ವಿಟ್ಲ – ಬಂಟ್ವಾಳದ ಸಾಂಸ್ಕೃತಿಕ ಬದುಕಿಗೆ ಹೊಸ ಆಯಾಮ ನೀಡಿದ ಬಹುಮುಖ ಪ್ರತಿಭೆ ಮಂಜು ವಿಟ್ಲ ಇನ್ನಿಲ್ಲ

ಹಿರಿಯ ರಂಗಕರ್ಮಿ, ತರಬೇತುದಾರ ಮಂಜು ವಿಟ್ಲ (76) ಸೆ.6ರ ಮಧ್ಯಾಹ್ನ ಮಂಗಳೂರಿನಲ್ಲಿ ಅಲ್ಪಕಾಲದ ಅಸೌಖ್ಯದ ಬಳಿಕ ನಿಧನ ಹೊಂದಿದರು.  ಪತ್ನಿ, ಮಗಳು, ಅಳಿಯ ಸಹಿತ ಅಪಾರ ಬಂಧು ಮಿತ್ರರನ್ನು ಅವರು ಅಗಲಿದ್ದಾರೆ.

ಬಂಟ್ವಾಳನ್ಯೂಸ್ ಏಳು ವರ್ಷಗಳ ಹಿಂದೆ ಆರಂಭಗೊಂಡಾಗ ಪ್ರೋತ್ಸಾಹ ನೀಡಿದವರು ಮಂಜು ವಿಟ್ಲ. ಸದಭಿರುಚಿಯ ವಿಚಾರಗಳು, ಲೇಖನಗಳು ಮೂಡಲಿ ಎಂದು ಶುಭ ಹಾರೈಸಿದ್ದ ಅವರು, ಸದಾ ಕಿರಿಯರ ಏಳ್ಗೆ ಹಾರೈಸಿದವರು. ಅವರ ಆತ್ಮಕ್ಕೆ ಬಂಟ್ವಾಳನ್ಯೂಸ್ ಬಳಗ ಚಿರಶಾಂತಿಯನ್ನು ಕೋರುತ್ತದೆ – ಹರೀಶ ಮಾಂಬಾಡಿ, ಸಂಪಾದಕ

ಜಾಹೀರಾತು

ಉದಯೋನ್ಮುಖ ಕಲಾವಿದರು ಎಂಬ ತಂಡದ ಮೂಲಕ 60ರ ದಶಕದಲ್ಲಿ ವಿಟ್ಲದ ಸಾಂಸ್ಕೃತಿಕ ಬದುಕಿಗೆ ಹೊಸ ಆಯಾಮವನ್ನು ನೀಡಿದ್ದ ಅವರು ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು. ಸಾಹಿತ್ಯ, ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಹಲವು ಸಂಘಟನೆಗಳ ಸದಸ್ಯರಾಗಿದ್ದರು. ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ತರಬೇತುದಾರರಾಗಿದ್ದ ಅವರು, ಶಿಕ್ಷಣ ಸಂಪನ್ಮೂಲ ಕೇಂದ್ರದ ಮೂಲಕ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಹಲವು ರಂಗಾಸಕ್ತ ತಂಡಗಳಿಗೆ ನಿರ್ದೇಶಕರಾಗಿ, ನಾಟಕ ಕಲಾವಿದರಾಗಿ, ಮೇಕಪ್ ಕಲಾವಿದರಾಗಿ ಆವೆಮಣ್ಣಿನ ಮೂರ್ತಿ ರಚನೆಕಾರರಾಗಿ ಅವರು ಗುರುತಿಸಿಕೊಂಡಿದ್ದಾರೆ. ಬಂಟ್ವಾಳ ಪರಿಸರದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಹಬ್ಬಗಳ ಕಾರ್ಯಕ್ರಮಗಳ ಸಹಿತ ಹಲವಾರು ಕಾರ್ಯಕ್ರಮಗಳ ನಿರ್ವಾಹಕರಾಗಿ, ರಂಗಾಧ್ಯಯನದ ಸಂಪನ್ಮೂಲ ವ್ಯಕ್ತಿಯಾಗಿ ಅವರು ಗುರುತಿಸಿಕೊಂಡಿದ್ದು, ವಿಟ್ಲದಲ್ಲಿ ಉದಯೋನ್ಮುಖ ಕಲಾವಿದರು ತಂಡವನ್ನು ಹುಟ್ಟುಹಾಕಿ, ವಿ.ಮನೋಹರ್ ಸಹಿತ ಹಲವು ಕಲಾವಿದರನ್ನು ತಯಾರು ಮಾಡಿದ್ದರು.ಪರಿಸರದ ಹಲವು ಸಂಘ, ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ. ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಮಂಜು ವಿಟ್ಲದ ಕುರಿತು ಇನ್ನಷ್ಟುವಿವರಗಳಿಗೆ ಮುಂದೆ ಓದಿರಿ.

