ಲಕ್ಷಾಂತರ ಸಂಖ್ಯೆಯಲ್ಲಿರುವ ಬಡ ಬೀಡಿ ಕಾರ್ಮಿಕರ ಅನ್ನದ ತಟ್ಟೆಯಾಗಿರುವ ಬೀಡಿ ಉದ್ಯಮ, ಸರಕಾರಗಳ ಕೈಗಾರಿಕಾ ವಿರೋಧಿ, ತಂಬಾಕು ವಿರೋಧಿ ನೀತಿಗಳಿಂದಾಗಿ ವಿಷಮ ಸ್ಥಿತಿಯಲ್ಲಿದೆ. ಒಂದು ಹಂತದಲ್ಲಿ ಕೋಟ್ಯಾಂತರ ತೆರಿಗೆ ಸರಕಾರದ ಬೊಕ್ಕಸಕ್ಕೆ ಬರುತ್ತಿದ್ದರೂ, ಬಹುರಾಷ್ಟ್ರೀಯ ಸಿಗರೇಟು ಕಂಪೆನಿಗಳ ಕೈಗೊಂಬೆಯಂತೆ ವರ್ತಿಸುತ್ತಾ, ವಿಶ್ವಆರೋಗ್ಯ ಸಂಸ್ಥೆಯ ಒತ್ತಡಕ್ಕೆ ಮಣಿದು ಧೂಮಪಾನ ನಿಷೇಧ, ತಂಬಾಕು ನಿಷೇಧ, ಕೋಟ್ಪಾದಂಥ ಕಾನೂನು ಜಾರಿಗೊಳಿಸಿದ ಪರಿಣಾಮ ಬೀಡಿ ಉದ್ಯಮ ಅತ್ಯಂತ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದೆ. ಪರ್‍ಯಾಯ ಉದ್ಯೋಗ ನೀಡದೇ ಬೀಡಿ ಉದ್ಯಮವನ್ನು ಮುಚ್ಚಿದರೆ ಬೀಡಿ ಕಾರ್ಮಿಕರನ್ನು ಸೇರಿ ಲಕ್ಷಾಂತರ ಅವಲಂಬಿತರು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಸರಕಾರಗಳು ಮುತುವರ್ಜಿ ವಹಿಸಿ ಬೀಡಿ ಉದ್ಯಮವನ್ನು ಉಳಿಸಬೇಕು, ಜೊತೆಗೆ ತುಟ್ಟಿಭತ್ತೆ, ಕನಿಷ್ಠ ಕೂಲಿ ಹಾಗೂ ಇನ್ನಿತರ ಶಾಸನ ಬದ್ಧ ಸವಲತ್ತುಗಳನ್ನು ನ್ಯಾಯ ಸಮ್ಮತವಾಗಿ ಜಾರಿಗೊಳಿಸುವ ಮೂಲಕ ಬೀಡಿ ಕಾರ್ಮಿಕರ ಹಿತ ರಕ್ಷಿಸಬೇಕೆಂದು ಮುಖಂಡರಾದ ಕಾಶಿ ವಿಶ್ವನಾಥನ್ ಸರಕಾರವನ್ನು ಆಗ್ರಹಿಸಿದರು.
ಅಖಿಲ ಭಾರತಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ರಾಷ್ಟ್ರೀಯ ಮಂಡಳಿ ಸಭೆಯ ಅಂಗವಾಗಿ ಎಸ್. ಕೆ. ಬೀಡಿ ವರ್ಕರ್ಸ್ ಫೆಡರೇಶನ್ ಆಶ್ರಯದಲ್ಲಿ ಬಂಟ್ವಾಳದ ಭಂಡಾರಿ ಸಭಾಭವನದಲ್ಲಿ ನಡೆದ ಬೀಡಿ ಕಾರ್ಮಿಕರ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಐಟಿಯುಸಿ ಜಿಲ್ಲಾಧ್ಯಕ್ಷರಾದ ಎಚ್.ವಿ.ರಾವ್ ಮಾಲಕರು ಪ್ರತಿ ಬಾರಿಯೂ ತುಟ್ಟಿಭತ್ತೆಯನ್ನು ಕ್ಲಪ್ತ ಸಮಯಕ್ಕೆ ಬೀಡಿ ಕಾರ್ಮಿಕರಿಗೆ ನೀಡದೇ ಕೋರ್ಟು ಕಚೇರಿ ಅಂತ ಕಾಲಹರಣ ಮಾಡುತ್ತಿದ್ದು ಉದ್ಯಮ ಬೆಳೆಯಲು ಕಾರಣೀಕರ್ತರಾದ ತನ್ನ ಮೂಲ ಸಂಪನ್ಮೂಲವಾದ ಬೀಡಿ ಕಾರ್ಮಿಕರನ್ನು ಕಡೆಗಣಿಸುತ್ತಿರುವುದು ಅನ್ಯಾಯ. ಈ ಹಿನ್ನೆಲೆಯಲ್ಲಿ ಮಾಲಕರ ವಿರುದ್ಧ ಬಹುಸಂಖ್ಯಾತ ಬೀಡಿ ಕಾರ್ಮಿಕರು ಸಂಘಟಿತರಾಗಿ ಹೋರಾಡಬೇಕಿದೆ ಎಂದರು.
