KARNATAKA BUDJET 2024: ಕಂದಾಯ ಇಲಾಖೆ ಮತ್ತಷ್ಟು ಡಿಜಿಟಲೀಕೃತ: ಭೂಸುರಕ್ಷಾ ಯೋಜನೆ ಪ್ರಾಯೋಗಿಕವಾಗಿ ಆರಂಭ

ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ವಿಧಾನಸಭೆಯಲ್ಲಿ ಬಜೆಟ್ ಮಂಡಿಸುತ್ತಿದ್ದು, ಕಂದಾಯ ಇಲಾಖೆಗೆ ಸಂಬಂಧಿಸಿದ ವಿವರಗಳು ಇಲ್ಲಿವೆ.

  • ಕಂದಾಯ ಇಲಾಖೆಯ ಭೂಮಿ, ಸರ್ವೆ ಮತ್ತು ನೋಂದಣಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಗಣಕೀಕರಣಗೊಳಿಸಿ, ಶಿಥಿಲಾವಸ್ಥೆಯಲ್ಲಿರುವ ದಾಖಲೆಗಳನ್ನು ಶಾಶ್ವತವಾಗಿ ಉಳಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಲು ಅವಕಾಶವಿರದಂತೆ ಗಣಕೀಕೃತ ದಾಖಲೆಗಳನ್ನು ನಾಗರಿಕರು, ಸ್ವತಃ ಆನ್ಲೈನ್ನಲ್ಲಿ ಪಡೆದುಕೊಳ್ಳಲು ಅನುವಾಗುವಂತೆ ಭೂ ಸುರಕ್ಷಾ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗುವುದು.
  • ಆಕಾರ್‌ಬಂದ್‌ ಮತ್ತು ಆರ್.ಟಿ.ಸಿ. ಯಲ್ಲಿನ ವಿಸ್ತೀರ್ಣವನ್ನು ಹೊಂದಾಣಿಕೆ ಮಾಡುವ ಮೂಲಕ ಹಿಡುವಳಿದಾರರಿಗೆ ತ್ವರಿತ ಸೇವೆ ಒದಗಿಸಲು ಆಕಾರ್‌ಬಂದ್‌ಗಳ ಗಣಕೀಕರಣ ಕಾರ್ಯವನ್ನು ಕೈಗೊಳ್ಳಲಾಗುವುದು.
  • ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಬಹು ಮಾಲೀಕತ್ವವುಳ್ಳ ಪಹಣಿಗಳನ್ನು ಅಳತೆಗೆ ಒಳಪಡಿಸುವ ಮೂಲಕ ಪ್ರತಿ ಹಿಡುವಳಿದಾರರಿಗೆ ಪೋಡಿ ಮಾಡಿ ಪ್ರತ್ಯೇಕ ಆರ್.ಟಿ.ಸಿ.ಯನ್ನು ವಿತರಿಸುವ ಅಭಿಯಾನವನ್ನು ಪ್ರಾರಂಭಿಸಲಾಗಿತ್ತು. ಬಾಕಿ ಉಳಿದಿರುವ ಗ್ರಾಮಗಳನ್ನು ಪೋಡಿ ಅಭಿಯಾನ 2.0 ರಡಿ ಪೋಡಿ ಮುಕ್ತ ಮಾಡಲು ಆದ್ಯತೆ ಮೇರೆಗೆ ಕ್ರಮ ವಹಿಸಲಾಗುವುದು.
  • ದರಖಾಸ್ತು ಪೋಡಿ ಅಭಿಯಾನದಡಿ ರೈತರ ಜಮೀನಿನ ದುರಸ್ತಿ ಪ್ರಕ್ರಿಯೆಯನ್ನು ಸುಗಮಗೊಳಿಸಲು, ಯಾವುದೇ ತಕರಾರು ಇಲ್ಲದೆ ಇರುವ ಜಮೀನುಗಳಿಗೆ ಸರ್ಕಾರದಿಂದ ಸ್ವಯಂ ಪ್ರೇರಿತವಾಗಿ 1 ರಿಂದ 5 ರ ವರೆಗಿನ ದಾಖಲೆಗಳನ್ನು ಸಿದ್ಧಪಡಿಸಲಾಗುವುದು.
  • ರಾಜ್ಯದಲ್ಲಿನ ಸುಮಾರು 30,700 ಗ್ರಾಮ ಠಾಣಾ ಪ್ರದೇಶಗಳನ್ನು ಹಂತ ಹಂತವಾಗಿ ಡ್ರೋನ್ ಮುಖಾಂತರ ಸರ್ವೆ ಮಾಡಿಸಿ ಆಸ್ತಿ ಮತ್ತು ಹಕ್ಕು ದಾಖಲಾತಿಗಳನ್ನು ಭೂ ಮಾಲೀಕರಿಗೆ ವಿತರಿಸುವ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು.
  • ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ನೋಟೀಸುರಹಿತ ಮ್ಯುಟೇಷನ್ಗಳು (ಪೌತಿ ಖಾತೆ ಮತ್ತು ಜೆ-ಸ್ಲಿಪ್ ಮುಖಾಂತರ ಆಗುವ ಮ್ಯುಟೇಷನ್ಗಳನ್ನು ಹೊರತುಪಡಿಸಿ) ನಿಗದಿತ ತಂತ್ರಾಂಶದಲ್ಲಿ ಸ್ವಯಂ-ಚಾಲಿತವಾಗಿ ಅನುಮೋದನೆಯಾಗುವಂತೆ ಕ್ರಮವಹಿಸಲಾಗುವುದು.
  • ಆಧುನಿಕ ಉಪಕರಣಗಳ ಮುಖಾಂತರ ಕಡಿಮೆ ಅವಧಿಯಲ್ಲಿ ಭೂಮಾಪನ ಕಾರ್ಯಗಳನ್ನು ಕೈಗೊಂಡು ನಿಖರವಾದ ಡಿಜಿಟಲ್‌ ದಾಖಲೆಗಳನ್ನು ಸಿದ್ಧಪಡಿಸಿ ಸಾರ್ವಜನಿಕರಿಗೆ ಒದಗಿಸಲಾಗುವುದು ಮತ್ತು ಇದಕ್ಕೆ ಅಗತ್ಯವಾದ ಡ್ರೋನ್‌ ಮತ್ತಿತರ ಉಪಕರಣಗಳನ್ನು ಎಲ್ಲಾ ಜಿಲ್ಲೆಗಳಲ್ಲಿನ ಭೂಮಾಪನಾ ಕಛೇರಿಗಳಿಗೆ ನೀಡಲಾಗುವುದು.
  • ಡಿಜಿ ಕಂದಾಯ ಯೋಜನೆಯಡಿ ಕಂದಾಯ ಇಲಾಖೆಯು ನೀಡುವ ಎಲ್ಲಾ ಸೇವೆಗಳನ್ನು ಪಾರದರ್ಶಕವಾಗಿ ಮತ್ತು ತ್ವರಿತವಾಗಿ ಡಿಜಿಟಲ್ ಪ್ಲಾಟ್ಫಾರಂ ಮೂಲಕ ಸಾರ್ವಜನಿಕರಿಗೆ ಒದಗಿಸಲು ಕ್ರಮ ವಹಿಸಲಾಗುವುದು. ಇ-ಆಫೀಸ್ ವ್ಯವಸ್ಥೆಯನ್ನು, ಇಲಾಖೆಯ ಗ್ರಾಮಮಟ್ಟದವರೆಗೆ ವಿಸ್ತರಿಸಲಾಗುವುದು ಮತ್ತು ಇದಕ್ಕಾಗಿ ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರಿಗೆ ಲ್ಯಾಪ್ಟಾಪ್ ನೀಡಲಾಗುವುದು.
  • ಸರ್ಕಾರವು ದಾಖಲೆ ರಹಿತ ಜನವಸತಿ ಪ್ರದೇಶಗಳಾದ ತಾಂಡ, ಹಟ್ಟಿ, ಹಾಡಿ, ದೊಡ್ಡಿ, ಪಾಳ್ಯ, ಮಜರೆ, ಕ್ಯಾಂಪ್, ಕಾಲೋನಿ ಇತ್ಯಾದಿಗಳನ್ನು ಗುರುತಿಸಿ ಹೊಸ ಕಂದಾಯ ಗ್ರಾಮ ಹಾಗೂ ಉಪ ಗ್ರಾಮಗಳೆಂದು ಘೋಷಿಸಿದ್ದು, ಅಲ್ಲಿನ ಸುಮಾರು ೨ ಲಕ್ಷ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲು ಕ್ರಮವಹಿಸಲಾಗುವುದು.
  • ಭೂ-ಮಾಪನ ಇಲಾಖೆಗೆ ಸೇರಿದ 240 ಅಭಿಲೇಖಾಲಯ ಕೊಠಡಿಗಳನ್ನು ಆಧುನೀಕರಣಗೊಳಿಸುವ ಮೂಲಕ ಕಂದಾಯ ದಾಖಲೆಗಳನ್ನು ಪಾರದರ್ಶಕ ಹಾಗೂ ಆನ್ಲೈನ್ ವ್ಯವಸ್ಥೆ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುವುದು.
  • ಭೂಮಿ ತಂತ್ರಾಂಶದಲ್ಲಿ ಫ್ಲಾಗ್ ಮಾಡಲಾಗಿರುವ ಸರ್ಕಾರಿ ಜಮೀನಿನ ಪಹಣಿಗಳನ್ನು ಲ್ಯಾಂಡ್‌ ಬೀಟ್‌ ಆಪ್‌ ಬಳಸಿ, ಗ್ರಾಮ ಆಡಳಿತ ಅಧಿಕಾರಿಗಳ ಮುಖಾಂತರ ಸರ್ಕಾರಿ ಜಮೀನಿನ ಒತ್ತುವರಿ ಹಾಗೂ ಸಂರಕ್ಷಣೆ ಕುರಿತು ನಿಗಾ ವಹಿಸಲಾಗುವುದು.
  • ಪ್ರಸಕ್ತ ಸಾಲಿನಲ್ಲಿ ೪೨ ತಾಲ್ಲೂಕಾ ಆಡಳಿತ ಸೌಧದ ಕಾಮಗಾರಿಗಳಿಗೆ ೮೦ ಕೋಟಿ ರೂ. ಹಾಗೂ ೧೪ ಜಿಲ್ಲಾಡಳಿತ ಸೌಧದ ಕಾಮಗಾರಿಗಳಿಗೆ ೫೦ ಕೋಟಿ ರೂ. ಒದಗಿಸಲಾಗಿದೆ. ವಿಜಯಪುರ ಮತ್ತು ಬೀದರ್ ಜಿಲ್ಲೆಗಳಲ್ಲಿ ಹೊಸ ಜಿಲ್ಲಾಡಳಿತ ಕಛೇರಿಗಳು ಹಾಗೂ ಅಗತ್ಯವಿರುವ ತಾಲ್ಲೂಕುಗಳಲ್ಲಿ ತಾಲ್ಲೂಕಾ ಆಡಳಿತ ಕಛೇರಿಗಳನ್ನು ನಿರ್ಮಿಸಲಾಗುವುದು
  • 2023-24 ರಲ್ಲಿ ರಾಜ್ಯದ 223 ತಾಲ್ಲೂಕುಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದ್ದು, ಸಂಕಷ್ಟಕ್ಕೆ ಸಿಲುಕಿದ ಕರ್ನಾಟಕದ ರೈತರಿಗೆ ತುಸು ನೆಮ್ಮದಿ ನೀಡಲು NDRF ನಿಧಿಯಿಂದ
  • 18,171 ಕೋಟಿ ರೂ.ಗಳ ಬರ ಪರಿಹಾರವನ್ನು ರಾಜ್ಯಕ್ಕೆ ನೀಡಲು ಕೋರಿ ಕೇಂದ್ರ ಸರ್ಕಾರಕ್ಕೆ 3 ಮೆಮೊರಾಂಡಮ್‌ಗಳನ್ನು ಸಲ್ಲಿಸಿದ್ದರೂ ಸಹ ಕೇಂದ್ರ ಸರ್ಕಾರವು ಯಾವುದೇ ರೀತಿಯ ಸ್ಪಂದನೆಯನ್ನು ನೀಡಿರುವುದಿಲ್ಲ. ಆದಾಗ್ಯೂ ಕೇಂದ್ರ ಸರ್ಕಾರದ ಅನುದಾನಕ್ಕೆ ಕಾಯದೇ ಬರವನ್ನು ಸಮರ್ಥವಾಗಿ ನಿಭಾಯಿಸಲು ರಾಜ್ಯ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ;
  • 19 ಲಕ್ಷ ರೈತರಿಗೆ ತಲಾ 2,000 ರೂ.ಗಳವರೆಗೆ ಇನ್‌ಪುಟ್‌ ಸಬ್ಸಿಡಿ 629 ಕೋಟಿ ರೂ. ಅನುದಾನವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ.
