ತುಂಬೆ ವೆಂಟೆಡ್ ಡ್ಯಾಂನ ಕೆಳಭಾಗದ ಬಲಪಾರ್ಶ್ವದಲ್ಲಿ ಡ್ಯಾಮ್ ನಿಂದ ಹರಿದುಹೋಗುವ ನೀರಿನ ರಭಸಕ್ಕೆ 10 ಎಕರೆಯಷ್ಟು ವಿಸ್ತೀರ್ಣದ ತೋಟ, ಗದ್ದೆ ಕೊಚ್ಚಿಹೋಗಿದ್ದು, ಈ ಕುರಿತು ಗಮನ ಸೆಳೆದರೂ ಆಡಳಿತ, ಜನಪ್ರತಿನಿಧಿಗಳು ಕ್ಯಾರೆನ್ನುತ್ತಿಲ್ಲ. ಸತತ ಮನವಿಯ ಬಳಿಕವೂ ಡ್ಯಾಂನಲ್ಲಿ ನೀರು ನಿಲ್ಲುವ ಹಾಗೂ ಬಿಡುವ ವೈಖರಿಯಿಂದಾಗಿ ತೊಂದರೆ ಆಗುತ್ತಿದ್ದು, ಇನ್ನು ನಾವು ಸಹಿಸುವುದಿಲ್ಲ ಎಂದು ಹೇಳಿರುವ ಸಂತ್ರಸ್ತ ರೈತರು, ಡಿಸೆಂಬರ್ 26ರಂದು ತುಂಬೆಯಲ್ಲಿ ಇರುವ ನೀರು ಸರಬರಾಜು ಸ್ಥಾವರಕ್ಕೆ ಬೀಗ ಜಡಿದು ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಈ ಕುರಿತು ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಎಚ್ಚರಿಸಿದ ರೈತಸಂಘ ಹಸಿರುಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲಗುತ್ತು, ನೀರು ಬಿಡುವ ರಭಸಕ್ಕೆ ಬೆಳೆ ಕೊಚ್ಚಿಕೊಂಡು ಹೋಗಿದೆ. ಮಹಾನಗರ ಪಾಲಿಕೆಯಿಂದ ನಮ್ಮನ್ನು ಸತಾಯಿಸುವ ಕೆಲಸ ಆಗುತ್ತಿದೆ. ಸರಿ ಮಾಡುತ್ತೇವೆ ಎಂದು ಹೇಳಿ ನಾಲ್ಕು ತಿಂಗಳಾದರೂ ಸುದ್ದಿ ಇಲ್ಲ. ಹೀಗಾಗಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ ಎಂದರು.
ಜನಪ್ರತಿನಿಧಿಗಳಿಗೆ ತಿಳಿಸಿದರೂ ಸ್ಪಂದನೆ ಇಲ್ಲ: ಈ ಕುರಿತು ಸ್ಥಳೀಯ ಜನಪ್ರತಿನಿಧಿಗಳು, ಪಾಲಿಕೆ, ಅಧಿಕಾರಿಗಳಿಗೆ ಪತ್ರ ಬರೆದು, ಮೌಖಿಕವಾಗಿ ತಿಳಿಸುತ್ತಾ ಬಂದಿದ್ದರೂ ಯಾವುದೇ ಸ್ಪಂದನೆ ಇಲ್ಲ ಎಂದು ಶ್ರೀಧರ ಶೆಟ್ಟಿ ದೂರಿದರು.ರೈತ ಸಂಘ ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಮಾತನಾಡಿ, ಮುಳುಗಡೆಯಾದ ಜಮೀನಿನ ಒರತೆ ಪ್ರದೇಶಕ್ಕೂ ಪರಿಹಾರ ನೀಡಿಲ್ಲ, ನಮ್ಮನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದರು.ರೈತ ಸಂಘ ತಾಲೂಕು ಕಾರ್ಯದರ್ಶಿ ಎನ್. ಇದಿನಬ್ಬ ಮಾತನಾಡಿ, ಕಳೆದ ಭಾನುವಾರ ಏಳು ಮೀಟರ್ ನೀರು ನಿಲ್ಲಿಸಿದ್ದು, ಇದರಿಂದ ನೇಜಿ ಹಾಕಿದ ಗದ್ದೆ, ಕಟಾವು ಮಾಡಿದ ಗದ್ದೆಗಳು ಮುಳುಗಡೆಯಾಗಿವೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತ ರೈತರಾದ ಭಾಸ್ಕರ್, ಆನಂದ ಶೆಟ್ಟಿ, ಮೊಯ್ದಿನಬ್ಬ, ಲೋಕಯ್ಯ ಸಪಲ್ಯ ಉಪಸ್ಥಿತರಿದ್ದರು.
Be the first to comment on "ಡಿ.26ರಂದು ತುಂಬೆ ನೀರು ಸರಬರಾಜು ಸ್ಥಾವರಕ್ಕೆ ಬೀಗ ಜಡಿದು ಪ್ರತಿಭಟನೆ ಯಾಕೆ? ರೈತಸಂಘ ನೀಡಿದ ಕಾರಣಗಳು ಇವು"