ಜೂನ್ 15ರಂದು ಬಿ.ಸಿ.ರೋಡಿಗೆ ಓರಿಗಮಿ ಬಸ್ ಪ್ರವೇಶ, ಏನಿದು ಓರಿಗಮಿ?
ಮುಂಬಯಿಯ ಛತ್ರಪತಿ ಶಿವಾಜಿ ಮಹರಾಜ್ ವಸ್ತುಸಂಗ್ರಹಾಲಯ ಒರಿಗಾಮಿ ಕಲಾಕೃತಿಗಳನ್ನೊಳಗೊಂಡ “ಒರಿಗಮಿ ಬಸ್” ಜೂ.15 ರ ಶನಿವಾರ ಬಂಟ್ವಾಳ ತಾಲೂಕಿಗೆ ಆಗಮಿಸಲಿದ್ದು, ಬಿ.ಸಿ.ರೋಡಿನ ಮಿನಿವಿಧಾನ ಸೌಧದ ಮುಂಭಾಗದಲ್ಲಿ ಶಾಲಾಮಕ್ಕಳು ಹಾಗೂ ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿದೆ. ವಸ್ತುಸಂಗ್ರಹಾಲಯದ ಮ್ಯೂಸಿಯಂ ಆನ್ ವೀಲ್ಸ್ ಕಾರ್ಯಕ್ರಮದ ಅಂಗವಾಗಿ ಸಂಚರಿಸುವ ಈ ಬಸ್ಸಿನಲ್ಲಿ ಒರಿಗಮಿ ಕಲೆ ಕುರಿತಾದ ಕಾಗದದ ಕಲಾಕೃತಿಗಳಿದ್ದು, ಆಸಕ್ತ ವಿದ್ಯಾರ್ಥಿಗಳಿಗೆ ಚಿಕ್ಕ ಅವಧಿಯ ಕಾರ್ಯಾಗಾರವೂ ನಡೆಯಲಿದೆ.
ಬಂಟ್ವಾಳಕ್ಕೆ ಬಂದ ಓರಿಗಾಮಿ ಕಲೆಯ ವೈಶಿಷ್ಟ್ಯ ಹೊತ್ತ ಬಸ್, ಏನಿತ್ತು ಇದರಲ್ಲಿ?
ತಾಲೂಕು ಆಡಳಿತ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ವಿವಿಧ ರೋಟರಿ ಕ್ಲಬ್ ಗಳ ವಿಶೇಷ ಸಹಕಾರದೊಂದಿಗೆ ನಡೆಯುವ ಈ ಕಾರ್ಯಕ್ರಮವನ್ನು ಸಂಸಾರ ಜೋಡುಮಾರ್ಗ ಸಂಸ್ಥೆ ಆಯೋಜಿಸುತ್ತಿದ್ದು, ಬೆಳಿಗ್ಗೆ 9.30 ಕ್ಕೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಉದ್ಘಾಟಿಸುವರು.
ತಹಶೀಲ್ದಾರ್ ಅರ್ಚನಾ ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ,ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪೂಂಜಾಲಕಟ್ಟೆ, ರೋಟರಿ ಜಿಲ್ಲೆ 3181ರ ಇಂಟರ್ಯಾಕ್ಟ್ ಚೇರ್ ಮೆನ್ ರೊ.ಮಂಜುನಾಥ ಆಚಾರ್ಯ ಮೊದಲಾದವರು ಭಾಗವಹಿಸಲಿದ್ದಾರೆ. ಒರಿಗಮಿ ಬಸ್ ಅನ್ನು ಬೆಳಿಗ್ಗೆ 9.30 ರಿಂದ ಅಪರಾಹ್ನ 1 ಗಂಟೆಯವರೆಗೆ ಶಾಲಾ ಮಕ್ಕಳಿಗೆ ಹಾಗೂ ಅಪರಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ ಸಾರ್ವಜನಿಕರು ವೀಕ್ಷಿಸಬಹುದಾಗಿದೆ ಎಂದು ಸಂಸಾರ ಜೋಡುಮಾರ್ಗ ತಂಡದ ನಿರ್ದೇಶಕ ಮೌನೇಶ ವಿಶ್ವಕರ್ಮ ತಿಳಿಸಿದ್ದಾರೆ.
ಒರಿಗಾಮಿ ಒಂದು ರೀತಿಯ ಕಾಗದದ ಕಲೆಯಾಗಿದ್ದು ಅದು ಜಪಾನ್‌ನಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿದೆ. ‘ಕಾಗದವನ್ನು ವಿಧವಿಧ ರೀತಿಯಲ್ಲಿ ಮಡಚಿ ಅದರಲ್ಲಿ ವಿಶಿಷ್ಟವಾದ ಆಕಾರಗಳು ಮತ್ತು ಶಿಲ್ಪಗಳನ್ನು ರಚಿಸುವುದು ಈ ಒರಿಗಮಿ ಕಲೆಯ ವೈಶಿಷ್ಟ್ಯತೆ. ಈ ಒರಿಗಮಿ ಬಸ್ಸಿನಲ್ಲಿ ಗಣಿತ, ವಾಸ್ತುಶಿಲ್ಪ, ಇಂಜಿನಿಯರಿಂಗ್ ಸಹಿತ ಒರಿಗಮಿ ಕಲೆಯ ವಿವಿಧ ಸಾಧ್ಯತೆಗಳನ್ನು ತಿಳಿಸುವ ಪ್ರಯತ್ನ ನಡೆಸಲಾಗಿದೆ
Be the first to comment on "ಜೂನ್ 15ರಂದು ಬಿ.ಸಿ.ರೋಡಿಗೆ ಓರಿಗಮಿ ಬಸ್ ಪ್ರವೇಶ, ಏನಿದು ಓರಿಗಮಿ?"