ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಕಾರು ಸಂಚರಿಸುವ ವೇಳೆ ದುಷ್ಕರ್ಮಿಗಳು ಅಡ್ಡಿಪಡಿಸಿ ದಾಳಿ ನಡೆಸಿದ ಕೃತ್ಯ ಖಂಡನೀಯ ಎಂದು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀಗಳಿಗೆ ಹಾಗು ಮಠಕ್ಕೆ ಭದ್ರತೆ ಹಾಗೂ ರಕ್ಷಣೆಯನ್ನು ಕೂಡಲೇ ಸರಕಾರ ಒದಗಿಸಬೇಕು ಎಂದವರು ಒತ್ತಾಯಿಸಿದರು.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸಂಜೆ ಶ್ರೀ ಕ್ಷೇತ್ರ ಎಡನೀರು ಮಠದ ಭಕ್ತಾಭಿಮಾನಿಗಳ ಬಳಗದ ವತಿಯಿಂದ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾಸರಗೋಡು ಎಡನೀರು ಮಠವು ತನ್ನದೇ ಆದ ವಿಶಿಷ್ಠ ಪರಂಪರೆ ಹೊಂದಿದ್ದು ಎಲ್ಲಾ ಜಾತಿ, ಮತ, ಸಂಪ್ರದಾಯಗಳನ್ನು ಗೌರವಿಸುವ ಹಿನ್ನೆಲೆ ಹೊಂದಿದೆ. ಮುಖ್ಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ಸ್ವಾಮೀಜಿಯವರು ತೆರಳುತ್ತಿರುವುದನ್ನು ಕಂಡು ದುರುದ್ದೇಶ ಪೂರ್ವಕವಾಗಿ ಆಕ್ರಮಣಕಾರಿ ರೀತಿಯಲ್ಲಿ ಕಾರಿಗೆ ಹಾನಿಗೊಳಿಸಿ ಬೆದರಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು. ಲಕ್ಷಾಂತರ ಮಠದ ಅಭಿಮಾನಿಗಳಿಗೆ ಈ ಘಟನೆಯಿಂದ ಖೇದವಾಗಿದೆ ಎಂದ ಅವರು, ಕನ್ನಡ ಭಾಷಾ ಸಾಹಿತ್ಯ,ಯಕ್ಷಗಾನ ಹಾಗೂ ವಿವಿಧ ಕಲೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಶ್ರೀ ಮಠಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಪ್ರತಿಷ್ಠಾನದ ಕೋಶಾಧಿಕಾರಿ ಅನಾರು ಕೃಷ್ಣ ಶರ್ಮ, ಜಿಲ್ಲಾ ಪ್ರತಿನಿಧಿ ರಾಜಮಣಿ ರಾಮಕುಂಜ, ಬಂಟ್ವಾಳ ತಾಲೂಕು ಅಧ್ಯಕ್ಷ ಸುಬ್ರಾಯ ಮಡಿವಾಳ, ಕಾರ್ಯದರ್ಶಿ ಕೋಕಳ ರಾಮಕೃಷ್ಣ ನಾಯಕ್ ಹಾಗೂ ಡಾ.ಮಹಾಲಿಂಗ ಭಟ್, ನ್ಯಾಯವಾದಿ ರವೀಂದ್ರ ಕುಕ್ಕಾಜೆ, ಶೇಖರ ಡಿ. ಮಂಚಿ ಮತ್ತು ಜಯಾನಂದ ಪೆರಾಜೆ ಉಪಸ್ಥಿತರಿದ್ದರು.
Be the first to comment on "ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಘಟನೆ: ಶ್ರೀಗಳಿಗೆ ಸೂಕ್ತ ರಕ್ಷಣೆ, ಮಠಕ್ಕೆ ಭದ್ರತೆ ನೀಡಲು ಬಂಟ್ವಾಳದ ಭಕ್ತಾಭಿಮಾನಿಗಳ ಒತ್ತಾಯ"