ವಿಶ್ವದ ಅಗ್ರ ರಾಷ್ಟ್ರಗಳ ಸಾಲಿನಲ್ಲಿ ಭಾರತವನ್ನು ನಿಲ್ಲಿಸಲು ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗುವ ಮೂಲಕ ದೇಶದ ಅಭಿವೃದ್ಧಿ, ಭದ್ರತೆ ಹಾಗೂ ಸರ್ವತೋಮುಖ ಬೆಳವಣಿಗೆಯ ದೃಷ್ಟಿಯಿಂದ ಮೋದಿಯವರ ʻವಿಕಸಿತ ಭಾರತʼದ ಕಲ್ಪನೆಯನ್ನು ಜಾರಿಗೊಳಿಸುವ ಕಾರಣಕ್ಕೆ ಲೋಕಸಭಾ ಚುನಾವಣೆಯ ಮಹತ್ವಪೂರ್ಣದ್ದಾಗಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.
ಭಾರತೀಯ ಸೇನೆಯ ಹೆಮ್ಮೆಯ ಯೋಧನಾಗಿ ರಾಷ್ಟ್ರೀಯ ಹಿತವನ್ನು ಎತ್ತಿಹಿಡಿಯುವ ಬದ್ಧತೆಯೊಂದಿಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ತಾನು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಿದ್ದೇನೆ. ಈ ನಿಟ್ಟಿನಲ್ಲಿ ಕ್ಷೇತ್ರದ ಆದ್ಯತೆಗಳು ಮತ್ತು ಜನರ ಅಗತ್ಯಗಳನ್ನು ಗುರುತಿಸಿ ಅವುಗಳ ಈಡೇರಿಕೆ ನಿಟ್ಟಿನಲ್ಲಿ ಸಮಗ್ರ ಅಧ್ಯಯನದೊಂದಿಗೆ ಪ್ರಾಮಾಣಿಕ ಪ್ರಯತ್ನ ನಡೆಸುವ ಮೂಲಕ ‘ವಿಕಸಿತ ದಕ್ಷಿಣ ಕನ್ನಡʼದ ಸಂಕಲ್ಪದೊAದಿಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಒಂಬತ್ತು ಅಂಶಗಳ ʻನವಯುಗ – ನವಪಥʼ ಎನ್ನುವ ದೂರದೃಷ್ಠಿಯ ಕಾರ್ಯಸೂಚಿಯನ್ನು ಬಿಡುಗಡೆ ಮಾಡಲಾಗಿದೆ ಎಂದರು
ಪ್ರಧಾನಿ ನರೇಂದ್ರ ಮೋದಿಯವರು ಹೇಗೆ ದೇಶದ ಉನ್ನತಿಯಲ್ಲಿ ನಾರೀ ಶಕ್ತಿಯ ಸಹಭಾಗಿತ್ವದ ಮಹತ್ವವನ್ನು ಗುರುತಿಸಿ ಮಹಿಳೆಯರಿಗೆ ವಿಶೇಷ ಆದ್ಯತೆ ಮತ್ತು ಅವಕಾಶಗಳನ್ನು ನೀಡುತ್ತಿರುವಂತೆಯೇ ತಾನು ಕೂಡ ಮಹಿಳೆಯರ ಬಗೆಗೆ ವಿಶೇಷ ಗೌರವಾದರಗಳನ್ನು ಇರಿಸಿಕೊಂಡವನಾಗಿದ್ದೇನೆ. ಮಹಿಯರು ಮತ್ತು ಹೆಣ್ಣುಮಕ್ಕಳಲ್ಲಿ ಸುಭದ್ರತೆಯನ್ನು ಖಾತ್ರಿಗೊಳಿಸುವುದು, ಜೊತೆಗೆ ಅವರ ಅಭಿವೃದ್ಧಿ ಚಟುವಟಿಕೆಗಳ ಎಲ್ಲಾ ಕ್ಷೇತ್ರಗಳಲ್ಲೂ ಪ್ರವೇಶಿಸುವ ನಿಟ್ಟಿನಲ್ಲಿ ನೆರವಾಗಲು ನನ್ನದೇ ಆದ ಚಿಂತನೆಗಳನ್ನು ಹೊಂದಿದ್ದೇನೆ. ನನ್ನ ನಾಮಪತ್ರ ಸಲ್ಲಿಕೆಯ ಶುಲ್ಕಕ್ಕಾಗಿ ತಾಯಂದಿರು ದೇಣಿಗೆ ನೀಡಿ ಆಶೀರ್ವದಿಸಿರುವುದು ನನ್ನ ಸಂಕಲ್ಪದ ಸೂರ್ತಿಯನ್ನು ಇಮ್ಮಡಿಗೊಳಿಸಿದೆ ಎಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.
