ಭಾರತ ಉಳಿಸಲು ಹಿಂದುಗಳು ಒಟ್ಟಾಗುವ ಅವಶ್ಯಕತೆ ಇದ್ದು, ರಾಷ್ಟ್ರಭಕ್ತಿಯ ಕಿಚ್ಚು ನಮ್ಮೊಳಗಿರಲಿ ಎಂದು ಮಧ್ಯಪ್ರದೇಶದ ಸಾಧ್ವಿ ದೇವಿ ಸರಸ್ವತಿ ಜೀ ಹೇಳಿದ್ದಾರೆ.
ವಿಶ್ವ ಹಿಂದು ಪರಿಷದ್ 60ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭ ಬಜರಂಗದಳ ವತಿಯಿಂದ ಶೌರ್ಯ ಜಾಗರಣಾ ಯಾತ್ರೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಸ್ತಿಪಡ್ಪು ಮೈದಾನದಲ್ಲಿ ನಡೆದ ಜಾಗೃತ ಹಿಂದು ಸಮಾವೇಶದಲ್ಲಿ ಭಾನುವಾರ ಅವರು ದಿಕ್ಸೂಚಿ ಭಾಷಣ ಮಾಡಿದರು.
ಶಿವಮೊಗ್ಗ ಘಟನೆ ಕುರಿತು ಪ್ರಸ್ತಾಪಿಸಿದ ಅವರು ನಾನು ಮುಸಲ್ಮಾನ ವಿರೋಧಿಯಲ್ಲ, ಆದರೆ ಹಿಂದುಗಳ ವಿರೋಧಿಯಾಗಿರುವ ಸನಾತನ ಧರ್ಮದ ವಿರುದ್ಧ ಮಾತನಾಡುವವರನ್ನು ವಿರೋಧಿಸುತ್ತೇನೆ ಎಂದರು. ಹಿಂದುಗಳಲ್ಲಿ ಒಗ್ಗಟ್ಟು ಇರಬೇಕು ಎಂದ ಅವರು ನಾವು ಸಂಘಟನೆ ಅಡಿಯಲ್ಲಿ ಒಂದೇ ಜಾತಿಗೆ ಸೇರಿದವರು, ನಮ್ಮಲ್ಲಿ ಒಗ್ಗಟ್ಟಿರಬೇಕು. ಹನುಮಂತನಂತೆ ಮುಷ್ಠಿ ಎತ್ತಬೇಕು ಎಂದರು.
ಆರೆಸ್ಸೆಸ್ ನ ಜ್ಯೇಷ್ಠ ಪ್ರಚಾರಕರಾದ ಸು.ರಾಮಣ್ಣ ಮಾತನಾಡಿ, ವಿಹಿಂಪ, ಬಜರಂಗದಳ ಕಾರ್ಯಕರ್ತರು ವಿರಮಿಸದೆ ಕೆಲಸ ಮಾಡಬೇಕು, ಮಲಗಿದವರನ್ನು ಎಬ್ಬಿಸುವ ಕಾರ್ಯ ಮಾಡಬೇಕು. ಶೌರ್ಯ ವಿಜೃಂಭಿಸಿದರೆ, ಕ್ರೌರ್ಯ ತನ್ನಷ್ಟಕೆ ನಾಶವಾಗುತ್ತದೆ ಶೌರ್ಯಕ್ಕೆ ಶೀಲ ಇಲ್ಲದಿದ್ದರೆ ರಾಕ್ಷಸೀ ಪ್ರವೃತ್ತಿ ಬೆಳೆಯುತ್ತದೆ ಎಂದರು.
ಶೌರ್ಯ ಜಾಗರಣಾ ರಥಯಾತ್ರೆ ಸ್ವಾಗತ ಸಮಿತಿ ರಘು ಎಲ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕಿನ ಸಂತರಾದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಶ್ರೀ ಕಣಿಯೂರು ಮಹಾಬಲ ಸ್ವಾಮೀಜಿ ವಿಹಿಂಪ ಕರ್ನಾಟಕ ದ.ಪ್ರಾಂತ ಕಾರ್ಯಾಧ್ಯಕ್ಷ ಡಾ. ಎಂ.ಬಿ.ಪುರಾಣಿಕ್ ಮತ್ತು ವಿಹಿಂಪ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ ಭಾಗವಹಿಸಿದ್ದರು.ವಿಶ್ವ ಹಿಂದು ಪರಿಷತ್ ಬಂಟ್ವಾಳ ಅಧ್ಯಕ್ಷ ಹಾಗೂ ರಥಯಾತ್ರೆ ಸ್ವಾಗತ ಸಮಿತಿ ಕಾರ್ಯದರ್ಶಿ ಪ್ರಸಾದ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಬಿ.ಭಾಸ್ಕರ ರಾವ್ ಪ್ರೇರಣಾ ಗೀತೆ ಹಾಡಿದರು. ನವೀನ್ ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು. ಸಚಿನ್ ಮೆಲ್ಕಾರ್ ವಂದಿಸಿದರು.
ವಿಶ್ವ ಹಿಂದು ಪರಿಷದ್ ಸ್ಥಾಪನೆಯಾಗಿ 60ನೇ ವರ್ಷಕ್ಕೆ ಕಾಲಿಡುತ್ತಿರುವ ಸಂಭ್ರಮದಲ್ಲಿ ಶೌರ್ಯ ಜಾಗರಣಾ ರಥಯಾತ್ರೆ ಬಂಟ್ವಾಳ ತಾಲೂಕಿಗೆ ಭಾನುವಾರ ಆಗಮಿಸಿದ್ದು, ಬಿ.ಸಿ.ರೋಡ್ ಸಮೀಪ ಬಸ್ತಿಪಡ್ಪುವಿನಲ್ಲಿ ಜಾಗೃತ ಹಿಂದು ಸಮಾವೇಶ ನಡೆಯಿತು. ಇದಕ್ಕೂ ಮುನ್ನ ಮಾಣಿ ಜಂಕ್ಷನ್ ಗೆ ಯಾತ್ರೆ ಪ್ರವೇಶಿಸಿ, ಅಲ್ಲಿ ಸಂಘಪರಿವಾರದ ಪ್ರಮುಖರು ಪುಷ್ಪಾರ್ಚನೆ ಮೂಲಕ ರಥವನ್ನು ಸ್ವಾಗತಿಸಿದರು. ಆರೆಸ್ಸೆಸ್ ಹಿರಿಯ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್, ಶಾಸಕ ರಾಜೇಶ್ ನಾಯ್ಕ್, ಮಾಜಿ ಶಾಸಕರಾಧ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ ಸಹಿತ ಪ್ರಮುಖರು ಸಭೆಯಲ್ಲಿದ್ದರು.
Be the first to comment on "ಹಿಂದುಗಳು ಒಗ್ಗಟ್ಟಾಗಿ, ರಾಷ್ಟ್ರಭಕ್ತಿಯ ಕಿಚ್ಚು ನಮ್ಮೊಳಗಿರಲಿ – ಸಾಧ್ವಿ ದೇವಿ ಸರಸ್ವತಿ"