ಬಹುಮುಖ ಪ್ರತಿಭೆ. ನಾಟಕ ಕಲಾವಿದರಾಗಿ, ನಿರ್ದೇಶಕರಾಗಿ, ಸ್ಲೈಡ್ ಬರಹಗಾರರಾಗಿ, ಮೇಕಪ್ ಕಲಾವಿದರಾಗಿ, ಕಾರ್ಯಕ್ರಮ ನಿರ್ವಾಹಕರಾಗಿ, ಶಿಕ್ಷಣ ತರಬೇತುದಾರರಾಗಿ, ಪಂಚಾಯತ್ ರಾಜ್ ತರಬೇತುದಾರರಾಗಿ ಗುರುತಿಸಿಕೊಂಡದ್ದಲ್ಲದೆ, ವಿಟ್ಲ ಪರಿಸರ, ಫರಂಗಿಪೇಟೆ ಮತ್ತು ಬಂಟ್ವಾಳದಲ್ಲಿ ಸುಮಾರು ನಾಲ್ಕು ದಶಕಗಳಲ್ಲಿ ನಡೆದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೆರೆಮರೆಯಲ್ಲಿದ್ದು ಕಾರ್ಯಕ್ರಮಗಳ ಯಶಸ್ಸಿಗೆ ಶ್ರಮಿಸಿದವರು ಮಂಜು ವಿಟ್ಲ.

ಜಾಹೀರಾತು

ವಿಟ್ಲದ ರಾಘವ ಮಾಸ್ತರ್ ಮತ್ತು ಭವಾನಿ ಟೀಚರ್ ಅವರ ಮಗನಾಗಿ ಜನಿಸಿದ ಅವರು, ವಿಟ್ಲದಲ್ಲಿ ಉದಯೋನ್ಮುಖ ಕಲಾವಿದರು ಎಂಬ ತಂಡವನ್ನು 60ರ ದಶಕದಲ್ಲಿ ಸ್ನೇಹಿತರೊಂದಿಗೆ ಸ್ಥಾಪಿಸಿ, ನಾಟಕ ಪ್ರದರ್ಶನ ನೀಡುತ್ತಿದ್ದರು. ಮಂಜು ವಿಟ್ಲ ಗರಡಿಯಲ್ಲಿ ಪಳಗಿದ ವಿ.ಮನೋಹರ್ ಇಂದು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರೆ, ಕರಾವಳಿಯ ಪ್ರಖ್ಯಾತ ತುಳು ರಂಗಭೂಮಿಯ ಕಲಾವಿದರನ್ನು ಅವರು ತಯಾರು ಮಾಡಿದ್ದಾರೆ. ಚೋಮನ ದುಡಿಯಲ್ಲಿ ಚೋಮನಾಗಿ ಗಂಭೀರ ಪಾತ್ರಗಳ ಅಭಿನಯದ ಜೊತೆಗೆ ಹಾಸ್ಯ ಪಾತ್ರಗಳನ್ನು ಅಷ್ಟೇ ಲೀಲಾಜಾಲವಾಗಿ ಅಭಿನಯಿಸುತ್ತಿದ್ದರು. ಆವೆ ಮಣ್ಣಿನಲ್ಲಿ ಗಣೇಶ ಸಹಿತ ದೇವರ ಮೂರ್ತಿ ರಚನೆ, ಮಂಟಪ ರಚನೆ ಮೂಲಕ ಗಮನ ಸೆಳೆದವರು.

