ಬಂಟ್ವಾಳ: ಬಂಟ್ವಾಳ ತಾಲೂಕಿನಾದ್ಯಂತ ಮಳೆಯಾಗುತ್ತಿದ್ದು, ಬುಧವಾರ ರಾತ್ರಿ ಗಾಳಿ ಮಳೆ ಸುರಿಯಿತು. ಈ ಮಧ್ಯೆ ನೇತ್ರಾವತಿ ನದಿ ನೀರಿನ ಮಟ್ಟ ಬುಧವಾರ ರಾತ್ರಿ 7.3 ಮೀಟರ್ ಗೆ ಏರಿಕೆ ಕಂಡಿದ್ದರೆ, ಗುರುವಾರ ಬೆಳಗಿನ ಜಾವ 7.8 ಮೀಟರ್ ಗೆ ತಲುಪಿತ್ತು. ಅಪಾಯದ ಮಟ್ಟ 8.5 ಆಗಿದೆ. ಈ ಹಿನ್ನೆಲೆಯಲ್ಲಿ ತೀರ ಪ್ರದೇಶವಾದ ಪಾಣೆಮಂಗಳೂರಿನ ಆಲಡ್ಕದ 10 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ತುಂಬೆಯ ಎಲ್ಲ ಗೇಟ್ ಗಳನ್ನು ತೆರೆಯಲಾಗಿದೆ. ಇನ್ನುಳಿದಂತೆ ಅಪಾಯದ ಮಟ್ಟ ಸಂಭವಿಸಿದರೆ, ಉಳಿದ ಸಂಭ್ಯಾವ್ಯ ಅಪಾಯದ ಜಾಗದಲ್ಲಿ ವಾಸಿಸುವವರಿಗೂ ಸೂಚನೆ ನೀಡಲಾಗಿದ್ದು, ತಾಲೂಕಾಡಳಿತ ಯಾವುದೇ ಅಪಾಯವನ್ನು ಎದುರಿಸಲು ಸನ್ನದ್ಧವಾಗಿದೆ. ಬಂಟ್ವಾಳದ ಕಂಚಿಕಾರಪೇಟೆ ಸಹಿತ ನೇತ್ರಾವತಿ ನದಿಯ ಬದಿಯಲ್ಲಿ ಮೀನು ಹಿಡಿಯುವುದು, ಫೊಟೋ ತೆಗೆಯುವುದು, ಸೆಲ್ಫೀ ತೆಗೆಯುವ ವೇಳೆ ಅಪಾಯಗಳು ಸಂಭವಿಸುವ ಭೀತಿ ಇರುವ ಕಾರಣ ಇವುಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ತಹಸೀಲ್ದಾರ್ ಅರ್ಚನಾ ಭಟ್ ಸ್ಪಷ್ಟ ಸೂಚನೆ ನೀಡಿದ್ದಾರೆ. ಕೊಳ್ನಾಡು ಗ್ರಾಮದ ಸುರಿಬೈಲಿನ ಖಂಡಿಗ ರಸ್ತೆ ಕೆಳಗಿನ ಮೋರಿ ಮಳೆಯಲ್ಲಿ ಕೊಚ್ಚಿಹೋಗಿದ್ದು, ಅಪಾಯಕಾರಿ ಸ್ಥಿತಿಯಲ್ಲಿ ಸೇತುವೆ ಇದೆ. ಮಳೆಯಿಂದ ಹಲವೆಡೆ ನದಿ ಬದಿಯ ತೋಟಗಳು ಮುಳುಗಡೆಯಾಗುತ್ತಿರುವ ಕುರಿತು ವರದಿಯಾಗಿವೆ.
Be the first to comment on "RAIN UPDATE: ಬಂಟ್ವಾಳ: ಅಬ್ಬರದ ಮಳೆ, ನೇತ್ರಾವತಿ ನೀರಿನ ಮಟ್ಟ ಏರಿಕೆ, ಕೊಳ್ನಾಡಿನ ಸೇತುವೆ ಬಳಿ ಭೂಕುಸಿತ, ನದಿ ಬದಿ ಸೆಲ್ಫೀ, ಈಜು, ಮೀನು ಹಿಡಿಯಬೇಡಿ"