ನಾಲ್ಕು ಮಾರ್ಗ ಸೇರುವ ಜಂಕ್ಷನ್ ಈಗ ಬಿ.ಸಿ.ರೋಡ್ – ಅಡ್ಡಹೊಳೆ ಚತುಷ್ಪಥ ನಿರ್ಮಾಣ ಕಾಮಗಾರಿ ಸಂದರ್ಭ ಅಂಡರ್‌ಪಾಸ್ ಆಗಿ ಪರಿವರ್ತನೆ ಹೊಂದಿದೆ. ಇವುಗಳ ಪೈಕಿ ಬಿ.ಸಿ.ರೋಡ್ ನಿಂದ ಆರಂಭಗೊಂಡು, ಪಾಣೆಮಂಗಳೂರು, ಮೆಲ್ಕಾರ್ ಮತ್ತು ಮಾಣಿಯಲ್ಲಿರುವ ಅಂಡರ್‌ಪಾಸ್ ಗಳು ಮೇಲ್ನೋಟಕ್ಕೆ ಚೆನ್ನಾಗಿವೆ. ಆದರೆ ಮಳೆ ಬಂದ್ರೆ ಯಾವ ರೀತಿ ನೀರು ಹರಿದು ಹೋಗಬಹುದು ಎಂಬ ಕುತೂಹಲವಿದೆ. ಕಳೆದ ಕೆಲವೊಂದು ದಿನಗಳಿಂದ ಸುರಿಯುತ್ತಿರುವ ಸಣ್ಣ ಮಳೆಗೇ ಅಂಡರ್‌ಪಾಸ್ ಅಡಿಯಲ್ಲಿ ನೀರು ಕೆಸರಿನೊಂದಿಗೆ ಮಿಶ್ರವಾಗಿ ನಿಲ್ಲುತ್ತಿದೆ.
ಇದರ ಜೊತೆಗೆ ಮಳೆನೀರು ಕೆಲವೆಡೆ ಸರಾಗವಾಗಿ ಹರಿದುಹೋಗಲು ಸರಿಯಾದ ಡ್ರೈನೇಜ್ ವ್ಯವಸ್ಥೆಗಳು ಇಲ್ಲ. ಇನ್ನು ಜೋರಾಗಿ ಮಳೆ ಬಂದರೆ ಸಮಸ್ಯೆ ಎದುರಿಸಬೇಕಾದ ಸನ್ನಿವೇಶವಿದೆ. ಕಳೆದ ವರ್ಷ ಕಾಮಗಾರಿ ಪ್ರಾರಂಭದ ಕಾಲಘಟ್ಟವಾದರಿಂದ ಮಳೆಗಾಲದಲ್ಲಿ ತೊಂದರೆಯಾಗಿತ್ತು. ಆದರೆ ಈ ಬಾರಿ ಮಳೆ ನೀರು ಹರಿಯುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಾಕಷ್ಟು ಕಡೆಗಳಲ್ಲಿ ತಾತ್ಕಾಲಿಕ ಚರಂಡಿಗಳನ್ನು ತೆಗೆದು ನೀರು ಹರಿಯಲು ವ್ಯವಸ್ಥೆಗಳನ್ನು ಮಾಡಲಾಗಿದ್ದು, ಹೀಗಾಗಿ ಮಳೆ ನೀರಿನ ತೊಂದರೆ ಸೃಷ್ಟಿಯಾಗದು ಎಂದು ಕೆಲಸ ಮಾಡುವವರು ಹೇಳುತ್ತಾರೆ.
ಸದ್ಯದ ಪರಿಸ್ಥಿತಿಯಲ್ಲಿ ಬಿ.ಸಿ.ರೋಡಿನಿಂದ ಮಾಣಿವರೆಗೆ ಬಹುತೇಕ ಪ್ರದೇಶದಲ್ಲಿ ಹೊಸ ಕಾಂಕ್ರೀಟ್ ರಸ್ತೆಯ ಜತೆಗೆ ಜಂಕ್ಷನ್ ಪ್ರದೇಶಗಳಲ್ಲಿ ಸರ್ವೀಸ್ ರಸ್ತೆಗಳನ್ನು ನಿರ್ಮಿಸಲಾಗಿದ್ದು, ಹೀಗಾಗಿ ಇಲ್ಲಿ ಅಷ್ಟೊಂದು ತೊಂದರೆ ಎದುರಾಗದು. ಆದರೆ ಅಂಡರ್‌ಪಾಸ್ ನಿರ್ಮಾಣವಾಗಿರುವ ಜಂಕ್ಷನ್‌ಗಳಲ್ಲಿ ಪ್ರಮಾಣದಲ್ಲಿ ಮಣ್ಣು ತುಂಬಿರುವುದರಿಂದ ತಗ್ಗು ಪ್ರದೇಶಗಳ ಸ್ಥಿತಿ ಹೇಳುವಂತಿಲ್ಲ.
