ಕುಡಿಯುವ ನೀರಿನ ದುರುಪಯೋಗ ಮಾಡುವುದು ಕಂಡರೆ ನಿರ್ದಾಕ್ಷಿಣ್ಯವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
ಈ ಕುರಿತು ಅವರು ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ. ಬಂಟ್ವಾಳ ಪುರಸಭೆಯ ಕುಡಿಯುವ ನೀರಿಗಾಗಿ ನೇತ್ರಾವತಿ ನದಿಯನ್ನು ಅವಲಂಭಿಸಿದ್ದು, ಪ್ರಸ್ತುತ ಬೇಸಿಗೆ ಕಾಲದಲ್ಲಿ ನೇತ್ರಾವಲ್ಲಿ ನದಿಯಲ್ಲಿ ನೀರಿನ ಒಳ ಹರಿವು ಕಡಿಮೆ ಆಗಿರುವುದರಿಂದ ಸಾರ್ವಜನಿಕರಿಗೆ ನೀರಿನ ಪೂರೈಕೆ ಮಾಡುತ್ತಿದ್ದರೂ, ಮುಂದಕ್ಕೆ ಮಳೆ ಬಾರದೇ ಇದ್ದಲ್ಲಿ ಸೂಕ್ತ ಸಮಯಕ್ಕೆ ನೀರಿನ ಪೂರೈಕೆಗೆ ಅನಾನುಕೂಲವಾಗುವ ಸಂಭವವಿರುತ್ತದೆ. ಸಾರ್ವಜನಿಕರು ಈ ನಿಟ್ಟಿನಲ್ಲಿ ಕುಡಿಯುವ ನೀರನ್ನು ಕೃಷಿ, ಕೈಗಾರಿಕೆ, ವಾಣಿಜ್ಯ ಉದ್ದೇಶಕ್ಕೆ ಬಳಸದೆ ಅವಶ್ಯಕತೆಗೆ ತಕ್ಕಂತೆ ಮಿತವಾಗಿ ಬಳಸಲು ಸೂಚಿಸಲಾಗಿದೆ. ನೀರಿನ ದುರುಪಯೋಗ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭಾ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಪಮಾನ ಏರಿಕೆ ಪರಿಣಾಮ ಬಿಸಿಲ ಝಳಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ಎನ್ನಲಾಗಿರುವ ನೇತ್ರಾವತಿ ನದಿಯಲ್ಲಿ ಒಳಹರಿವು ಹೆಚ್ಚುಕಮ್ಮಿ ನಿಂತುಹೋಗಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿಗೆ ಜಕ್ರಿಬೆಟ್ಟು ಜಾಕ್ವೆಲ್ ಮೂಲಕ ಪ್ರತಿದಿನ 5.6 ಎಂ.ಎಲ್.ಡಿ. ನೀರನ್ನು ಎತ್ತಲಾಗುತ್ತಿದೆ. ಸದ್ಯಕ್ಕೆ ಜಕ್ರಿಬೆಟ್ಟುವಿನಲ್ಲಿ ನೀರಿನ ಶೇಖರಣೆ ಇದೆ. ಕಳೆದ ವರ್ಷ ಹೊಂಡಗಳಲ್ಲಿ ತುಂಬಿದ್ದ ನೀರನ್ನು ಜಾಕ್ ವೆಲ್ ಗೆ ಹರಿಸಲಾಗಿತ್ತು. ಬಂಟ್ವಾಳದ ಐದು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಪೈಕಿ, ನರಿಕೊಂಬು, ಕರೋಪಾಡಿ, ಮಾಣಿ ಮತ್ತು ಸರಪಾಡಿ ಯೋಜನೆಗಳಿಗೆ ನೇತ್ರಾವತಿ ನದಿಯೇ ಬಂಡವಾಳ. ಕಳೆದ ವರ್ಷ ನದಿಯಲ್ಲಿ ನೀರಿನ ಪ್ರಮಾಣ ಕುಸಿದ ಪರಿಣಾಮ, ತೊಂದರೆ ಆಗಿತ್ತು. ಈ ವರ್ಷ ಬಹುಗ್ರಾಮ ವ್ಯಾಪ್ತಿ ಹೆಚ್ಚಿನ ಕಡೆಗಳಲ್ಲಿ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ.
ಶಂಭೂರು ಡ್ಯಾಮ್ ನಿಂದ ನೀರು ಬಿಟ್ಟಿರುವ ಪರಿಣಾಮ, ಬಂಟ್ವಾಳ ತಾಲೂಕಿನ ಕಡೇಶಿವಾಲಯ, ಬರಿಮಾರು, ಅಜಿಲಮೊಗರು, ಸರಪಾಡಿ ಭಾಗಗಳಲ್ಲಿ ನದಿ ನೀರು ಖಾಲಿಯಾಗಿ ಮರಳು ಕಾಣಿಸುತ್ತಿದೆ. ಮಾಣಿ ಮತ್ತು ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಜಾಕ್ ವೆಲ್ ಗಳಿಗೆ ನೀರು ಲಿಫ್ಟ್ ಮಾಡಲು ಕಷ್ಟಸಾಧ್ಯವಾಗುವ ಆತಂಕವೂ ಎದುರಾಗಿದೆ. ಜಕ್ರಿಬೆಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆ ಡ್ಯಾಂ ನಿರ್ಮಾಣಗೊಳ್ಳುತ್ತಿದ್ದು, ಮುಂದಿನವರ್ಷ ನೀರು ಸಂಗ್ರಹಿಸಬಹುದಷ್ಟೇ. ಅದುವರೆಗೆ ಶಂಭೂರಿನಿಂದ ತುಂಬೆವರೆಗೆ ಇರುವ ಸಂಗ್ರಹಿತ ನೀರು, ಸೂರ್ಯನ ಶಾಖ ಎಷ್ಟರವರೆಗೆ ನೀರು ಸಂಗ್ರಹವಾಗುತ್ತದೆ ಎಂಬ ಆತಂಕವೀಗ ಬಂಟ್ವಾಳದ ಜನತೆಗೆ ಎದುರಾಗಿದೆ.
Be the first to comment on "ಬಂಟ್ವಾಳ: ಕುಡಿಯುವ ನೀರು ಮಿತಬಳಕೆಗೆ ಸೂಚನೆ, ದುರ್ಬಳಕೆಯಾದರೆ ಕಠಿಣ ಕ್ರಮ"