ಮಂಗಳೂರು-ಬಿ.ಸಿ.ರೋಡು ಚತುಷ್ಪಥ ಹೆದ್ದಾರಿಯ ಡಿವೈಡರ್ ಮಧ್ಯೆ ಗಿಡ ನೆಡುವ ಉದ್ದೇಶದಿಂದ ಹೊಂಡಗಳನ್ನು ತೆಗೆಯಲಾಗಿದ್ದು, ಗಿಡಗಳನ್ನು ನೆಡದೆ ಹೊಂಡ ಹಾಗೇ ಇರುವುದರಿಂದ ಅದಕ್ಕೆ ಬಿದ್ದು ಕೈಕಾಲುಗಳಿಗೆ ಗಂಭೀರ ಗಾಯ ಮಾಡಿಕೊಂಡ ಘಟನೆಗಳು ನಡೆದಿವೆ.
ಮಳೆಗಾಲ ಪ್ರಾರಂಭದಲ್ಲೇ ಈ ರೀತಿ ಡಿವೈಡರ್ ಮಧ್ಯೆ ಹೊಂಡ ತೆಗೆದಿದ್ದು, ಈಗ ಮಳೆ ದೂರವಾದರೂ ಇನ್ನೂ ಗಿಡಗಳನ್ನು ನೆಟ್ಟಿಲ್ಲ. ಗಿಡಗಳನ್ನು ನೆಡುವುದಿಲ್ಲವೆಂದಾದರೆ ಹೊಂಡಗಳನ್ನು ಯಾಕೆ ತೆಗೆಯಲಾಗಿದೆ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ. ಪ್ರಸ್ತುತ ಹೊಂಡವನ್ನು ಹುಲ್ಲು ಆಚರಿಸಿದ್ದು, ಹೀಗಾಗಿ ಯಾರಿಗೂ ಹೊಂಡ ಇರುವುದು ಗಮನಕ್ಕೆ ಬರುವುದಿಲ್ಲ. ಬಿ.ಸಿ.ರೋಡು-ಮಂಗಳೂರು ಹೆದ್ದಾರಿ ಮಧ್ಯೆ ಬೀದಿದೀಪಗಳನ್ನು ಹಾಕುವ ಬೇಡಿಕೆ ಹಾಗೇ ಇದ್ದು, ಕನಿಷ್ಠ ಪಕ್ಷ ಬೀದಿದೀಪ ಇದ್ದರೂ ಹೊಂಡ ಗಮನಕ್ಕೆ ಬರುತ್ತದೆ. ಜಂಕ್ಷನ್ ಪ್ರದೇಶಗಳಲ್ಲಿ ರೋಡ್ ಕ್ರಾಸ್ ಮಾಡುವುದಕ್ಕೆ ಝಿಬ್ರಾ ಕ್ರಾಸ್‌ನಂತಹ ವ್ಯವಸ್ಥೆಗಳು ಇಲ್ಲದೇ ಇರುವುದರಿಂದ ಜನರು ಡಿವೈಡರ್ ಹತ್ತಿಯೇ ಹೆದ್ದಾರಿ ದಾಟುವ ಸ್ಥಿತಿ ಇದೆ ಎಂಬ ಆರೋಪಗಳು ಕೇಳಿಬರುತ್ತಿದೆ.
ಡಿವೈಡರ್ ಮಧ್ಯೆ ಮಳೆಗಾಲದ ಆರಂಭದಲ್ಲೇ ಸುಮಾರು ನಾಲ್ಕೈದು ಅಡಿಗಳ ಅಂತರದಲ್ಲಿ ಸುಮಾರು ಒಂದೆರಡು ಅಡಿ ಆಳಕ್ಕೆ ಹೊಂಡ ತೆಗೆಯಲಾಗಿತ್ತು., ಜನತೆ ವಾಹನಗಳನ್ನು ತಪ್ಪಿಸಿಕೊಂಡು ಹೆದ್ದಾರಿ ದಾಟುವ ಸಂದರ್ಭ ಹೊಂಡಗಳಿರುವುದು ತಿಳಿಯದೆ ಹೊಂಡಕ್ಕೆ ಬೀಳುತ್ತಿದ್ದಾರೆ. ಇದರಿಂದಾಗಿ ಈಗಾಗಲೇ ಎರಡು ಘಟನೆಗಳು ನಡೆದಿರುವುದು ತಿಳಿದುಬಂದಿದ್ದು, ಗಮನಕ್ಕೆ ಬಾರದೆ ಸಾಕಷ್ಟು ಘಟನೆಗಳು ವರದಿಯಾಗಿರುವ ಸಾಧ್ಯತೆ ಇದೆ.
ತುಂಬೆಯ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಮಡಂತ್ಯಾರು ಮೂಲದ ಕಾರ್ಮಿಕನೋರ್ವ ನ. 10ರಂದು ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ತುಂಬೆ ಜಂಕ್ಷನ್‌ನಲ್ಲಿ ಹೆದ್ದಾರಿ ಕ್ರಾಸ್ ಮಾಡುವ ಸಂದರ್ಭ ಡಿವೈಡರ್‌ನಲ್ಲಿ ಅವರ ಒಂದು ಕಾಲು ಹೊಂಡ ಹಾಗೂ ಮತ್ತೊಂದು ಕಾಲು ಹೆದ್ದಾರಿಗೆ ಚಾಚಿ ಬಿದ್ದಿದ್ದು, ಅವರ ಕಾಲಿನ ಮೇಲೆ ಬಸ್ಸು ಹರಿದು ಗಂಭೀರ ಗಾಯಗೊಂಡು ಪ್ರಸ್ತುತ ಆತ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನ. 16ರಂದು ಕಡೆಗೋಳಿಯಲ್ಲಿ ಸ್ಥಳೀಯ ಯುವಕನೋರ್ವ ಅದೇ ರೀತಿ ಹೊಂಡಕ್ಕೆ ಬಿದ್ದು ಗಾಯವಾಗಿದೆ
Be the first to comment on "ಮಂಗಳೂರು – ಬಿ.ಸಿ.ರೋಡ್ ಚತುಷ್ಪಥ ಡಿವೈಡರ್ ಮಧ್ಯೆ ಹೀಗ್ಯಾಕೆ ಹೊಂಡ? ಗಿಡವೂ ನೆಡೋದಿಲ್ಲ, ಹೊಂಡಕ್ಕೆ ಬಿದ್ದು ಕೈಕಾಲು ಮುರಿತವೂ ಆಗುತ್ತಿದೆ!!"