ದಕ್ಷಿಣ ಕನ್ನಡದಲ್ಲಿ ರೈಲ್ವೆ, ರಸ್ತೆ ಸಹಿತ ಸಮಗ್ರ ಅಭಿವೃದ್ಧಿ – ಬಂಟ್ವಾಳ ರೈಲ್ವೆ ನಿಲ್ದಾಣದಲ್ಲಿ ಸಾಧನೆಗಳ ಪಟ್ಟಿಯನ್ನೇ ಮಂಡಿಸಿದ ಸಂಸದ ನಳಿನ್

ದಕ್ಷಿಣ ಕನ್ನಡ ಸಂಸದನಾದ ಮೇಲೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ತನ್ನ ಪ್ರಯತ್ನದಿಂದ ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವಿರಾರು ಕೋಟಿ ರೂಗಳ ಅಭಿವೃದ್ಧಿಯಾಗಿದೆ.  ಕಣ್ಣು ಬಿಟ್ಟು ನೋಡಿದರೆ ಅದು ಗೊತ್ತಾಗುತ್ತದೆ ಎಂದು ತನ್ನನ್ನು ಟೀಕಿಸುವವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಸಾಧನೆಗಳ ಪಟ್ಟಿಯನ್ನೇ ಮಂಡಿಸಿದ್ದಾರೆ.

ರೂ. 28.49 ಕೋಟಿ ಅನುದಾನದಲ್ಲಿ ನಿರ್ಮಾಣವಾಗಲಿರುವ ಬಂಟವಾಳ ಅಮೃತ್ ಭಾರತ್ ರೈಲ್ವೇ ಸ್ಟೇಷನ್ ನ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ದ.ಕ ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆಯಲ್ಲಿ ನಡೆದ ವರ್ಚುವಲ್ ಕಾರ್ಯಕ್ರಮದ ಮೂಲಕ ಚಾಲನೆ ನೀಡಿದರು, ಈ ಯೋಜನೆಯಡಿ ಬಂಟ್ವಾಳ ರೈಲ್ವೆ ನಿಲ್ದಾಣ ಆಯ್ಕೆಯಾಗುವಲ್ಲಿ ಸಹಕರಿಸಿದ ಸಂಸದರನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಬಂಟ್ವಾಳದ ಜನತೆಯ ಪರವಾಗಿ ಅಭಿನಂದಿಸಿದರು ಈ ಸಂದರ್ಭ ಮಾತನಾಡಿದ ನಳಿನ್, ಕೇಂದ್ರ ಸರಕಾರ ಕೊಡಬೇಕು ಎಂದಾದರೆ, ಲೋಕಸಭೆ ಸದಸ್ಯರ ಪ್ರಯತ್ನ ಬೇಕು ಎಂಬುದು ತಿಳಿದಿರಲಿ ಎಂದ ನಳಿನ್, ಚಾರ್ಮಾಡಿ ಘಾಟಿ ರಸ್ತೆ 350 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ. ಮಾಣಿ ಮೈಸೂರು ರಸ್ತೆ ಅಭಿವೃದ್ಧಿ ಆಗಿದ್ದು, ಇನ್ನು ಚತುಷ್ಪಥವಾಗಲಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿಯಾಗಿದೆ. ದೇಶದ ಏಕೈಕ ಪ್ಲಾಸ್ಟಿಕ್ ಪಾರ್ಕ್ ಮಂಗಳೂರಿನಲ್ಲಿದೆ. ಮಂಗಳೂರು ಸ್ಮಾರ್ಟ್ ಸಿಟಿಯಾಗಿ ಬದಲಾಗುತ್ತಿದ್ದು, ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕೆಲಸ ವೇಗ ಪಡೆದಿದೆ ಎಂದರು.

