ತನ್ನದೇ ಆದ ವಿಶೇಷ ಸೇವಾ ಕಾರ್ಯಗಳಿಂದ ಗುರುತಿಸಿಕೊಂಡಿರುವ ಮಂಚಿ – ಕೊಳ್ನಾಡು ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಸಂಘವು ತನ್ನ ಶಾಲೆಯ ಹಿರಿಯ ವಿದ್ಯಾರ್ಥಿಗಳಿಗಾಗಿ ಕ್ರೀಡಾಕೂಟ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ, ಗುರುಪುರ ರೋಜಾ ಮಿಸ್ತಿಕಾ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಡಾ.ಆಲಿಸ್ ಡಿ’ಸೋಜಾ ಡಿ ಎಂ “ನಿರಂತರ ಜ್ಞಾನದ ಬೆಳಕು, ಸಂಸ್ಕಾರ, ಗುರುಭಕ್ತಿಯನ್ನು ಬೆಳೆಸಿದ ಈ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಸದ್ವಿಚಾರವನ್ನು ಮೈಗೂಡಿಸಿಕೊಂಡು ಮುನ್ನಡೆಯುತ್ತಿರುವುದು ಸಂತಸದಾಯಕ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಹಿರಿಯ ವಿದ್ಯಾರ್ಥಿ ಸಂಘದ ಸಾಧನೆಯ ಸಿಂಹಾವಲೋಕನ ಕಿರು ಹೊತ್ತಗೆಯನ್ನು ಬಿಡುಗಡೆ ಮಾಡಿದ ಶಾಲೆಯ ಆರಂಭ ವರ್ಷದ ಮೊದಲ ದಾಖಲಾತಿಯಾದ ದಾಖಲೆ ಹೊಂದಿರುವ ಪ್ರಸ್ತುತ ಪಾಣೆಮಂಗಳೂರು ಶಾರದಾ ಪ್ರೌಢಶಾಲೆಯ ಶಿಕ್ಷಕಿ ಉಮಾಕಿಶೋರಿ ಶಾಲಾ ಆರಂಭದ ಹುಮ್ಮಸ್ಸಿನ ದಿನಗಳನ್ನು ಮೆಲುಕು ಹಾಕಿದರು.
ಅತಿಥಿಗಳಾದ ಶಾಲಿಮಾರ್ ಗ್ರೂಪ್ ನ ಬಶೀರ್ ಅಹ್ಮದ್, ಬದಿಯಡ್ಕ ಶ್ರೀ ದುರ್ಗಾ ಸ್ಕೂಲ್ ಆಫ್ ಮ್ಯೂಸಿಕ್ ನ ಅಶ್ವಿನಿರಾಜ್, ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರಾದ ಬಾಲಕೃಷ್ಣ ಸೆರ್ಕಳ, ಶಾಲಾ ಮುಖ್ಯೋಪಾಧ್ಯಾಯಿನಿ ಸುಶೀಲಾ ವಿಟ್ಲ, ಶಾಲಾ ಸ್ಥಳದಾನಿ ನೂಜಿಬೈಲು ನಾರಾಯಣ ಭಟ್ ಸೇರಿದಂತೆ ಗಣ್ಯರು ಹಾಜರಿದ್ದು ಶುಭಹಾರೈಸಿದರು.
ಶಾಲೆಯ ನಿವೃತ್ತ ಮುಖ್ಯಶಿಕ್ಷಕರಾದ ರಾಧಾಕೃಷ್ಣ ಭಟ್, ಸಾಧಕ ಹಿರಿಯ ವಿದ್ಯಾರ್ಥಿಗಳಾದ ರಮಾನಂದ ನೂಜಿಪ್ಪಾಡಿ, ನಿಶ್ಚಲ್ ಶೆಟ್ಟಿ ಕಲ್ಲಾಡಿ, ಮಮತಾ ಶೆಟ್ಟಿ ಯವರಿಗೆ ಗೌರವ ಸನ್ಮಾನ ನಡೆಯಿತು. ಶಾಲೆಯ ಬೆಳವಣಿಗೆಗೆ ಸಹಕರಿಸಿದ ನಿಕಟಪೂರ್ವ ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷರಾಗಿದ್ದ ಪ್ರವೀಣ್ ಕೊಟ್ಟಾರಿ ಅವರನ್ನು ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ವರ್ಷದ ಒಟ್ಟು ಸೇವಾ ಕಾರ್ಯಗಳ ಸಂಪುಟ ‘ಸಾಧನಾ’ ಕಿರು ಹೊತ್ತಗೆಯನ್ನು ಬಿಡುಗಡೆಗೊಳಿಸಲಾಯಿತು. ಶಾಲಾ ಇತಿಹಾಸಕ್ಕೆ ಸಂಬಂಧಿಸಿದಂತೆ ವಾರದ ರಸಪ್ರಶ್ನೆ ವಾಟ್ಸಪ್ ಮೂಲಕ ನಿರಂತರವಾಗಿ ನಡೆಸಲಾಗಿತ್ತು. ಇದರ ವಿಜೇತರಿಗೆ ಸಪ್ತ ಜ್ಯುವೆಲ್ಸ್ ವಿಟ್ಲ ಪ್ರಾಯೋಜಿಸಿದ ಬೆಳ್ಳಿ ಯ ನಾಣ್ಯವನ್ನು ಬಹುಮಾನವಾಗಿ ನೀಡಲಾಯಿತು. ಮಹಿಳೆಯರಿಗೆ ಮತ್ತು ಪುರುಷರಿಗೆ ಹಾಗೂ ಪುಟಾಣಿ ಮಕ್ಕಳಿಗೆ ವಿವಿಧ ಕ್ರೀಡಾಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಸಂಘದ ಅಧ್ಯಕ್ಷರಾದ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿ, ಉಪನ್ಯಾಸಕ ಎಂ.ಡಿ.ಮಂಚಿ ವಂದಿಸಿದರು. ರಮಾನಂದ ನೂಜಿಪ್ಪಾಡಿ ವರದಿ ವಾಚಿಸಿದರು. ಹರಿಪ್ರಸಾದ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಮಂಚಿ ಕೊಳ್ನಾಡು ಪ್ರೌಢಶಾಲಾ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ, ಕ್ರೀಡಾಕೂಟ"