ಬಂಟ್ವಾಳ : ಬಂಟ್ವಾಳ ತಾ. ಇರ್ವತ್ತೂರುಪದವು ಶ್ರೀ ಶಾರದೋತ್ಸವ ಸೇವಾ ಸಮಿತಿ ವತಿಯಿಂದ 8ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ ಪ್ರಯುಕ್ತ ಮೂಡುಪಡುಕೋಡಿ ಸ.ಹಿ.ಪ್ರಾ.ಶಾಲಾ ಮೈದಾನದಲ್ಲಿ ಶಾಶ್ವತ ಬಯಲು ರಂಗ ಮಂದಿರ ನಿರ್ಮಾಣಕ್ಕಾಗಿ ದಸರಾ ಕ್ರೀಡೋತ್ಸವ ಅ.6ರಂದು ಮೂಡುಪಡುಕೋಡಿ ಶಾಲಾ ಮೈದಾನದಲ್ಲಿ ಮತ್ತು ಅ.9ರಂದು ಶ್ರೀ ಶಾರದಾ ಪೂಜಾ ಮಹೋತ್ಸವ ಶಾಲಾ ವಠಾರದಲ್ಲಿ ಜರಗಲಿದೆ ಎಂದು ಸಮಿತಿ ಅಧ್ಯಕ್ಷ ಡಾ. ರಾಮಕೃಷ್ಣ ಎಸ್. ಅವರು ತಿಳಿಸಿದ್ದಾರೆ.
ಅವರು ಗುರುವಾರ ಬಿ.ಸಿ.ರೋಡ್ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಸಮಿತಿಯು ಕೇವಲ ಶ್ರೀ ಶಾರದಾ ಪೂಜೆ ಮಾತ್ರವಲ್ಲದೆ ಸಮಾಜದ ಸರ್ವೊತೋಮುಖ ಪ್ರಗತಿಗೆ ಪೂರಕವಾಗಿ ಶಾಲೆ ಬಳಿ ಬ್ಯಾರಿಕೇಡ್ ಅಳವಡಿಕೆ, ಕೊರೊನಾ ಸಂದರ್ಭ ಕಿಟ್ ವಿತರಣೆ, ಆರೋಗ್ಯ, ರಕ್ತದಾನ ಶಬಿರಗಳ ಆಯೋಜನೆ, ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೆಸರುಗದ್ದೆ ಕ್ರೀಡಾಕೂಟ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸಮ್ಮಾನ, ಕ್ಷಯ ರೋಗಿಗಳಿಗೆ ಕಿಟ್ ವಿತರಣೆ, ವಿದ್ಯಾರ್ಥಿಗಳಿಗೆ ಗಿಡ ವಿತರಣೆ ಹಾಗೂ ಅಂಬ್ಯುಲೆನ್ಸ್ ಸೇವಾಯೋಜನೆ ಮೊದಲಾದ ನಿರಂತರ ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ ಎಂದು ಹೇಳಿದರು.
