ಬಂಟ್ವಾಳದ ಆರಾಧನಾ ಕೇಂದ್ರ, ಶೈಕ್ಷಣಿಕ ವಲಯ, ಸಾಧಕರು, ಸ್ಥಳನಾಮಗಳ ವಿವರಗಳೊಂದಿಗೆ ಇತಿಹಾಸದ ಸೂಕ್ಷ್ಮನೋಟಗಳನ್ನು ಪ್ರೊ.ರಾಜಮಣಿ ರಾಮಕುಂಜ ಅವರ ಬಂಟ್ವಾಳದ ಸಾಂಸ್ಕೃತಿಕ ಪರಿಸರ ಕೃತಿ ನೀಡುತ್ತದೆ ಎಂದು ಮೂಡುಬಿದಿರೆ ಧವಳಾ ಕಾಲೇಜು ವಿಶ್ರಾಂತ ಪ್ರಾಧ್ಯಾಪಕ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಹೇಳಿದರು.
ಮೊಡಂಕಾಪು ಸರಿದಂತರ ಪ್ರಕಾಶನ, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಪ್ರೊ.ರಾಜಮಣಿ ರಾಮಕುಂಜ ಅವರ ಬಂಟ್ವಾಳದ ಸಾಂಸ್ಕೃತಿಕ ಪರಿಸರ ಕೃತಿಯನ್ನು ಬಂಟ್ವಾಳ ಕನ್ನಡ ಭವನದಲ್ಲಿ ಗುರುವಾರ ಸಂಜೆ ಅನಾವರಣಗೊಳಿಸಿ ಮಾತನಾಡಿದ ಅವರು, ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನವನ್ನು ಕೇಂದ್ರವಾಗಿಟ್ಟುಕೊಂಡು, ಇಡೀ ಪರಿಸರದ ಸಾಂಸ್ಕೃತಿಕ ಪರಂಪರೆ ಹಾಗೂ ಇತಿಹಾಸದ ಸಮಗ್ರ ನೋಟವನ್ನು ಪುಸ್ತಕ ನೀಡುತ್ತದೆ. ಸಾಂಸ್ಕೃತಿಕ ಪರಿಸರವನ್ನು ತೆರೆದಿಡುತ್ತದೆ. ಸಂಶೋಧನಾತ್ಮಕ ನೋಟವನ್ನು ಕೃತಿ ನೀಡಿದೆ. ಪಾಡ್ದನ, ಮೌಖಿಕ ಮಾಹಿತಿ ಸಹಿತ ದೊರಕಿದ ಮಾಹಿತಿಯೊಂದಿಗೆ ಸೀಮಿತವಾದ ಪ್ರದೇಶವನ್ನು ಸಮಗ್ರವಾಗಿ ನೀಡಲಾಗಿದೆ. ಉಲ್ಲೇಖ ಇದೆ. ಪುಸ್ತಕ ಸಿದ್ಧ ಸೂತ್ರವನ್ನು ಅನುಸರಿಸದೆ ಬರೆಯಲಾಗಿದೆ. ಸ್ವಂತ ನೆಲೆಯಲ್ಲಿ ಪ್ರಕಾಶಿಸುವ ಧೈರ್ಯ ಮಾಡಿದ್ದಕ್ಕೆ ಅಭಿನಂದನೆ. ಹದಿನಾಲ್ಕು ವರ್ಷದ ಶ್ರಮದ ಪ್ರತಿಫಲವಾಗಿ ಪುಸ್ತಕ ಹೊರಬಂದಿದೆ ಎಂದರು
ಮುಂಬಯಿ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತಕುಮಾರ ಮಾತನಾಡಿ, ಕೃತಿಗಳನ್ನು ಓದಿದರೆ, ಕೃತಿಕಾರನಿಗೆ ಸಮಾಧಾನವಾಗುತ್ತದೆ. ಸತತ ಅಭ್ಯಾಸ, ಪರಿಶ್ರಮಗಳಿಂದ ಅವರು ಸಾಫಲ್ಯ ಗಳಿಸಿದ್ದಾರೆ. ಈ ಕೃತಿ ಹಲವು ನೋಟಗಳನ್ನು ನೀಡಿದ್ದು, ದೇವಸ್ಥಾನಗಳ ವಿಸ್ತೃತ ಅಧ್ಯಯನಗಳಿಗೆ ಪೂರಕವಾಗಿದೆ, ಅಧ್ಯಯನಾಸಕ್ತರಿಗೆ ಅನುಕೂಲವಾಗಲಿದ್ದು, ಪ್ರೇರಣೆಯಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಂಟ್ವಾಳ ಪರಿಸರದ ವಿದ್ಯಾರ್ಥಿಗಳಿಗೆ ಇದನ್ನು ಕಡ್ಡಾಯವಾಗಿ ಓದಲು ನೀಡಬೇಕು, ತನ್ಮೂಲಕ ತಮ್ಮೂರ ಸಮಗ್ರ ಮಾಹಿತಿಯನ್ನು ಅಭ್ಯಸಿಸಿದಂತಾಗುತ್ತದೆ. ತಾನು ವಾಸಿಸುವ ಊರಿನ ಮಾಹಿತಿಯನ್ನು ಪುಸ್ತಕದ ಮೂಲಕ ನೀಡಿದ ಪ್ರೊ.ರಾಜಮಣಿ ಅಭಿನಂದನಾರ್ಹರು ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಉಪಸ್ಥಿತರಿದ್ದು ಶುಭ ಹಾರೈಸಿದರು. ಕೃತಿಕಾರ ಪ್ರೊ.ರಾಜಮಣಿ ರಾಮಕುಂಜ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕೃತಿ ಬಿಡುಗಡೆಗೂ ಮುನ್ನ ದೀಪಾವಳಿ ದ್ಯೋತಕವಾಗಿ ವೇದಿಕೆಯಲ್ಲಿ ಹಣತೆ ಬೆಳಗಲಾಯಿತು. ಮಧುರಾ ಕಡ್ಯ ವಂದಿಸಿದರು. ಕಸಾಪ ಗೌರವ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಪ್ರೊ. ರಾಜಮಣಿ ರಾಮಕುಂಜ ಅವರ ‘ಬಂಟ್ವಾಳ ಸಾಂಸ್ಕೃತಿಕ ಪರಿಸರ’ ಕೃತಿ ಬಿಡುಗಡೆ"