ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಈ ಹೆಸರಿನ ಸಂಘಟನೆಯ ವತಿಯಿಂದ ಕೊಡಮಾಡುವ ಮಲಬಾರ್ ವಿಶ್ವ ರಂಗಪುರಸ್ಕಾರ 2024ಕ್ಕೆ ಸಂಘಟಕ ಹಾಗೂ ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಅಧ್ಯಕ್ಷ, ನ್ಯಾಯವಾದಿ ಕಜೆ ರಾಮಚಂದ್ರ ಭಟ್ ಆಯ್ಕೆಯಾಗಿದ್ದಾರೆ.
15ನೇ ವರ್ಷದಲ್ಲಿರುವ ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಅಧ್ಯಕ್ಷರಾಗಿರುವ ಅವರನ್ನು ರಂಗ ಸಂಘಟಕ ನೆಲೆಯಲ್ಲಿ *ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಮತ್ತು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆ ಜಂಟಿಯಾಗಿ ಮಾರ್ಚ್ 26ರಂದು ಈ ಬಾರಿಯ ಮಲಬಾರ್ ವಿಶ್ವ ರಂಗ ಪುರಸ್ಕಾರ- 2024 ನ್ನು ನೀಡಿ ಉಡುಪಿಯಲ್ಲಿ ಗೌರವಿಸಲಿದೆ ಎಂದು ಮಲಬಾರ್ ವಿಶ್ವ ರಂಗ ಪುರಸ್ಕಾರ ಸಮಿತಿ ಸಂಚಾಲಕ ರಾಜೇಶ್ ಭಟ್ ಪಣಿಯಾಡಿ ತಿಳಿಸಿದ್ದಾರೆ.
ಬಿ.ವಿ.ಕಾರಂತ ಹುಟ್ಟೂರಲ್ಲೇ ರಂಗಚಟುವಟಿಕೆ:
ನಾಟಕ ರಂಗದ ಪ್ರತಿಯೊಂದು ಮಜಲುಗಳಲ್ಲೂ ಹೊಸತನವನ್ನು ಹುಡುಕುತ್ತಾ ರಂಗಕ್ರಿಯೆಗಳಿಗೆ ಹೊಸ ಆಯಾಮಗಳನ್ನು ನೀಡುತ್ತಾ ರಂಗ ಪರ್ವದಲ್ಲಿ ಕ್ರಾಂತಿಯನ್ನೇ ಹಬ್ಬಿಸಿದ ರಂಗಗುರು ಬಿ.ವಿ.ಕಾರಂತರು ಹುಟ್ಟಿದ ನೆಲದಲ್ಲೇ ರಂಗಚಟುವಟಿಕೆಗಳನ್ನು ಆಯೋಜಿಸಲು ಟ್ರಸ್ಟ್ ರೂಪಿಸಿ ಮುನ್ನಡೆಸುತ್ತಿರುವವರು ಕಜೆ ರಾಮಚಂದ್ರ ಭಟ್.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿಯ ಬಾಬುಕೋಡಿ ಎಂಬಲ್ಲಿ ಬಿ.ವಿ.ಕಾರಂತರು ಜನಿಸಿದ್ದು, ಅದೇ ಊರಿನಲ್ಲಿ ಜನಿಸಿದ ಕಾರಂತರ ಆಪ್ತ ಗೆಳೆಯ, ಕಲಾರಾಧಕ ಕಜೆ ವೆಂಕಟರಮಣ ಭಟ್ ಅವರ ಪುತ್ರ ರಾಮಚಂದ್ರ ಭಟ್. ಮಂಗಳೂರಿನಲ್ಲಿ 1987ರಲ್ಲಿ ವಕೀಲ ವೃತ್ತಿ ಆರಂಭಿಸಿ ಬಳಿಕ ಬಂಟ್ವಾಳದಲ್ಲಿ ಮುಂದುವರಿಸಿದ ಅವರು, ತಂದೆಯ ಗೆಳೆಯ ಬಿ ವಿ ಕಾರಂತರ ಸಾಧನೆ ಕ್ರಿಯಾ ಶೀಲತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಕಾರಂತರಿಗೆ 1994ರಲ್ಲಿ ಹುಟ್ಟೂರ ಸನ್ಮಾನವನ್ನು ಸಲ್ಲಿಸುವಾಗ ಅವರ ಮೇಲಿನ ಅಭಿಮಾನ ಹೆಚ್ಚಾಯಿತು. ಕಾರಂತರ ಆಪ್ತ ಬಳಗದ ಸದಸ್ಯರಾದ ಕೆ.