ಇನ್ನೋರ್ವ ಮುಖ್ಯಅತಿಥಿ ಸಿಪಿಐ ದ.ಕ ಮತ್ತು ಉಡುಪಿ ಜಿಲ್ಲಾ ಕಾರ್‍ಯದರ್ಶಿ ಬಿ.ಶೇಖರ್ ಮಾತನಾಡಿ ಬೀಡಿ ಕಾರ್ಮಿಕರ ಸಿಗಾರ್ ಆಕ್ಟ್ ಜಾಯಾಗಲು ಐತಿಹಾಸಿಕ ಹೋರಾಟ ನಡೆದಿದೆ. ಸಂವಿಂಧಾನಾತ್ಮಕ ಕಾನೂನುಗಳನ್ನು ತಿದ್ದುಪಡಿಯ ನೆಪದಲ್ಲಿ ಕೋಡ್ ಆಗಿ ಮಾರ್ಪಡಿಸಿ ಕೇಂದ್ರ ಸರಕಾರ ಅನ್ಯಾಯವೆಸಗುತ್ತಿದೆ. ಚಾರಿತ್ರಿಕ ಹಿನ್ನೆಲೆಯಿರುವ ಕಾನೂನುಗಳೆಲ್ಲಾ ಕೈ ತಪ್ಪಿ ಹೋಗಲಿವೆ ಎಂಬ ಆತಂಕ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಕೆ ಬೀಡಿ ವರ್ಕರ್ಸ್ ಫೆಡರೇಶನ್ ಅಧ್ಯಕ್ಷರಾದ ವಿ.ಎಸ್.ಬೇರಿಂಜ ಅಧ್ಯಕ್ಷೀಯ ಭಾಷಣದಲ್ಲಿ ಎಐಟಿಯುಸಿ ನಡೆಸಿದ ಕಾನೂನು ಹೋರಾಟದ ಪರಿಣಾಮ ಬೀಡಿಕಾರ್ಮಿಕರಿಗೆ 2015ರಿಂದ2018ರ ವರೆಗೆ ಪಾವತಿಸದೇ ಬಾಕಿ ಇರಿಸಿದ ತುಟ್ಟಿಭತ್ತೆ ರೂ.12.75ರ ಬಗ್ಗೆ 2023ರಲ್ಲೂ ಉಚ್ಚ ನ್ಯಾಯಾಲಯ ಮಹತ್ವದತೀರ್ಪು ನೀಡಿತ್ತು. ಅದೇ ನ್ಯಾಯಾಲಯದಲ್ಲಿಇನ್ನೊಂದು ವಿವಾದದಲ್ಲಿ ವಿರುದ್ಧವಾಗಿ ತೀರ್ಪು ಬಂದಿರುವ ಬಗ್ಗೆ ಪುನರ್ ಪರಿಶೀಲಿಸುವಂತೆ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಎಐಟಿಯುಸಿ ಯಿಂದ ಪತ್ರ ಬರೆಯಲಾಗಿದೆ. ಕಾರ್ಮಿಕರಿಗೆ ರೂ. 12.75 ತುಟ್ಟಿಭತ್ತೆ ಬಾಕಿ ಪಾವತಿ ನೀಡಲು ನಮ್ಮ ಹೋರಾಟ ಬೆಂಗಳೂರಿನಲ್ಲೂ ಮುಂದುವರಿಯಲಿದೆ.ಅದಕ್ಕೆ ಪೂರಕವಾಗಿ ಮುಂದಿನ ತಿಂಗಳ ಫೆಬ್ರವರಿ1ರಂದು ರಾಜ್ಯದಎಲ್ಲಾ ಅಸಂಘಟಿತ ಕ್ಷೇತ್ರದ ಕಾರ್ಮಿಕರು ಸುಮಾರು 50 ಸಾವಿರ ಜನ ಎಐಟಿಯುಸಿ ಸಂಘಟನೆಯಡಿ ಒಟ್ಟು ಸೇರಿ ಬೆಂಗಳೂರು ಚಲೋ ಚಳವಳಿ ನಡೆಸಿ ರಾಜ್ಯ ಸರಕಾರದ ಮುಂದೆ ತಮ್ಮ ಹಕ್ಕೊತ್ತಾಯ ಮಂಡಿಸಲಿದ್ದಾರೆ ಎಂದರು
ಸಮಾವೇಶವನ್ನುದ್ದೇಶಿಸಿ ರಾಷ್ಟ್ರೀಯ ಬೀಡಿ ಫೆಡರೇಶನ್ ನ ರಾಷ್ಟ್ರೀಯ ಉಪ ಕಾರ್‍ಯದರ್ಶಿ ಬಿಹಾರದ ಗಜಫರ್ ನವಾಬ್, ಫೆಡರೇಶನ್ ನ ಉಪಾಧ್ಯಕ್ಷೆ ಒರಿಸ್ಸಾದ ಸರೋಜಿನಿ ಆಚಾರ್ಯ, ಇನ್ನೋರ್ವ ಉಪ ಕಾರ್‍ಯದರ್ಶಿ ಮಿತ್ರ ಬಾನು, ಎಸ್.ಕೆ ಬೀಡಿ ವರ್ಕರ್ಸ್ ಫೆಡರೇಶನ್ ನ ಉಪಾಧ್ಯಕ್ಷೆ ಉಮಾವತಿ ಕುರ್ನಾಡು ಮಾತನಾಡಿದರು.
