ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ: ಕಚೇರಿಗಳ ಪರಿಶೀಲನೆ, ಸಭೆಯಲ್ಲಿ ಅಧಿಕಾರಿಗಳಿಗೆ ಹೇಳಿದ್ದೇನು?

  • # ಜನರ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಿ
  • # ರೆಕಾರ್ಡ್ ರೂಮ್ ನ ಎಲ್ಲಾ ದಾಖಲೆಗಳೂ ಡಿಜಿಟಲೀಕರಿಸಿ
  • # ಸೆಪ್ಟೆಂಬರ್.1ರೊಳಗೆ ಇ-ಆಫೀಸ್ ಬಳಸಲು ಸೂಚನೆ
  • # ಕಡಲ್ಕೊರೆತ-ಭೂ ಕುಸಿತದ ಬಗ್ಗೆ ಎಚ್ಚರಿಕೆ!

ತಕರಾರು, ಪೈಕಿ ಪಹಣಿ ಹಾಗೂ ನಮೂನೆ 53, 57 ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದ್ದು, ಈ ಎಲ್ಲಾ ಪ್ರಕರಣಗಳಿಗೆ ಕಾಲಮಿತಿಯೊಳಗೆ ಪರಿಹಾರ ನೀಡಬೇಕು. ಡಿಸಿ-ಎಸಿ ಹಾಗೂ ತಹಶೀಲ್ದಾರ್ ನ್ಯಾಯಾಲಯಗಳು ತತ್ವರಿತಗತಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕು ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದರು.

ಅವರು ಆ.29ರ ಮಂಗಳವಾರ ನಗರದ ಜಿ.ಪಂ.ನ  ನೇತ್ರಾವತಿ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗೆ ಸೂಚನೆ ನೀಡಿದರು.

“ಪೈಕಿ ಪಹಣಿ ಪ್ರಕರಣಗಳ ಸಂಖ್ಯೆ ಜಿಲ್ಲೆಯಲ್ಲಿ ಅಧಿಕವಾಗಿದ್ದು,. ಹಲವು ಪ್ರಕರಣಗಳಲ್ಲಿ ಒಂದು ಸರ್ವೇ ನಂಬರ್ ನಲ್ಲಿ 50-100 ಜನರ ಹೆಸರುಗಳು ಇದ್ದು, ಕನಿಷ್ಟ ಕಲಂ 3 ಮತ್ತು 9 ರ ನಡುವೆ ತಾಳೆ ಇರುವ ಪ್ರಕರಣಗಳಲ್ಲಿ ಸರ್ಕಾರವೇ ಕ್ಯಾಂಪೇನ್ ಮೂಲಕ ಪೋಡಿ ಮಾಡಿಕೊಡಲು ಸಿದ್ದವಿದೆ” ಈ ಪ್ರಕರಣಗಳ ಜೊತೆಗೆ ನಮೂನೆ 53, 57 ಪ್ರಕರಣಗಳನ್ನೂ ಕಾಲಮಿತಿಯೊಳಗೆ ಅಧಿಕಾರಿಗಳು ಪರಿಹರಿಸಬೇಕು” ಎಂದು ಅವರು ತಿಳಿಸಿದರು.

 ಉತ್ತಮ ಹಾಗೂ ಜನಪರ ಆಡಳಿತ ನೀಡಲಿದೆ ಎಂಬ ವಿಶ್ವಾಸದಿಂದ ಮತದಾರರು ನಮಗೆ ಇತಿಹಾಸ ಕಾಣದ ಬಹುಮತ ನೀಡಿದ್ದಾರೆ. ಹೀಗಾಗಿ ಜನಸ್ನೇಹಿ ಆಡಳಿತ ನೀಡಬೇಕು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಶಯ. ಅಲ್ಲದೆ, ಕಂದಾಯ ಇಲಾಖೆ ಎಲ್ಲಾ ಇಲಾಖೆಗಳ ಮಾತೃ ಇಲಾಖೆ. ಹೀಗಾಗಿ ಈ ಇಲಾಖೆಯಲ್ಲೂ ಸಕಾರಾತ್ಮಕ ಬದಲಾವಣೆ ತರಬೇಕು ಎಂಬ ಕಾರಣದಿಂದಲೇ ನನಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ. ಆದರೆ, ಅಧಿಕಾರಿಗಳ ಸಹಕಾರ ಇಲ್ಲದೆ ಯಾವ ಬದಲಾವಣೆಯೂ ಸಾಧ್ಯವಿಲ್ಲ. ಅಧಿಕಾರಿಗಳು ಉತ್ತಮ ಆಡಳಿತಕ್ಕೆ ಸಹಕರಿಸಿದರೆ, ಎಲ್ಲರೂ ಒಟ್ಟಾಗಿ ಭ್ರಷ್ಟಾಚಾರ ಮುಕ್ತ ಜನಪರ ಸೇವೆ ನೀಡಬಹುದು” ಎಂದವರು ಹೇಳಿದರು.

