ಬಂಟ್ವಾಳ: ಚಿಟ್ಟೆಗಳ ಜೀವನಚಕ್ರ ಹೇಗಿರುತ್ತದೆ ಎಂಬ ಪ್ರತ್ಯಕ್ಷದರ್ಶನವನ್ನು ಕಲ್ಲಡ್ಕದ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನೀಡುವ ಕಾರ್ಯ ನಡೆಸಲಾಯಿತು.
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಸಂಘದ ವಿದ್ಯಾರ್ಥಿಗಳು ಚಿಟ್ಟೆಗಳ ಜೀವನಚಕ್ರದ ನಾಲ್ಕು ಹಂತಗಳನ್ನು ಶಾಲಾ ಪರಿಸರದಲ್ಲಿ ಮೂರು ವಾರಗಳಿಂದ ವಿವಿಧ ಹಂತದಲ್ಲಿ ನಿರಂತರ ಅಧ್ಯಯನ ಮಾಡಿದರು. ಇವುಗಳಲ್ಲಿ ಮೊಟ್ಟೆ , ಲಾರ್ವ, ಪೊರೆ, ಮತ್ತು ವಯಸ್ಕ ಹಂತದ ಬಗ್ಗೆ ತಿಳಿದುಕೊಂಡು ಮೊಟ್ಟೆಯಿಂದ ಚಿಟ್ಟೆಗಳು ಹೊರಬರುವ ಹಂತದವರೆಗೆ ಗಮನಿಸಿ, ಮಾಡಿ ಪ್ರತಿ ಹಂತವನ್ನು ದಾಖಲಿಸಿ ಲಾರ್ವದಿಂದ ಹೊರಬಂದ ಚಿಟ್ಟೆಯ ಚಟುವಟಿಕೆಗಳನ್ನು ವೀಕ್ಷಿಸಿದರು. ನಂತರ ವಿದ್ಯಾರ್ಥಿಗಳು ಲಾರ್ವದಿಂದ ಹೊರಬಂದ ಸರಿಸುಮಾರು ನೂರು ಚಿಟ್ಟೆಗಳನ್ನು ಪರಿಸರಕ್ಕೆ ಬಿಡುವ ಮೂಲಕ ಮಾದರಿಯಾದರು.
ತರಬೇತುದಾರರಾದ ರಮ್ಯ ಜೆ ಮಂಚಿ ಮಾತನಾಡಿ ಜೀವನ ಚಕ್ರವು ಅತ್ಯಂತ ವಿಶಿಷ್ಟವಾದದ್ದು ಶಾಲೆಯಲ್ಲಿ ಇದರ ಕಾರ್ಯಗಾರವನ್ನು ನಡೆಸಿರುವುದರಿಂದಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ, ಪರಿಸರ ಕಾಳಜಿಯೊಂದಿಗೆ ಸಂಶೋಧನಾ ಚಟುವಟಿಕೆಗಳು ಪ್ರಾಥಮಿಕ ಹಂತದಿಂದಲೇ ಬೆಳೆಯುವುದು.ಎಂದರು.
ಏಳನೇ ತರಗತಿಯ ವಿದ್ಯಾರ್ಥಿಯಾಗಿರುವ ಕೃಷ್ಣಕುಮಾರ ಮಾತನಾಡಿ, ಶಾಲೆಯಲ್ಲಿ ನಡೆಸಿದ ಈ ಅಧ್ಯಯನ ವಿಷಯವು ಆಸಕ್ತಿದಾಯಕವಾಗಿದ್ದು ನಾನು ಮನೆಯ ತೋಟದಲ್ಲಿ ಅನೇಕ ಲಾರ್ವಗಳನ್ನು ಸಂಗ್ರಹಿಸಿದ್ದು ಚಿಟ್ಟೆಗಳಾಗಿ ಪರಿವರ್ತಿಸಿ ಪರಿಸರಕ್ಕೆ ಬಿಡುವಸಿದ್ಧತೆ ನಡೆಸಿದ್ದೇನೆ ಎಂದನು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ವಿಶೇಷ ತರಬೇತುದಾರರಾಗಿ ವಿಜ್ಞಾನ ಅಧ್ಯಾಪಕರಾದ ಜ್ಯೋತಿ, ಪೂರ್ಣಿಮ ಭಾಗವಹಿಸಿ ಕಾರ್‍ಯಗಾರವನ್ನು ನಡೆಸಿಕೊಟ್ಟರು. ಅಧ್ಯಾಪಕರಾದ ಸುಮಂತ್ ಎಂ ಮರುವಾಳ, ಬಾಲಕೃಷ್ಣ ಸಹಕರಿಸಿದರು.
Be the first to comment on "ಚಿಟ್ಟೆಗಳ ಜೀವನಚಕ್ರ ಹೇಗಿರುತ್ತದೆ? ಶ್ರೀರಾಮ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಅಧ್ಯಯನ ಕಾರ್ಯಾಗಾರ"