ಸಿನಿಮಾಕ್ಕಾಗಿ ರಾಷ್ಟ್ರಪ್ರಶಸ್ತಿಯನ್ನು ಮಧ್ಯಂತರ ಚಿತ್ರನಿರ್ದೇಶಕ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪ ಬಂಟ್ವಾಳ ಮೂಲದ ದೆಹಲಿ ನಿವಾಸಿ ಬಸ್ತಿ ದಿನೇಶ್ ಶೆಣೈ ಪಡೆದಿದ್ದಾರೆ. ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ನಾನ್ ಫೀಚರ್ ಫಿಲಂ ವಿಭಾಗದ ಪ್ರಶಸ್ತಿಗಳಿಗೆ ‘ಮಧ್ಯಂತರ’ ಕಿರುಚಿತ್ರ ಭಾಜನವಾಗಿದೆ. ಚೊಚ್ಚಲ ಚಿತ್ರದಲ್ಲೇ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು (ಸ್ವರ್ಣ ಕಮಲ ಪ್ರಶಸ್ತಿ) ಮಧ್ಯಂತರ ಕಿರುಚಿತ್ರ ಡೈರೆಕ್ಟರ್ ದಿನೇಶ್ ಶೆಣೈ ಪಡೆದುಕೊಂಡರು. ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಿದರು. ರಾಷ್ಟ್ರಪತಿ ಜೊತೆ ಸಚಿವ ಅಶ್ವಿನಿ ವೈಷ್ಣವ್ ಉಪಸ್ಥಿತರಿದ್ದರು.
ಬಂಟ್ವಾಳದ ಬಸ್ತಿ ದಿನೇಶ್ ಶೆಣೈ ಬಾಲ್ಯದಿಂದಲೂ ಸಿನಿಮಾ ಪ್ರೇಮಿ. ಕಳೆದ 27 ವರ್ಷಗಳಿಂದಲೂ ಮನರಂಜನಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದೆಹಲಿಯಲ್ಲಿ ಸಿನಿಮಾ ಕುರಿತ ಶಿಕ್ಷಣ ಕಲಿತು ಅಲ್ಲಿಯೇ ನೆಲೆ ಕಂಡುಕೊಂಡಿರುವ ದಿನೇಶ್, ಜಾಹೀರಾತುಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಕಿರುಚಿತ್ರ, ಡಾಕ್ಯುಮೆಂಟರಿಗಳನ್ನು ನಿರ್ಮಿಸುತ್ತಿದ್ದರು. ಆದ್ರೆ ಕಾರ್ಪೊರೇಟ್ ಹೊರಗೆ ಒಂದು ಅಪ್ಪಟ ಸಿನಿಮಾ ಅಥವಾ ಕಿರುಚಿತ್ರವನ್ನು ನಿರ್ಮಿಸುವುದು ಅವರ ಬಹುವರ್ಷಗಳ ಕನಸಾಗಿತ್ತು. ‘ಮಧ್ಯಂತರ’ದ ಮೂಲಕ ಅವರ ಕನಸು ನನಸಾಗಿದೆ.
2022ರ ಮಾರ್ಚ್ ತಿಂಗಳಲ್ಲಿ ಮಧ್ಯಂತರ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಿದ್ದರು ದಿನೇಶ್ ಶೆಣೈ. ಕ್ರೌಡ್ ಫಂಡಿಂಗ್ ಮೂಲಕ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮಧ್ಯಂತರ ಕಿರುಚಿತ್ರವು ಅಪ್ಪಟ ಸಿನಿಪ್ರೇಮಿ ಯುವಕರಿಬ್ಬರು ಸಿನಿಮಾ ಮೋಹಕ್ಕೆ ಸಿಲುಕಿ ಸಿನಿಮಾ ನಿರ್ಮಾಣ ಜಗತ್ತಿಗೆ ಇಳಿಯುವ ಸರಳ ಕಥೆ ಒಳಗೊಂಡಿದೆ. ಸಿನಿಮಾದ ನಿರೂಪಣೆ ತಮಾಷೆಯ ಧಾಟಿಯಲ್ಲಿದ್ದರೂ ಗಂಭೀರ ವಸ್ತು ವಿಷಯ ಒಳಗೊಂಡಿದೆ. ಮುಖ್ಯಪಾತ್ರಗಳಲ್ಲಿ ದಾವಣಗೆರೆಯ ವೀರೇಶ್ ಹಾಗೂ ರಂಗಭೂಮಿ ಹಿನ್ನೆಲೆಯ ಅಜಯ್ ನೀನಾಸಂ ನಟಿಸಿದ್ದಾರೆ. ಹೋಟೆಲ್ ಒಂದರಲ್ಲಿ ಸಪ್ಲೈಯರ್ಗಳಾಗಿ ಕೆಲಸ ಮಾಡುವ ಈ ಇಬ್ಬರಿಗೆ ಕೇವಲ ಸಿನಿಮಾದ್ದೇ ಧ್ಯಾನ. ಡಾ.ರಾಜ್ಕುಮಾರ್ ಇವರ ಮೆಚ್ಚಿನ ನಟ. ಇದೇ ಪ್ರತಿಭೆಯಿಂದ ಇವರು ಸಿನಿಮಾ ನಿರ್ಮಾಣಕ್ಕೂ ಇಳಿಯುತ್ತಾರೆ. ನಿರ್ಮಾಪಕನನ್ನು ಹಿಡಿದು ಸಿನಿಮಾ ಮಾಡ್ತಾರಾ ಅನ್ನೋದೇ ಮಧ್ಯಂತರ ಕಿರುಚಿತ್ರದ ಕಥೆ.
Be the first to comment on "ಬಸ್ತಿ ದಿನೇಶ್ ಶೆಣೈ ಅವರಿಗೆ ಸಿನಿಮಾ ನಿರ್ದೇಶನಕ್ಕಾಗಿ ರಾಷ್ಟ್ರಪ್ರಶಸ್ತಿ ಪ್ರದಾನ"