ತಕರಾರು ಪ್ರಕರಣಗಳನ್ನು ಶೀಘ್ರ ಮತ್ತು ದಕ್ಷವಾಗಿ ಇತ್ಯರ್ಥಗೊಳಿಸಿ:  ಜಿಲ್ಲೆಯಲ್ಲಿ ಸಾವಿರಾರು ತಕರಾರು ಪ್ರಕರಣಗಳು ಬಾಕಿ ಇವೆ. ಈ ಎಲ್ಲಾ ಪ್ರಕರಣಗಳನ್ನೂ ಶೀಘ್ರದಲ್ಲೇ ವಿಲೇವಾರಿ ಮಾಡಬೇಕು. ಕೆಲವು ಜಿಲ್ಲೆಗಳಲ್ಲಿ ಈ ಪ್ರಕರಣಗಳ ಶೀಘ್ರ  ಇತ್ಯರ್ಥವಾಗುತ್ತಿದ್ದು, ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿ ನ್ಯಾಯಾಲಯಗಳು ವಾರದಲ್ಲಿ ಕನಿಷ್ಟ ನಾಲ್ಕು ದಿನ ಕಾರ್ಯ ನಿರ್ವಹಿಸಬೇಕು ಎಲ್ಲಾ ತಕರಾರು ಪ್ರಕರಣಗಳನ್ನೂ ಶೀಘ್ರ ವಿಲೇವಾರಿಗೊಳಿಸಬೇಕು. ಹಾಗೆಂದು ಗುಣಮಟ್ಟದಲ್ಲಿ ಯಾವುದೇ ಹೊಂದಾಣಿಕೆ ಸಲ್ಲ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ವಿಚಾರಣೆಯಾಗಿ ಆದೇಶಕ್ಕಾಗಿ ಕಾಯ್ದಿರಿಲ್ಪಟ್ಟ ಪ್ರಕರಣಗಳ ಬಗ್ಗೆಯೂ ಗಮನ ಸೆಳೆದ ಸಚಿವರು, “ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಆದೇಶಕ್ಕೆ ಕಾಯ್ದಿರಿಸಲ್ಪಟ್ಟ ಪ್ರಕರಣಗಳ ವಿಲೇವಾರಿಗೂ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಆದೇಶಕ್ಕೆ ಕಾಯ್ದಿರಿಸಲ್ಪಟ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ 15 ದಿನಗಳೊಳಗಾಗಿ ಆದೇಶ ಹೊರಡಿಸಬೇಕು ಎಂಬ ಕಾನೂನು ಇದೆ. ಕಾನೂನಿನನ್ವಯ ಅಧಿಕಾರಿಗಳು ತುರ್ತಾಗಿ ಆದೇಶ ಹೊರಡಿಸಬೇಕು” ಎಂದು ತಾಕೀತು ಮಾಡಿದರು.

