ಮಾಣಿಲದ ಮಾತೃಭೂಮಿ ಯುವ ವೇದಿಕೆ ವತಿಯಿಂದ 3ನೇ ವರ್ಷದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ ಕಾರ್ಯಕ್ರಮ ನಡೆಯಿತು. ಮಾಣಿಲ ಗ್ರಾಮದ ಸುಮಾರು 160 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮತ್ತು ಹತ್ತನೇ ತರಗತಿಯಲ್ಲಿ ಸಾಧನೆಗೈದ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮ ಗಣ್ಯರ ಸಮ್ಮುಖ ನಡೆಯಿತು.
ಮುರುವದ ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಆಯೋಜಿಸಿರುವ ಉಚಿತ ಪುಸ್ತಕ ವಿತರಣಾ ಮತ್ತು ಸನ್ಮಾನ ಸಮಾರಂಭವನ್ನು ವೇದಿಕೆಯ ಮಾರ್ಗದರ್ಶಕ ಮುಖಂಡ ಅರುಣ್ ಕುಮಾರ್ ಪುತ್ತಿಲ ಉದ್ಘಾಟಿಸಿದರು. ಸ್ವಾಮಿ ವಿವೇಕಾನಂದರ ತತ್ವಾದರ್ಶದೊಂದಿಗೆ ಸಂಘದ ಪ್ರೇರಣೆಯ ಜೊತೆಗೆ ಸಮಾನ ಮನಸ್ಕ ಯುವಕರ ತಂಡ ಮಾಡುತ್ತಿರುವ ಕೆಲಸ ಮಾದರಿ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ನಮ್ಮ ಕುಡ್ಲ ವಾಹಿನಿಯ ನಿರೂಪಕಿ ಡಾ ಪ್ರಿಯಾ ಹರೀಶ್ ಮಾತನಾಡಿ, ಮಕ್ಕಳು ಜೀವನದಲ್ಲಿ ಪರಿಶ್ರಮದ ಮುಖಾಂತರ ಗೆಲ್ಲಬೇಕು ಎಂದರು.
ಇನ್ನೋರ್ವ ಅತಿಥಿ ಮುರುವ ನಡುಮನೆ ಮಹಾಬಲ ಭಟ್ ಶುಭ ಹಾರೈಸಿದರು. ಮಾತೃಭೂಮಿ ಯುವ ವೇದಿಕೆಯ ಅಧ್ಯಕ್ಷರಾದ ರಂಜಿತ್ ಕುಮಾರ್ ಮುಜೂರು ಮಾತನಾಡಿ, ಮಕ್ಕಳು ಸಂಸ್ಕಾರಯುತ ಗುಣಗಳನ್ನು ಬೆಳೆಸಿಕೊಂಡು ಸತ್ಪ್ರಜೆಗಳಾಗಿ ಬೆಳೆಸುವಲ್ಲಿ ಪೋಷಕರ ಪಾತ್ರ ಮಹತ್ತರವಾದುದು ಎಂದರು.
ಈ ಸಂದರ್ಭ ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯಶಿಕ್ಷಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಾಲಕೃಷ್ಣ ಮಾಸ್ಟರ್ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ನಡೆಸಲಾಯಿತು. ಈ ಸಂದರ್ಭ ಎಸ್ ಎಸ್ ಎಲ್ ಸಿ ಯಲ್ಲಿ ಮಹತ್ತರ ಸಾಧನೆಗೈದ ಸರಕಾರಿ ಪ್ರೌಢಶಾಲೆ ಮಾಣಿಲದ ವಿದ್ಯಾರ್ಥಿಗಳಾದ ದೀಕ್ಷಿತ, ಕೀರ್ತನ ಎಸ್ ಕುಲಾಲ್ ಹಾಗೂ ಮನೀಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಮೀಕ್ಷಾ ವೈಯಕ್ತಿಕ ಗೀತೆಯನ್ನು ಹಾಡಿದರು. ರವಿ ಮಾಣಿಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾತೃಭೂಮಿ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕುಮಾರ್ ಕೊಂಕೋಡು ಸ್ವಾಗತಿಸಿದರು. ಸಂಚಾಲಕರಾದ ಸುದೇಶ್ ಮಾಣಿಲ ವಂದಿಸಿದರು. ತೀರ್ಥನಾ, ಸ್ಮಿತಾ, ಲಾವಣ್ಯ ಪ್ರಾರ್ಥಿಸಿದರು. ಉಪನ್ಯಾಸಕರಾದ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಮಾಣಿಲದ ಮಾತೃಭೂಮಿ ಯುವ ವೇದಿಕೆಯಿಂದ ಮೂರನೇ ವರ್ಷದ ಪುಸ್ತಕ ಉಚಿತ ವಿತರಣೆ"