ಕಲಾ ಪ್ರೋತ್ಸಾಹಕ: ದಕ್ಷಿಣ ಕನ್ನಡದುದ್ದಕ್ಕೂ ನಾಟಕಗಳಲ್ಲಿ ಅಭಿನಯಿಸುವುದರೊಂದಿಗೆ ಅವರು ಗಮನ ಸೆಳೆದಿದ್ದರು. ನಟ, ನಿರ್ದೇಶಕರಾಗಿ, ಪ್ರಸಾದನ ತಜ್ಞರಾಗಿ ಗುರುತಿಸಿಕೊಂಡಿದ್ದ ಅವರು, ಗಣೇಶ, ಶಾರದೆ, ಕಾಳಿಯ ಮೃಣ್ಮಯ ಮೂರ್ತಿಗಳನ್ನು ರಚಿಸುವುದರಲ್ಲಿ ಸಿದ್ಧಹಸ್ತರಾಗಿದ್ದರು. ಬ್ಯಾನರ್ ರಚನೆ ಮಾಡುತ್ತಿದ್ದ ಅವರು, ಸಂಗೀತ, ಭರತನಾಟ್ಯದ ಕುರಿತು ಖಚಿತ ಅಭಿಪ್ರಾಯಗಳನ್ನು ಮಂಡಿಸುವವರಾಗಿದ್ದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂಲಕ ತರಬೇತುದಾರರಾಗಿ, ಉತ್ತಮ ಭಾಷಣಕಾರರಾಗಿದ್ದ ಮಂಜು ವಿಟ್ಲ, ಕಾರ್ಯಕ್ರಮ ನಿರೂಪಣೆಯಲ್ಲೂ ಪಳಗಿದವರಾಗಿದ್ದರು. ಹಲವು ಸಾಹಿತ್ಯ ಸಮ್ಮೇಳನಗಳಲ್ಲಿ ತೆರೆಮರೆಯಲ್ಲಿ ದುಡಿದಿದ್ದ ಅವರು, ಕಳೆದ ಬಾರಿ ಅಮ್ಮುಂಜೆಯಲ್ಲಿ ನಡೆದ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ರಂಗಭೂಮಿಯ ಕುರಿತು ವಿಚಾರ ಮಂಡಿಸಿದ್ದರು. ಹೊಸಬರು ನಾಟಕ ರಚಿಸಿದರೆ, ಅದಕ್ಕೆ ಮಂಜು ವಿಟ್ಲ ಅವರದ್ದೇ ನಿರ್ದೇಶನ ಎನ್ನುವಷ್ಟರ ಮಟ್ಟಿಗೆ ಅವರು ಹೊಸ ಕಲಾವಿದರ ಪ್ರೋತ್ಸಾಹಕರಾಗಿದ್ದರು. ಬಂಟ್ವಾಳದಲ್ಲಿ ಎರಡು ದಶಕದಿಂದ ಶಿಕ್ಷಣ ಸಂಪನ್ಮೂಲ ಕೇಂದ್ರವನ್ನು ಸಂಘಟಿಸಿ, ನಾಯಕತ್ವದ ಮೂಲಕ ಶೈಕ್ಷಣಿಕ ಜಾಗೃತಿ, ಶೈಕ್ಷಣಿಕ ಅಭಿಯಾನಗಳ ಮೂಲಕ, ಮಕ್ಕಳ, ಪೋಷಕರ, ಶಿಕ್ಷಕರ, ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಶಿಕ್ಷಣ ಕ್ಷೇತ್ರದತ್ತ ತೊಡಗುವಂತೆ ಮಾಡಿದ್ದರು. 
ಉದಯೋನ್ಮುಖ ಕಲಾವಿದರು ತಂಡ: ವಿಟ್ಲದ ಉದಯೋನ್ಮುಖ ಕಲಾವಿದರ ತಂಡ ಹಲವು ಸಾಮಾಜಿಕ, ಐತಿಹಾಸಿಕ, ಪೌರಾಣಿಕ ನಾಟಕಗಳನ್ನು ಆಡುತ್ತಿತ್ತು. ರಣದುಂಧುಬಿ, ಸಾಮ್ರಾಟ ಅಶೋಕ, ಬೇಡರ ಕಣ್ಣಪ್ಪ, ರಾಜಾ ಕೆಂಪೇಗೌಡ, ಅಬ್ಬಕ್ಕದೇವಿ, ಭಕ್ತ ಪ್ರಹ್ಲಾದ, ಮೀನಾ, ಮರ್ಲೆದಿ, ಬಯ್ಯಮಲ್ಲಿಗೆ, ಏರ್ ಮಲ್ತಿನ ತಪ್ಪು, ತಮ್ಮಲೆ ಅರ್ವತ್ತನ ಕೋಲ, ತೆಲಿಪುವಲ್ ಜಾಗ್ರತೆ, ಬಂಗಾರದ ಬದ್ ಕ್, ಬೈರನ ಬದ್ ಕ್, ಹೀಗೆ ಕನ್ನಡ, ತುಳು, ನಾಟಕಗಳ ಮೂಲಕ ಉದಯೋನ್ಮುಖ ಕಲಾವಿದರು ಮಿಂಚಿದ್ದಾರೆ. ತಮ್ಮಲೆ ಅರ್ವತ್ತನ ಕೋಲ ಸೂಪರ್ ಹಿಟ್ ಆಗಿತ್ತು. ಎಲ್ಲ ಪ್ರದರ್ಶನದ ರೂವಾರಿ ಮಂಜು ವಿಟ್ಲ. ಆ ಸಂದರ್ಭ ಕನ್ನಡ ಚಲನಚಿತ್ರ ರಂಗದ ನಿರ್ದೇಶಕ ವಿ.ಮನೋಹರ್ ಮಂಜು ವಿಟ್ಲರ ತಂಡದಲ್ಲಿ ಸಂಗೀತಗಾರರಾಗಿ, ಹಾಡುಗಾರರಾಗಿ ದುಡಿದವರು. ವಿಟ್ಲ ಹಾಗೂ ಆಸುಪಾಸಿನಲ್ಲಿ ನಡೆಯುತ್ತಿದ್ದ ಶಾಲಾ, ಕಾಲೇಜುಗಳ ವಾರ್ಷಿಕೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಂಜಣ್ಣ ತನ್ನದೇ ಬಳಹ ಸೇರಿಸಿ ಮೇಕಪ್ ಮಾಡುವುದಲ್ಲದೆ, ನಾಟಕದ ತರಬೇತಿಯನ್ನೂ ನೀಡುತ್ತಿದ್ದರು. 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ವಿಟ್ಲ – ಬಂಟ್ವಾಳದ ಸಾಂಸ್ಕೃತಿಕ ಬದುಕಿಗೆ ಹೊಸ ಆಯಾಮ ನೀಡಿದ ಬಹುಮುಖ ಪ್ರತಿಭೆ ಮಂಜು ವಿಟ್ಲ ಇನ್ನಿಲ್ಲ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*