ಎ.ಸಿ ನ್ಯಾಯಾಲಯಗಳಲ್ಲಿ 3354 ಪ್ರಕರಣಗಳು ಬಾಕಿ ಇವೆ. 164 ಪ್ರಕರಣ 5 ವರ್ಷಗಳಿಗೂ ಹೆಚ್ಚು ಬಾಕಿ ಇವೆ, 142 ಪ್ರಕರಣ 2 ರಿಂದ 5 ವರ್ಷಳಿಂದ ಬಾಕಿ ಇವೆ. ಡಿ.ಸಿ ನ್ಯಾಯಾಲಯದಲ್ಲಿ 495 ಪ್ರಕರಣಗಳು (5 ವರ್ಷಕ್ಕಿಂತ ಮೀರಿದ 83 ಪ್ರಕರಣ, 64 ಪ್ರಕರಣ 2 ರಿಂದ 5 ವರ್ಷದ ಬಾಕಿ) ಬಾಕಿ ಇವೆ, ಇವೆಲ್ಲವನ್ನು 3 ತಿಂಗಳ ಒಳಗೆ ವಿಲೇ ಮಾಡಬೇಕೆಂದು ಸೂಚಿಸಲಾಯಿತು.

 ದಾಖಲೆಗಳ ಡಿಜಿಟಲೀಕರಣ: ಮಂಗಳೂರು ಪ್ರವಾಸದ ವೇಳೆ ಅನಿರೀಕ್ಷಿತವಾಗಿ ಮಂಗಳೂರು ರೆಕಾರ್ಡ್ ರೂಮ್ ಗೆ ಭೇಟಿ ನೀಡಿದ ಸಚಿವ ಕೃಷ್ಣ ಬೈರೇಗೌಡಅವರು ನೂರು ವರ್ಷಗಳಷ್ಟು ಹಳೆಯ ದಾಖಲೆಗಳನ್ನು ವೀಕ್ಷಿಸಿದರು. ಅಲ್ಲದೆ, ಇಷ್ಟು ಹಳೆಯ ದಾಖಲೆಗಳನ್ನು ಹೇಗೆ ರಕ್ಷಣೆ ಮಾಡುತ್ತಿದ್ದೀರಿ? ಎಂದು ಅಧಿಕಾರಿಗಳಿಗೆ ಮಾಹಿತಿಯನ್ನು ಕೇಳಿ ಪಡೆದರು.

 ಈ ವೇಳೆ ಪತ್ರಕರ್ತರ ಜೊತೆಗೆ ಮಾತನಾಡಿದ ಸಚಿವರು, “ನೂರಾರು ವರ್ಷಗಳ ಹಳೆಯ ದಾಖಲೆಗಳನ್ನು ಸಂರಕ್ಷಿಸುವುದು ಕಷ್ಟದ ಕೆಲಸ. ಅಲ್ಲದೆ, ಇಂತಹ ದಾಖಲೆಗಳನ್ನು ತಿದ್ದುವ ಸಾಧ್ಯತೆಯೂ ಇದ್ದು, ಪರೋಕ್ಷವಾಗಿ ಭ್ರಷ್ಟಾಚಾರಕ್ಕೂ ಅನುವು ಮಾಡಿಕೊಟ್ಟಂತಾಗುತ್ತದೆ. ಹೀಗಾಗಿ ರೆಕಾರ್ಡ್ ರೂಂನ ಎಲ್ಲಾ ದಾಖಲೆಗಳನ್ನೂ ಸ್ಕ್ಯಾನ್ ಮಾಡುವ ಮೂಲಕ ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

 ಈಗಾಗಲೇ ಪೈಲಟ್ ಯೋಜನೆಯ ರೂಪದಲ್ಲಿ 6 ತಾಲೂಕುಗಳಲ್ಲಿ ದಾಖಲೆ ಡಿಜಿಟಲೀಕರಣ ಮಾಡಲಾಗುತ್ತಿದೆ. ಎಲ್ಲಾ ದಾಖಲೆಗಳನ್ನೂ ಡಿಜಿಟಲೀಕರಣ ಮಾಡುವ ಮೂಲಕ ಜನರೂ ಸಹ ತಮ್ಮ ದಾಖಲೆಗಳನ್ನು ಆನ್ ಲೈನ್ ಮೂಲಕ ನೋಡಬಹುದು. ಇದರಿಂದ ಜನರ ವಸೂಲಿ ವಸೂಲಿ, ಶೋಷಣೆಯನ್ನು ತಪ್ಪಿಸಬಹುದು. ಪೈಲಟ್ ಯೋಜನೆ ಯಶಸ್ವಿಯಾದ ನಂತರ ಮುಂದಿನ ದಿನಗಳಲ್ಲಿ ಎಲ್ಲಾ ತಾಲೂಕುಗಳ ದಾಖಲೆಗಳನ್ನೂ ಡಿಜಿಟಲೀಕರಿಸಲಾಗುವುದು” ಎಂದು ಅವರು ಮಾಹಿತಿ ನೀಡಿದರು.

