ಬಂಟ್ವಾಳ: ಸ್ವಸ್ಥ ಭಾರತಕ್ಕಾಗಿ ಸ್ವಚ್ಛ ಪರಿಸರ ವಿಷಯವನ್ನಿಟ್ಟುಕೊಂಡು ರಾಷ್ಟ್ರೀಯ ವಿಚಾರ ಸಂಕಿರಣ ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಶನಿವಾರ ನಡೆಯಿತು. ಅದಮ್ಯ ಚೇತನ ಫೌಂಡೇಶನ್ ಸಂಸ್ಥಾಪಕಿ ತೇಜಸ್ವಿನಿ ಅನಂತಕುಮಾರ್ ಉದ್ಘಾಟಿಸಿದರು.
ವಿದೇಶಗಳಿಗೆ ಹೋಲಿಸಿದರೆ, ಭಾರತದ ಸಂಸ್ಕೃತಿಯಲ್ಲೇ ಪರಿಸರದ ಕುರಿತ ಕಾಳಜಿ ಇದೆ. ಆದರೆ ಮಹಾನಗರಗಳಲ್ಲಿ ವಾಯುಮಾಲಿನ್ಯ ಜಾಸ್ತಿ ಆಗಿದೆ. ದೆಹಲಿ, ಬೆಂಗಳೂರುಗಳಲ್ಲಂತೂ ಮಿತಿ ಮೀರಿದೆ. ಜಗತ್ತಿನ ಹತ್ತು ವಾಯುಮಾಲಿನ್ಯದ ನಗರಗಳಲ್ಲಿ ಎಂಟು ಭಾರತಕ್ಕೆ ಸೇರಿದ್ದು ಎಂಬ ವಿಚಾರ ಆತಂಕಕಾರಿ ಎಂದ ತೇಜಸ್ವಿನಿ, ನಮ್ಮ ಬದುಕಿನಲ್ಲಿ ಪರಿಸರಸ್ನೇಹಿ ವಾತಾವರಣವನ್ನು ನಿರ್ಮಿಸಬೇಕು. ಅಡುಗೆಮನೆಯಿಂದ ಆರಂಭಗೊಂಡು, ನಾವು ಬಳಸುವ ಆಹಾರ, ಪಾತ್ರೆ, ಉಪಯೋಗಿಸುವ ವಸ್ತುಗಳನ್ನು ಪರಿಸರಸ್ನೇಹಿಯನ್ನಾಗಿಸಬೇಕು ಎಂದರು. ಪ್ಲಾಸ್ಟಿಕ್ ಹಾನಿಕಾರಕ ಎಂಬುದು ಗೊತ್ತೇ ಇದೆ. ಆದರೆ ಕಾಗದದ ಲೋಟವೂ ಅಷ್ಟೇ ಹಾನಿಕಾರಕವಾಗಿದೆ. ನಾವು ಉಪಯೋಗಿಸುವ ವಸ್ತುಗಳು ಎಷ್ಟರ ಪ್ರಮಾಣಕ್ಕೆ ಪರಿಸರಸ್ನೇಹಿ ಎಂಬ ಜ್ಞಾನವನ್ನು ನಾವು ರೂಢಿಸಿಕೊಳ್ಳಬೇಕು. ಆದಷ್ಟು ಡಸ್ಟ್ ಬಿನ್ ಗಳಿಗೆ ಕಸ ಕಡಿಮೆ ಹಾಕುವಷ್ಟು ತ್ಯಾಜ್ಯ ಉತ್ಪಾದನೆಯನ್ನು ಕಡಿಮೆ ಮಾಡಿಕೊಳ್ಳೋಣ ಎಂದು ಸಲಹೆ ನೀಡಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಕೃತಿ ರಕ್ಷಣೆ, ಪೋಷಣೆಯಿಂದಾಗಿ ಪರಿಸರ ಉಳಿವು ಸಾಧ್ಯ ಎಂದರು. ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ವಸಂತ ಮಾಧವ, ಪ್ರಿನ್ಸಿಪಾಲ್ ಕೃಷ್ಣಪ್ರಸಾದ ಕಾಯರಕಟ್ಟೆ ಸ್ವಾಗತಿಸಿದರು.
ಜಲ ಮತ್ತು ಮರ ಜಾಗೃತಿಯ ದೇಸಿ ದಾರಿ ಕುರಿತು ಪರಿಸರ ಚಿಂತಕ ಹಾಗೂ ಬರಹಗಾರ ಶಿವಾನಂದ ಕಳವೆ, ವಿಷಮುಕ್ತವಾಗುವತ್ತ ಮಣ್ಣು ಮತ್ತು ಆಹಾರ ಕುರಿತು ಸಾವಯವ ಕೃಷಿಕ ವಸಂತ ಕಜೆ ಮಾತನಾಡಿದರು.
ಸಮಗ್ರ ತ್ಯಾಜ್ಯ ನಿರ್ವಹಣೆಯ ವಿವಿಧ ಆಯಾಮಗಳು ಕುರಿತು ರಾಜ್ಯ ಪರಿಸರ ಆಘಾತ ಅಂದಾಜೀಕರಣ ಪ್ರಾಧಿಕಾರ ನಿಕಟಪೂರ್ವ ಅಧ್ಯಕ್ಷ ಡಾ.ಕೆ.ಆರ್.ಶ್ರೀಹರ್ಷ, ಆರಾಧನೆ ಮತ್ತು ನಂಬಿಕೆಗಳಲ್ಲಿ ಪರಿಸರ ಉಳಿವಿನ ದೃಷ್ಟಿ ಕುರಿತು ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ನರೇಂದ್ರ ರೈ ದೇರ್ಲ, ಪರಿಸರ ಸ್ನೇಹಿ ಜೀವನ ಪದ್ಧತಿ ಕುರಿತು ಪರ್ಯಾವರಣ ಸಂರಕ್ಣಣಾ ಗತಿವಿಧಿ ಪ್ರಾಂತ ಸಂಯೋಜಕ್ ವೆಂಕಟೇಶ ಸಂಗನಾಳ ವಿಚಾರ ಮಂಡಿಸಿದರು. ಪ್ರತೀಕಾ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಸ್ವಸ್ಥ ಭಾರತಕ್ಕಾಗಿ ಸ್ವಚ್ಛ ಪರಿಸರ: ರಾಷ್ಟ್ರೀಯ ವಿಚಾರ ಸಂಕಿರಣ"