ತಾನು ಸಂಸದನಾದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ವೇಗದಿಂದ ಆಗಿವೆ. ಕಳೆದ 10 ವರ್ಷಗಳಲ್ಲಿ 2650 ಕೋಟಿ ರೂಗಳನ್ನು ನರೇಂದ್ರ ಮೋದಿ ಸರಕಾರ ಕೊಟ್ಟಿದೆ. ಇದು ತನ್ನ ಪ್ರಯತ್ನದಿಂದ ಆಗಿದೆ. ಪಾಲ್ಘಾಟ್ ನಿಂದ ಮಂಗಳೂರಿನ ಎಲೆಕ್ಟ್ರಿಫಿಕೇಶನ್ ಮುಗಿದಿದೆ. ಪುತ್ತೂರು ರೈಲ್ವೆ ನಿಲ್ದಾಣ ಆದರ್ಶ ಯೋಜನೆಯಡಿ ಅಭಿವೃದ್ಧಿಗೊಂಡರೆ, ಇಂದು ಬಂಟ್ವಾಳ ಮತ್ತು ಸುಬ್ರಹ್ಮಣ್ಯ ಸಂಪೂರ್ಣ ಬದಲಾಗಲಿದೆ. ನೇರಳಕಟ್ಟೆ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

ಅಳಪೆ ಪಡೀಲ್, ಜಪ್ಪು ಕುಡುಪಾಡಿ, ಮಹಾಕಾಳಿಪಡ್ಪು, ಪುತ್ತೂರು ಎಪಿಎಂಸಿ, ವಿವೇಕಾನಂದ ಕಾಲೇಜು ಬಳಿ ಮೇಲ್ಸೇತುವೆ ನಿರ್ಮಾಣ ಕಾರ್ಯಗಳಲ್ಲಿ ಹೆಚ್ಚಿನವು ಆಗಿದ್ದು, ಒಂದೆರಡು ಅಂತಿಮ ಹಂತದಲ್ಲಿದೆ. ವಂದೇ ಭಾರತ್ ರೈಲು ಮಂಗಳೂರಿಗೆ ಬಂದಿದೆ. ತಿರುವನಂತಪುರ ಕಾಸರಗೋಡು ರೈಲು ಈಗ ಮಂಗಳೂರಿಗೆ ವಿಸ್ತರಣೆಗೊಂಡಿದ್ದರೆ, ಗೋವಾ ಮಂಗಳೂರು ಸಂಪರ್ಕ ವಂದೇ ಭಾರತ್ ಆರಂಭವಾಗಿ ಜನಪ್ರಿಯತೆ ಗಳಿಸಿದೆ. ಬೇಡಿಕೆ ಇರುವ ಎಲ್ಲ ಕೆಲಸಗಳೂ ನಡೆಯುತ್ತಿವೆ. ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯಬೇಕಾದ ಕಾರ್ಯಗಳಲ್ಲಿ ಯಡಿಯೂರಪ್ಪ ಸರಕಾರವಿದ್ದಾಗ ನೀಡಿದ ಅನುದಾನದ ಕಾರ್ಯಗಳು ಪೂರ್ಣಗೊಳ್ಳುತ್ತಿವೆ. ಈ ಬಾರಿ 7,524 ಕೋಟಿ ರೂಪಾಯಿ ರಾಜ್ಯದ ರೈಲ್ವೆ ಅಭಿವೃದ್ಧಿಗೆ ಒದಗಿಸಲಾಗಿದೆ, ತನ್ನ ಕ್ಷೇತ್ರದಲ್ಲಿ 2650 ಕೋಟಿ ರೂಪಾಯಿಯ ಕೆಲಸ ರೈಲ್ವೆಗೆ ಸಂಬಂಧಿಸಿ ಆಗಿದೆ ಪರಿವರ್ತಿತ ಭಾರತ, ವಿಕಸಿತ ಭಾರತ ಇಂದು ನಿರ್ಮಾಣವಾಗಿದೆ. ರೈಲ್ವೆ ಕುದುರೆ ವೇಗ ಪಡೆದಿದೆ. ಎಂದು ನಳಿನ್ ಹೇಳಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ತನ್ನ ಕ್ಷೇತ್ರವಾದ ಬಂಟ್ವಾಳದಲ್ಲಿ ರೈಲ್ವೆ ನಿಲ್ದಾಣ ವಿಶ್ವದರ್ಜೆಗೇರುತ್ತಿರುವುದು ಸಂತಸದ ವಿಷಯ. ಮಕ್ಕಳು ಭಾರತದ ಭವಿಷ್ಯ. ಹೀಗಾಗಿ ಈ ಕಾರ್ಯಕ್ರಮದ ಮೂಲಕ ರೈಲ್ವೆಗೆ ಸಂಬಂಧಿಸಿದ ಅರಿವು ಮಕ್ಕಳಿಗೂ ಆಗುತ್ತಿದೆ ಎಂದರು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಈ ಭಾಗಕ್ಕೆ ಕೋಟಿಗಟ್ಟಲೆ ಅನುದಾನ ತಂದಿದ್ದಾಗಿ ನಾಯ್ಕ್ ಹೇಳಿದರು.