 ಕಡಲ್ಕೊರೆತ-ಭೂ ಕುಸಿತದ ಬಗ್ಗೆ ಎಚ್ಚರಿಕೆ! ಪರಿಶೀಲನಾ ಸಭೆಯಲ್ಲಿ ಕಡಲ್ಕೊರೆತ ಹಾಗೂ ಭೂ ಕುಸಿತದ ಬಗ್ಗೆಯೂ ಎಚ್ಚರಿಕೆಯ ಮಾತುಗಳನ್ನಾಡಿದಸಚಿವ ಕೃಷ್ಣ ಬೈರೇಗೌಡ ಅವರು,”ಮಂಗಳೂರು ಭಾಗದಲ್ಲಿ ಕಡಲ್ಕೊರೆತ ಸಾಮಾನ್ಯವಾದ ದೀರ್ಘಾವದಿ ಸಮಸ್ಯೆ. ಆದರೆ, ಈ ವಿಚಾರ ಕಂದಾಯ ಇಲಾಖೆಯ ಅಡಿಯಲ್ಲಿ ನೇರವಾಗಿ ಬರುವುದಿಲ್ಲ. ಆದರೂ, ಕಡಲ್ಕೊರೆತ ಅಧಿಕವಾಗಿರುವ ದುರ್ಬಲ ಪ್ರದೇಶಗಳ ಬಗ್ಗೆ ಅಧಿಕಾರಿಗಳು ಎಚ್ಚರದಿಂದ ಇರಬೇಕು. ಸಮುದ್ರ ಸವೆತದ ಬಗ್ಗೆ ಕೇರಳ ಮಾದರಿಯ ಬಗ್ಗೆ ಅಧ್ಯಯನ-ಸಂಶೋಧನೆಯ ಅಗತ್ಯವಿದ್ದು ಬಂದರು ಇಲಾಖೆ ಜೊತೆಗೂ ಮಾತುಕತೆ ನಡೆಸಲಾಗುವುದು ಎಂದರು.

 ಇದೇ ಸಂದರ್ಭದಲ್ಲಿ ಭೂ-ಕುಸಿತದ ಬಗ್ಗೆಯೂ ಪರಿಶೀಲನೆ ನಡೆಸಿದ ಸಚಿವರು “ಈ ಹಿಂದೆ ಕರಾವಳಿ ಭಾಗದಲ್ಲಿ ಅಧಿಕ ಭೂ ಕುಸಿತ ಸಾಧ್ಯತೆ ಇರುವ 81 ಪ್ರದೇಶವನ್ನು ಗುರುತು ಮಾಡಲಾಗಿತ್ತು. ಆದರೆ, ಅಧಿಕಾರಿಗಳು 71 ಪ್ರದೇಶಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ವಹಿಸಲಾಗುವುದೆಂದು ತಿಳಿಸಿದರು. 

 ಬಾಕಿ ಕಾಮಗಾರಿಗಳಿಗೆ ಗಡುವು: ಸಾರ್ವಜನಿಕ ಆಸ್ತಿಗಳಿಗೆ ಉಂಟಾಗಿರುವ ಮಳೆಹಾನಿ ದುರಸ್ಥಿಗೆ 2019 ರಿಂದ 2022 ರ ಅವಧಿಯಲ್ಲಿ ಮಂಜೂರಾಗಿ ಇನ್ನೂ ಪೂರ್ಣಗೊಳ್ಳದ ಕಾಮಗಾರಿಗಳನ್ನು(ಕೊರೋನಾ ಸೇರಿದಂತೆ) ಮುಂದಿನ 15 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

