ಆಸ್ಪತ್ರೆಗೆ ಮೂಲಸೌಕರ್ಯಗಳನ್ನು ಒದಗಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಕಾಯಂ ವೈದ್ಯರನ್ನು ನೇಮಿಸುವುದು. ಸರಕಾರದ ಯೋಜನೆಗಳೇ ಹಾಗೆ, ಶಿಕ್ಷಕರಿಲ್ಲದ ಶಾಲೆ, ವೈದ್ಯರಿಲ್ಲದ ಆಸ್ಪತ್ರೆ, ಸಿಬಂದಿ ಇಲ್ಲದ ಇಲಾಖೆ ಎಂಬಂತಾಗಿದೆ.
ಎರಡು ವರ್ಷಗಳ ಹಿಂದೆ ತಿಂಗಳಿಗೆ 50ರಷ್ಟು ಹೆರಿಗೆ ಪ್ರಕ್ರಿಯೆಗಳು ಉಚಿತವಾಗಿ ನಡೆಯುತ್ತಿದ್ದ ಬಂಟ್ವಾಳದ ತಾಲೂಕು ಮಟ್ಟದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲೀಗ ಏಳೆಂಟು ಮಂದಿಯಷ್ಟೇ ಶಿಶುಗಳ ಜನನವಾಗುತ್ತಿದೆ. ಜನನ ಪ್ರಮಾಣ ಇಳಿಕೆಯಾಗುವುದು ಇದಕ್ಕೆ ಕಾರಣವಲ್ಲ, ಸರಕಾರಿ ಆಸ್ಪತ್ರೆಗೆಂದು ಬರುವ ಬಡವರು, ಬೇರೆ ಆಸ್ಪತ್ರೆ ನೋಡುತ್ತಿದ್ದಾರೆ. ಇದಕ್ಕೆ ಕಾರಣ ಕಳೆದ ಒಂದೂವರೆ ವರ್ಷದಿಂದ ಇಲ್ಲಿ ಸೂಕ್ತ ಹೆರಿಗೆ ತಜ್ಞರಿಲ್ಲ.
ನೂರು ಬೆಡ್ ಗಳ ಆಸ್ಪತ್ರೆ ಎಂಬ ಹೆಗ್ಗಳಿಕೆಯೊಂದಿಗೆ ಆರು ವರ್ಷಗಳ ಹಿಂದೆ ಪುನರ್ನವೀಕರಣಗೊಂಡ ಬಂಟ್ವಾಳ ಸರಕಾರಿ ಆಸ್ಪತ್ರೆ ಸುಸಜ್ಜಿತವಾಗಿದೆ. ಕಳೆದೆರಡು ವರ್ಷಗಳಲ್ಲಿ ಸುಸಜ್ಜಿತ ಹವಾನಿಯಂತ್ರಿತ ಐಸಿಯು ಘಟಕವಿದೆ. ಕೊರೊನಾ ಸಂದರ್ಭದ ಘಟನೆಗಳು ಮರುಕಳಿಸದೇ ಇರಲಿ ಎಂಬ ಕಾರಣದಿಂದ ಆಮ್ಲಜನಕ ಘಟಕ ನಿರ್ಮಾಣವೂ ಆಗಿದೆ. ಆದರೆ ಆಸ್ಪತ್ರೆ ಪರಿಪೂರ್ಣವಾಗಬೇಕು ಎಂದಿದ್ದರೆ ತಜ್ಞ ವೈದ್ಯರು ಬೇಕು. ಎಲ್ಲವೂ ಇದ್ದೂ ವೈದ್ಯರೇ ಇಲ್ಲದಿದ್ದರೆ ಆಸ್ಪತ್ರೆ ಇದ್ದೂ ಇಲ್ಲದಂತೆ. ಬಂಟ್ವಾಳದ ಮಟ್ಟಿಗೆ ಉಳಿದ ವಿಭಾಗಗಳಿಗೆ ತಜ್ಞ ವೈದ್ಯರು ಇದ್ದಾರೆ. ಹೆರಿಗೆ ಮತ್ತು ಅರಿವಳಿಕೆ ವಿಭಾಗಕ್ಕೆ ಮಾತ್ರ ವೈದ್ಯರ ಕೊರತೆ. ಆದರೆ ಅದೇ ಮುಖ್ಯವಾದ ವಿಭಾಗ.
ಒಂದೂವರೆ ವರ್ಷಗಳಿಂದ ಈ ಕುರಿತು ಸತತ ಬೇಡಿಕೆಗಳನ್ನು ಇಡಲಾಗುತ್ತಿದೆ, ಗುತ್ತಿಗೆ ಆಧಾರದಲ್ಲಿಯಾದರೂ ಬನ್ನಿ ಎಂದು ಹೇಳಿದರೂ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಗೈನಾಕಲಜಿಸ್ಟ್ ಬರುತ್ತಿಲ್ಲ. ಹೆರಿಗೆಗೆಂದು ಬರುವವರ ಹೆರಿಗೆಯನ್ನು ಇತರ ವೈದ್ಯರು ಮಾಡಿಸುತ್ತಾರೆ. ಆದರೆ, ಇದೇ ವಿಭಾಗದ ನುರಿತ ವೈದ್ಯರಿದ್ದರೆ, ಉಳಿದವರ ಭಾರವೂ ಕಡಿಮೆಯಾಗುತ್ತದೆ. ಸರಕಾರ ಇನ್ನೂ ನೇಮಕ ಮಾಡಲು ಮನಸ್ಸು ಮಾಡುತ್ತಿಲ್ಲ.
