ಹಲವು ಸಂಘ, ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳ ಸಹಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ಕಾಲ್ನಡಿಗೆ ಮತ್ತು ಮ್ಯಾರಥಾನ್ ಬಂಟ್ವಾಳ ಆಡಳಿತ ಸೌಧ ಮುಂಭಾಗ ನಡೆಯಿತು. ಮಾದಕ ದ್ರವ್ಯಮುಕ್ತ ಸಮಾಜ ನಿರ್ಮಾಣಕ್ಕಾಗಿ ಈ ಜಾಥಾ ಆಯೋಜಿಸಲಾಗಿದೆ ಎಂದು ಈ ಸಂದರ್ಭ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಮಾತನಾಡಿ, ಮಾದಕ ವಸ್ತುಗಳ ಸೇವನೆ ಮಾಡುವುದು ಕಂಡುಬಂದಲ್ಲಿ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಎಂದು ತಿಳಿಸಿದರು. ವಿದ್ಯಾರ್ಥಿಗಳು ಮಾದಕವಸ್ತುಗಳ ಬಲೆಗೆ ಬೀಳಬಾರದು ಎಂಬ ಎಚ್ಚರಿಕೆಯನ್ನು ನೀಡಿದ ಅವರು ಇದರಿಂದ ಇಡೀ ಕುಟುಂಬ ಸರ್ವನಾಶವಾಗುತ್ತದೆ, ಹಾಗಾಗಿ ಇಂತಹ ಚಟುವಟಿಕೆಗಳಿಂದ ದೂರ ಇರುವಂತೆ ತಿಳಿಸಿದರು.
ಮಾದಕ ಸೇವನೆ ಮಾಡುವವರ ಮೇಲೆ ಪ್ರಕರಣ ದಾಖಲಿಸುವುದು ನಮ್ಮ ಉದ್ದೇಶವಲ್ಲ, ಆದರೆ ಉತ್ತಮ ಸಮಾಜ ನಿರ್ಮಾಣಕ್ಕೆ ಅನಿವಾರ್ಯವಾಗಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಣ ಮಾಡಲೇಬೇಕು ಎಂದು ಅವರು ಹೇಳಿದರು. ಕಳೆದ ವರ್ಷದಿಂದ ಈ ವರ್ಷ ಮಾದಕ ವಸ್ತುಗಳ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಳವಾಗಿದ್ದು, ಉತ್ತಮ ಬೆಳವಣಿಗೆ ಅಲ್ಲ ಎಂದರು. ಅಡಿಸನಲ್ ಎಸ್.ಪಿ.ಧರ್ಮಪ್ಪ, ಡಿ.ವೈ.ಎಸ್.ಪಿ.ವಿಜಯಪ್ರಕಾಶ್ , ಬಂಟ್ವಾಳ ನಗರ ಪೋಲೀಸ್ ಇನ್ಸ್ ಪೆಕ್ಟರ್ ಆನಂತ ಪದ್ಮನಾಭ, ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ವಿಟ್ಲ ಪೋಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಜಿಲ್ಲೆಯಲ್ಲಿ ಮಾದಕ ವಸ್ತು ಸೇವನೆ ಹೆಚ್ಚಳ: ದ.ಕ. ಎಸ್ಪಿ ರಿಷ್ಯಂತ್ ಕಳವಳ"