ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ( ರಿ.) ಪುಂಜಾಲಕಟ್ಟೆ ಇದರ ವತಿಯಿಂದ 16 ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಶೋಭಾಕೃತ್ ನಾಮ ಸಂವತ್ಸರದ ಮೀನ ಮಾಸದಲ್ಲಿ ಮಾ.24 ರಂದು ಆದಿತ್ಯವಾರ 11.21 ರ ವೃಷಭ ಲಗ್ನದ ಸಮುಹೂರ್ತದಲ್ಲಿ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಕ್ಲಬ್ ಸ್ಥಾಪಕಾಧ್ಯಕ್ಷ ಜಿಪಂ ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಹೇಳಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಮುಂಬಯಿ ಉದ್ಯಮಿ ಕಕ್ಯಪದವು ಕಮಲ ನಿವಾಸ ನಾರಾಯಣ ಶೆಟ್ಟಿ ಯವರ ಸಾರಥ್ಯದಲ್ಲಿ ನಡೆಯಲಿದೆ. ಈವರೆಗೆ 15 ವರ್ಷಗಳಲ್ಲಿ ಒಟ್ಟು 467 ಜೋಡಿ ಮದುವೆ ನಡೆದಿದೆ. ಭಜನೆ ಹಾಗೂ ಇನ್ನಿತರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಅವರು ತಿಳಿಸಿದರು.ಆಡಂಬರದ ಮದುವೆಯ ಖರ್ಚು ವೆಚ್ಚಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಬಡವರಿಗೆ ಸಾಮೂಹಿಕವಾಗಿ ಸಮಾಜದ ಅನೇಕರ ಪ್ರೋತ್ಸಾಹದಿಂದ ಮದುವೆ ನಡೆಸುತ್ತಾ ಬಂದಿದ್ದೇವೆ ಎಂದು ತಿಳಿಸಿದರು. ಮದುವೆ ಸಂದರ್ಭದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಹಾಗೂ ವಿವಿಧ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಜೊತೆಗೆ ಅನೇಕ ಸಾಧಕರಿಗೆ ಸನ್ಮಾನ ನಡೆಸುತ್ತೇವೆ ಎಂದು ಅವರು ತಿಳಿಸಿದರು. ಮಾ.17 ರಂದು ವಿವಾಹದ ಪೂರ್ವಭಾವಿಯಾಗಿ ನೊಂದಾಯಿತ ಜೋಡಿಗಳಿಗೆ ಅದ್ದೂರಿಯಾಗಿ ನಿಶ್ಚಿತಾರ್ಥ ನಡೆಯಲಿದೆ. ವಿವಾಹ ಅಪೇಕ್ಷಿತ ವಧು-ವರರು ಫೆ.20 ರ ಮೊದಲು ಹೆಸರನ್ನು ನೊಂದಾಯಿಸಬೇಕಾಗಿ ವಿನಂತಿ ಮಾಡಿದ್ದಾರೆ. ಮುಂಬಯಿ ಉದ್ಯಮಿ ನಾರಾಯಣ ಶೆಟ್ಟಿ, ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಕಾರ್ಯದರ್ಶಿ ಜಯರಾಜ್ ಅತ್ತಾಜೆ ಮತ್ತು ಸಂಚಾಲಕ ರಾಜೇಶ್ ಪುಳಿಮಜಲು ಉಪಸ್ಥಿತರಿದ್ದರು.
Be the first to comment on "ಮಾ.24ರಂದು 16ನೇ ವರ್ಷದ ಉಚಿತ ಸಾಮೂಹಿಕ ವಿವಾಹ"