ದಕ್ಷಿಣ ಕನ್ನಡದಲ್ಲಿ ಹೊಸ ಕೈಗಾರಿಕೆಗಳು, ವಿವಿಧ ಕ್ಷೇತ್ರಗಳ ಸಂಶೋಧನೆ ಹಾಗೂ ಅಭಿವೃದ್ಧಿ ಘಟಕಗಳನ್ನು ಸ್ಥಾಪಿಸಲು ಪ್ರಮುಖ ಜಾಗತಿಕ ಕಂಪನಿಗಳನ್ನು ಆಹ್ವಾನಿಸಲಾಗುವುದು. ಬಂಡವಾಳ ಹೂಡಿಕೆಯಾಗುವುದರಿಂದ ಹೆಚ್ಚಿನ ಉದ್ಯೋಗವಕಾಶಗಳು ಸೃಷ್ಟಿಯಾಗಲು ಅವಕಾಶವಾಗಲಿದೆ, ಕೆಲವು ದಶಕಗಳಲ್ಲಿ ದೇಶದ ವಿವಿಧೆಡೆ ಉದ್ಯಮ ಸ್ಥಾಪಿಸಿ ಯಶಸ್ವಿಯಾಗಿರುವ ದಕ್ಷಿಣ ಕನ್ನಡದವರನ್ನು ಮತ್ತೆ ಊರಿಗೆ ಕರೆತಂದು ಸ್ಥಳೀಯವಾಗಿ ಉದ್ಯಮ ಆರಂಭಿಸಿ ಉದ್ಯೋಗ ಸೃಷ್ಟಿಸಲು ಮನವಿ ಮಾಡಲಾಗುವುದು. ದಕ್ಷಿಣ ಕನ್ನಡದ ಪ್ರವಾಸೋದ್ಯ ಕ್ಷೇತ್ರದಲ್ಲಿ ಇರುವ ವಿಶಾಲ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಯೋಜನೆ ರೂಪಿಸಿ ಉದ್ಯೋಗವಕಾಶಗಳನ್ನು ಸೃಷ್ಟಿಸುವುದಲ್ಲದೇ ಆರ್ಥಿಕಶಕ್ತಿಯನ್ನು ಹೆಚ್ಚಿಸುವುದು, ಜಿಲ್ಲೆಯಲ್ಲಿ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಅಡಿಕೆ ಬೆಳೆಗಾರರ ಸಮಸ್ಯೆಗಳು, ಮೀನುಗಾರರ ಸಮಸ್ಯೆಗಳು, ಹೈನುಗಾರರ ಸಮಸ್ಯೆ, ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಸವಾಲುಗಳಿಗೆ ನಿರ್ದಿಷ್ಟ ನೆಲೆಯಲ್ಲಿ ಪರಿಹಾರ ಕಲ್ಪಿಸಲು ಶ್ರಮಿಸಲಿದ್ದೇನೆ. ಹಾಗೆಯೇ ಶೈಕ್ಷಣಿಕ ಕ್ಷೇತ್ರವನ್ನು ಇನ್ನಷ್ಟು ಸಮಗ್ರ ನೆಲೆಯಲ್ಲಿ ಸಶಕ್ತಗೊಳಿಸುವುದು, ಜಿಲ್ಲೆಯ ವಿದ್ಯಾರ್ಥಿ-ಯುವಶಕ್ತಿಗೆ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಉತ್ತೇಜನ ನೀಡಲಾಗುವುದು ಎಂದು ಹೇಳಿದ್ದಾರೆ.
