ಬಂಟ್ವಾಳ: ನ್ಯಾಯ ಬೆಲೆ ಅಂಗಡಿ, ಸೊಸೈಟಿಗಳ ಮೂಲಕ ಅರ್ಹರಿಗೆ ವಿತರಣೆ ಆಗಬೇಕಾಗಿದ್ದ ಪಡಿತರ ಅಕ್ಕಿ ದಾಸ್ತಾನು ಮಳಿಗೆಯಲ್ಲಿ ಇರಬೇಕಾಗಿದ್ದ ಸುಮಾರು 1.32 ಕೋಟಿ ರೂ ಮೌಲ್ಯದ ಅಕ್ಕಿ ಕಾಣಿಸದಾಗಿದ್ದು, ಈ ಕುರಿತು ತನಿಖೆ ಆರಂಭಗೊಂಡಿದೆ.
ಈ ಕುರಿತು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮಂಗಳೂರು ಕಚೇರಿ ವ್ಯವಸ್ಥಾಪಕ ಶರತ್ ಕುಮಾರ್ ಹೋಂಡಾ ಎಂಬವರು ದೂರು ನೀಡಿದ್ದು, ಬಂಟ್ವಾಳ ತಾಲೂಕು ಕಳ್ಳಿಗೆ ಗ್ರಾಮದ ಕೆ.ಎಸ್.ಆರ್.ಟಿ.ಸಿ. ಡಿಪೋ ಎದುರು ಇರುವ ಸಗಟು ಗೋದಾಮಿನಿಂದ ಬಂಟ್ವಾಳ ನಗರಕ್ಕೆ ಪಡಿತರ ಅಕ್ಕಿ ಸರಬರಾಜು ಆಗುತ್ತಿರುತ್ತದೆ. ಪಡಿತರ ವಿತರಣೆಯು ವಿಳಂಬವಾಗುತ್ತಿರುವ ಬಗ್ಗೆ ಅನುಮಾನ ಬಂದು ಜಿಲ್ಲಾ ವ್ಯವಸ್ಥಾಪಕರ ಮೌಖಿಕ ಆದೇಶದ ಮೇಲೆ ಆಗಸ್ಟ್ 17ರಂದು ಬಂಟ್ವಾಳದ ಸಗಟು ಮಳಿಗೆಗೆ ಬಂದು ದಾಸ್ತಾನು ಪರಿಶೀಲಿಸಿದಾಗ, ಫಿಸ್ಟ್ ತಂತ್ರಾಂಶದ ಪ್ರಕಾರ ಸಗಟು ಮಳಿಗೆಯಲ್ಲಿ ಇರಬೇಕಾಗಿದ್ದ ಭೌತಿಕ ದಾಸ್ತಾನುವಿಗಿಂತ ಅಂದಾಜು 1,32,36,030 ರೂ ಮೌಲ್ಯದ 3892 ಕ್ವಿಂಟಾಲ್ ಅಕ್ಕಿ ಕೊರತೆ ಇರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಬಂಟ್ವಾಳ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ (ನಿ) ಗೋದಾಮಿನ ನಿವಾರ್ಹಕರಾಗಿದ್ದ ಕಿರಿಯ ಸಹಾಯಕ ವಿರುದ್ದ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈತನ್ಮಧ್ಯೆ, ಈ ಕುರಿತು ಕೂಲಂಕಷ ತನಿಖೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಒತ್ತಾಯಿಸಿದ್ದಾರೆ.ಪಡಿತರ ಅಕ್ಕಿಯ ಗೋದಾಮಿನಲ್ಲಿ ಅವ್ಯವಹಾರ ಆಗುತ್ತಿರುವ ಕುರಿತು ದೂರುಗಳು ಬಂದಿದ್ದು, ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಪತ್ರ ಬರೆದಿದ್ದಾರೆ.ಬಂಟ್ವಾಳ ತಾಲೂಕಿನ ಪಡಿತರ ಚೀಟಿದಾರರಿಗೆ ವಿತರಿಸಲು ಭಾರತೀಯ ಆಹಾರ ನಿಗಮದಿಂದ ವಿತರಣೆ ಆಗುವ ಅಕ್ಕಿ ಅವ್ಯವಹಾರ ಆಗಿರುವ ಕುರಿತು ಪತ್ರ ಬರೆದಿರುವ ಅವರು, ಈ ಕುರಿತು ಸಾರ್ವಜನಿಕ ವಲಯದಲ್ಲಿ ಗುಮಾನಿ ಇದ್ದು, ನನಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಈ ಕುರಿತು ವೈಯಕ್ತಿಕ ಗಮನ ಹರಿಸಿ, ಅಕ್ಕಿ ದಾಸ್ತಾನು ಪರಿಶೀಲಿಸಿ, ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.
Be the first to comment on "1 ಕೋಟಿ ರೂ ಗೂ ಅಧಿಕ ಮೌಲ್ಯದ ಪಡಿತರ ಅಕ್ಕಿ ಎಲ್ಲಿಗೆ ಹೋಯಿತು?"