ಬಂಟ್ವಾಳ: ಬೆಂಗಳೂರಿನ ಡಿಜಿ ಯಕ್ಷ ಫೌಂಡೇಶನ್ ವತಿಯಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಯಕ್ಷಗಾನ ಗುರು, ಹಿರಿಯ ಕಲಾವಿದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಯಕ್ಷಗಾನ ಕಲಾದಂಪತಿ ಲೀಲಾವತಿ ಮತ್ತು ಹರಿನಾರಾಯಣ ಬೈಪಡಿತ್ತಾಯ ಹೆಸರಲ್ಲಿ ನೀಡುವ ಶ್ರೀಹರಿಲೀಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಂಶೋಧಕ ಡಾ. ಎಂ.ಪ್ರಭಾಕರ ಜೋಷಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಪರಂಪರೆಯನ್ನು ಉಳಿಸುವ ಕರ್ತವ್ಯ ಇಂದು ಯಕ್ಷಗಾನ ಗುರುಗಳ ಹಾಗೂ ಕಲಾವಿದರ ಮೇಲಿದೆ. ಯಕ್ಷಗಾನ ಹಿಮ್ಮೇಳಕ್ಕೆ ಕಲಾವಿದರನ್ನು ರಂಗಕ್ಕೆ ಕೊಡುಗೆ ನೀಡಿದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಹಾಗೂ ಹರಿನಾರಾಯಣ ಬೈಪಡಿತ್ತಾಯ ಮಹಾಗುರುಗಳಾಗಿದ್ದು, ಒಬ್ಬ ಗುರುವಿನ ಹೆಸರಲ್ಲಿ ಮತ್ತೊಬ್ಬ ಗುರುವಿಗೆ ಪ್ರಶಸ್ತಿ ಸಂದಿರುವುದು ವಿಶೇಷ ಎಂದರು.
ಸನ್ಮಾನಕ್ಕೆ ಉತ್ತರಿಸಿದ ಮಾಂಬಾಡಿ ಸುಬ್ರಹ್ಮಣ್ಯ ಭಟ್, ಯಕ್ಷಗಾನದಲ್ಲಿ ಗುರುಪರಂಪರೆ ಮುಂದುವರಿಯಬೇಕಾಗಿದೆ ಎಂದರು. ಮಂಗಳೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕರೂ ಆಗಿರುವ ಹವ್ಯಾಸಿ ಕಲಾವಿದ ಪುರುಷೋತ್ತಮ ಭಟ್ ನಿಡುವಜೆ ಅಭಿನಂದನಾ ಮಾತುಗಳನ್ನಾಡಿದರು. ಯಕ್ಷಕಲಾ ಪೊಳಲಿ ಸಂಸ್ಥೆ ಸಂಚಾಲಕ ಪೊಳಲಿ ವೆಂಕಟೇಶ ನಾವಡ, ಪ್ರಮುಖರಾದ ಕೆ.ಲಕ್ಷ್ಮೀನಾರಾಯಣ ಕುಂಡಂತಾಯ, ಬಾಲಚಂದ್ರ ರಾವ್, ಆನಂದ ಗುಡಿಗಾರ, ಜನಾರ್ದನ ಅಮ್ಮುಂಜೆ ಈ ಸಂದರ್ಭ ಉಪಸ್ಥಿತರಿದ್ದರು. ಇದೇ ಸಂದರ್ಭ ಹರಿಲೀಲಾ ಶಿಷ್ಯವೃಂದ ನಡೆಸಿಕೊಟ್ಟ ಯಕ್ಷಗಾನನಾದ ಕಾರ್ಯಕ್ರಮದಲ್ಲಿ ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ, ಗಿರೀಶ್ ರೈ ಕಕ್ಯಪದವು, ಜಯರಾಮ ಆಡೂರು, ಶಾಲಿನಿ ಹೆಬ್ಬಾರ್, ದಿವ್ಯಶ್ರೀ ಪುತ್ತಿಗೆ ಭಾಗವತಿಕೆ, ಆಡೂರು ಲಕ್ಷ್ಮೀನಾರಾಯಣ ರಾವ್, ಶಂಕರ ಭಟ್ ಕಲ್ಮಟ್ಕ, ಸೋಮಶೇಖರ ಭಟ್ ಕಾಶಿಪಟ್ಣ, ಗಣೇಶ್ ಭಟ್ ಬೆಳ್ಳಾರೆ, ವಿಕಾಸ್ ರಾವ್ ಪುನರೂರು, ಅವಿನಾಶ್ ಬೈಪಡಿತ್ತಾಯ ಮತ್ತು ಸಮರ್ಥ್ ಉಡುಪ ಚೆಂಡೆ ಮದ್ದಳೆಯಲ್ಲಿ ಸಹಕರಿಸಿದರು. ಬಳಿಕ ಸುಧನ್ವ ಮೋಕ್ಷ ತಾಳಮದ್ದಳೆಯಲ್ಲಿ ಶ್ರೀನಿವಾಸ ಬಳ್ಳಮಂಜ ಭಾಗವತಿಕೆ, ಎಂ.ಪ್ರಭಾಕರ ಜೋಷಿ, ಹರೀಶ್ ಬಳಂತಿಮೊಗರು ಮತ್ತು ದಿನೇಶ ಶೆಟ್ಟಿ ಕಾವಳಕಟ್ಟೆ ಮುಮ್ಮೇಳದಲ್ಲಿದ್ದರು. ಆನಂದ ಗುಡಿಗಾರ, ಗಿರೀಶ ಭಟ್ ಕಿನಿಲಕೋಡಿ, ಗುರುಪ್ರಸಾದ್ ಬೊಳಿಂಜಡ್ಕ ಮತ್ತು ಹರೀಶ್ ರಾವ್ ಆಡೂರು ಚೆಂಡೆ ಮದ್ದಳೆಯಲ್ಲಿ ಸಹಕರಿಸಿದರು. ಹರಿನಾರಾಯಣ ಬೈಪಡಿತ್ತಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ ಭಟ್ ಕೊಂಕಣಾಜೆ ಸ್ವಾಗತಿಸಿದರು. ಸಾಯಿಸುಮಾ ನಾವಡ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಪೊಳಲಿಯಲ್ಲಿ ಯಕ್ಷಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಹರಿಲೀಲಾ ಪ್ರಶಸ್ತಿ ಪ್ರದಾನ"