BCROAD KAIKUNJE ಬಿ.ಸಿ.ರೋಡ್ ಕೈಕುಂಜೆ ರಸ್ತೆಯ ಪಕ್ಕದಲ್ಲಿ ಕನ್ನಡ ಭವನದ ಪಕ್ಕ ಖಾಲಿ ಜಾಗದಲ್ಲಿ ಪ್ರತಿ ರಾತ್ರಿ ಕೆಲಸ ಮುಗಿಸಿ ಕ್ರೇನ್ ಗಳನ್ನು ನಿಲ್ಲಿಸಲಾಗುತ್ತಿತ್ತು. ಎಂದಿನಂತೆಯೇ ಬುಧವಾರ ರಾತ್ರಿ ವಾಹನಗಳನ್ನು ನಿಲ್ಲಿಸಿದ್ದು, ಗುರುವಾರ ಬೆಳಗಿನ ಜಾವ ನೋಡಿದಾಗ ಅದರ ಬಾಗಿಲು ಒಡೆದು, ಕ್ರೇನ್ ನಲ್ಲಿದ್ದ ಬ್ಯಾಟರಿಗಳನ್ನು ಯಾರೋ ಕಳ್ಳರು ಕೊಂಡೊಯ್ದಿದ್ದಾರೆ. ಸಾಮಾನ್ಯವಾಗಿ ಈ ಭಾಗದಲ್ಲಿ ರಾತ್ರಿವರೆಗೂ ಸಾರ್ವಜನಿಕರು ಸಂಚರಿಸುತ್ತಿರುತ್ತಾರೆ. ಆದರೆ ಸುರಿಯುತ್ತಿರುವ ಮಳೆ ಕಳ್ಳರಿಗೆ ವರದಾನವಾಗಿದೆ. ಯಾರಿಗೂ ಗೊತ್ತಾಗದಂತೆ ಬ್ಯಾಟರಿಗಳನ್ನು ಕದ್ದೊಯ್ದಿದ್ದಾರೆ. ಕಳವಾದ ಜಾಗ ಬಂಟ್ವಾಳ ನಗರ ಪೊಲೀಸ್ ಠಾಣೆ, ಪೊಲೀಸ್ ಕ್ವಾರ್ಟಸ್ ನ ಅನತಿದೂರದಲ್ಲೇ ಇದ್ದರೂ ಕಳ್ಳರು ನಿರ್ಭೀತಿಯಿಂದ ಕೃತ್ಯ ಎಸಗಿದ್ದಾರೆ. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಕ್ರೇನ್ ಮಾಲೀಕರು ದೂರು ನೀಡಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಪ್ರಕರಣಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಕುರಿತು ಸಾರ್ವಜನಿಕರು ಏನು ಹೇಳುತ್ತಾರೆ?
ಪ್ರತಿ ಬಾರಿ ಮಂಗಳೂರಿನಂಥ ಪ್ರದೇಶಗಳಲ್ಲಿ ಮನೆಯೊಳಗೆ ನುಗ್ಗಿ ದರೋಡೆ, ಕಳವು ಕೃತ್ಯಗಳು ನಡೆದಾಗಲೆಲ್ಲಾ ಬಿ.ಸಿ.ರೋಡ್ ನ ಬಡಾವಣೆಗಳ ನಿವಾಸಿಗಳು ಪೊಲೀಸರಿಗೆ ತಮ್ಮ ಭಾಗದ ಬೀಟ್ ವ್ಯವಸ್ಥೆ ಬಲಗೊಳಿಸಬೇಕು ಎಂಬ ಮೊರೆ ಇಡುತ್ತಾರೆ. ಇದಕ್ಕೆ ಪೊಲೀಸ್ ಅಧಿಕಾರಿಗಳು ನಗರ ಠಾಣೆಯ ಸಂಖ್ಯೆ ನೀಡಿ, ಏನಾದರು ಆದರೆ, ಈ ನಂಬರ್ ಗೆ ಕರೆ ಮಾಡಬಹುದು ಎಂದು ಅಭಯ ನೀಡುತ್ತಾರೆ. ಆದರೆ ನಾಗರಿಕರು ಅಂಥ ಕೃತ್ಯಗಳು ರಾತ್ರಿ ವೇಳೆ ನಡೆಯದಂತೆ ಪೊಲೀಸರು ಗಸ್ತು ವ್ಯವಸ್ಥೆಯನ್ನು ಬಲಪಡಿಸಬೇಕು, ಹಿಂದೆ ಇದ್ದಂತೆ ಮಧ್ಯರಾತ್ರಿಯ ಬೀಟ್ ವ್ಯವಸ್ಥೆಯನ್ನು ಸದೃಢಗೊಳಿಸಬೇಕು, ಹೆಚ್ಚುವರಿ ಸಿಬಂದಿ ನಿಯೋಜಿಸಿ, ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳು ಸಂಚರಿಸುತ್ತಿದ್ದರೆ ಅವರನ್ನು ವಿಚಾರಿಸಬೇಕು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದ ಪರಿಸರಗಳಲ್ಲಿ ಅಪರಿಚಿತರು ಅವೇಳೆಯಲ್ಲಿ ಕಂಡುಬಂದರೆ, ರಾತ್ರಿಯಾದೊಡನೆ ವಿನಾ ಕಾರಣ ಗುಂಪುಗೂಡುವುದು, ಒಬ್ಬಂಟಿಯಾಗಿ ಒಂದೆಡೆ ಕುಳಿತಿರುವವರನ್ನು ಕಂಡರೆ ಅವರನ್ನು ವಿಚಾರಿಸುವ ಕೆಲಸವನ್ನು ಸಶಕ್ತವಾಗಿ ಹಠಾತ್ ಭೇಟಿ ನೀಡಿ ಮಾಡತೊಡಗಿದರೆ, ಅಪರಿಚಿತರ ಸಂಚಾರ, ಕಳವು ಕೃತ್ಯಗಳಂಥ ಸಮಸ್ಯೆಗಳು ನಿವಾರಣೆ ಆಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
Be the first to comment on "ಕಳ್ಳರಿದ್ದಾರೆ ಎಚ್ಚರಿಕೆ!!! – ಕೈಕುಂಜೆ ಮಾರ್ಗದ ಬದಿಯಲ್ಲೇ ನಿಲ್ಲಿಸಿದ್ದ ಕ್ರೇನ್ ಗಳ ಬ್ಯಾಟರಿ ಕಳವು"