ಮಧ್ಯಾಹ್ನ 12ರಿಂದ 3ರವರೆಗೆ ಬಿಸಿಲಿನಲ್ಲಿ ಸಂಚಾರ ಕಡಿಮೆ ಮಾಡಿ…ತಾಪಮಾನ ಹೆಚ್ಚಳ: ಸರಕಾರದ ಮಾರ್ಗಸೂಚಿ ಏನು?

ಕರಾವಳಿ ಸಹಿತ ರಾಜ್ಯಾದ್ಯಂತ ತಾಪಮಾನದಲ್ಲಿ ಏರಿಕೆ ಕಂಡಿದ್ದು, ಮಾಮೂಲಿಗಿಂತ ಎರಡು ಡಿಗ್ರಿ ತಾಪಮಾನ ಜಾಸ್ತಿಯೇ ಕಂಡುಬರುತ್ತಿದೆ. ಇದು ಮನುಷ್ಯ ಹಾಗೂ ಪ್ರಾಣಿಗಳ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು ಈ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಕುರಿತು ಸರ್ಕಾರ ಮಾರ್ಗಸೂಚಿ ನೀಡಿದೆ.

ಜಾಹೀರಾತು

ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಕಲಬುರಗಿ ಭಾಗಗಳಲ್ಲಿ ಉಷ್ಣದ ಅಲೆಗಳ ಹೊಡೆತ ಹೆಚ್ಚಿದ್ದರೆ, ಕಡಲತಡಿಯಲ್ಲಿ ಬಿಸಿಲಿನ ತಾಪ ಜಾಸ್ತಿ. ಕರ್ನಾಟಕ ಸರ್ಕಾರ ಪ್ರಕಟಿಸಿರುವ ಮಾರ್ಗಸೂಚಿ ಹೀಗಿದೆ.

  • ಗರಿಷ್ಠ ತಾಪಮಾನದ ಅವಧಿಯಾದ ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಬಿಸಿಲಿನಲ್ಲಿ ಸಂಚಾರ ಮಾಡಬಾರದು,
  • ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಹೊರಗೆ ಕೆಲಸ ಮಾಡುವುದನ್ನು ಕಡಿಮೆ ಮಾಡಬೇಕು.
  • ದೇಹವನ್ನು ನಿರ್ಜಲೀಕರಣಗೊಳಿಸುವ ಅಲ್ಕೊಹಾಲ್, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯಗಳನ್ನು ಸೇವಿಸಬಾರದು
  • ಪಾರ್ಕ್ ಮಾಡಲಾದ ವಾಹನಗಳಲ್ಲಿ ಮಕ್ಕಳು ಅಥವಾ ಸಾಕುಪ್ರಾಣಿಗಳನ್ನು ಬಿಡಬಾರದು
  • ಬೇಸಿಗೆಗೆ ಸೂಕ್ತವಲ್ಲದ ಉಡುಪು ಧರಿಸಬಾರದು. ಕಪ್ಪು ಬಣ್ಣದ ಉಡುಪು ಧರಿಸಬಾರದು. ಹಾಗಾದರೆ ಏನು ಮಾಡಬೇಕು? ಮುಂದೆ ಓದಿರಿ.
  • ಕಾಲಕಾಲಕ್ಕೆ, ಸಾಕಷ್ಟು ನೀರು ಕುಡಿಯಬೇಕು, ಸಾಧ್ಯವಾದಷ್ಟು ಬಿಸಿ ಮಾಡಿದ ಆಹಾರವನ್ನು ಸೇವಿಸಬೇಕು.
  • ಹತ್ತಿಬಟ್ಟೆಗಳನ್ನು ಧರಿಸಬೇಕು. ಹೊರಗೆ ಹೋಗುವಾಗ ನೀರಿನ ಬಾಟಲಿ ಕೊಂಡೊಯ್ಯಬೇಕು.
  • ನಿಂಬೆ ಪಾನಕ, ಮಜ್ಜಿಗೆ ಮುಂತಾದ ಮನೆಯಲ್ಲಿ ತಯಾರಿಸಿದ ಪಾನೀಯಗಳು ಮತ್ತು ಓ ಆರ್ ಎಸ್ ಬಳಸಬೇಕು
  • ತಣ್ಣೀರು ಸ್ನಾನ ಮಾಡುವುದು ಉತ್ತಮ.
  • ಅನಾರೋಗ್ಯ ಎಂದು ಅನ್ನಿಸಿದರೆ ತಕ್ಷಣ ವೈದ್ಯರನ್ನು ಭೇಟಿಮಾಡಬೇಕು. ತಾಪಮಾನ ಹೆಚ್ಚಳವಾದರೆ ಆರೋಗ್ಯದ ಮೇಲೇನಾಗುತ್ತದೆ? ಮುಂದೆ ಓದಿರಿ.