ಕರಾವಳಿ ಬಾಗದ ಜನತೆಯ ಜೊತೆ ನಿರಂತರವಾಗಿ ಸಂವಹನಕ್ಕಾಗಿ CatchUpWithCaptain ಮೂಲಕ ಜನರ ಸಲಹೆಗಳಿಗೆ ಕಿವಿಯಾಗುವ ಜೊತೆಗೆ ಧ್ವನಿಯಾಗುವುದು ನನ್ನ ಆದ್ಯ ಸಂಕಲ್ಪವಾಗಿದೆ. ಜನರ ಜೊತೆ ಬೆರೆಯುವ ಮೂಲಕ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂಬುದು ನನ್ನ ಚಿಂತನೆಯಾಗಿದೆ. ದ.ಕ.ಜಿಲ್ಲೆ ವಿಶಾಲ ಕರಾವಳಿಯನ್ನು ಹೊಂದಿದ್ದು, ಭಯೋತ್ಪಾದನೆ, ಮಾದಕದ್ರವ್ಯ ಪಿಡುಗು ಸೇರಿದಂತೆ ಇಲ್ಲಿನ ಭದ್ರತೆ ಮತ್ತು ಸುರಕ್ಷತೆೆ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇನೆ. ಜಿಲ್ಲೆಯಲ್ಲಿ ಒಂದು ಸೈನಿಕ ಶಾಲೆಯನ್ನು ಸ್ಥಾಪಿಸುವುದು ನನ್ನ ಪ್ರಮುಖ ಕನಸುಗಳಲ್ಲಿ ಒಂದಾಗಿದೆ ಎಂದರು.
ದ.ಕ.ಜಿಲ್ಲೆ ತುಳುನಾಡಾಗಿದ್ದು, ಇದು ದೈವ-ದೇವರುಗಳ ನಾಡು. ಇಲ್ಲಿನ ಸಾಂಸ್ಕೃತಿಕ ಅಸ್ಮಿತೆಗೆ ಬಲ ನೀಡಲು ತುಳುವಿಗೆ ಮನ್ನಣೆ ಲಭಿಸಬೇಕಿದ್ದು, ಈ ನಿಟ್ಟಿನಲ್ಲಿ ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿಯೂ ಬದ್ಧನಾಗಿ ಕೆಲಸ ಮಾಡುವ ಸಂಕಲ್ಪ ನನ್ನದು. ಟೆಂಪಲ್ ಟೂರಿಸಂನ ಅವಕಾಶಗಳ ಬಗೆಗೂ ನನಗೆ ಹಲವು ಚಿಂತನೆಗಳಿದ್ದು, ಇವುಗಳ ಸಾಕಾರದ ಸಂಕಲ್ಪದೊಂದಿಗೆ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಅವರು ಒತ್ತಿ ಹೇಳಿದರು.
ನಾನೊಬ್ಬ ರಾಜಕೀಯ ಹಿನ್ನೆಲೆಯಿಂದ ಬಂದವನಾಗಿರದೆ, ಪ್ರಧಾನಿ ನರೇಂದ್ರ ಮೋದಿಯವರ ರಾಷ್ಟ್ರಸೇವೆಯ ಮಾದರಿಯಿಂದ ಪ್ರೇರಣೆ ಪಡೆದು ರಾಷ್ಟ್ರ-ಜನಸೇವೆಗೆ ಇಳಿದವನಾಗಿದ್ದೇನೆ. ಪ್ರಜಾತಂತ್ರದಲ್ಲಿ ಸರಿದಿಕ್ಕಿನಲ್ಲಿ ಯೋಚಿಸುವ ಮಂದಿ ಸದಾ ಸಕ್ರಿಯವಾಗಿರಬೇಕು ಎಂಬ ಪರಿಕಲ್ಪನೆ ನನ್ನದಾಗಿದ್ದು, ಈ ಪ್ರೇರಣೆಯೊಂದಿಗೇ ನಾನು ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ. ಈ ಹಿನ್ನೆಲೆಯಲ್ಲಿ ದ.ಕ.ಜನತೆ ತನ್ನನ್ನು ಮತಯಂತ್ರದಲ್ಲಿನ ನಂ.3 ಬಟನ್ ಒತ್ತಿ ಆಶೀರ್ವದಿಸಬೇಕೆಂದು ಅವರು ಹೇಳಿಕೆಯಲ್ಲಿ ವಿನಂತಿಸಿದ್ದಾರೆ.
Be the first to comment on "ರಾಷ್ಟ್ರ- ಜನಸೇವೆಯಲ್ಲಿ ಪ್ರಧಾನಿ ಮೋದಿ ಪ್ರೇರಣೆ, ‘ವಿಕಸಿತ ದಕ್ಷಿಣ ಕನ್ನಡʼದ ಸಂಕಲ್ಪದೊಂದಿಗೆ ಸ್ಪರ್ಧೆ: ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ"