ಬಂಟ್ವಾಳ: ಮಹಿಳೆಯ ಸಾಮೂಹಿಕ ಅತ್ಯಾಚಾರ ಹಾಗೂ ಸಾರ್ವಜನಿಕವಾಗಿ ಬೆತ್ತಲೆ ಮೆರವಣಿಗೆ ಮಾಡಿದ ಮಣಿಪುರದ ಘಟನೆಯನ್ನು ಖಂಡಿಸಿ ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಬಂಟ್ವಾಳ ತಾಲೂಕು ಸಮಿತಿ ನೇತೃತ್ವದಲ್ಲಿ ಬಿ.ಸಿ.ರೋಡ್ ಮೇಲ್ಸೇತುವೆ ಬಳಿ ಶನಿವಾರ ಪ್ರತಿಭಟನೆ ನಡೆಯಿತು.
ಹಿಂಸಾಚಾರ ಬೆಳೆಯಲು ಕೇಂದ್ರ ಸರಕಾರದ ಜೊತೆಗೆ ರಾಜ್ಯ ಸರಕಾರದ ಆಡಳಿತ ವೈಫಲ್ಯವೇ ಕಾರಣ ಎಂದು ಆರೋಪಿಸಿದ ಪ್ರತಿಭಟನಾಕಾರು, ಇದಕ್ಕೆ ಪ್ರಧಾನಮಂತ್ರಿಯ ಕಾರ್ಯವೈಖರಿಯನ್ನು ಟೀಕಿಸಿದರು.
ಕಳೆದ 79 ದಿನಗಳಿಂದೀಚೆಗೆ ಮಣಿಪುರ ರಾಜ್ಯದಲ್ಲಿ ಜನಾಂಗೀಯ ದ್ವೇಷ ಭುಗಿಲೆದ್ದು ಕೊಲೆ, ಸುಲಿಗೆ, ಅತ್ಯಾಚಾರದಂತಹ ಅಹಿತಕರ ಘಟನೆಗಳು ಅವ್ಯಾಹತವಾಗಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮಣಿಪುರದ ಮುಖ್ಯಮಂತ್ರಿ ಬಿರೆನ್ ಸಿಂಗ್ ಕೂಡಲೇ ರಾಜಿನಾಮೆ ನೀಡಬೇಕು ಹಾಗೂ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಜ್ಯಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ನ ರಾಜ್ಯ ಕಾರ್ಯದರ್ಶಿ ದಾನಿಶ್ ಚೆಂಡಾಡಿ, ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಭಾರತಿ ಪ್ರಶಾಂತ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್, ಸದಾಶಿವ ಬಂಗೇರ, ಫ್ಲೋಸಿ ಡಿಸೋಜಾ ಮಾತನಾಡಿದರು. ಪ್ರತಿಭಟನೆಯ ನೇತೃತ್ವವನ್ನು ಸಂಘಟನೆಯ ಅಧ್ಯಕ್ಷರಾದ ಮೋಹನ್ ಶೆಟ್ಟಿ ಪಂಜಿಕಲ್ಲು, ಕೇಶವ ಪೂಜಾರಿ ಪಂಜಿಕಲ್ಲು, ಎಂ ಎಚ್ ಮುಸ್ತಫ, ಬಿ.ಎಂ ಪ್ರಭಾಕರ ದೈವಗುಡ್ಡೆ, ಪ್ರೇಮನಾಥ ಕೆ, ಇಸ್ಮಾಯಿಲ್ ಅರಬಿ, ಮ್ಯಾಕ್ಸಿಂ ಡಿಸೋಜಾ, ಹರೀಶ್ ಬಿಸಿರೋಡು, ಪ್ರಕಾಶ್ ಶೆಟ್ಟಿ ಶ್ರೀ ಶೈಲ ತುಂಬೆ, ಮೋಹನ್ ಅರಳ, ಕಿಶೋರ್ ಕುಮಾರ್ ಬಿಸಿರೋಡು, ಮ್ಯಾಥ್ಯೂ, ಪಿಲ್ಲು ಸಾಹೇಬ್, ಇಬ್ರಾಹಿಂ ಉಳಿ, ಆರ್ ಟಿ ಐ ಕಾರ್ಯಕರ್ತ ಜೆ.ಪಿ, ರಜಾಕ್ ಗುಂಪಕಲ್ಲು, ಫೆಲಿಕ್ಸ್ ಪಿರೇರಾ ಬೆದ್ರಗುಡ್ಡೆ, ಸೆಲಿಂ ಬೋಳಂಗಡಿ, ರಿಝ್ವಾನ್ ಬೋಳಂಗಡಿ ಮುಂತಾದವರು ವಹಿಸಿದ್ದರು ಸಂಘಟನೆಯ ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್ ಪ್ರಾಸ್ತಾವಿಕವಾಗಿ ಸ್ವಾಗತಿಸಿ ವಂದಿಸಿದರು.
Be the first to comment on "ಮಣಿಪುರ ಕೃತ್ಯ ಖಂಡಿಸಿ ಸಮಾನ ಮನಸ್ಕರಿಂದ ಪ್ರತಿಭಟನೆ"