  • ಬರದ ತೀವ್ರತೆಯನ್ನು ತಗ್ಗಿಸಲು 20 ಕೋಟಿ ರೂ.ಗಳ ವೆಚ್ಚದಲ್ಲಿ ಮಿನಿ ಮೇವಿನ ಕಿಟ್‌ ವಿತರಿಸಲಾಗುತ್ತಿದೆ.
  • ಅಂತರ್ಜಲ ಮಟ್ಟ ವೃದ್ಧಿಸಲು ಕೃಷಿ ಭಾಗ್ಯ ಯೋಜನೆಯಡಿಯಲ್ಲಿ 200 ಕೋಟಿ ರೂ.ಗಳನ್ನು ಒದಗಿಸಲಾಗುತ್ತಿದೆ.
  • ಸಣ್ಣ ನೀರಾವರಿ ಇಲಾಖೆಯ ಮೂಲಕ 100 ಕೋಟಿ ರೂ.ಗಳ ವೆಚ್ಚದ ಜಲ ಸಂರಕ್ಷಣೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
  • ಪ್ರಸಕ್ತ ಸಾಲಿನಲ್ಲಿ ರಾಜ್ಯ ವಿಪತ್ತು ಉಪಶಮನ ನಿಧಿಯಿಂದ ಒಟ್ಟು 500 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಬರ ಉಪಶಮನ ಕ್ರಮಗಳನ್ನು ತೆಗೆದುಕೊಳ್ಳಲು ಕ್ರಮವಹಿಸಲಾಗುವುದು.
  • 15ನೇ ಹಣಕಾಸು ಆಯೋಗವು ೨೦೧೧-೧೭ರ ಅವಧಿಯಲ್ಲಿನ ವೆಚ್ಚವನ್ನು ಆಧರಿಸಿ, ಪರಿಹಾರ ಮೊತ್ತ ನಿಗದಿ ಮಾಡಿರುವುದರಿಂದ ರಾಜ್ಯಕ್ಕೆ 2021-26 ರ ಅವಧಿಗೆ ನಿಗದಿಪಡಿಸಿರುವ ಎಸ್.ಡಿ.ಆರ್.ಎಫ್ ಮೊತ್ತ ಹಂಚಿಕೆಯು ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಅತ್ಯಂತ ನಿರಾಶಾದಾಯಕವಾಗಿದೆ. 2018 ರಿಂದ ಪ್ರತಿ ವರ್ಷವೂ ರಾಜ್ಯವು ಅನುಭವಿಸಿದ ತೀವ್ರ ನೈಸರ್ಗಿಕ ವಿಕೋಪಗಳಿಂದ ಅಂದಾಜು 1.21 ಲಕ್ಷ ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ. ಕೇಂದ್ರ ಸರ್ಕಾರವು 2018 ರಿಂದ ಇಲ್ಲಿಯವರೆಗೆ ಬಿಡುಗಡೆಗೊಳಿಸಿದ್ದ 9,300 ಕೋಟಿ ರೂ.ಗಳಿಗೆ ಎದುರಾಗಿ ರಾಜ್ಯ ಸರ್ಕಾರವು ತನ್ನ ಬೊಕ್ಕಸದಿಂದ ವಿವಿಧ ಇಲಾಖೆಗಳ ಮೂಲಕ 15,874 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. ರಾಜ್ಯಗಳಿಗೆ ಎನ್.ಡಿ.ಆರ್.ಎಫ್ ಅನುದಾನ ನಿಗದಿಪಡಿಸುವ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳು ಪ್ರಕೃತಿ ವಿಕೋಪಗಳನ್ನು ನಿಭಾಯಿಸಲು ಎಲ್ಲಾ ಇಲಾಖೆಗಳ ಮೂಲಕ ವೆಚ್ಚ ಮಾಡಿರುವ ಅನುದಾನವನ್ನು ಪರಿಗಣಿಸುವುದರ ಜೊತೆಗೆ ಪ್ರಕೃತಿ ವಿಕೋಪಕ್ಕೆ ತುತ್ತಾಗುವ ಸಾಧ್ಯತೆಗಳನ್ನೂ ಕೂಡ ಪರಿಗಣಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಹಾಗೂ 16ನೇ ಹಣಕಾಸು ಆಯೋಗಕ್ಕೆ ಒತ್ತಾಯಿಸಲಾಗುವುದು.
