ಬಂಟ್ವಾಳ: ಬಂಟ್ವಾಳ ತಾಲೂಕು ಮಟ್ಟದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆಯನ್ನು ಗುರುವಾರ ಬಂಟ್ವಾಳ ತಾಲೂಕು ಆಡಳಿತ ಸೌಧದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಸಂಘರ್ಷರಹಿತ ಹೋರಾಟ ನಡೆಸಿದ್ದು, ಇದು ಎಲ್ಲರಿಗೂ ಆದರ್ಶ. ಇಡೀ ಸಮಾಜದ ಬದಲಾವಣೆಗೆ ಗುರುಗಳ ಆದರ್ಶ ಪ್ರೇರಣೆಯಾಗಿದೆ. ಮಾನವಕುಲಕ್ಕೆ ಗುರುಗಳು ಪ್ರೇರಣೆ ಎಂದರು.
ಬಂಟ್ವಾಳ ತಹಸೀಲ್ದಾರ್ ಎಸ್.ಬಿ.ಕೂಡಲಗಿ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕ ಚೇತನ್ ಮುಂಡಾಜೆ ಆಚರಣೆಯ ಪ್ರಸ್ತುತತೆ ಹಾಗೂ ಬ್ರಹ್ಮಶ್ರೀ ನಾರಾಯಣಗುರುಗಳ ವಿಚಾರಧಾರೆಯ ಅಗತ್ಯ ಕುರಿತು ಮಾತನಾಡಿ, ಯುಗದ ಕಣ್ಣು ತೆರೆಸಿದ ಸಂತ ನಾರಾಯಣಗುರುಗಳು, ಸಾಮಾಜಿಕ ವ್ಯವಸ್ಥೆಯ ಬದಲಾವಣೆ, ಸುಧಾರಣೆಗೆ ಶ್ರೀಗಳು ಶ್ರಮಿಸಿದ್ದರು ಎಂದರು. ಪ್ರತ್ಯೇಕ ದೇವಾಲಯಗಳನ್ನು ಸ್ಥಾಪಿಸುವುದು, ಶಿಕ್ಷಣಕ್ಕೆ ಪ್ರಾಧಾನ್ಯತೆ, ಸರ್ವಧರ್ಮ ಸಮ್ಮೇಳನ ಆಯೋಜನೆ, ಸರಳ ವಿವಾಹ ಪರಿಕಲ್ಪನೆ, ವರದಕ್ಷಿಣೆ ಪಿಡುಗು ನಿವಾರಣೆ ಕುರಿತು ಅವರ ನಿಲುವುಗಳು ಗಮನಾರ್ಹ ಎಂದರು.
ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಗುರುಕೃಪ, ತಾಲೂಕು ಬಿಲ್ಲವ ಮಹಿಳಾ ಘಟಕ ಅಧ್ಯಕ್ಷೆ ಶೈಲಜಾ ರಾಜೇಶ್, ಯುವ ವಾಹಿನಿ ಅಧ್ಯಕ್ಷ ಹರೀಶ್ ಕೋಟ್ಯಾನ್, ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ತುಂಬೆ, ಕೋಶಾಧಿಕಾರಿ ಆನಂದ ಸಾಲಿಯಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಅಮ್ಟಾಡಿ ಗ್ರಾಪಂ ಅಧ್ಯಕ್ಷ ವಿಜಯ್, ಸಹಿತ ವಿವಿಧ ಸಾಮಾಜಿಕ, ರಾಜಕೀಯ ಮುಖಂಡರು ಉಪಸ್ಥಿತರಿದ್ದರು. ಜನಾರ್ದನ ಸ್ವಾಗತಿಸಿದರು. ಉಪತಹಸೀಲ್ದಾರ್ ನವೀನ್ ಬೆಂಜನಪದವು ಕಾರ್ಯಕ್ರಮ ನಿರ್ವಹಿಸಿದರು. ಶ್ರೀಕಲಾ ವಂದಿಸಿದರು.
Be the first to comment on "ಬಂಟ್ವಾಳ ತಾಲೂಕು ಮಟ್ಟದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ"