ಹೊನಲು ಬೆಳಕಿನ ಕ್ರೀಡೋತ್ಸವಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ವರಿಷ್ಠರಾಗಿರುವ ಸರಸಂಘಚಾಲಕ ಡಾ. ಮೋಹನ್ ಜೀ ಭಾಗವತ್ ಆಗಮಿಸಲಿದ್ದಾರೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.ಸೋಮವಾರ ಸಂಜೆ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿವರ ನೀಡಿದರು.
ಶ್ರೀರಾಮ ವಿದ್ಯಾಕೇಂದ್ರದಲ್ಲಿ ಪದವಿಕಾಲೇಜು, ಸೆಕೆಂಡರಿ ಸ್ಕೂಲ್, ಪದವಿಪೂರ್ವ ಕಾಲೇಜು, ಹೈಸ್ಕೂಲು ಹಾಗೂ ಪ್ರಾಥಮಿಕ ಶಾಲೆ ಜೊತೆಗೆ ಶಿಶುಮಂದಿರವಿದೆ. 3338 ವಿದ್ಯಾರ್ಥಿಗಳು ಹಾಗೂ 230 ಶಿಕ್ಷಕರು, ಸಿಬ್ಬಂದಿ ವರ್ಗ ಇದ್ದಾರೆ. ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸದ ಜೊತೆ ದೇಶಭಕ್ತಿ, ಸಂಸ್ಕೃತಿಯನ್ನು ಮೂಡಿಸುವುದು ಹಾಗೂ ರಾಷ್ಟ್ರೀಯ ದೃಷ್ಟಿಕೋನದ ಶಿಕ್ಷಣ ನೀಡುವುದನ್ನು ಕಳೆದ ನಾಲ್ಕು ದಶಕಗಳಿಂದ ಮಾಡುತ್ತಿದ್ದೇವೆ. ಮೂರುವರೆ ದಶಕಗಳಿಂದ ನಡೆಸುತ್ತಿರುವ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಎಲ್ಲ ವಿದ್ಯಾರ್ಥಿಗಳೂ ಪಾಲ್ಗೊಳ್ಳುತ್ತಾರೆ. ಈ ಬಾರಿ 20 ವಿಶೇಷಚೇತನ ವಿದ್ಯಾರ್ಥಿಗಳೂ ಭಾಗವಹಿಸಲಿದ್ದಾರೆ. ಪ್ರತಿ ಬಾರಿಯೂ ರಾಜ್ಯ, ರಾಷ್ಟ್ರಮಟ್ಟದ ಗಣ್ಯರು ಆಗಮಿಸುವುದು ಇಲ್ಲಿನ ವಿಶೇಷ. ಈ ಬಾರಿ ಆರೆಸ್ಸೆಸ್ ಸರಸಂಘಚಾಲಕರು ಆಗಮಿಸುತ್ತಿರುವುದು ಇದೇ ಮೊದಲ ಬಾರಿಗೆ ಕಲ್ಲಡ್ಕಕ್ಕೆ ಭೇಟಿ ನೀಡಲಿದ್ದಾರೆ ಎಂದು ಡಾ. ಭಟ್ ಮಾಹಿತಿ ನೀಡಿದರು. 6.30ಕ್ಕೆ ಕ್ರೀಡೋತ್ಸವ ಪ್ರಾರಂಭವಾಗಿ 8 ಗಂಟೆಗೆ ಮುಕ್ತಾಯಗೊಳ್ಳಲಿದೆ. ಬಳಿಕ ಡಾ. ಭಾಗವತ್ ಸಂದೇಶ ನೀಡಲಿದ್ದಾರೆ ಎಂದವರು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಪದವಿ ವಿಭಾಗದ ಪ್ರಿನ್ಸಿಪಾಲ್ ಕೃಷ್ಣಪ್ರಸಾದ್ ಕಾಯರಕಟ್ಟೆ, ಪಟ್ಟಾಭಿರಾಮ ಟ್ರಸ್ಟ್ ಪ್ರಮುಖರಾದ ನ್ಯಾಯವಾದಿ ಪ್ರಸಾದ್ ಕುಮಾರ್, ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾದ ಲಕ್ಷ್ಮೀ ರಘುರಾಜ್ ಮತ್ತು ಅಕ್ಷತಾ ಕಾವೂರು ಉಪಸ್ಥಿತರಿದ್ದರು.
Be the first to comment on "MOHAN BHAGAVATH VISIT KALLAKDA: ಡಿಸೆಂಬರ್ 7ರಂದು ಕಲ್ಲಡ್ಕ ಕ್ರೀಡೋತ್ಸವಕ್ಕೆ ಆರೆಸ್ಸೆಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್"