ಬಂಟ್ವಾಳ: ಮುಂಬರುವ ಲೋಕಸಭಾ ಚುನಾವಣೆಗೆ ತಯಾರಿ, ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯ ಪರಾಮರ್ಶೆಯೇ ಮೊದಲಾದ ವಿಷಯಗಳು ಹಾಗೂ ಪಕ್ಷದ ಬೆಳವಣಿಗೆಗೆ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಹಿರಿಯ ಕಾರ್ಯಕರ್ತರೊಂದಿಗೆ ಸಂವಾದವನ್ನು ನಡೆಸುತ್ತಿದ್ದು, ಅದರ ಒಂದು ಭಾಗವಾಗಿ ಬಂಟ್ವಾಳ ತಾಲೂಕಿನ ಸ್ಪರ್ಶ ಕಲಾ ಮಂದಿರದಲ್ಲಿ ಕಾರ್ಯಕ್ರಮ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಉದ್ಘಾಟಿಸಿ ಮಾತನಾಡಿ, ಪಕ್ಷ ಕಟ್ಟಿದ ಹಿರಿಯರ ಆಶೀರ್ವಾದ ಪಡೆಯುವುದು ಮುಖ್ಯ. ಪಂಚಾಯಿತಿ ಸದಸ್ಯರಾಗಲೂ ಕಷ್ಟಪಡಬೇಕಾದ ಸ್ಥಿತಿ ಇದ್ದಾಗ ಹಂತ ಹಂತವಾಗಿ ಕಟ್ಟಿ ಬೆಳೆಸಿದವರು ಹಿರಿಯರು. ಅವರು ಹಾಕಿಕೊಟ್ಟ ಮಾರ್ಗಕ್ಕೆ ಯಾವುದೇ ಚ್ಯುತಿ ಬರದಂತೆ ಕೆಲಸ ಮಾಡುವೆ ಎಂದರು. ಅಧ್ಯಕ್ಷತೆಯನ್ನು ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ವಹಿಸಿ ಕಾರ್ಯಕ್ರಮದ ಉದ್ದೇಶಗಳನ್ನು ತಿಳಿಸಿದರು.
ವಿಧಾನಪರಿಷತ್ತು ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಸಂವಾದ ನಡೆಸಿದರು. ನಮ್ಮ ಅಂದಿನ ಕನಸನ್ನು ನನಸಾಗಿಸಬೇಕು ಎಂದಾದರೆ, ಪಕ್ಷ ಬಲಗೊಳ್ಳಬೇಕು. ಪಕ್ಷ ಕಟ್ಟಿದವರ ಆಶಯಗಳನ್ನು ಅರಿತುಕೊಳ್ಳಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ, ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಬಿಜೆಪಿ ರಾಜ್ಯ ವಕ್ತಾರ ವಿಕಾಸ್ ಪುತ್ತೂರು, ಮಂಡಲ ಹಿರಿಯರ ಪ್ರಕೋಷ್ಟದ ಸಹಸಂಚಾಲಕ ಗೋಪಾಲ ಸುವರ್ಣ ಉಪಸ್ಥಿತರಿದ್ದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ ಸ್ವಾಗತಿಸಿದರು. ಮತ್ತೋರ್ವ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಕಾರ್ಯಕ್ರಮ ನಿರ್ವಹಿಸಿದರು. ಪುರುಷೋತ್ತಮ ಶೆಟ್ಟಿ ವಾಮದಪದವು ವಂದಿಸಿದರು
Be the first to comment on "ಬಂಟ್ವಾಳದಲ್ಲಿ ಬಿಜೆಪಿಯಿಂದ ಹಿರಿಯ ಕಾರ್ಯಕರ್ತರ ಸಭೆ, ಸಂವಾದ"