ಬಂಟ್ವಾಳ: ಬೊಳ್ಳಾಯಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ (ನಿ)ಯ 14ನೇ ಶಾಖೆಯನ್ನು ಬಿ.ಸಿ.ರೋಡಿನಲ್ಲಿ ಜಿ.ಕೆ.ಸ್ಮಾರ್ಟ್ ಸಿಟಿಯ ಮೊದಲ ಮಹಡಿಯಲ್ಲಿ ಸೋಲೂರು ಮಠದ ಆರ್ಯ ಈಡಿಗ ಸಂಸ್ಥಾನದ ತೀರ್ಥಾಧಿಪತಿ, ಹೊಸ್ಮಾರು ಬಲ್ಯೊಟ್ಟು ಶ್ರೀಗುರುಕೃಪಾ ಸೇವಾಶ್ರಮದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಸಿದ್ಧಾಂತದ ಅಡಿಯಲ್ಲಿ ಬ್ಯಾಂಕು ಕಾರ್ಯನಿರ್ವಹಿಸುತ್ತಿದ್ದು, ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ವಹಿಸಿ ಮಾತನಾಡಿ, ಬಡವರಿಗೆ ಸಾಲ, ಸೌಲಭ್ಯ ಸರಳವಾಗಿ ದೊರಕಬೇಕು ಎಂಬ ಉದ್ದೇಶದಿಂದ ಈ ಸಂಘ ರಚನೆಯಾಗಿದ್ದು, ಉದ್ದೇಶ ಸಾಧನೆಯಲ್ಲಿ ಸಫಲವಾಗಿದೆ. ಸಂಪೂರ್ಣ ಮಹಿಳೆಯರೇ ಸಿಬಂದಿಗಳಾಗಿ ನಿರ್ವಹಿಸುವ ಈ ಸಹಕಾರ ಸಂಘದಲ್ಲಿ ಶೇ.98ರಷ್ಟು ಸಾಲ ವಸೂಲಾತಿಯಾಗಿ ಉತ್ತಮ ಸಾಧನೆ ತೋರಿದೆ. ವೇಣೂರಿನಲ್ಲಿ ನೂತನ ಶಾಖೆ ಉದ್ಘಾಟನೆಗೆ ಸಿದ್ಧವಾಗಿದೆ. ಇದಕ್ಕೆ ಗ್ರಾಹಕರ ವಿಶ್ವಾಸವೇ ಕಾರಣವಾಗಿದೆ ಎಂದು ಹೇಳಿದರು.
ಬಿ.ಸಿ.ರೋಡ್ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಸೇಫ್ ಲಾಕರ್ ಉದ್ಘಾಟಿಸಿ ಮಾತನಾಡಿ, ಬ್ಯಾಂಕ್ ಬೆಳವಣಿಗೆಗೆ ಸಹಾಯ ನೀಡಲು ಸದಾ ಸಿದ್ಧ ಎಂದು ಹೇಳಿದರು. ಬಂಟ್ವಾಳ ಭೂಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಅರುಣ್ ರೋಷನ್ ಡಿಸೋಜ ಕಂಪ್ಯೂಟರ್ ವ್ಯವಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಇಂದು ರಾಷ್ಟ್ರೀಕೃತ ಬ್ಯಾಂಕುಗಳ ಬದಲು ಸಹಕಾರಿ ಸಂಘಗಳ ಮೇಲೆ ಜನರು ವಿಶ್ವಾಸವಿಟ್ಟಿದ್ದು, ಈ ಹಿನ್ನೆಲೆಯಲ್ಲಿ ಮೂರ್ತೆದಾರರ ಸೌಹಾರ್ದ ಸಹಕಾರಿ ಯಶಸ್ಸು ಗಳಿಸಿದೆ ಎಂದರು.
ಬಂಟ್ವಾಳ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಬಿ.ಸಂಜೀವ ಪೂಜಾರಿ ಗುರುಕೃಪಾ, ಶ್ರೀ ರಕ್ತೇಶ್ವರಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಬಿ.ವಿಶ್ವನಾಥ ಪೂಜಾರಿ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಭಾಗವಹಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನಪಾಲು, ಆಡಳಿತ ಮಂಡಳಿ ನಿರ್ದೇಶಕರಾದ ರಮೇಶ್ ಅನ್ನಪ್ಪಾಡಿ, ವಿಠಲ ಬೆಳ್ಚಾಡ ಚೇಳೂರು, ಅಶೋಕ್ ಪೂಜಾರಿ ಕೋಮಾಲಿ, ಗಿರೀಶ್ ಕುಮಾರ್ ಪೆರ್ವ, ಜಯಶಂಕರ ಕಾನ್ಸಾಲೆ, ಕೆ.ಸುಜಾತಾ ಎಂ, ವಾಣಿ ವಸಂತ, ಅರುಣ್ ಕುಮಾರ್ ಎಂ, ಆಶಿಶ್ ಪೂಜಾರಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಮತಾ ಜಿ. ಸ್ವಾಗತಿಸಿದರು. ಸುಚಿತ್ರಾ ಪ್ರಾರ್ಥಿಸಿದರು. ವಿಜಯಾ ಕೆ. ವಂದಿಸಿದರು. ದಿನೇಶ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭ ಠೇವಣಿ ಪತ್ರ, ಉಳಿತಾಯ ಖಾತೆ ಪತ್ರಗಳನ್ನು ವಿತರಿಸಲಾಯಿತು.
Be the first to comment on "ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 14ನೇ ಶಾಖೆ ಬಿ.ಸಿ.ರೋಡಿನಲ್ಲಿ ಉದ್ಘಾಟನೆ"