ಜಿ ಕೃಷ್ಣಮೂರ್ತಿ ಹಾಗೂ ಜಯರಾಮ ಪಾಟೀಲರ ಅಭಿಮತದಂತೆ ಅವರ ಬಾಬುಕೋಡಿ ಪ್ರತಿಷ್ಠಾನ, ಬೆಂಗಳೂರು ಜೊತೆ ಸೇರಿಕೊಂಡು ಕಾರಂತರಿಗೆ ಶ್ರದ್ಧಾಂಜಲಿಪೂರ್ವಕ ನಾಟಕವನ್ನು ಮಂಚಿಯಲ್ಲಿ ಅರ್ಪಿಸಿದರು. ಪ್ರತಿಷ್ಠಾನ ನೀಡಿದ ಪ್ರೇರಣೆಗೆ ಪ್ರತಿಯಾಗಿ 2010ರಲ್ಲಿ ಬಿ.ವಿ. ಕಾರಂತ ರಂಗಭೂಮಿಕ ಟ್ರಸ್ಟ್ ನ್ನು ಗೆಳೆಯರೊಂದಿಗೆ ಸೇರಿ ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೂ ಬಳಗದ ಜೊತೆ ಪ್ರತಿ ವರ್ಷ ದೇಣಿಗೆ ಸಂಗ್ರಹಿಸಿ ಮೂರು ದಿನಗಳ ವಿವಿಧ ಭಾಷೆಗಳ ಆಯ್ದ ಶ್ರೇಷ್ಠ ನಾಟಕಗಳನ್ನು ಕರೆಸಿ ನಾಟಕೋತ್ಸವವನ್ನು ನಡೆಸುತ್ತಾ ಬಂದರು. ಹೀಗೆ ಜನಮಾನಸದಲ್ಲಿ ರಂಗಭೂಮಿಯ ಬಗ್ಗೆ ಆಸಕ್ತಿ ಅಭಿರುಚಿ ಮೂಡಿಸಿ ಒಂದು ದೊಡ್ಡ ಪ್ರೇಕ್ಷಕ ವರ್ಗವನ್ನೇ ಒಂದುಗೂಡಿಸಿ ಕಾರಂತರಿಗೆ ಗೌರವಾರ್ಪಣೆ ಗೈಯುವಲ್ಲಿ ಸಫಲರಾದರು. ಸಹೃದಯಿಗಳ ಸಹಕಾರದಿಂದ ನಿರಂತರವಾಗಿ ವಿವಿಧ ಸಾಂಸ್ಕೃತಿಕ, ಯಕ್ಷಗಾನ, ವಿಚಾರಗೋಷ್ಠಿ, ರಂಗ ಶಿಬಿರಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ಕೈಂಕರ್ಯದಲ್ಲಿ ಮೂರ್ತಿ ದೇರಾಜೆಯಂಥ ರಂಗಕರ್ಮಿಗಳು ಇವರ ಜೊತೆ ಕೈ ಜೋಡಿಸಿದ್ದಾರೆ. ಶಾಲಾ-ಕಾಲೇಜು ಮಕ್ಕಳ ಯಕ್ಷಗಾನ ಸ್ಪರ್ಧೆ, ನಾಟಕ ಸ್ಪರ್ಧೆಯನ್ನೂ ನಡೆಸಿದ್ದಿದೆ. ಮಂಚಿಯನ್ನೊಂದು ಸಾಂಸ್ಕೃತಿಕ ಗ್ರಾಮವನ್ನಾಗಿಸಬೇಕೆಂಬ ಮಹದಾಶೆಯೊಂದಿಗೆ ಸರಕಾರದ ಮೊರೆ ಹೊಕ್ಕು ಒಂದು ಎಕರೆಯಷ್ಟು ಜಾಗ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಈ ನೆಲದಲ್ಲಿ ರಂಗ ಮಂದಿರ, ಪಾರ್ಕ್, ನಾಟಕೋತ್ಸವ, ಶಾಲಾ ಮಕ್ಕಳಿಗಾಗಿ ವಾರಂತ್ಯದ ರಂಗ ಶಿಬಿರ, ವಸ್ತು ಸಂಗ್ರಹಾಲಯ ಹೀಗೆ ಹಲವು ಯೋಜನೆಗಳನ್ನು ಹಾಕಿಕೊಂಡು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಕಾರಂತರ ಹೆಸರನ್ನು ದಿಕ್ ದಿಗಂತಕ್ಕೇರಿಸುವ ನಿಟ್ಟಿನಲ್ಲಿ ಸಂಪೂರ್ಣ ಶ್ರಮ ವಹಿಸುವ ಕನಸು ಕಟ್ಟಿಕೊಂಡಿದ್ದಾರೆ
Be the first to comment on "ಮಲಬಾರ್ ವಿಶ್ವ ರಂಗ ಪುರಸ್ಕಾರ 2024ಕ್ಕೆ ಕಜೆ ರಾಮಚಂದ್ರ ಭಟ್ ಆಯ್ಕೆ"