ಈ ಬಾರಿ ಕ್ರೀಡಾ ಕೂಟ, ಕ್ಯಾನ್ಸರ್ ಜಾಗೃತಿ ಅಭಿಯಾನ, ಸಾಧಕರಿಗೆ ಸಮ್ಮಾನ ಹಾಗೂ ಆಹಾರ ಮೇಳ ನಡೆಯಲಿದ್ದು, ಮಂಗಳೂರು ಎಂಐಒ ಕ್ಯಾನ್ಸರ್ ಆಸ್ಪತ್ರೆಯ ಮುಖ್ಯಸ್ಥ ಡಾ.ಸುರೇಶ್ ರಾವ್ ಕ್ಯಾನ್ಸರ್ ಜಾಗೃತಿ ಜಾಥ ಉದ್ಘಾಟಿಸುವರು. ಹೊಕ್ಕಾಡಿಗೋಳಿ ಕಂಬಳ ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಗುಂಡ್ಯಾರು ಕ್ರೀಡಾ ಕೂಟ ಉದ್ಘಾಟಿಸುವರು. ಸಂಜೆ ಸಮಾರೋಪದಲ್ಲಿ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅಧ್ಯಕ್ಷತೆ ವಹಿಸುವರು. ರಾತ್ರಿ ಹೊನಲು ಬೆಳಕಿನ ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯಾಟವನ್ನು ಉದ್ಯಮಿ ಭುವನೇಶ್ ಪಚ್ಚಿನಡ್ಕ ಉದ್ಘಾಟಿಸುವರು.ಮಾಜಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಲಿರುವರು. ಈ ಸಂದರ್ಭದಲ್ಲಿ ಸಾಧಕರಾದ ಡಾ.ದುರ್ಗಾಪ್ರಸಾದ್ ಎಂ.ಆರ್., ಹಂಝ ಬಸ್ತಿಕೋಡಿ, ನೆಲ್ವಿಸ್ಟರ್ ಗ್ಲ್ಯಾನ್ ಪಿಂಟೋ, ದಿವಾಕರ ಉಪ್ಪಳ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ಎಲ್ ಕೆಜಿ ಮಕ್ಕಳ ಸಹಿತ ಶಾಲಾ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಪುರುಷರಿಗೆ ಆಟೋಟ ಸ್ಪರ್ಧೆ, ವಾಲಿಬಾಲ್, ಕ್ರಿಕೆಟ್,ಕಬಡ್ಡಿ, ತ್ರೋಬಾಲ್, ಹಗ್ಗ ಜಗ್ಗಾಟ ಪಂದ್ಯಾಟಗಳು ನಡೆಯಲಿದೆ ಎಂದರು.
ಶ್ರೀ ಶಾರದಾ ಪೂಜಾ ಮಹೋತ್ಸವವು ಅ.9 ರಂದು ವೇ.ಮೂ.ಗೋವಿಂದ ಭಟ್ ಕರಿಮಲೆ ಅವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಬೆಳಗ್ಗೆ ಪ್ರತಿಷ್ಠೆ , ಭಜನೆ, ಬಳಿಕ ಧಾರ್ಮಿಕ ಸಭೆ ನಡೆಯಲಿದ್ದು, ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ, ನಿವೃತ್ತ ಮುಖ್ಯ ಶಿಕ್ಷಕಿ, ಹಿರಿಯ ಯಕ್ಷಗಾನ ಕಲಾವಿದೆ, ಸಾಹಿತಿ ರತ್ನಾ ಭಟ್ ತಲಂಜೇರಿ ಅವರಿಗೆ ಶ್ರೀ ಶಾರದಾ ತಿಲಕ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಭೆಯಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿರುವರು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಬಳಿಕ ನೃತ್ಯವೈಭವ, ನಂತರ ಶೋಭಾಯಾತ್ರೆ ನಡೆಯಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಶೇಖರ ಪೂಜಾರಿ ಅಗಲ್ದೋಡಿ, ಕಾರ್ಯದರ್ಶಿ ದಯಾನಂದ ಎಸ್.ಎರ್ಮೆನಾಡು, ಕೋಶಾಧಿಕಾರಿ ಸುಪ್ರೀತ್ ಜೈನ್ ಎಡ್ತೂರುಗುತ್ತು, ಉತ್ಸ ವ ಸಮಿತಿ ಅಧ್ಯಕ್ಷ ಹರೀಶ್ ಪೂಜಾರಿ ಎರ್ಮೆನಾಡು, ಗ್ರಾ.ಪಂ.ಸದಸ್ಯ ಸುಧೀಂದ್ರ ಶೆಟ್ಟಿ ಎರ್ಮೆನಾಡು ಉಪಸ್ಥಿತರಿದ್ದರು
Be the first to comment on "ಇರ್ವತ್ತೂರುಪದವು ಶ್ರೀ ಶಾರದೋತ್ಸವ ಸೇವಾ ಸಮಿತಿ; ಅ.6: ದಸರಾ ಕ್ರೀಡೋತ್ಸವ, ಅ.9: ಶ್ರೀ ಶಾರದಾ ಪೂಜಾ ಮಹೋತ್ಸವ"