ಇದ್ದುದರಲ್ಲಿ ಪಾಣೆಮಂಗಳೂರು ಅಂಡರ್‌ಪಾಸ್ ಪರವಾಗಿಲ್ಲ. ಇಲ್ಲಿ ಮೊದಲೇ ಡಾಂಬರು ಕಾಮಗಾರಿ ನಡೆದಿರುವ ಕಾರಣ ಯಾವುದೇ ಹೊಂಡ, ಗುಂಡಿ, ಕೆಸರು ನಿಲ್ಲುವ ಸನ್ನಿವೇಶಗಳಿಲ್ಲ.ಇನ್ನು ಇಲ್ಲಿ ಎರಡೂ ಕಡೆ ಸರ್ವೀಸ್ ರಸ್ತೆಗಳು ಆಗಿದ್ದು, ಏಕಮುಖ ಸಂಚಾರವೂ ಇದೆ. ಇವುಗಳ ಪೈಕಿ ಕಲ್ಲುರ್ಟಿ ಸನ್ನಿಧಾನದ ಬಳಿ ಕಾಮಗಾರಿ ನಡೆಯುತ್ತಿದ್ದು ಅಲ್ಲಿ ಮಳೆ ನಿರ್ವಹಣೆ ಸವಾಲಾಗಬಹುದು.
ಮೆಲ್ಕಾರ್ ಜಂಕ್ಷನ್ ನಲ್ಲಿ ವಾಹನ ಚಾಲನೆಯೂ ಸವಾಲು ಹಾಗೆಯೇ ಮಳೆ ನೀರು ಸರಾಗವಾಗಿ ಹೋಗಲು ಸೂಕ್ತ ಡ್ರೈನ್ ಮಾಡುವ ವ್ಯವಸ್ಥೆ ಇನ್ನೂ ನಿರ್ಮಾಣವಾಗದಿರುವುದು ಸಮಸ್ಯೆ. ಇಲ್ಲಿನ ಅಂಡರ್ ಪಾಸ್ ನಡಿ ಕೆಸರುಮಿಶ್ರಿತ ಮಣ್ಣು ನಿಂತಿದ್ದು, ಜೋರಾಗಿ ಮಳೆ ಬಂದರೆ, ಮೆಲ್ಕಾರ್ ನಿಂದ ಕೊಣಾಜೆ ರಸ್ತೆವರೆಗೆ ನೀರು ಹೊಳೆಯಂತೆ ಹರಿದುಹೋಗುವ ಸ್ಥಿತಿ ಇದೆ. ಇದು ಮಣ್ಣು ಸವೆತಕ್ಕೂ ಕಾರಣವಾಗಬಲ್ಲುದು. ಅಲ್ಲದೆ, ವಾಹನ ಸವಾರರಿಗೂ ಸಮಸ್ಯೆ ತಂದೊಡ್ಡುತ್ತದೆ. ಇನ್ನು ಬಸ್ಸಿಗಾಗಿ ನಿಲ್ಲುವವರ ಸ್ಥಿತಿ ಕೇಳುವುದೇ ಬೇಡ.
ಕಲ್ಲಡ್ಕ ಪೇಟೆಯಲ್ಲಿ ಕಳೆದ ವರ್ಷ ಮಳೆ ಬಂದ ಸಂದರ್ಭವೇ ಹೊಳೆಯಂತಾಗಿತ್ತು. ಇದೀಗ ಎರಡೂ ಬದಿಯಲ್ಲಿ ಸರ್ವೀಸ್ ರಸ್ತೆಗಳು ನಿರ್ಮಾಣಗೊಂಡಿದ್ದು, ಕೆಸರುಮಿಶ್ರಿತ ಮಣ್ಣಿನ ಲೇಪನವಿದ್ದರೂ ಹೊಂಡಗಳು ಇನ್ನೂ ಎದ್ದಿಲ್ಲ. ಸ್ಥಳೀಯ ವರ್ತಕರ ಪ್ರಕಾರ, ಈಗಿನ ಸ್ಥಿತಿ ಧೂಳಿನ ಸನ್ನಿವೇಶಕ್ಕಿಂತ ಬೆಟರ್. ಆದರೆ ಫ್ಲೈಓವರ್ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಸುವ್ಯವಸ್ಥಿತವಾಗಿ ಮುಗಿದರೆ, ಸಮಸ್ಯೆ ಬಗೆಹರಿಯಬಹುದು ಎಂಬ ನಿರೀಕ್ಷೆ ಜನರಿಗಿದೆ.
Be the first to comment on "ಮಳೆಯೊಂದಿಗೆ ಕೆಸರು, ರಸ್ತೆಯಲ್ಲೇ ನೀರು — ಹೆದ್ದಾರಿ ಜಂಕ್ಷನ್ ಗಳ ಸ್ಥಿತಿ ಹೇಗಿದೆ?"