ಬ್ರಿಟಿಷರ ಕಾಲದ ರಚನೆಗಳಲ್ಲಿ ಬಹುಮುಖ್ಯವಾದದ್ದು ಎಂದು ಹೇಳಲಾಗುವ ಪಾಣೇರ್ ಸಂಕ ಎಂದೇ ಸ್ಥಳೀಯವಾಗಿ ಜನಜನಿತವಾಗಿರುವ ಪಾಣೆಮಂಗಳೂರು ಉಕ್ಕಿನ ಸೇತುವೆಯನ್ನು ಸಂರಕ್ಷಿಸಲು ಇಲ್ಲಿ ಘನವಾಹನ ಸಂಚರಿಸದಂತೆ ಆಗಾಗ್ಗೆ ನಿರ್ಬಂಧಗಳನ್ನು ಹೇರುತ್ತಿದ್ದರೂ ವಾಹನ ಸವಾರರು ಕ್ಯಾರೆನ್ನುತ್ತಿರಲಿಲ್ಲ. ಇದೀಗ ಛಲಬಿಡದ ಆಡಳಿತ ಮತ್ತೆ ತಡೆ ಹಾಕಲು ಮುಂದಾಗಿದೆ. ಕಳೆದ ಬಾರಿ ಹಾಕಿದ ತಡೆ ಕುಸಿದು ಬಿದ್ದಿತ್ತು. ಈ ಬಾರಿ ಮತ್ತೆ ತಡೆ ಹಾಕಿ ಘನ ವಾಹನಗಳು ಓಡಾಡದಂತೆ ಮಾಡಲು ನಿರ್ವಹಣೆ ಹೊತ್ತಿರುವ ಬಂಟ್ವಾಳ ಪುರಸಭೆ ಮುಂದಾಗಿದೆ.
ಎತ್ತರದ ಯಾವುದೇ ವಾಹನಗಳು ಅಲ್ಲಿ ಸಂಚರಿಸದಂತೆ ತಡೆಯನ್ನು ಹಾಕುವ ಕಾರ್ಯ ಮಂಗಳವಾರ ಗೂಡಿನಬಳಿಯಲ್ಲಿರುವ ಪಾಣೆಮಂಗಳೂರು ಸೇತುವೆಯ ಆದಿ, ಅಂತ್ಯದಲ್ಲಿ ನಡೆಯಿತು.
ಈ ಸೇತುವೆ ಕಾಲಕಾಲಕ್ಕೆ ಬಿರುಕು ಬಿಟ್ಟಿದೆ ಎಂಬ ಸುದ್ದಿಗಳು ಹಬ್ಬಿದ್ದವು. ಆದರೆ ಸ್ವಾತಂತ್ರ್ಯಾನಂತರ ಕಟ್ಟಿದ ಸೇತುವೆಗಳಿಗಿಂದ ಇದು ಗಟ್ಟಿಯಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಲಾಗುತ್ತಿತ್ತು. ಸುಮಾರು 23 ವರ್ಷಗಳಿಗೆ ಮೊದಲು ಹೊಸ ಸೇತುವೆಯನ್ನು ನಿರ್ಮಿಸಿದ ಬಳಿಕ ಈ ಸೇತುವೆಯಲ್ಲಿ ವಾಹನ ದಟ್ಟಣೆ ಕಡಿಮೆಯಾಯಿತು. ಆದರೆ ಹೊಸ ಸೇತುವೆಯಲ್ಲಿ ವಾಹನದಟ್ಟಣೆಯಾದಾಗ ಪಾಣೆಮಂಗಳೂರು ಸೇತುವೆಯಲ್ಲಿ ಸಂಚರಿಸುವ ಪರಿಪಾಠ ಮುಂದುವರಿಯಿತು. ಇಲ್ಲಿ ಅತಿಭಾರದ ಲಾರಿಗಳು ಸಂಚರಿಸುವುದು ನಿಂತಿಲ್ಲ ಎಂದು ದೂರುಗಳು ಕೇಳಿಬಂದಿದ್ದವು. ಜಿಲ್ಲಾಡಳಿತ ಈ ಬಗ್ಗೆ ಕಟ್ಟುನಿಟ್ಟಾಗಿ ಅದೇಶ ಹೊರಡಿಸಿ, ಘನ ವಾಹನ ಸಂಚಾರ ನಿಷೇಧ ಹೇರಿ ಸೇತುವೆಯ ಎರಡು ಭಾಗದಲ್ಲಿ ಸೂಚನ ಫಲಕ ಅಳವಡಿಸಿತ್ತು. ಆದರೆ ಸೂಚನಾಫಲಕದ ಅದೇಶ ಫಲಕಕ್ಕೆ ಮಾತ್ರ ಸೀಮಿತವಾಗಿ ಉಳಿದಿತ್ತು.