ಬೇರೆ ಆಸ್ಪತ್ರೆಗೆ ಹೋಗುತ್ತಿದ್ದಾರೆ:
ತಾಲೂಕಿನ ಗ್ರಾಮೀಣ ಭಾಗದ ಮಂದಿ ಹೆರಿಗೆ ಹಾಗೂ ಸ್ತ್ರೀಯರ ಇನ್ನಿತರ ಕಾಯಿಲೆಗಳಿಗೆ ಖಾಸಗಿ ಆಸ್ಪತ್ರೆ ಅಥವಾ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಹೀಗಾಗಿ ಆಸ್ಪತ್ರೆಯಲ್ಲಿ ಅಂದಾಜು 60ರಷ್ಟು ಹೆರಿಗೆ ಪ್ರಕರಣಗಳು ಆಗುತ್ತಿದ್ದುದು, ಈಗ 10 ಅಥವಾ 9ಕ್ಕೆ ಇಳಿದಿದೆ. 2022ರ ಆಗಸ್ಟ್ ವರೆಗೆ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರು ಕರ್ತವ್ಯ ನಿರ್ವಹಿಸುತ್ತಿದ್ದರು. ಬಳಿಕ ಅವರು ರಾಜೀನಾಮೆ ನೀಡಿದ್ದರು. ಹೀಗಾಗಿ ಸೆಪ್ಟೆಂಬರ್ ಪ್ರಾರಂಭದಿಂದ (2022) ಇಲ್ಲಿ ವೈದ್ಯರ ಕೊರತೆ ಉಂಟಾಯಿತು. ಆದರೂ ಮಹಿಳೆಯ ಸಂಬಂಧಿಕರ ಒಪ್ಪಿಗೆ ಪಡೆದು, ಇಲ್ಲಿನ ವೈದ್ಯರು ಅನುಭವದ ಆಧಾರದಲ್ಲಿ ಆಸ್ಪತ್ರೆಗೆ ಆಗಮಿಸುವ ವೈದ್ಯಕೀಯ ಕಾಲೇಜುಗಳ ಸ್ತ್ರೀರೋಗ ಪಿಜಿ ವೈದ್ಯರ ನೆರವಿನಿಂದ ಯಶಸ್ವಿಯಾಗಿ ಹೆರಿಗೆ ನಡೆಸಲಾಗುತ್ತಿದೆ. ಆದರೂ ಪೂರ್ಣ ಪ್ರಮಾಣದ ಸ್ತ್ರೀರೋಗ ತಜ್ಞರು ಇಲ್ಲಿಗೆ ಬೇಕು.
ಕರೆ ಮೇಲೆ ಅನಸ್ತೇಶಿಯಾದವರು ಬರ್ತಾರೆ:
ಬಂಟ್ವಾಳ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಪೂರ್ಣ ಪ್ರಮಾಣದ ಅನಸ್ತೇಶಿಯಾ ತಜ್ಞರೂ ಇಲ್ಲ. ಕರೆ ಮೇಲೆ ತಜ್ಞರು ಇಲ್ಲಿಗೆ ಬರುತ್ತಾರೆ. ಯಾವುದಾದರೂ ತುರ್ತು ಸಂದರ್ಭ ಇವರಿಗೆ ಕರೆ ಮಾಡಲಾಗುತ್ತದೆ. ಆದರೆ ಸುಸಜ್ಜಿತ ಆಸ್ಪತ್ರೆ ಎಂದ ಮೇಲೆ ಅನಸ್ತೇಶಿಯಾ ತಜ್ಞರು ಇಲ್ಲವೆಂದರೆ ಹೇಗೆ? ಇದಕ್ಕೆ ಇಲಾಖೆಯಲ್ಲೂ ಸಮರ್ಪಕ ಉತ್ತರವಿಲ್ಲ.
ಸಚಿವರಿಗೆ ಮನವಿ ನೀಡಲಾಗಿತ್ತು:
ರಾಜ್ಯ ಆರೋಗ್ಯ ಸಚಿವರು ಬಂಟ್ವಾಳಕ್ಕೆ ಭೇಟಿ ನೀಡಿದ ಸಂದರ್ಭ ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ರೈ ಮತ್ತು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಪುಷ್ಪಲತಾ ಅವರು ಸಚಿವರ ಬಳಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸ್ತ್ರೀರೋಗ ತಜ್ಞರನ್ನು ನಿಯೋಜಿಸುವಂತೆ ಮನವಿ ಮಾಡಿದ್ದರು. ಅಲ್ಲದೆ ಈ ಕುರಿತು ಇಲಾಖೆ ಅಧಿಕಾರಿಗಳು, ಶಾಸಕರು, ಮಾಜಿ ಸಚಿವರು ಹಾಗೂ ಇದಕ್ಕೆ ಸಂಬಂಧಿಸಿದವರಿಗೆಲ್ಲಾ ಮನವಿ ಮಾಡಲಾಗಿದೆ. ಇದುವರೆಗೂ ನೇಮಕಾತಿ ಪ್ರಕ್ರಿಯೆ ಆಗಿಲ್ಲ.
Though late I am delighted to know about bantwal news carrying exciting articles with flashback photos. God bless