ಬಿಜೆಪಿಯಲ್ಲಿ ಅಭ್ಯರ್ಥಿಯನ್ನು ವರಿಷ್ಠರು ತೀರ್ಮಾನಿಸುತ್ತಾರೆ. ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗುವುದಕ್ಕೆ ಬಿಜೆಪಿಯಲ್ಲಿ ಅಸಾಧ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಂಟ್ವಾಳದಲ್ಲಿ ಅವರು ಬಿಜೆಪಿ ಬಂಟ್ವಾಳ ಮಂಡಲ ಕಾರ್ಯ ನಿರ್ವಹಣಾ ತಂಡದ ಸಭೆಯಲ್ಲಿ ಮಾತನಾಡಿದರು.
ಜವಾಬ್ದಾರಿಯ ಕಾರ್ಯಕರ್ತರಾದ ನಮಗೆ ಕಮಲದ ಚಿಹ್ನೆ ಮಾತ್ರ ನಮ್ಮ ಕಣ್ಮುಂದೆ ಇರುತ್ತದೆಯೇ ಹೊರತು ವ್ಯಕ್ತಿಯಲ್ಲ. ಬಿಜೆಪಿಯಲ್ಲಿ ಮಾತ್ರ ಸಾಮಾನ್ಯ ಕಾರ್ಯಕರ್ತರು ಉನ್ನತವಾದ ಸ್ಥಾನವನ್ನು ಪಡೆಯುವುದಕ್ಕೆ ಸಾಧ್ಯ. ಇಲ್ಲಿ ಪಕ್ಷಕ್ಕಾಗಿ ಶ್ರಮಿಸುವ ಕಾರ್ಯಕರ್ತ ಶಾಸಕನಾಗಬಹುದು ಅಥವಾ ಸಂಸದನಾಗಬಹುದು. ಆದರೆ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ನಮ್ಮ ಪಾರ್ಟಿಯಲ್ಲಿ ಅಭ್ಯರ್ಥಿ ಯಾರೆಂಬುವುದನ್ನು ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಷ್ಟ್ರೀಯ ಸಮಿತಿ ನಿರ್ಧರಿಸುತ್ತಾರೆ. ಹಾಗಾಗಿ ನಮ್ಮ ಕಣ್ಮುಂದೆ ಇರುವ ಧ್ಯೇಯ ಪಥ ನಮ್ಮ ಸದ್ವಿಚಾರಗಳು ಮತ್ತು ಸದುದ್ಧೇಶಗಳು ರಾಷ್ಟ್ರ ಚಿಂತನೆಯ ಆಧಾರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು. ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಿ ರಾಷ್ಷ್ಟವನ್ನು ಪರಮ ವೈಭವದ ಸ್ಥಿತಿಗೆ ಕೊಂಡೊಯ್ಯುವುದು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪಕ್ಷದ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಬಂಟ್ವಾಳ ಮಂಡಲದಲ್ಲಿ ಬಿಜೆಪಿಯ ಇತೀಚಿನ ಸಂಘಟನಾತ್ಮಕ ಕಾರ್ಯ ಚಟುವಟಿಕೆಗಳ ಮಾಹಿತಿ ನೀಡಿದರು.
ಶಾಸಕ ರಾಜೇಶ್ ನಾಯ್ಕ್ ಮಾತಾಡಿ, ಪ್ರತಿ ಚುನಾವಣೆಯಿಂದ ಚುನಾವಣೆಗೆ ನಾವು ಬಹಳಷ್ಟು ಪಾಠಗಳನ್ನು ಕಲಿಯುವುದಕ್ಕೆ ಸಾಧ್ಯವಾಗುತ್ತದೆ. ಮುಂದೆ ಬರುವ ರಾಷ್ಟ್ರದ ಭವಿಷ್ಯ ಬರೆಯುವ ಚುನಾವಣೆಗೆ ಕಾರ್ಯಕರ್ತರು ಈಗಲೇ ಸಿದ್ಧರಾಗಬೇಕು ಎಂದರು.
ಜಿಲ್ಲಾಧ್ಯಕ್ಷರಾದ ಸುದರ್ಶನ್ ಮೂಡಬಿದ್ರೆಯವರು ಸಭೆಯನ್ನುದ್ಧೇಶಿಸಿ ಸಂಘಟನಾತ್ಮಕ ಮಾತುಗಳನ್ನಾಡಿದರು. ಮಾಜಿ ಸಚಿವರಾದ ಡಿ.ಬಿ.ಚಂದ್ರೇಗೌಡರಿಗೆ ಮಂಡಲದ ಬಿಜೆಪಿಯ ನಿಕಟಪೂರ್ವ ಅಧ್ಯಕ್ಷರಾದ ದೇವದಾಸ್ ಶೆಟ್ಟಿಯವರ ನುಡಿ ನಮನದೊಂದಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ರಾಜ್ಯ ಮಾಧ್ಯಮ ಪ್ರಮುಖರಾದ ವಿಕಾಸ್ ಪುತ್ತೂರು ನೈರುತ್ಯ ಪದವೀಧರ ಕ್ಷೇತ್ರ ಮತ್ತು ಶಿಕ್ಷಣ ಕ್ಷೇತ್ರದ ಚುನಾವಣೆ ಮತ್ತು ಮತದಾರರನ್ನು ನೋಂದಾಯಿಸುವ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪ್ರಭಾರಿಗಳಾದ ರಾಜೇಶ್ ಕಾವೇರಿ, ಬಂಟ್ವಾಳ ಮಂಡಲ ಪ್ರಭಾರಿ ಕೊರಗಪ್ಪ ನಾಯ್ಕ ಉಪಸ್ಥಿತರಿದ್ದರು. ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಕಸ್ತೂರಿ ಪಂಜ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ ಸಹಿತ ಹಲವರು ಪಾಲ್ಗೊಂಡಿದ್ದರು.
ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ವಂದಿಸಿದರು. ಮಂಡಲ ಯುವಮೋರ್ಚಾ ಅಧ್ಯಕ್ಷರಾದ ಕಿಶೋರ್ ಪಲ್ಲಿಪಾಡಿ ವಂದೇ ಮಾತರಂ ಗೀತೆ ಹಾಡಿದರು ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಅಭ್ಯರ್ಥಿ ತೀರ್ಮಾನ ವರಿಷ್ಠರದ್ದು, ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗಾಡುವುದು ಬಿಜೆಪಿಯಲ್ಲಿ ಸಾಧ್ಯವಿಲ್ಲ: ಬಂಟ್ವಾಳದಲ್ಲಿ ನಳಿನ್ ಕುಮಾರ್ ಕಟೀಲ್"