ದಕ್ಷಿಣ ಕನ್ನಡ, ಉಡುಪಿ ಸಹಿತ ಕರ್ನಾಟಕ ಕರಾವಳಿಯಲ್ಲಿ ಉರಿಸೆಖೆ ಇದ್ದು, ಬಿಸಿಲ ಬೇಗೆಗೆ ಜನತೆ ತತ್ತರಿಸುತ್ತಿದ್ದಾರೆ. ಮಾರ್ಚ್ ತಿಂಗಳಲ್ಲೇ ರಣಬಿಸಿಲಿದ್ದರೆ, ಇನ್ನು ಏಪ್ರಿಲ್ ಗೆ ಹೇಗೋ ಎಂಬ ಸ್ಥಿತಿ. ಈ ನಡುವೆ ಹವಾಮಾನ ಇಲಾಖೆ ತಂಪುಪ್ರಿಯರಿಗೆ ಸಿಹಿಸುದ್ದಿ ನೀಡಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಮಾರ್ಚ್ 20ರಿಂದ ಮಳೆಹನಿಗಳು ಬೀಳುವ ಸಾಧ್ಯತೆ ಇದೆ.
ಮಳೆಯ ಮುನ್ಸೂಚನೆ: ಪ್ರಸ್ತುತ ಹವಾಮಾನ ಪರಿಸ್ಥಿತಿಗಳ ಅನ್ವಯ, 2024ರ 21ನೇ ಮಾರ್ಚ್ ರಿಂದ 24ನೇ ಮಾರ್ಚ್ ಅವಧಿಯಲ್ಲಿ ರಾಜ್ಯದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು ಸಹಿತ ದಕ್ಷಿಣ ಒಳನಾಡಿನಲ್ಲಿ ಮಾರ್ಚ್ 20ರಂದು ಮಳೆಯಾಗುವ ಮುನ್ಸೂಚನೆ ಇದ್ದರೆ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ತುಮಕೂರು ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಬುಧವಾರ (ಮಾರ್ಚ್ 20)ದಿಂದ ಭಾನುವಾರದವರೆಗೆ ಸಣ್ಣ ಪ್ರಮಾಣದ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಾರ್ಚ್ 20ರ ಬಳಿಕ 23ರ ವರೆಗೆ ರಾಜ್ಯದ ನಾನಾ ಭಾಗದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಮಾರ್ಚ್ 22 ರ ಬಳಿಕ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ (ಗಾಳಿಯ ವೇಗ ಗಂಟೆಗೆ30-40 ಕಿಮೀ) ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
Be the first to comment on "ಕರಾವಳಿಯ ರಣಬಿಸಿಲಿಗೆ ತಂಪೆರೆಯುವುದೇ ಮಳೆ? – ಹವಾಮಾನ ಪಲ್ಲಟ ಮುನ್ಸೂಚನೆ"