ಬಂಟ್ವಾಳ: ಮಂಗಳವಾರ ರಾತ್ರಿ ಬಿ.ಸಿ.ರೋಡ್ ಹೃದಯಭಾಗವಾದ ಭೂ ಅಭಿವೃದ್ಧಿ ಬ್ಯಾಂಕ್ ಕಟ್ಟಡದ ಪಕ್ಕದಿಂದಲೇ ಹಾದುಹೋದ ಬಿರುಗಾಳಿ ಸ್ಪರ್ಶ ಕಲಾ ಮಂದಿರದವರೆಗೆ ಅನಾಹುತಗಳ ಸರಣಿಯನ್ನೇ ಮಾಡಿತು. ಟ್ಯಾಕ್ಸಿ ನಿಲ್ಲುವ ಜಾಗದಲ್ಲಿ ಪೊಲೀಸ್ ಸ್ಟೇಶನ್ ಗೆ ತೆರಳುವ ಮಾರ್ಗ ಎಂಬ ನಾಮಫಲಕವನ್ನು ಗಾಳಿ ಉರುಳಿಸಿದರೆ, ಮುಂದಕ್ಕೆ ಹಿಂದಿನ ಬಿಡಿಒ ಕಚೇರಿ ಇದ್ದ ಜಾಗದಲ್ಲಿ ನಿಲುಗಡೆಯಾಗಿರುವ ಮಾರುತಿ ಝೆನ್ ಕಾರಿನ ಮೇಲೆ ಮರದ ಗೆಲ್ಲುಗಳು ಕವುಚಿ ಬಿದ್ದಿವೆ. ಹಾಗೆಯೇ ಮುಂದಕ್ಕೆ ತೆರಳಿದ ಗಾಳಿ, ವಿವೇಕನಗರಕ್ಕೆ ತೆರಳುವ ರಸ್ತೆಯಲ್ಲಿ ಎರಡು ವಿದ್ಯುತ್ ಕಂಬಗಳನ್ನು ಉರುಳಿಸಿದರೆ, ಮುಂದೆ ರೈಲ್ವೆ ಮೇಲ್ಸೇತುವೆಯ ಬಳಿ ಬೃಹದಾದ 3 ವಿದ್ಯುತ್ ಕಂಬಗಳನ್ನು ನೆಲಕ್ಕುರುಳಿಸಿ ಅನಾಹುತವನ್ನೇ ಮಾಡಿತು. ರಾಷ್ಟ್ರೀಯ ಹೆದ್ದಾರಿ 75ರ ಮೇಲೆಲ್ಲಾ ವಿದ್ಯುತ್ ಕಂಬದ ಜತೆಗಿದ್ದ ವಯರುಗಳು ಬಿದ್ದವು. ಇಷ್ಟಲ್ಲದೆ, ಬಿ.ಸಿ.ರೋಡ್ ಸ್ಪರ್ಶ ಕಲಾ ಮಂದಿರದ ಪ್ರವೇಶದ್ವಾರದ ಸನಿಹವೇ ಇದ್ದ ಬೃಹತ್ ಮರವೊಂದು ಬುಡಸಮೇತ ಉರುಳಿ, ಸ್ಪರ್ಶ ಮಂದಿರ ಒಳಗೆ ಪ್ರವೇಶಿಸಲೂ ಆಗದಂಥ ವಾತಾವರಣ ನಿರ್ಮಾಣವಾಯಿತು.
ಘಟನೆ ನಡೆದ ಕೂಡಲೇ ಕಂದಾಯ, ಅಗ್ನಿಶಾಮಕ, ಮೆಸ್ಕಾಂ ಸಹಿತ ವಿವಿಧ ಇಲಾಖಾಧಿಕಾರಿಗಳು, ಸಾರ್ವಜನಿಕರು ಸೇರಿ ತತ್ ಕ್ಷಣದ ಕ್ರಮಗಳನ್ನು ಕೈಗೊಂಡರು. ಮಧ್ಯರಾತ್ರಿ ವೇಳೆ ಬಿ.ಸಿ.ರೋಢ್ ಭಾಗಕ್ಕೆ ವಿದ್ಯುತ್ ಪೂರೈಸಲಾದರೆ, ಗೂಡಿನಬಳಿ, ಪೃಥ್ವಿ ನರ್ಸಿಂಗ್ ಹೋಂ ಪರಿಸರದಲ್ಲಿ ಬುಧವಾರ ಬೆಳಗ್ಗಿನಿಂದಲೇ ಪೂರಕ ಕೆಲಸಗಳನ್ನು ಮಾಡುವುದನ್ನು ಆರಂಭಿಸಲಾಗಿದೆ. ಘಟನೆಯಿಂದ ತಡರಾತ್ರಿವರೆಗೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಬಂಟ್ವಾಳ ಪೊಲೀಸ್ ಸಿಬಂದಿ ಸಾರ್ವಜನಿಕರ ಸಹಾಯದಿಂದ ನಿಯಂತ್ರಣಕ್ಕೆ ತಂದರು.
Be the first to comment on "UPDATE: ಉರುಳಿದ ನಾಮಫಲಕ, ಮರಗಳು, ವಿದ್ಯುತ್ ಕಂಬಗಳು: ಬಿ.ಸಿ.ರೋಡ್ ಬಿರುಗಾಳಿಗೆ ಅನಾಹುತಗಳ ಸರಣಿ — DETAILS"