ಮೂಲರಪಟ್ಣ ಸೇತುವೆ ಕುಸಿದ ಸಂದರ್ಭ ಪಾಣೆಮಂಗಳೂರು ಸೇತುವೆಯ ಸುರಕ್ಷತೆ ಕುರಿತು ಆತಂಕಗಳು ಎದ್ದಿದ್ದವು. ಆ ಸಂದರ್ಭವೂ ಇದರ ಸುರಕ್ಷತೆಯ ಕುರಿತು ಚರ್ಚೆಗಳಾಗಿದ್ದವು. ಒಂದೆರಡು ಬಾರಿ ಬ್ಯಾನರ್ ಕಟ್ಟಿ ಇಲ್ಲಿ ನಿಷೇಧ ಎಂಬ ಸೂಚನೆಯನ್ನು ಹಾಕಿದ್ದು ಹೊರತುಪಡಿಸಿದರೆ, ಯಾವುದೇ ಬಿಗು ಕ್ರಮಗಳನ್ನು ಕೈಗೊಳ್ಳಲಾಗಿರಲಿಲ್ಲ.
ಕೆಲ ತಿಂಗಳ ಹಿಂದೆ ವಿಡಿಯೋವೊಂದು ವೈರಲ್ ಆಗಿ ಸೇತುವೆ ಬಿರುಕುಬಿಟ್ಟಿದೆ ಎಂಬ ಪುಕಾರು ಹಬ್ಬಿತ್ತು. ಈ ಸಂದರ್ಭ ಇಲಾಖೆ ಎರಢೂ ಬದಿಯಲ್ಲಿ ಬ್ಯಾನರ್ ಕಟ್ಟಿ, ತಡೆಯನ್ನೂ ಮಾಡಿತ್ತು. ಆದರೆ ಇಲ್ಲಿವರೆಗೆ ಬಂದು ತಡೆಯನ್ನು ನೋಡಿ, ಮರಳದೆ ಅಲ್ಲೇ ನುಸುಳುವ ಪ್ರಯತ್ನ ಮಾಡಿದ ಪರಿಣಾಮ, ಲಾರಿಯೊಂದು ಸಂಚಾರಕ್ಕೆ ಮುಂದಾಗಿ ತಡೆ ಎರಡೇ ದಿನದಲ್ಲಿ ಮುರಿದುಬಿತ್ತು. ಇಲಾಖೆ ಇದೀಗ ಕಿಂಟ್ಚಾಲ್ ಗಟ್ಟಲೆ ತೂಕದ ಕಂಬಗಳನ್ನು ಸೇತುವೆಯ ಎರಡು ಬದಿಗೆ ಹಾಕಿ ಘನ ಗಾತ್ರದ ವಾಹನಗಳು ಸಂಚಾರ ಮಾಡದಂತೆ ತಡೆಯಲು ಹೊರಟಿದೆ.
Be the first to comment on "‘ಪಾಣೇರ್ ಸಂಕ’ ಉಳಿಸಲು ಹರಸಾಹಸ: ಘನವಾಹನ ತಡೆಗೆ ಮತ್ತೆ ಮುಂದಾದ ಆಡಳಿತ"