ರೈಲ್ವೆಯಲ್ಲಾಗುತ್ತಿರುವ ಬದಲಾವಣೆ ಹಾಗೂ ಭಾರತೀಯ ರೈಲ್ವೆ ಕುರಿತ ಮಾಹಿತಿಯನ್ನು ಭವಿಷ್ಯದ ಜನಾಂಗ ಪಡೆಯಬೇಕಾದ ಅಗತ್ಯವಿದೆ. ಈ ಕಾರಣದಿಂದ ಮಕ್ಕಳಿಗೆ ಪ್ರಬಂಧ ಸಹಿತ ಸ್ಪರ್ಧೆಗಳನ್ನು ಅಯೋಜಿಸಲಾಗಿದ್ದು, ರಾಷ್ಟ್ರದಾದ್ಯಂತ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ವೀಕ್ಷಣೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಶ್ಲಾಘಿಸಿದರು.

ಈ ಸಂದರ್ಭ ರೈಲ್ವೆ ಡಿವಿಝನಲ್ ಇಂಜಿನಿಯರ್ ಸಾವನ್ ಕುಮಾರ್, ಅಸಿಸ್ಟೆಂಟ್ ಕಮರ್ಶಿಯಲ್ ಮ್ಯಾನೇಜರ್ ಉಮೇಶ್ ನಾಯಕ್ ಉಪಸ್ಥಿತರಿದ್ದರು. ಮೈಸೂರಿನ ಮೆಕ್ಯಾನಿಕಲ್ ವಿಭಾಗದ ಕವಿತಾ ಮತ್ತು ಚೀಫ್ ಟಿಕೆಟ್ ಇನ್ಸ್ ಪೆಕ್ಟರ್ ವಿಠಲ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಮಕ್ಕಳ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಾಲೆ, ಕಾಲೇಜು ಮಕ್ಕಳಿಗೆ ನಡೆಸಿದ ಪ್ರಬಂಧ, ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ರೈಲ್ವೆ ಇಲಾಖೆಯ ಕುರಿತ ಮಾಹಿತಿಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ರಾಮದಾಸ ಬಂಟ್ವಾಳ, ಚೆನ್ನಪ್ಪ ಕೋಟ್ಯಾನ್, ದೇವಪ್ಪ ಪೂಜಾರಿ ಸಹಿತ ಪ್ರಮುಖರು ಉಪಸ್ಥಿತರಿದ್ದರು.

 

 

About the Author

Harish Mambady
ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Be the first to comment on "ದಕ್ಷಿಣ ಕನ್ನಡದಲ್ಲಿ ರೈಲ್ವೆ, ರಸ್ತೆ ಸಹಿತ ಸಮಗ್ರ ಅಭಿವೃದ್ಧಿ – ಬಂಟ್ವಾಳ ರೈಲ್ವೆ ನಿಲ್ದಾಣದಲ್ಲಿ ಸಾಧನೆಗಳ ಪಟ್ಟಿಯನ್ನೇ ಮಂಡಿಸಿದ ಸಂಸದ ನಳಿನ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*