ಬಿ.ಸಿ.ರೋಡ್ ನಿಂದ ಅಡ್ಡಹೊಳೆವರೆಗೆ ರಸ್ತೆ ಅಗಲಗೊಳ್ಳುವ ಹಾಗೂ ಅಭಿವೃದ್ಧಿಯಾಗುವ ಕಾಮಗಾರಿಗಳು ನಡೆಯುತ್ತಿದ್ದು, ಇದರ ಪರಿಶೀಲನೆಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಬುಧವಾರ ನಡೆಸಿದರು. ಈ ಸಂದರ್ಭ ಸಾಕಷ್ಟು ಕಡೆಗಳಲ್ಲಿ ಸಾರ್ವಜನಿಕರು ತಮ್ಮ ಅಹವಾಲು ಮಂಡಿಸಿದರು. ಬಿ.ಸಿ.ರೋಡ್ ನಿಂದ ಗುಂಡ್ಯದವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಭಾಗದಲ್ಲಿ ಆಗುತ್ತಿರುವ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು.ಬಿ.ಸಿ.ರೋಡಿನ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತದಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿ ವೀಕ್ಷಣೆ ನಡೆಸಿದ ಬಳಿಕ ಮೆಲ್ಕಾರ್, ಕಲ್ಲಡ್ಕ, ಮಾಣಿ ಮತ್ತು ಉಪ್ಪಿನಂಗಡಿ ಭಾಗದತ್ತ ಜಿಲ್ಲಾಧಿಕಾರಿ ತೆರಳಿ, ಅಲ್ಲೂ ಕೆಲಸ ಕಾರ್ಯಗಳನ್ನು ವೀಕ್ಷಣೆ ಮಾಡಿದರು.
ಮೆಲ್ಕಾರ್ ನಲ್ಲಿ ಗುಡ್ಡವನ್ನು ಅಗೆದ ಪರಿಣಾಮವಾಗಿ ಕೆಲವೊಂದು ಮನೆಗಳಿಗೆ ಹಾನಿಯಾಗುವ ಸಂಭವವು ಇರುವುದು ಮತ್ತು ಕೆಲವು ಮನೆಗಳಿಗೆ ಸಂಪರ್ಕ ರಸ್ತೆ ಕಡಿತಗೊಂಡ ಹಿನ್ನೆಲೆಯಲ್ಲಿ ಅವರಿಗೆ ಸೂಕ್ತವಾದ ಬದಲಿ ವ್ಯವಸ್ಥೆ ಮಾಡಿಕೊಡುವ ಬಗ್ಗೆ ಚಿಂತನೆ ನಡೆಸುವ ಕುರಿತು ವಿಷಯ ಪ್ರಸ್ತಾಪ ಮಾಡಲಾಯಿತು. ಈ ಸಂದರ್ಭ, ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದರು. ಕಲ್ಲಡ್ಕದಲ್ಲಿ ರಸ್ತೆ ಕಾಮಗಾರಿಯ ವೇಳೆ ದೂಳಿನ ಸಮಸ್ಯೆ ಉಂಟಾಗುತ್ತಿದ್ದು,ಸರಿಯಾಗಿ ನೀರು ಹಾಕುತ್ತಿಲ್ಲ ಎಂಬ ದೂರನ್ನು ಸಾರ್ವಜನಿಕರು ಗಮನ ಸೆಳೆದರು.
ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು ಇನ್ನು ಮುಂದೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ದೂರುಗಳು ಬರದ ರೀತಿಯಲ್ಲಿ ಸ್ಥಳೀಯ ಗ್ರಾ.ಪಂ. ರಸ್ತೆ ನೀರು ಹಾಕುವ ಜವಾಬ್ದಾರಿ ವಹಿಸಬೇಕು ಎಂದು ತಹಸೀಲ್ದಾರ್ ಅವರಿಗೆ ತಿಳಿಸಿದರು. ಧೂಳಿನ ಸಮಸ್ಯೆಯಿಂದಾಗಿ ಕಲ್ಲಡ್ಕ ಪರಿಸರದಲ್ಲಿ ಆರೋಗ್ಯ ಸಮಸ್ಯೆ ಉದ್ಭವಿಸಿರುವ ಕುರಿತು ಸಾರ್ವಜನಿಕರು ಗಮನಕ್ಕೆ ತಂದರು. ಕೆಲವು ಕಡೆಗಳಲ್ಲಿ ರಸ್ತೆ ಕಾಮಗಾರಿ ವೇಳೆ ಕುಡಿಯುವ ನೀರಿನಪೈಪ್ ಗಳನ್ನು ತುಂಡರಿಸಲಾಗಿದ್ದು ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ , ಅಂತಹ ಕಡೆಗಳಲ್ಲಿ ಹೊಸ ಪೈಪ್ ಲೈನ್ ಅಳವಡಿಸಿ ಕುಡಿಯುವ ನೀರಿಗೆ ಯಾವುದೇ ಕುಂದುಬರದಂತೆ ನೋಡಿಕೊಳ್ಳಿ ಎಂದು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್, ಬಂಟ್ವಾಳ ನಗರ ಪೋಲೀಸ್ ಠಾಣಾ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ, ಟ್ರಾಫಿಕ್ ಎಸ್.ಐ.ಸಂಜೀವ, ಕಂದಾಯ ನಿರೀಕ್ಷಕರುಗಳಾದ ವಿಜಯ್ ಮತ್ತು ಜನಾರ್ಧನ ಹಾಗೂ ಗ್ರಾಮ ಕರಣೀಕ ನಾಗರಾಜ್ ಮತ್ತಿತರರು ಹಾಜರಿದ್ದರು
Be the first to comment on "ಹೆದ್ದಾರಿ ಕಾಮಗಾರಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಸಾರ್ವಜನಿಕರಿಂದಲೂ ಮಾಹಿತಿ ಸಂಗ್ರಹ"