ಕಲ್ಲಡ್ಕ ಶ್ರೀರಾಮ ಮಂದಿರದ ಶತಾಬ್ದಿ ಕಾರ್ಯಕ್ರಮಗಳು ಫೆಬ್ರವರಿ 21ರಿಂದ 24ರವರೆಗೆ ನಡೆಯಲಿದ್ದು, ಈ ಸಂದರ್ಭ ಶ್ರೀ ವಿದ್ಯಾಗಣಪತಿ ದೇವರ ಪ್ರಾಣಪ್ರತಿಷ್ಠೆ, ಶ್ರೀ ರಾಮಾಂಗಣ ಲೋಕಾರ್ಪಣೆ, ಮಾತೃಸಂಗಮ, 13 ಕೋಟಿ ರಾಮನಾಮ ತಾರಕ ಜಪಯಜ್ಞ ನಡೆಯಲಿದೆ ಎಂದು ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದ್ದಾರೆ.
ಕಲ್ಲಡ್ಕದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀರಾಮ ಮಂದಿರ ಕಳೆದ ನೂರು ವರ್ಷಗಳಿಂದ ದೇಶದ ರಾಜಕೀಯ, ಸಾಮಾಜಿಕ ಸ್ಥಿತ್ಯಂತರಗಳ ಸಂದರ್ಭ, ರಚನಾತ್ಮಕವಾದ ಚಟುವಟಿಕೆಗಳನ್ನು ಪ್ರೇರೇಪಿಸುತ್ತಾ ಬಂದಿದ್ದು, ರಾಷ್ಟ್ರೀಯ ಹೋರಾಟಗಳು ಇಲ್ಲಿಂದ ಆಗಿವೆ. ಸಾಮಾಜಿಕ ಪರಿವರ್ತನೆ ಮಂದಿರಗಳ ಉದ್ದೇಶವಾಗಿದ್ದು, ಭಜನೆ, ಆಧ್ಯಾತ್ಮ, ಸಂಘಟನೆ, ಸಮಾಜೋದ್ಧಾರ ಸಹಿತ ಪರಿಸರದ ಜನರ ಉನ್ನತಿಗೂ ಕಾರಣವಾಗಿದ್ದು, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಸಹಿತ ರಾಷ್ಟ್ರೀಯತೆಯನ್ನು ಉದ್ದೀಪನಗೊಳಿಸುವ ಹಲವು ಸಮಾಜಮುಖಿ ಕಾರ್ಯಗಳು ಇದರ ಮೂಲಕ ನಡೆದಿವೆ ಎಂದರು.
ಶತಾಬ್ದಿ ಸಂಭ್ರಮ ನಿಮಿತ್ತ 21ರಂದು ಗಂಗಾಪೂಜೆ, ತೀರ್ಥಕಲಶ, ಹೊರೆಕಾಣಿಕೆ, ವಾಸ್ತುಪೂಜೆ, 22ರಂದು ಶ್ರೀ ವಿದ್ಯಾಗಣಪತಿ ದೇವರ ಪ್ರಾಣಪ್ರತಿಷ್ಠೆ ನಡೆಯಲಿದ್ದು, ಇದನ್ನು ಚಿತ್ರದುರ್ಗದ ಬೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ನೆರವೇರಿಸುವರು. ಶ್ರೀ ರಾಮಾಂಗಣವನ್ನು ಕೊಲ್ಲಾಪುರ ಶ್ರೀ ಕನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಲೋಕಾರ್ಪಣೆ ಮಾಡುವರು. ಧ್ವಜಾರೋಹಣವನ್ನು ನಿಡಸೋಸಿ ಸಿದ್ಧಸಂಸ್ಥಾನ ಮಠದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ನೆರವೇರಿಸುವರು. 23ರಂದು ಮಾತೃಸಂಗಮದಲ್ಲಿ ಹುತಾತ್ಮ ಯೋಧ ಕ್ಯಾ. ಪ್ರಾಂಜಲ್ ಅವರ ತಾಯಿ ಕೆ.ಆರ್. ಅನುರಾಧಾ ವೆಂಕಟೇಶ್ ಭಾಗವಹಿಸುವರು. 24ರಂದು ನಡೆಯಲಿರುವ 13 ಕೋಟಿ ರಾಮನಾಮ ತಾರಕ ಜಪಯಜ್ಞದಲ್ಲಿ ಗ್ರಾಮ ಸಮ್ಮಾನ್ ನಡೆಯಲಿದ್ದು, ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಆರ್. ಚೆನ್ನಪ್ಪ ಕೋಟ್ಯಾನ್, ನಾಗೇಶ್ ಕಲ್ಲಡ್ಕ, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಪ್ರಮುಖರಾದ ಕ.ಕೃಷ್ಣಪ್ಪ, ಸುಜಿತ್ ಕೊಟ್ಟಾರಿ ಉಪಸ್ಥಿತರಿದ್ದರು.
Be the first to comment on "ಕಲ್ಲಡ್ಕ ಶ್ರೀರಾಮ ಮಂದಿರ ಶತಾಬ್ದಿ ಸಂಭ್ರಮ:21ರಿಂದ 24ರವರೆಗೆ ಕಾರ್ಯಕ್ರಮ"