ಭ್ರಾಮರಿ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ವತಿಯಿಂದ ಏಳನೇ ವರ್ಷದ ಭ್ರಾಮರಿ ಯಕ್ಷವೈಭವ 2024, ಯಕ್ಷ ಛಾಯಾಚಿತ್ರ ಪ್ರದರ್ಶನ, ಪ್ರಶಸ್ತಿ ಪ್ರದಾನ ಮತ್ತು ಉಚಿತ ಯಕ್ಷಗಾನ ಪ್ರದರ್ಶನ ಆ.3 ರಂದು ಸಂಜೆ 4 ಗಂಟೆಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.
ಸಂಜೆ 7 ಗಂಟೆಯಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ವಿವಿ ವಿಶ್ರಾಂತ ಕುಲಪತಿ ಪ್ರೊ| ಕೆ. ಚಿನ್ನಪ್ಪ ಗೌಡ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಡಿ. ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಟಿ.ಜಿ. ರಾಜಾರಾಮ್ ಭಟ್, ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ಸಂಸ್ಥಾಪಕ ರವೀಂದ್ರ ಶೆಟ್ಟಿ ಉಳಿದೊಟ್ಟು, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಅವರು ಭಾಗವಹಿಸಲಿದ್ದಾರೆ.
ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ ಕೈರಂಗಳ ಮತ್ತು ಮನೋಹರ ಎಸ್. ಕುಂದರ್, ಎರ್ಮಾಳ್ ಬಡಾ ಅವರಿಗೆ ‘ಭ್ರಾಮರಿ ಯಕ್ಷಸೇವಾ’ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ.
ಸದಾಶಿವ ಶೆಟ್ಟಿಗಾರ್ ಸಿದ್ಧಕಟ್ಟೆ ಅವರಿಗೆ ‘ಭ್ರಾಮರೀ ಯಕ್ಷಮಣಿ’ ಪ್ರಶಸ್ತಿ
ತೆಂಕುತಿಟ್ಟಿನ ಹಿರಿಯ ಬಣ್ಣದ ವೇಷಧಾರಿ ಸದಾಶಿವ ಶೆಟ್ಟಿಗಾರ್ ಸಿದ್ಧಕಟ್ಟೆ ಅವರಿಗೆ ‘ಭ್ರಾಮರೀ ಯಕ್ಷಮಣಿ’ ಪ್ರಶಸ್ತಿಯನ್ನು ಪ್ರದಾನಿಸಲಾಗುತ್ತದೆ.
ಬಣ್ಣದ ವೇಷದ ಪರಂಪರೆಯ ನಡೆ ಹಾಗೂ ಕ್ರಮಗಳನ್ನು ಅರಿತ ಕೆಲವೇ ಮಂದಿಯ ಪೈಕಿ ಅಗ್ರಣಿಯಾಗಿ ತೆಂಕುತಿಟ್ಟಿನ ಇತಿಹಾಸದಲ್ಲಿ ಛಾಪು ಮೂಡಿಸಿದ ಹಿರಿಯ ಕಲಾವಿದ ಸದಾಶಿವ ಶೆಟ್ಟಿಗಾರ್ ಅವರು ಹಿರಿಯ ಕಲಾವಿದ ರೆಂಜಾಳ ರಾಮಕೃಷ್ಣ ರಾವ್‌ರಿಂದ ಹೆಜ್ಜೆಗಾರಿಕೆ ಅಭ್ಯಸಿಸಿ, ಮಹಾನ್ ಕಲಾವಿದ ದಿ| ಬಣ್ಣದ ಮಹಾಲಿಂಗರಿಂದ ಬಣ್ಣದ ವೇಷದ ಕಲೆಯನ್ನು ಕರಗತ ಮಾಡಿಕೊಂಡವರು. ಶ್ರೀ ಕಟೀಲು ಮೇಳದಲ್ಲಿ ಯಕ್ಷಯಾತ್ರೆ ಆರಂಭಿಸಿದ ತಾವು ೧೦ ವರ್ಷದ ಬಳಿಕ ಶ್ರೀ ಧರ್ಮಸ್ಥಳ ಮೇಳದಲ್ಲಿ ೧೩ ವರ್ಷ, ಹೊಸನಗರ ೧೦ ವರ್ಷ, ಎಡನೀರು ೧ ವರ್ಷ, ಕಳೆದ ೭ ವರ್ಷಗಳಿಂದ ಶ್ರೀ ಹನುಮಗಿರಿ ಮೇಳದಲ್ಲಿ ಬಣ್ಣದ ವೇಷಧಾರಿಯಾಗಿ ಒಟ್ಟು ೪೧ ವಸಂತಗಳ ತಿರುಗಾಟ ಪೂರೈಸಿರುವುದು ಕಲಾಲೋಕಕ್ಕೆ ಕೊಡುಗೆ. ರಾವಣ, ಕುಂಭಕರ್ಣ, ಮಹಿಷಾಸುರ, ವರಾಹ, ಸಿಂಹ, ಗಜೇಂದ್ರ ಮುಂತಾದ ಬಣ್ಣದ ವೇಷಗಳು, ಶೂರ್ಪನಖಿ, ಅಜಮುಖ, ಪೂತನಿ, ಪ್ರತ್ರಜ್ವಾಲೆ ಮುಂತಾದ ಹೆಣ್ಣು ಬಣ್ಣ ಪಾತ್ರಗಳಿಗೆ ಜೀವ ತುಂಬಿದವರು ತಾವು. ಶ್ರೀರಾಮ ಕಾರುಣ್ಯ ಪ್ರಸಂಗದ ಕಾಕಾಸುರನ ಪಾತ್ರ ಅವರ ಕಲ್ಪನೆಯ ಕೂಸಾಗಿದೆ.
ಯಕ್ಷ ವೈಭವ
ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ರಾತ್ರಿ ೯ ಗಂಟೆಯಿಂದ ಮರುದಿನ ಬೆಳಗ್ಗೆ ೬ ಗಂಟೆಯವರೆಗೆ ಯಕ್ಷ ವೈಭವ ನಡೆಯಲಿದ್ದು, ರಾತ್ರಿ 9 ರಿಂದ 11ರವರೆಗೆ ಪಂಚವಟಿ ಪ್ರಸಂಗ, 11 ರಿಂದ 2ಗಂಟೆಯವರೆಗೆ ಕಂಸ ವಿವಾಹ, 2 ರಿಂದ 3.30ರವರೆಗೆ ಸುದನ್ವ ಮೋಕ್ಷ ಮತ್ತು 3.30 ರಿಂದ ಬೆಳಗ್ಗೆ 6 ಗಂಟೆಯವರೆಗೆ ಮಹಿರಾವಣ ಕಾಳಗ ಯಕ್ಷಗಾನ ಉಚಿತವಾಗಿ ಪ್ರದರ್ಶನಗೊಳ್ಳಲಿದೆ.
ಯಕ್ಷ ಛಾಯಾಚಿತ್ರ ಪ್ರದರ್ಶನ
ಐದು ಲಕ್ಷಕ್ಕೂ ಅಧಿಕ ಛಾಯಾಚಿತ್ರಗಳ ಸಂಗ್ರಹಣೆಯನ್ನು ಹೊಂದಿರುವ ಸಂಪನ್ಮೂಲ ವ್ಯಕ್ತಿ ಬಡಾ ಎರ್ಮಾಳ್ ಮನೋಹರ ಕುಂದರ್ ಅವರ ಅಪೂರ್ವ ಯಕ್ಷಛಾಯಾಚಿತ್ರಗಳ ಪ್ರದರ್ಶನ ಸಂಜೆ ೪ ರಿಂದ ಪುರಭವನದಲ್ಲಿ ಜರಗಲಿದೆ.
Be the first to comment on "ಸದಾಶಿವ ಶೆಟ್ಟಿಗಾರ್ ಸಿದ್ಧಕಟ್ಟೆ ಅವರಿಗೆ ‘ಭ್ರಾಮರೀ ಯಕ್ಷಮಣಿ’ ಪ್ರಶಸ್ತಿ: ಆ.3ರಂದು ಮಂಗಳೂರು ಪುರಭವನದಲ್ಲಿ ‘ಭ್ರಾಮರಿ ಯಕ್ಷ ವೈಭವ’"