ಜಾಹೀರಾತು

ಅತೀ ಹೆಚ್ಚು ತಾಪಮಾನದಿಂದ ಆರೋಗ್ಯದ ಮೇಲಾಗುವ ಪರಿಣಾಮಗಳಿವು ನಿರ್ಜಲೀಕರಣ, ಶಾಖ ಸೆಳತ, ಶಾಖದ ಬಳಲಿಕೆ ಮತ್ತು ಶಾಖದ ಅಘಾತದಂತಹ ಆರೋಗ್ಯದ ದುಷ್ಪರಿಣಾಮಗಳು ಉಂಟಾಗುವ ಸಾಧ್ಯತೆಗಳಿದ್ದು, ಅವುಗಳ ರೋಗ ಲಕ್ಷಣಗಳನ್ನು ಹೀಗೆ ಗುರುತಿಸಲಾಗಿದೆ. ಜ್ವರವು 102 °F ಗಿಂತ ಕಡಿಮೆ ಇರುತ್ತದೆ, ಶಾಖದ ಬಳಲಿಕೆಯಿಂದ ಆಯಾಸ, ದೌರ್ಬಲ್ಯ, ತಲೆ ತಿರುಗುವಿಕೆ, ತಲೆ ನೋವು, ವಾಕರಿಕೆ, ವಾಂತಿ, ಸ್ನಾಯು ಸೆಳೆತ ಕಾಣಿಸುತ್ತದೆ. ಅತೀ ಹೆಚ್ಚು ತಾಪಮಾನದಿಂದ ತುತ್ತಾದ ವ್ಯಕ್ತಿಯನ್ನು ನೆರಳಿನ ಅಡಿಯಲ್ಲಿ ತಂಪಾದ ಸ್ಥಳಕ್ಕೆ ಸ್ಥಳಾಂತರಿಸಬೇಕು, ದೇಹದ ಉಷ್ಣತೆಯನ್ನು ತಗ್ಗಿಸಲು ತಲೆಯ ಮೇಲೆ ನೀರನ್ನು ಹಾಕಬೇಕು. ರೋಗ ಲಕ್ಷಣಗಳು ಉಲ್ಬಣಗೊಂಡರೆ ಅಥವಾ ದೀರ್ಘಕಾಲದವರೆಗೆ ಇದ್ದರೆ ಅಥವಾ ವ್ಯಕ್ತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ ವೈದ್ಯರನ್ನು ಕೂಡಲೇ ಸಂಪರ್ಕಿಸಬೇಕು.ಅತೀ ಹೆಚ್ಚು ತಾಪಮಾನಕ್ಕೆ ಸಂಬಂಧಿಸಿದಂತೆ ಅನಾರೋಗ್ಯವನ್ನು ತಡೆಗಟ್ಟಲು ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಕುರಿತು ಸುತ್ತೋಲೆಯಲ್ಲಿ ಮಾಹಿತಿ ನೀಡಲಾಗಿದೆ.ನಗರ, ಪಟ್ಟಣ, ಕೊಳಚೆ ಪ್ರದೇಶಗಳು, ಅತೀ ಹೆಚ್ಚು ತಾಪಮಾನಕ್ಕೆ ತುತ್ತಾಗುವಂತಹ ಹಳ್ಳಿಗಳನ್ನು ಗುರುತಿಸಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಜನಸಂದಣಿ ಇರುವ ಮಾರುಕಟ್ಟೆ, ಬಸ್ ನಿಲ್ದಾಣಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನೆರಳಿನ ಸೌಲಭ್ಯ ಕಲ್ಪಿಸಬೇಕು ಎಂದು ತಿಳಿಸಲಾಗಿದೆ. ಧಾರ್ಮಿಕ ಸ್ಥಳಗಳಲ್ಲಿ ಯಾತ್ರಾರ್ಥಿಗಳಿಗೆ ಸುರಕ್ಷಿತ ಕುಡಿಯುವ ನೀರನ್ನು ಒದಗಿಸಬೇಕು ಹಾಗೂ ತಾತ್ಕಾಲಿಕ ನೆರಳಿನ ಪ್ರದೇಶಗಳನ್ನು ನಿರ್ಮಿಸಬೇಕು. ಆಸ್ಪತ್ರೆಗಳು ಔಷಧಿಗಳ ದಾಸ್ತಾನು ಮತ್ತು ವೈದ್ಯಕೀಯ ಸಿಬ್ಬಂದಿ ಲಭ್ಯ ಇರಬೇಕು ಎಂದು ಹೇಳಲಾಗಿದೆ. ಇನ್ನಷ್ಟು ಮಾಹಿತಿಗಳಿಗೆ ಮುಂದೆ ಓದಿರಿ.

ಪ್ರಾದೇಶಿಕ ಆಯುಕ್ತರು ಹಾಗು ಜಿಲ್ಲಾಧಿಕಾರಿಗಳು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಜಲಾಶಯಗಳಲ್ಲಿ ಇರುವ ನೀರಿನ ಸಂಗ್ರಹಣೆಯನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಆಧ್ಯತೆಯ ಮೇರೆಗೆ ಕಾಯ್ದಿರಿಸಬೇಕು. ಕುಡಿಯುವ ನೀರಿನ ಕೊರತೆ ಉಂಟಾಗುವ ಗ್ರಾಮಗಳನ್ನು ಗುರುತಿಸಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುಬೇಕು ಎಂದು ಸರ್ಕಾರ ತಿಳಿಸಿದೆ.

ಜಾಹೀರಾತು

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Harish Mambady
ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Be the first to comment on "ಮಧ್ಯಾಹ್ನ 12ರಿಂದ 3ರವರೆಗೆ ಬಿಸಿಲಿನಲ್ಲಿ ಸಂಚಾರ ಕಡಿಮೆ ಮಾಡಿ…ತಾಪಮಾನ ಹೆಚ್ಚಳ: ಸರಕಾರದ ಮಾರ್ಗಸೂಚಿ ಏನು?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*