HIGH COURT BENCH AT MANGALURU ಕರಾವಳಿಯಲ್ಲಿ ಮಂಗಳೂರನ್ನು ಕೇಂದ್ರೀಕರಿಸಿಕೊಂಡು ಹೈಕೋರ್ಟ್ ಪೀಠ ಸ್ಥಾಪಿಸಬೇಕು ಎಂಬ ಉದ್ದೇಶದಿಂದ ಆರಂಭಿಸಲಾದ ಹೋರಾಟವನ್ನು ತೀವ್ರಗೊಳಿಸಿ ಜನಾಂದೋಲನ ರೂಪಕ್ಕೆ ಕೊಂಡೊಯ್ಯಲು ಹೋರಾಟ ಸಮಿತಿ ನಿರ್ಧರಿಸಿದೆ. ಸಂಚಾಲಕ ಐವನ್ ಡಿಸೋಜ ನೇತೃತ್ವದಲ್ಲಿ ಬಂಟ್ವಾಳದ ನ್ಯಾಯಾಲಯ ಸಭಾಂಗಣದಲ್ಲಿ ಬಂಟ್ವಾಳ (BANTWAL BAR ASSOCIATION) ವಕೀಲರ ಸಂಘ ಆಯೋಜಿಸಿದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ವಕೀಲರ ಸಮಾಲೋಚನಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ತಾಲೂಕು ಮಟ್ಟದಲ್ಲಿ ಈ ಕುರಿತು ಜನಾಂದೋಲನ ರೂಪಿಸುವಂತೆ ಜಿಲ್ಲೆಯ ನಾನಾ ಕಡೆಗಳಿಂದ ಆಗಮಿಸಿದ್ದ ವಕೀಲರು ವಿಚಾರ ಮಂಡಿಸಿದರು. ಪೀಠ ಸ್ಥಾಪನೆಯಾಗುವವರೆಗೆ ವಿರಮಿಸದೆ ಬಂದ್ ಸಹಿತ ನಾನಾ ಸ್ವರೂಪದ ಹೋರಾಟವನ್ನು ಜನಸಮುದಾಯದ ಬೆಂಬಲದಿಂದ ರೂಪಿಸಲು ತೀರ್ಮಾನಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಧಾನ ಸಂಚಾಲಕ ಹಾಗೂ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ (IVAN DSOUZA, MLC) ಮಾತನಾಡಿ, ಸರಕಾರದ ಮಟ್ಟದಲ್ಲಿ ಈ ಕುರಿತು ಗಮನ ಸೆಳೆಯುವ ಕೆಲಸವಾಗುತ್ತಿದೆ. ಸ್ಪೀಕರ್ ಯು.ಟಿ.ಖಾದರ್ ಅವರ ನೇತೃತ್ವದಲ್ಲಿ ಮುಂದಿನ ಅವೇಶನಕ್ಕೆ ಮೊದಲು ಕರಾವಳಿ ಮತ್ತು ಮಲೆನಾಡಿನ ಆರು ಜಿಲ್ಲೆಗಳಿಗೆ ಸಂಬಂಸಿದ ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರ ಸಭೆಯನ್ನು ಕರೆಯಲಾಗುವುದು ಎಂದರು.
ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಹೋರಾಟ ಸಮಿತಿ ಪ್ರಮುಖ ಮೋನಪ್ಪ ಭಂಡಾರಿ ಮಾತನಾಡಿ, ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸವಾಗಬೇಕಾದರೆ, ಹೋರಾಟಕ್ಕೆ ಕಾವು ಬರಬೇಕು ಎಂದರು.
ಹಿರಿಯ ವಕೀಲರಾದ ಎಂ.ಪಿ.ನೊರೊನ್ಹ ಹೈಕೋರ್ಟ್ ಪೀಠದ ರೂಪುರೇಷೆ ಕುರಿತು ವಿವರಿಸಿದರು. ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ವಿ.ರಾಘವೇಂದ್ರ ಪ್ರಾಸ್ತಾವಿಕ ಮಾತನಾಡಿ, ಪೋಸ್ಟ್ಕಾರ್ಡ್ ಚಳವಳಿ, ಸಹಿ ಸಂಗ್ರಹ ಚಳವಳಿ ಮಾಡುವುದರ ಮೂಲಕ ಸಾರ್ವಜನಿಕರು ಸೇರಿಕೊಳ್ಳಬೇಕು ಎಂದು ಹೇಳಿದರು.
ಸುಳ್ಯ ವಕೀಲರ ಸಂಘದ ಅಧ್ಯಕ್ಷ ಸುಕುಮಾರ್, ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಹರೀಶ್ ಪಿ ಮತ್ತಿತರರು ವಿಚಾರ ಮಂಡಿಸಿದರು. ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಕೋಸ್ತಾ ಸ್ವಾಗತಿಸಿದರು. ನ್ಯಾಯವಾದಿ ರವೀಂದ್ರ ಕುಕ್ಕಾಜೆ ಕಾರ್ಯಕ್ರಮ ನಿರ್ವಹಿಸಿದರು. ನ್ಯಾಯವಾದಿ ಬಿ.ವಿ.ಶೆಣೈ ವಂದಿಸಿದರು. ಈ ಸಂದರ್ಭ ಐವನ್ ಡಿಸೋಜ ಅವರನ್ನು ವಿಧಾನಪರಿಷತ್ ಸದಸ್ಯರಾಗಿ ಮೊದಲ ಬಾರಿ ಆಗಮಿಸಿದ ಹಿನ್ನೆಲೆ ಸನ್ಮಾನಿಸಲಾಯಿತು. ನ್ಯಾಯವಾದಿ ವೀರೇಂದ್ರ ಸಿದ್ಧಕಟ್ಟೆ ಸನ್ಮಾನಪತ್ರ ವಾಚಿಸಿದರು.
Be the first to comment on "ಮಂಗಳೂರಲ್ಲಿ ಹೈಕೋರ್ಟ್ ಪೀಠ -ಸ್ಥಾಪನೆಗೆ ತೀವ್ರ ಹೋರಾಟ ; ಬಂಟ್ವಾಳದಲ್ಲಿ ನಡೆದ ಜಿಲ್ಲಾ ಮಟ್ಟದ ಸಮಾಲೋಚನಾ ಸಭೆಯಲ್ಲಿ ತೀರ್ಮಾನ"