  • ಶಾಲಾ ಮಕ್ಕಳಿಗೆ ಹವಾಮಾನ ಬದಲಾವಣೆಯ ಪರಿಣಾಮದ ದೃಶ್ಯಗಳು ಮತ್ತು ಹವಾಮಾನ ಬದಲಾವಣೆ ಪರಿಹಾರಗಳ ಕುರಿತು ಅರಿವು ಮೂಡಿಸಲು ಹವಾಮಾನ ಬದಲಾವಣೆ ಅನುಭವ ಕೇಂದ್ರವನ್ನು 10 ಕೋಟಿ ರೂ.ಗಳ ವೆಚ್ಚದಲ್ಲಿ ಪ್ರಾರಂಭಿಸಲಾಗುವುದು.
  • ನೋಂದಣಿ ಪ್ರಕ್ರಿಯೆಯಲ್ಲಿ ನಾಗರಿಕ ಸ್ನೇಹಿ ಸುಧಾರಣೆಗಳನ್ನು ತರಲು ಈ ಕೆಳಕಂಡ ಉಪಕ್ರಮಗಳನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ;
  • ಕಡ್ಡಾಯವಾಗಿ ನೋಂದಾಯಿಸಬಹುದಾದ ಆಯ್ದ ದಾಖಲೆಗಳ ಇ-ನೋಂದಣಿಯನ್ನು ಸಬ್ ರಿಜಿಸ್ಟ್ರಾರ್ ಕಛೇರಿಗಳಲ್ಲಿ ಎರಡು ಪಕ್ಷಗಳ ಉಪಸ್ಥಿತಿಯಿಲ್ಲದೆ ನೋಂದಣಿ ಮಾಡಲು ಕ್ರಮ.
  • Anytime Anywhere Registration ಕಾರ್ಯಕ್ರಮವನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲು ನೋಂದಣಿ ಮತ್ತು ಮುದ್ರಾಂಕ ಕಾಯ್ದೆಗಳಿಗೆ ತಿದ್ದುಪಡಿ.
  • ಸ್ಥಿರಾಸ್ತಿ ನೋಂದಣಿಗೆ ಸಂಬಂಧಿಸಿದ ಎಲ್ಲಾ ತಂತ್ರಾಂಶಗಳ ಏಕೀಕರಣ.
  • ನಾಗರಿಕರ ಅನುಕೂಲಕ್ಕಾಗಿ ಭಾನುವಾರ ಸಹ ಆಯ್ದ ಉಪ ನೋಂದಣಾಧಿಕಾರಿ ಕಛೇರಿಯನ್ನು ತೆರೆಯಲಾಗುವುದು.
  • ನಾಗರಿಕರು ದೃಢೀಕೃತ ಪ್ರತಿಗಳನ್ನು ಪಡೆಯುವಲ್ಲಿನ ವಿಳಂಬವನ್ನು ತಗ್ಗಿಸಲು ಕೇಂದ್ರೀಕೃತ ವರ್ಚುವಲ್ ವಿತರಣಾ ವ್ಯವಸ್ಥೆಯ ಮೂಲಕ ದಾಖಲೆಗಳ ವಿತರಣೆಯನ್ನು ಸ್ವಯಂಚಾಲಿತಗೊಳಿಸಲಾಗುವುದು.
  • ಪಾರದರ್ಶಕವಾಗಿ ಯಾವುದೇ ರೀತಿಯ ತೊಂದರೆಗಳಿಲ್ಲದೆ ನೋಂದಣಿ ಕೆಲಸವನ್ನು ಸಾರ್ವಜನಿಕರಿಗೆ ತಲುಪಿಸಲು ನಿಯಮಗಳಿಗೆ ಅಗತ್ಯ ತಿದ್ದುಪಡಿಗಳನ್ನು ತರಲಾಗುವುದು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "KARNATAKA BUDJET 2024: ಕಂದಾಯ ಇಲಾಖೆ ಮತ್ತಷ್ಟು ಡಿಜಿಟಲೀಕೃತ: ಭೂಸುರಕ್ಷಾ ಯೋಜನೆ ಪ್ರಾಯೋಗಿಕವಾಗಿ ಆರಂಭ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*