ಸಿಪಿಐ ಮಾಜೀ ಜಿಲ್ಲಾ ಕಾರ್‍ಯದರ್ಶಿ ವಿ.ಕುಕ್ಯಾನ್, ಎಸ್.ಕೆ.ಬೀಡಿ ವರ್ಕರ್ಸ್ ಫೆಡರೇಶನ್ ಸಹಕಾರ್‍ಯದರ್ಶಿ ಕರುಣಾಕರ ಮಾರಿಪಳ್ಳ, ಕೆ.ಎಸ್.ಆರ್.ಟಿ.ಸಿ ಸ್ಟಾಫ್ ಮತ್ತು ವರ್ಕರ್‍ಸ್ ಯೂನಿಯನ್ ಮಂಗಳೂರು ವಿಭಾಗದ ಅಧ್ಯಕ್ಷ ಪ್ರವೀಣ್ ಕುಮಾರ್, ಎಸ್.ಕೆ ಬೀಡಿ ವರ್ಕರ್ಸ್ ಫೆಡರೇಶನ್ ಉಪಾಧ್ಯಕ್ಷರುಗಳಾದ ಬಿ.ಎಂ ಹಸೈನಾರ್ ವಿಟ್ಲ , ಬಿ.ನಾರಾಯಣ, ಬಂಟ್ವಾಳ ತಾಲೂಕು ಬೀಡಿ ಲೇಬರ್ ಯೂನಿಯನ್ ನ ಅಧ್ಯಕ್ಷ ಬಿ.ಬಾಬು ಭಂಡಾರಿ, ಬೀಡಿ ಮತ್ತು ಟೊಬೆಕ್ಕೊ ಲೇಬರ್ ಯೂನಿಯನ್ ಮಂಗಳೂರು ಅಧ್ಯಕ್ಷೆ ಸುಲೋಚನ ಕವತ್ತಾರು, ಉಡುಪಿ ತಾಲೂಕು ಬೀಡಿ ಲೇಬರ್‌ಯೂನಿಯನ್ ಕಾರ್‍ಯದರ್ಶಿ ಶಶಿಕಲಾ ಗಿರೀಶ್, ರಾಷ್ಟ್ರೀಯ ಬೀಡಿ ಫೆಡರೇಶನ್ ಸದಸ್ಯೆ ಶಮಿತಾ ಉಪಸ್ಥಿತರಿದ್ದರು.
ಸಮಾವೇಶಕ್ಕೆ ಮುಂಚಿತವಾಗಿ ಬಂಟ್ವಾಳದ ಎ.ಶಾಂತಾರಾಮ್ ಪೈ ಸ್ಮಾರಕ ಭವನದಿಂದ ಮೆರವಣಿಗೆ ನಡೆಯಿತು. ನೇತೃತ್ವವನ್ನು ಎಐಟಿಯುಸಿ ಜಿಲ್ಲಾ ನಾಯಕರುಗಳಾದ ತಿಮ್ಮಪ್ಪ ಕೆ, ಭಾರತಿ ಪ್ರಶಾಂತ್, ಹರ್ಷಿತ್, ರಾಮ ಮುಗೇರ ವಿಟ್ಲ, ಓ ಕೃಷ್ಣ, ಮಮತಾ, ಮೋಹಿನಿ, ಮೋಹನ್ ಅರಳ, ಎಂ.ಬಿ.ಭಾಸ್ಕರ, ಸುಧಾಕರ, ಕೃಷ್ಣಪ್ಪ ವಾಮಂಜೂರು, ಜಯಂತ.ಕೆ ವಹಿಸಿದ್ದರು. ಎಐಟಿಯುಸಿ ನಾಯಕಿ ಕೇಶವತಿ ಸ್ವಾಗತಿಸಿದರು.ಪ್ರೇಮನಾಥ ಕೆ.ವಂದಿಸಿದರು. ಸುರೇಶ್‌ಕುಮಾರ್ ಬಂಟ್ವಾಳ್ ನಿರೂಪಿಸಿದರು.
Be the first to comment on "ಬೀಡಿ ಉದ್ಯಮ ಉಳಿಸಿ, ಬೀಡಿಕಾರ್ಮಿಕರ ಹಿತ ರಕ್ಷಿಸಿ: ಜಿಲ್ಲಾ ಬೀಡಿ ಕಾರ್ಮಿಕರ ಸಮಾವೇಶದಲ್ಲಿ ವಿಶ್ವನಾಥನ್ ಒತ್ತಾಯ"