 ಈ ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳದಿರಲು ಕಾರಣವೇನು? 45 ದಿನಗಳಲ್ಲಿ ಮುಗಿಯಬೇಕಾದ ಕಾಮಗಾರಿಗಳು 2019ರಿಂದಲೂ ಬಾಕಿ ಉಳಿದಿವೆ ಎಂದರೆ ಏನರ್ಥ? ಎಂದು ಆಕ್ರೋಶ ಹೊರಹಾಕಿದ ಸಚಿವರು, ಮುಂದಿನ 15 ದಿನಗಳಲ್ಲಿ ಈ ಎಲ್ಲಾ ಕಾಮಗಾರಿಗಳೂ ಪೂರ್ಣಗೊಳಿಸಬೇಕು, ಸಂಬಂಧಪಟ್ಟ ಕಾಮಗಾರಿಗೆ ಹಣ ಪಾವತಿ ಮಾಡಬೇಕು. ಕಳೆದ ವರ್ಷದ ಬಾಕಿಯನ್ನೂ ಸಂಪೂರ್ಣವಾಗಿ ವಿಲೇವಾರಿ ಮಾಡಬೇಕು ಎಂದು ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

 ಅಲ್ಲದೆ, ಪ್ರಕೃತಿ ವಿಕೋಪ ಸಂದರ್ಭದ ತುರ್ತು ಖರ್ಚುಗಳಿಗಾಗಿ ಜಿಲ್ಲಾಧಿಕಾರಿ ಖಾತೆಯಲ್ಲಿ 7 ಕೋಟಿ ರೂ. ಹಾಗೂ ತಹಶೀಲ್ದಾರ್ ಖಾತೆಯಲ್ಲಿ ತಲಾ 3 ಕೋಟಿ ರೂ. ಹಣ ಇದೆ. ಈ ಹಣವನ್ನೂ ಸಹ ಅಗತ್ಯ ಕಾಮಗಾರಿಗಳಿಗೆ ಬಳಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

  ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸ ಕೈಗೊಂಡಿರುವ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಮಂಗಳೂರಿನ ತಾಲೂಕು ಕಚೇರಿ, ಪಡೀಲಿನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಕಾಮಗಾರಿಯ ಪ್ರಗತಿ ಹಾಗೂ ಉಳ್ಳಾಲದ ಮುಕ್ಕಚೇರಿ ಪ್ರಾಥಮಿಕ ಶಾಲೆ, ಸೋಮೇಶ್ವರ ಪುರಸಭೆ ಹಾಗೂ ಬಟ್ಟಂಪಾಡಿಯಲ್ಲಿ ಮಿಂಚಿನ ಸಂಚಾರ ನಡೆಸಿದರು.

 ಮಂಗಳೂರಿನ ಕಂದಾಯ ಇಲಾಖೆ ತಳಮಟ್ಟದ ಕಚೇರಿಗಳಾದ ಗ್ರಾಮಲೆಕ್ಕಾಧಿಕಾರಿ,  ನಾಡಕಚೇರಿ, ತಹಶೀಲ್ದಾರ್, ಉಪನೋಂದಣಿ ಕಚೇರಿಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಅಧಿಕಾರಿಗಳು ಯಾವ ರೀತಿ ಜನರ ಸಮಸ್ಯೆ ಗಳಿಗೆ ಸ್ಪಂದಿಸುತ್ತಿದ್ದಾರೆ ಎನ್ನುವುದನ್ನು ಪರಿಶೀಲಿಸಿದರು.

ಈ ವೇಳೆ ಪಡೀಲ್ ನಲ್ಲಿ ನಿರ್ಮಾಣ ಹಂತದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, “2017-18ರಲ್ಲಿ ಪಡೀಲ್ ನಲ್ಲಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಕೆಲಸ ಆರಂಭಗೊಂಡಿತ್ತು. 50 ರಿಂದ 55 ಕೋಟಿ ರೂ ವೆಚ್ಚದ ಕಾಮಗಾರಿ ಈಗಾಗಲೇ ನಡೆದಿದೆ. ಆದರೆ ಕಾಮಗಾರಿ ಪೂರ್ಣಗೊಂಡಿಲ್ಲ, ಜತೆಗೆ ಕಚೇರಿಯೂ ಸ್ಥಳಾಂತರವಾಗಿಲ್ಲ. ಮೊದಲು ಯಾವ ರೀತಿ ಅನುಮೋದನೆ ಮಾಡಲಾಗಿತ್ತೋ ಅದೇ ರೀತಿ ಕಾಮಗಾರಿ ನಡೆದಿದೆ. ಹಿಂದಿನ ಸರಕಾರದ ಕಾಲದಲ್ಲಿ ಕಾಮಗಾರಿ ಮುಗಿಸುವ ಕೆಲಸ ಆಗಿಲ್ಲ. ನಮ್ಮ ಸರಕಾರದ ಅವಧಿಯಲ್ಲಿ ಇದನ್ನು ಪೂರೈಸಲು ಬದ್ಧರಾಗಿದ್ದೇವೆ” ಮತ್ತು ಒಂದು ವರ್ಷದೊಳಗಾಗಿ ಜಿಲ್ಲಾಧಿಕಾರಿ ಕಚೇರಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ಅಧಿಕಾರಿಗಳು ಇ-ಆಫೀಸ್ ಬಳಕೆಗೆ ಸೂಚನೆ:

ಹಳೇ ಕಾಲದ ಪತ್ರ ವ್ಯವಹಾರವನ್ನು ಕೈಬಿಟ್ಟು ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವ ಹಾಗೂ ಕಡತಗಳ ಶೀಘ್ರ ವಿಲೇವಾರಿಗೆ ಅನುಕೂಲವಾಗುವ ನಿಟ್ಟಿನಲ್ಲಿ  ಆಗಸ್ಟ್ 15ರಿಂದ ಇ-ಆಫೀಸ್ ಅನುಷ್ಠಾನಗೊಳಿಸಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳೂ ಈಗಾಗಲೇ ಇ-ಆಫೀಸ್ ಮೂಲಕವೇ ಕಡತ ವಿಲೇವಾರಿ ಮಾಡುತ್ತಿದ್ದು, ತಹಶೀಲ್ದಾರ್ ಹಾಗೂ ವಿಭಾಗಾಧಿಕಾರಿಗಳು ಸೆಪ್ಟೆಂಬರ್.1ರ ಒಳಗಾಗಿ ಇ-ಆಫೀಸ್ ಬಳಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

“ಕಡತಗಳು ಇ-ಆಫೀಸ್ ನಲ್ಲಿ ನನ್ನ ಲಾಗಿನ್ ಗೆ ಬಂದರೆ  2 ದಿನದಲ್ಲಿ ವಿಲೇವಾರಿ ಮಾಡಿದ್ದೇನೆ. ಇ-ಆಫೀಸ್ ಸಹಜವಾಗಿ ಕಾರ್ಯ ದಕ್ಷತೆ ಹೆಚ್ಚಿಸಲಿದೆ. ಯಾವುದೇ  ಸ್ಥಳದಲ್ಲಿಂದಲು ನೀವು ಕಡತ ವಿಲೇವಾರಿ ಮಾಡಬಹುದಾಗಿದೆ. ಸ್ವತ ನಾನು ಇ-ಆಫೀಸ್ ಮೂಲಕ ಕಡತ ವಿಲೇವಾರಿ ಮಾಡುತ್ತಿದ್ದೇನೆ. ಶಾಲೆ, ಗ್ರಾಮ ಪಂಚಾಯತಿಗೆ ಜಮೀನು ನೀಡಲು ಆಗುತ್ತಿರುವ ವಿಳಂಬಕ್ಕೆ ಇ-ಆಫೀಸ್ ಮೂಲಕ ಪರಿಹಾರ ನೀಡಬಹುದು” ಎಂದು ಅವರು ತಿಳಿಸಿದರು.

ವಿಧಾನಸಭಾ ಸದಸ್ಯರಾದ ಅಶೋಕ್ ಕುಮಾರ್ ರೈ, ವೇದವ್ಯಾಸ್ ಕಾಮತ್ ಮತ್ತುವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಂಜುನಾಥ್ ಭಂಡಾರಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ,   ಕಂದಾಯ ಇಲಾಖೆಯ ಆಯುಕ್ತ ಸುನಿಲ್ ಕುಮಾರ್ ಹಾಗೂ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್  ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ: ಕಚೇರಿಗಳ ಪರಿಶೀಲನೆ, ಸಭೆಯಲ್ಲಿ ಅಧಿಕಾರಿಗಳಿಗೆ ಹೇಳಿದ್ದೇನು?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*